ಹಾವೇರಿಯಲ್ಲಿ ಅಡಿಕೆ ಗಾತ್ರದ ಸ್ಫೋಟಕ ಪತ್ತೆ; ಕುತೂಹಲದಿಂದ ಒಡೆದು ನೋಡಿದ ವ್ಯಕ್ತಿ ಕೈಗೆ ತೀವ್ರ ಗಾಯ

| Updated By: preethi shettigar

Updated on: Jul 05, 2021 | 8:59 AM

ಫೂಲ್ ಕಟ್ಟೆಯ ಬಳಿ‌ ಸಿಕ್ಕಿದ್ದ ಅಡಿಕೆ ಗಾತ್ರದ ಸ್ಫೋಟಕಗಳ ಪೈಕಿ ಒಂದನ್ನು ಕೈಯಿಂದ ಒಡೆದಿದ್ದಾರೆ. ತಕ್ಷಣವೆ ಅದು ಸ್ಫೋಟಗೊಂಡಿದೆ. ಸ್ಫೋಟದ ಹೊಡೆತಕ್ಕೆ ಅಬ್ದುಲ್ ಖಾದರನ ಕೈಗೆ ತೀವ್ರವಾದ ಗಾಯವಾಗಿದೆ. ವಿಷಯ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಹಾವೇರಿ ಗ್ರಾಮೀಣ ಠಾಣೆಯ ಸಿಪಿಐ ನಾಗಮ್ಮ ಮತ್ತು ಪಿಎಸ್ಐ ಮಂಜುನಾಥ ಪರಿಶೀಲನೆ ನಡೆಸಿದ್ದಾರೆ.

ಹಾವೇರಿಯಲ್ಲಿ ಅಡಿಕೆ ಗಾತ್ರದ ಸ್ಫೋಟಕ ಪತ್ತೆ; ಕುತೂಹಲದಿಂದ ಒಡೆದು ನೋಡಿದ ವ್ಯಕ್ತಿ ಕೈಗೆ ತೀವ್ರ ಗಾಯ
ಹಾವೇರಿಯಲ್ಲಿ ಅಡಿಕೆ ಗಾತ್ರದ ಸ್ಫೋಟಕ ಪತ್ತೆ;
Follow us on

ಹಾವೇರಿ : ಅಡಿಕೆ ಗಾತ್ರದ ಸುಮಾರು ಮೂವತ್ತು ಸ್ಫೋಟಕಗಳನ್ನು ಸಂಗ್ರಹಿಸಿ ಇಟ್ಟಿರುವ ಪ್ರಕರಣ ಹಾವೇರಿ ಜಿಲ್ಲೆಯ ರೈಲ್ವೆ ನಿಲ್ದಾಣ ಸಮೀಪದ ಭೂ ವೀರಾಪುರ ಗ್ರಾಮದಲ್ಲಿ ಬೆಳಕಿಗೆ ಬಂದಿದೆ. ನಿನ್ನೆ ಸಂಜೆ ವೀರಾಪುರ ಗ್ರಾಮಕ್ಕೆ ಹೋಗುವ ರಸ್ತೆಯ ಖಾಲಿ ಬಯಲು ಜಾಗದಲ್ಲಿ ಅಡಿಕೆ ಗಾತ್ರದ ಮೂವತ್ತು ಸ್ಫೋಟಕಗಳು ಪತ್ತೆಯಾಗಿದ್ದು, ಯಾವ ಕಾರಣಕ್ಕೆ ಈ ಸ್ಪೋಟಕಗಳನ್ನು ಇಲ್ಲಿ ಇಟ್ಟಿದ್ದಾರೆ ಮತ್ತು ಯಾರು ಇದನ್ನು ಇಲ್ಲಿಗೆ ತಂದರು ಎನ್ನುವ ಬಗ್ಗೆ ಸದ್ಯ ತೀವ್ರ ಚರ್ಚೆಯಾಗುತ್ತಿದೆ.

ಸ್ಫೋಟಕಗಳು ಪತ್ತೆಯಾಗಿದ್ದು ಹೇಗೆ?
ಜಿಲ್ಲೆಯ ಹೊಸನಗರದ ನಿವಾಸಿ ಅಬ್ದುಲ್ ಖಾದರ ಹಾದಿಮನಿ ಎಂಬುವರು ತಮ್ಮ ಸಂಬಂಧಿಕರ ಮನೆ ಕಟ್ಟುವ ಸಲುವಾಗಿ ಕಲ್ಲುಗಳನ್ನು ನೋಡಲು ಹೋಗಿದ್ದರು. ಭೂ ವೀರಾಪುರ ರಸ್ತೆಯಲ್ಲಿರುವ ತಾಂಡೂರ ಎಂಬುವವರ ಖಾಲಿ ಬಯಲು ಜಾಗದಲ್ಲಿ ಕಲ್ಲುಗಳು ಕಂಡಿವೆ. ಅಬ್ದುಲ್ ಖಾದರ ಆ ಕಲ್ಲುಗಳನ್ನು ನೋಡಲು ಹೋದಾಗ ಯಾರೋ ಅಲ್ಲಿ ಸಂಗ್ರಹಿಸಿಟ್ಟಿದ್ದ ಅಡಿಕೆ ಗಾತ್ರದ ಮೂವತ್ತು ಸ್ಫೋಟಕಗಳು ಪತ್ತೆಯಾಗಿವೆ. ಅವುಗಳನ್ನು ಕಂಡು ಕುತೂಹಲಗೊಂಡ ಅಬ್ದುಲ್ ಖಾದರ ಏನೋ ಸಿಕ್ಕಿತೆಂದು ತನ್ನ ಗೆಳೆಯನ ಜತೆ ತಡಬಡಾಯಿಸಿ ತೆಗೆದುಕೊಂಡು ಹೋಗಿದ್ದಾರೆ.

ಕಲ್ಲು ನೋಡಲು ಹೋಗಿದ್ದ ವೇಳೆ ಸಿಕ್ಕ ಅಡಿಕೆ ಗಾತ್ರದ ಈ ಸ್ಫೋಟಕಗಳನ್ನು ತೆಗೆದುಕೊಂಡ ಅಬ್ದುಲ್ ಖಾದರ ಸೀದಾ ಕನಕಾಪುರ ಕೋಡಿಹಳ್ಳಿ ನಡುವೆ ಇರುವ ಫೂಲ್‌ ಕಟ್ಟೆಯ ಬಳಿ ಹೋಗಿದ್ದಾರೆ. ಫೂಲ್ ಕಟ್ಟೆಯ ಬಳಿ‌ ಸಿಕ್ಕಿದ್ದ ಅಡಿಕೆ ಗಾತ್ರದ ಸ್ಫೋಟಕಗಳ ಪೈಕಿ ಒಂದನ್ನು ಕೈಯಿಂದ ಒಡೆದಿದ್ದಾರೆ. ತಕ್ಷಣವೆ ಅದು ಸ್ಫೋಟಗೊಂಡಿದೆ. ಸ್ಫೋಟದ ಹೊಡೆತಕ್ಕೆ ಅಬ್ದುಲ್ ಖಾದರನ ಕೈಗೆ ತೀವ್ರವಾದ ಗಾಯವಾಗಿದೆ. ವಿಷಯ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಹಾವೇರಿ ಗ್ರಾಮೀಣ ಠಾಣೆಯ ಸಿಪಿಐ ನಾಗಮ್ಮ ಮತ್ತು ಪಿಎಸ್ಐ ಮಂಜುನಾಥ ಪರಿಶೀಲನೆ ನಡೆಸಿದ್ದಾರೆ.

ತಪ್ಪಿದ ಅನಾಹುತ
ಯಾರೋ ದುಷ್ಕರ್ಮಿಗಳು ಅಡಿಕೆ ಗಾತ್ರದ ಮೂವತ್ತು ಸ್ಫೋಟಕಗಳನ್ನು ಬಯಲು ಜಾಗದಲ್ಲಿನ ಕಲ್ಲುಗಳಲ್ಲಿ ಇಟ್ಟು ಹೋಗಿದ್ದರು. ಅದೃಷ್ಟವಶಾತ್ ಬಯಲು ಜಾಗದಲ್ಲಿ ಬಿದ್ದಿದ್ದ ಕಲ್ಲುಗಳ ಬಳಿ ಜನರು ಹೋಗದೆ ಇರುವುದರಿಂದ ಅನಾಹುತ ತಪ್ಪಿದಂತಾಗಿದೆ. ಸ್ಫೋಟಕ ಒಡೆದು ನೋಡಿದ ಅಬ್ದುಲ್ ಖಾದರ ಹಾದಿಮನಿ ಎಂಬುವವರ ಕೈಗೆ ತೀವ್ರವಾದ ಗಾಯವಾಗಿದ್ದು, ಸದ್ಯ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಸ್ಫೋಟಕ ಪತ್ತೆಯಾಗಿರುವುದನ್ನು ತಿಳಿದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಸಿಪಿಐ ನಾಗಮ್ಮ ನೇತೃತ್ವದ ಪೊಲೀಸರ ತಂಡಕ್ಕೆ ಮೇಲ್ನೋಟಕ್ಕೆ ಪತ್ತೆಯಾಗಿರುವ ಸ್ಫೋಟಕಗಳು ಪ್ರಾಣಿಗಳಿಗೆ ಬಳಸುವ ಸ್ಫೋಟಕಗಳು ಎಂದು ಗೊತ್ತಾಗಿದೆ. ಉಳಿದಂತೆ ಅಡಿಕೆ ಗಾತ್ರದ ಮೂವತ್ತು ಸ್ಫೋಟಕಗಳನ್ನು ಯಾರು ತಂದಿಟ್ಟಿದ್ದಾರೆ? ಯಾಕೆ ತಂದಿಟ್ಟಿದ್ದಾರೆ ಎಂಬುದರ ಬಗ್ಗೆ ತನಿಖೆ ನಡೆಸಲಾಗುತ್ತಿದ್ದು, ಆದಷ್ಟು ಬೇಗ ಸ್ಫೋಟಕಗಳನ್ನು ಯಾರು ಮತ್ತು ಯಾಕೆ ಸಂಗ್ರಹಿಸಿಟ್ಟಿದ್ದರು ಎಂಬುದನ್ನು ಪತ್ತೆ ಮಾಡಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ:
ಸಿಲಿಂಡರ್ ಸ್ಪೋಟಕ್ಕೆ ಹೊತ್ತಿ ಉರಿದ ಕಿರಾಣಿ ಅಂಗಡಿ; ಬಳ್ಳಾರಿಯಲ್ಲಿ ಮಾವ, ಸೊಸೆ ಸಜೀವ ದಹನ

ದಾವಣಗೆರೆಯಲ್ಲಿ ಕಲ್ಲಿನ ಕ್ವಾರಿ ಮೇಲೆ ಪೊಲೀಸರ ದಾಳಿ: ಸ್ಪೋಟಕ ವಸ್ತುಗಳು ಪತ್ತೆ