ನಕಲಿ ಔಷಧ ಜಾಲ: ಎಫ್​ಡಿಎ ಅಧಿಕಾರಿ ಓಂಕಾರೇಶ್ವರ್ ಅಮಾನತು, ಸಭೆಯ ಬಳಿಕ ಸಚಿವ ಖಾದರ್ ಮಹತ್ವದ ಮಾಹಿತಿ

ನಕಲಿ ಔಷಧ ಜಾಲದ ತನಿಖೆ ಚುರುಕುಗೊಂಡಿದ್ದು, ಚಾಮರಾಜಪೇಟೆಯ ಕೃಪಾ ಹೆಲ್ತ್ ಕೇರ್ ಪ್ರಕರಣದಲ್ಲಿ ಕರ್ತವ್ಯಲೋಪದ ಆರೋಪದ ಮೇಲೆ ಎಫ್​ಡಿಎ ಅಧಿಕಾರಿ ಓಂಕಾರೇಶ್ವರ್ ಅಮಾನತುಗೊಂಡಿದ್ದಾರೆ. ನಕಲಿ ಔಷಧ ದಂಧೆ ಪ್ರಕರಣದಲ್ಲಿ ಸರ್ಕಾರದ ಅಧಿಕಾರಿಗಳ ಮಟ್ಟದಲ್ಲಿ ಕೈಗೊಂಡ ಮೊದಲ ಮಹತ್ವದ ಕ್ರಮ ಇದಾಗಿದೆ. ದಂಧೆಗೆ ಕಡಿವಾಣ ಹಾಕುವ ಸಂಬಂಧ ಸಚಿವ ಯುಟಿ ಖಾದರ್ ಸಹ ಉನ್ನತ ಮಟ್ಟದ ಸಭೆ ನಡೆಸಿದ್ದು, ಮಹತ್ವದ ಮಾಹಿತಿ ನೀಡಿದ್ದಾರೆ.

ನಕಲಿ ಔಷಧ ಜಾಲ: ಎಫ್​ಡಿಎ ಅಧಿಕಾರಿ ಓಂಕಾರೇಶ್ವರ್ ಅಮಾನತು, ಸಭೆಯ ಬಳಿಕ ಸಚಿವ ಖಾದರ್ ಮಹತ್ವದ ಮಾಹಿತಿ
ಸಭೆಯ ಬಳಿಕ ಸಚಿವ ಖಾದರ್ ಮಹತ್ವದ ಮಾಹಿತಿ
Image Credit source: tv9
Edited By:

Updated on: Sep 21, 2026 | 2:13 PM

ಮುಖ್ಯಾಂಶಗಳು

  • ನಕಲಿ ಔಷಧ ಪ್ರಕರಣದಲ್ಲಿ ಎಫ್​ಡಿಎ ಅಧಿಕಾರಿ ಅಮಾನತು
  • ರೋಗಿಗಳಿಗೆ ಕರೆ ಮಾಡಿ ಮಾಹಿತಿ ಸಂಗ್ರಹಿಸಲು ಮುಂದಾದ ಎಫ್​ಡಿಎ
  • 16 ಫಾರ್ಮಸಿಗಳ ಲೈಸೆನ್ಸ್ ಈಗಾಗಲೇ ರದ್ದು

ಬೆಂಗಳೂರು, ಸೆಪ್ಟೆಂಬರ್ 21: ಕರ್ನಾಟಕದದಲ್ಲಿ ನಕಲಿ ಔಷಧ ದಂಧೆ ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೇ ಸರ್ಕಾರ ಕಠಿಣ ಕ್ರಮಕ್ಕೆ ಮುಂದಾಗಿದೆ. ಚಾಮರಾಜಪೇಟೆಯ ಕೃಪಾ ಹೆಲ್ತ್ ಕೇರ್ ಪ್ರಕರಣದಲ್ಲಿ ಸೂಕ್ತ ಕ್ರಮ ಕೈಗೊಳ್ಳದ ಆರೋಪದ ಮೇಲೆ ಸರ್ಕಲ್-1 ಸಹಾಯಕ ಔಷಧ ನಿಯಂತ್ರಕ ಓಂಕಾರೇಶ್ವರ್ ಅವರನ್ನು ಅಮಾನತುಗೊಳಿಸಲಾಗಿದೆ. ಕರ್ತವ್ಯಲೋಪದ ಹಿನ್ನೆಲೆಯಲ್ಲಿ ಓಂಕಾರೇಶ್ವರ್ ವಿರುದ್ಧ ಈ ಕ್ರಮ ಕೈಗೊಳ್ಳಲಾಗಿದೆ. ನಕಲಿ ಔಷಧ ಪ್ರಕರಣದಲ್ಲಿ ಸರ್ಕಾರದಿಂದ ಅಧಿಕಾರಿಯೊಬ್ಬರ ವಿರುದ್ಧ ಕೈಗೊಂಡ ಮೊದಲ ಅಮಾನತು ಕ್ರಮ ಇದಾಗಿದೆ.

ಇದರ ಬೆನ್ನಲ್ಲೇ ನಕಲಿ ಔಷಧಗಳ ಮಾರಾಟಕ್ಕೆ ಕಡಿವಾಣ ಹಾಕಲು ಕಠಿಣ ಕಾನೂನು ರೂಪಿಸುವ ಬಗ್ಗೆಯೂ ಸರ್ಕಾರ ಚಿಂತನೆ ನಡೆಸಿದೆ. ಔಷಧ ಗುಣಮಟ್ಟದಲ್ಲಿ ವಿಫಲವಾದ, ನಕಲಿ ಔಷಧ ಅಥವಾ ತಪ್ಪು ಲೇಬಲಿಂಗ್ ಕಂಡುಬಂದ ತಯಾರಿಕಾ ಕಂಪನಿಗಳನ್ನು ಶಾಶ್ವತವಾಗಿ ಕಪ್ಪುಪಟ್ಟಿಗೆ ಸೇರಿಸುವ ಬಗ್ಗೆ ರಾಜ್ಯ ಎಫ್​​​ಡಿಎ ಮುಂದಾಗಿದೆ.

ಇಂತಹ ಕಂಪನಿಗಳ ವಿರುದ್ಧ ಕಠಿಣ ಶಿಕ್ಷೆ ವಿಧಿಸಲು ಹೊಸ ಕಾನೂನು ರೂಪಿಸುವ ಬಗ್ಗೆಯೂ ಚರ್ಚೆ ನಡೆದಿದೆ. ಕಪ್ಪುಪಟ್ಟಿಗೆ ಸೇರಿಸುವುದರ ಜತೆಗೆ ಸಿಆರ್​ಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸುವ ಬಗ್ಗೆಯೂ ಚಿಂತನೆ ನಡೆಸಲಾಗಿದ್ದು, ಕಾನೂನು ಬದಲಾವಣೆಗೆ ರಾಜ್ಯ ಎಫ್​ಡಿಎ ಕೇಂದ್ರಕ್ಕೆ ಮನವಿ ಸಲ್ಲಿಸಿದೆ. ಈಗಾಗಲೇ 16 ಫಾರ್ಮಸಿಗಳ ಲೈಸೆನ್ಸ್‌ಗಳನ್ನು ರದ್ದುಗೊಳಿಸಲಾಗಿದೆ.

ರೋಗಿಗಳ ಮಾಹಿತಿಯೂ ಕಲೆಹಾಕಲು ಎಫ್​ಡಿಎ ಸಿದ್ಧತೆ

ನಕಲಿ ಔಷಧಗಳು ಎಲ್ಲಿಗೆ ಪೂರೈಕೆಯಾಗಿವೆ, ಯಾವ ಆಸ್ಪತ್ರೆಗಳಿಗೆ ಹೋಗಿವೆ ಎಂಬ ಮಾಹಿತಿಯನ್ನು ಕಲೆಹಾಕಲು ಎಫ್​ಡಿಎ ಮುಂದಾಗಿದೆ. ನಕಲಿ ಔಷಧ ಪಡೆದಿರುವ ರೋಗಿಗಳ ಮಾಹಿತಿಯನ್ನೂ ಸಂಗ್ರಹಿಸಿ ವಿಚಾರಣೆ ನಡೆಸಲು ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ. ನಕಲಿ ಔಷಧ ಸೇವನೆಯಿಂದ ರೋಗಿಗಳಿಗೆ ಏನಾದರೂ ತೊಂದರೆ ಉಂಟಾಗಿದೆಯೇ, ಯಾವುದೇ ಅಡ್ಡ ಪರಿಣಾಮ ಕಂಡುಬಂದಿದೆಯೇ ಎಂಬ ಬಗ್ಗೆ ರೋಗಿಗಳಿಗೆ ಕರೆ ಮಾಡಿ ಮಾಹಿತಿ ಸಂಗ್ರಹಿಸಲಾಗುವುದು ಎಂದು ಆರೋಗ್ಯ ಸಚಿವ ಯುಟಿ ಖಾದರ್ ತಿಳಿಸಿದ್ದಾರೆ.

ದೊಡ್ಡ ಕಂಪನಿಗಳು ತನಿಖೆಗೆ ಸಹಕರಿಸುತ್ತಿಲ್ಲ: ಸಚಿವ ಖಾದರ್ ಬೇಸರ

ಕೆಲವು ದೊಡ್ಡ ಕಂಪನಿಗಳು ತನಿಖೆಗೆ ಸಹಕರಿಸುತ್ತಿಲ್ಲ ಎಂದು ಸಚಿವರು ಬೇಸರ ವ್ಯಕ್ತಪಡಿಸಿದ್ದಾರೆ. ವಿಧಾನಸೌಧದಲ್ಲಿ ಔಷಧ ನಿಯಂತ್ರಣ ಅಧಿಕಾರಿಗಳ ಜೊತೆ ಸಭೆ ನಡೆಸಿದ ಬಳಿಕ ಮಾತನಾಡಿದ ಅವರು, ಫೈಝರ್‌ನಂತಹ ಕಂಪನಿಗಳು ನಕಲಿ ಔಷಧಗಳಿಗೆ ಸಂಬಂಧಿಸಿದ ಎಸ್​ಐಟಿ ತನಿಖೆಗೆ ಸಹಕರಿಸದ ಹಿನ್ನೆಲೆಯಲ್ಲಿ ಅಧಿಕಾರಿಗಳು ಅವುಗಳ ಕಾರ್ಯಚಟುವಟಿಕೆಗಳನ್ನು ತಡೆಹಿಡಿದಿದ್ದಾರೆ ಎಂದು ಹೇಳಿದ್ದಾರೆ. 12 ಫಾರ್ಮಾ ಕಂಪನಿಗಳಿಗೆ ನೋಟಿಸ್ ನೀಡಿ, ಲೈಸೆನ್ಸ್ ರದ್ದುಪಡಿಸಲು ಮುಂದಾಗಿರುವುದಾಗಿ ಸಚಿವರು ತಿಳಿಸಿದ್ದಾರೆ.

ಔಷಧ ಗುಣಮಟ್ಟ ಪರೀಕ್ಷೆಗೆ ಉತ್ತಮ ಪ್ರಯೋಗಾಲಯ

ಆಸ್ಪತ್ರೆಗಳಲ್ಲಿ ಬಳಸುವ ಔಷಧಗಳ ಗುಣಮಟ್ಟದ ಬಗ್ಗೆಯೂ ಸಚಿವರು ಕಳವಳ ವ್ಯಕ್ತಪಡಿಸಿದ್ದಾರೆ. ಗುಣಮಟ್ಟ ಪರಿಶೀಲನೆಗೆ ವ್ಯವಸ್ಥೆಯಿದ್ದರೂ ಉತ್ತಮ ಪ್ರಯೋಗಾಲಯದ ಅಗತ್ಯವಿದೆ ಎಂದು ಹೇಳಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿ ಜೊತೆ ಚರ್ಚಿಸಲಾಗಿದ್ದು, ಉತ್ತಮ ಖಾಸಗಿ ಪ್ರಯೋಗಾಲಯಗಳೊಂದಿಗೆ ಒಪ್ಪಂದ ಮಾಡಿಕೊಂಡು ಆಸ್ಪತ್ರೆಗಳು ಹಾಗೂ ಫಾರ್ಮಾ ಕಂಪನಿಗಳಿಂದ ನೇರವಾಗಿ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸುವ ಬಗ್ಗೆ ಚಿಂತನೆ ನಡೆಸಲಾಗಿದೆ ಎಂದು ಯುಟಿ ಖಾದರ್ ತಿಳಿಸಿದ್ದಾರೆ.

ದೊಡ್ಡ ಆಸ್ಪತ್ರೆಗಳು ಔಷಧಗಳ ಗುಣಮಟ್ಟದ ಬಗ್ಗೆ ಜವಾಬ್ದಾರರಾಗಬೇಕು ಎಂದು ಸಚಿವರು ಹೇಳಿದ್ದಾರೆ. ನಕಲಿ ಔಷಧ ಜಾಲವನ್ನು ಸಂಪೂರ್ಣವಾಗಿ ತಡೆಯಲು ಕಠಿಣ ಶಿಕ್ಷೆಯ ಅಗತ್ಯವಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.

ಒಮ್ಮೆ ನಕಲಿ ಔಷಧ ಪ್ರಕರಣದಲ್ಲಿ ಸಿಕ್ಕಿಬಿದ್ದರೆ ಕಂಪನಿಯ ಲೈಸೆನ್ಸ್ ಶಾಶ್ವತವಾಗಿ ರದ್ದುಗೊಳಿಸುವುದು ಹಾಗೂ ಸಿಆರ್​​ಪಿಸಿ ಅಡಿಯಲ್ಲಿ ಕ್ರಮ ಕೈಗೊಳ್ಳುವ ಅಗತ್ಯವಿದೆ ಎಂದು ಸಚಿವರು ಹೇಳಿದ್ದಾರೆ. ಒಂದು ರಾಜ್ಯದಲ್ಲಿ ಸಿಕ್ಕಿಬಿದ್ದು ಮತ್ತೊಂದು ರಾಜ್ಯದಲ್ಲಿ ಇದೇ ದಂಧೆ ಮುಂದುವರಿಸುವುದನ್ನು ತಡೆಯಲು ಕೇಂದ್ರ ಮಟ್ಟದಲ್ಲಿ ನಿಯಮ ರೂಪಿಸಬೇಕು ಎಂದೂ ಅವರು ಆಗ್ರಹಿಸಿದ್ದಾರೆ.

ಸಚಿವ ಖಾದರ್ ಮಾತಿನ ವಿಡಿಯೋ
Fake Medicine Racket: ನಕಲಿ ಔಷಧ ಜಾಲಕ್ಕೆ ಮೊದಲ ತಲೆದಂಡ FDA ಅಧಿಕಾರಿ ಓಂಕಾರೇಶ್ವರ್ ಸಸ್ಪೆಂಡ್

ವಿಧಾನಸೌಧದಲ್ಲಿ ಸಚಿವ ಖಾದರ್ ಮಹತ್ವದ ಸಭೆ

ನಕಲಿ ಔಷಧ ದಂಧೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಗ್ಯ ಸಚಿವ ಯುಟಿ ಖಾದರ್ ಅವರು ಆಹಾರ ಸುರಕ್ಷತಾ ಹಾಗೂ ಔಷಧ ನಿಯಂತ್ರಣ ಆಯುಕ್ತ ಶ್ರೀನಿವಾಸ್ ಮತ್ತು ಔಷಧ ನಿಯಂತ್ರಣ ಅಧಿಕಾರಿ ಉಮೇಶ್ ಅವರೊಂದಿಗೆ ವಿಧಾನಸೌಧದಲ್ಲಿ ಸಭೆ ನಡೆಸಿದರು.

ಇದನ್ನೂ ಓದಿ: ನಕಲಿ ಔಷಧ ಜಾಲದ ತನಿಖೆ ಮತ್ತಷ್ಟು ಚುರುಕು: ಸೇವಿಸಿದ ರೋಗಿಗಳ ಮಾಹಿತಿ ಸಂಗ್ರಹಕ್ಕೆ ಮುಂದಾದ ಎಫ್​ಡಿಎ

ಆಸ್ಪತ್ರೆಗಳಿಗೆ ಔಷಧ ಸರಬರಾಜು, ಮುಚ್ಚಿರುವ ಫಾರ್ಮಸಿಗಳು, ನಕಲಿ ಔಷಧ ಪತ್ತೆ ಹಾಗೂ ಸರಬರಾಜು ಜಾಲದ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು. ಜನರ ಜೀವದೊಂದಿಗೆ ಚೆಲ್ಲಾಟವಾಡುವ ಕಂಪನಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಸರ್ಕಾರ ಬದ್ಧವಾಗಿದೆ ಎಂದು ಸಚಿವರು ಹೇಳಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us