ನಕ್ಸಲ್ ಚಟುವಟಿಕೆಗೆ ಬೆಂಗಳೂರಲ್ಲಿ ಹಣಕಾಸು ವಹಿವಾಟು: ರಾಜ್ಯದ ನಾಲ್ವರು ಸೇರಿ 7 ಜನರ ವಿರುದ್ಧ ಎಫ್​ಐಆರ್​

ಭಾರತದಲ್ಲಿ ನಕ್ಸಲ್ ಚಟುವಟಿಕೆಗಳಿಗೆ ವಿದೇಶದಿಂದ ಕೋಟ್ಯಂತರ ರೂ ಅಕ್ರಮ ಫಂಡಿಂಗ್ ಆರೋಪದಡಿ ಅಮೆರಿಕಾ ಮೂಲದ ಸಂಸ್ಥೆ, ರಾಜ್ಯದ ನಾಲ್ವರು ಸೇರಿದಂತೆ ಒಟ್ಟು 7 ಜನರ ವಿರುದ್ಧ ಎಫ್​ಐಆರ್​ ದಾಖಲಾಗಿದೆ. ಬೆಂಗಳೂರಿನ ಕೊತ್ತನೂರು ವ್ಯಾಪ್ತಿಯಲ್ಲಿ ಹಣ ವರ್ಗಾವಣೆ ಹಿನ್ನೆಲೆ ಇಡಿ ಅಧಿಕಾರಿಗಳು ಕೊತ್ತನೂರು ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಿಸಿದ್ದಾರೆ.

ನಕ್ಸಲ್ ಚಟುವಟಿಕೆಗೆ ಬೆಂಗಳೂರಲ್ಲಿ ಹಣಕಾಸು ವಹಿವಾಟು: ರಾಜ್ಯದ ನಾಲ್ವರು ಸೇರಿ 7 ಜನರ ವಿರುದ್ಧ ಎಫ್​ಐಆರ್​
ಪ್ರಾತಿನಿಧಿಕ ಚಿತ್ರ
Image Credit source: ipleaders.in
Edited By:

Updated on: Jun 13, 2026 | 5:11 PM

ಬೆಂಗಳೂರು, ಜೂನ್​ 13: ಭಾರತದಲ್ಲಿ ನಕ್ಸಲ್ (Naxal) ಚಟುವಟಿಕೆಗಳಿಗೆ ವಿದೇಶದಿಂದ ಫಂಡಿಂಗ್ ಆರೋಪ ಕೇಳಿಬಂದಿದೆ. ಇತ್ತ ಬೆಂಗಳೂರಿನಲ್ಲೂ ಹಣಕಾಸು ವಹಿವಾಟು ಹಿನ್ನೆಲೆ ಅಮೆರಿಕಾ ಮೂಲದ ಟಿಟಿಐ (ದಿ ತಿಮೋತಿ ಇನಿಶಿಯೇಟಿವ್) ಕ್ರಿಶ್ಚಿಯನ್ ಮಿಷಿನರಿ ಸಂಸ್ಥೆ ಹಾಗೂ ಕರ್ನಾಟಕದ (Karnataka) ನಾಲ್ವರು ಸೇರಿದಂತೆ ಏಳು ಜನರ ವಿರುದ್ಧ ಬೆಂಗಳೂರಿನ ಕೊತ್ತನೂರು ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಮುಖ್ಯಾಂಶಗಳು

  • ನಕ್ಸಲ್ ಚಟುವಟಿಕೆಗೆ ವಿದೇಶದಿಂದ ಫಂಡಿಂಗ್​
  • ಅಮೆರಿಕಾ ಮೂಲದ ಸಂಸ್ಥೆ ಸೇರಿದಂತೆ 7 ಜನರ ಮೇಲೆ FIR
  • ಅಕ್ರಮವಾಗಿ ವಿದೇಶಿ ಮೂಲದ ಹಣ ಬಳಕೆ ಬೆಳಕಿಗೆ

ಎಫ್‌ಐಆರ್ ದಾಖಲು

ಜಾರಿ ನಿರ್ದೇಶನಾಲಯದ (ಇಡಿ) ಅಧಿಕಾರಿಗಳು ನೀಡಿದ ದೂರಿನ ಮೇರೆಗೆ ಯುಎಪಿಎ ಹಾಗೂ ಬಿಎನ್‌ಎಸ್ ಕಾಯ್ದೆಯಡಿ ಒಳಸಂಚು, ವಂಚನೆ ಮತ್ತು ಸುಳ್ಳು ದಾಖಲೆ ಸೃಷ್ಟಿಸಿದ ಆರೋಪದಡಿ ಪ್ರಕರಣ ದಾಖಲಿಸಲಾಗಿದೆ. ಬೆಂಗಳೂರಿನ ಜೋನಾಥನ್ ಎಸ್ ರಾಜನ್, ಮೈಸೂರಿನ ಸುಪ್ರೀಂ ಜಾಯ್, ಮಿಕಾ ಮಾರ್ಕ್, ಅಜಿತ್ ವರ್ಗೀಸ್ ಮಥಾಯಿ, ಛತ್ತೀಸ್ ಘಟ್​ದ ವರ್ಗೀಸ್ ಚಾಕೊ, ಅಸ್ಸಾಂನ ಬಬ್ಲು ಕುರ್ಮಿ ಹಾಗೂ ಟಿಟಿಐ ಸಂಸ್ಥೆ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ಇದ್ನೂ ಓದಿ: ಪಾಕ್ ಉಗ್ರನ ಜೊತೆ ರಾಜ್ಯದ ಇಬ್ಬರ ಲಿಂಕ್: ಆರೋಪಿಗಳ ವಿಚಾರಣೆ ವೇಳೆ ಸ್ಫೋಟಕ ಮಾಹಿತಿ ಬಯಲು!

ಕಳೆದ ಏಪ್ರಿಲ್‌ನಲ್ಲಿ ಇಡಿ ಅಧಿಕಾರಿಗಳು ನಡೆಸಿದ ದಾಳಿ ವೇಳೆ 95 ಕೋಟಿ ರೂಪಾಯಿಗೂ ಅಧಿಕ ಅಕ್ರಮ ವಿದೇಶಿ ಹಣ ಬಳಕೆಯಾಗಿರುವುದು ಬೆಳಕಿಗೆ ಬಂದಿದ್ದು, ಸಂತೋಷ್ ಕುಮಾರ್ ಎಂಬ ಸುಳ್ಳು ಹೆಸರಿನ ಯುಎಸ್‌ಎ ಟ್ರೂಯಿಸ್ಟ್ ಬ್ಯಾಂಕ್‌ನ ಸಾವಿರಕ್ಕೂ ಹೆಚ್ಚು ವಿದೇಶಿ ಡೆಬಿಟ್ ಕಾರ್ಡ್‌ಗಳನ್ನು ಭಾರತದಲ್ಲಿ ಅಕ್ರಮವಾಗಿ ವಿತರಿಸಿ ಹಣ ಡ್ರಾ ಮಾಡಿರುವುದು ಪತ್ತೆಯಾಗಿತ್ತು.

ಬೆಂಗಳೂರಿನ ಶೆಲ್ ಕಂಪನಿಗಳ ವಹಿವಾಟು ಬೆಳಕಿಗೆ

ಆರೋಪಿಗಳಲ್ಲೊಬ್ಬನಾದ ಮಿಕಾ ಮಾರ್ಕ್ ಬಳಿ 24 ವಿದೇಶಿ ಡೆಬಿಟ್ ಕಾರ್ಡ್‌ಗಳು ಪತ್ತೆಯಾಗಿದ್ದು, ನಕ್ಸಲ್ ಪೀಡಿತ ಪ್ರದೇಶಗಳು ಸೇರಿದಂತೆ ಛತ್ತೀಸ್‌ಗಢದಲ್ಲಿ ಈ ಕಾರ್ಡ್‌ಗಳ ಮೂಲಕ ಶಂಕಾಸ್ಪದ ನಗದು ಚಟುವಟಿಕೆಗಳು ನಡೆದಿರುವುದು ತನಿಖೆಯಲ್ಲಿ ದೃಢಪಟ್ಟಿದೆ. ಮತ್ತೊಬ್ಬ ಆರೋಪಿ ಅಜಿತ್ ವರ್ಗೀಸ್ ವಿಚಾರಣೆ ವೇಳೆ ಬೆಂಗಳೂರಿನ ಶೆಲ್ ಕಂಪನಿಗಳ ವಹಿವಾಟು ಬೆಳಕಿಗೆ ಬಂದಿದೆ. ಬೆಂಗಳೂರಿನ ಕೊತ್ತನೂರು ವ್ಯಾಪ್ತಿಯಲ್ಲಿ ಹಣ ವರ್ಗಾವಣೆ ಮಾಡಲಾಗಿದೆ. ಈ ಅಕ್ರಮ ಹಣವನ್ನು ಧರ್ಮೋಪದೇಶ ಹಾಗೂ ಎಡಪಂಥೀಯ ಉಗ್ರವಾದದ ತರಬೇತಿಗೆ ಬಳಸಲಾಗುತ್ತಿತ್ತು ಎಂಬ ಗಂಭೀರ ಆರೋಪ ಕೇಳಿಬಂದಿದ್ದು, ಸದ್ಯ ಎಸಿಪಿ ನೇತೃತ್ವದ ಪೊಲೀಸ್ ತಂಡವು ತನಿಖೆ ನಡೆಸಿ ಇಡಿಗೆ ವರದಿ ಸಲ್ಲಿಸಲಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 4:26 pm, Sat, 13 June 26

ಪ್ರದೀಪ್​ ಚಿಕ್ಕಾಟಿ

ಕ್ರೈಂ ವರದಿಗಾರನಾಗಿ ಟಿವಿ9 ಕನ್ನಡದಲ್ಲಿ ಕೆಲಸ

Read More
Follow Us