ಕರ್ನಾಟಕ ಮೂಲದ ಕಲಾವಿದೆ, ಟಿವಿ9 ಮಾಜಿ ಉದ್ಯೋಗಿ ನಯನಾ ಕೇಶವ ಭಟ್‌ಗೆ ಆಸ್ಟ್ರಿಯಾದ ಪ್ರತಿಷ್ಠಿತ ಪ್ರಶಸ್ತಿ

ಟಿವಿ9 ಕನ್ನಡದ ಮಾಜಿ ಉದ್ಯೋಗಿ, ಉಡುಪಿ ಮೂಲದ ನೃತ್ಯ ಸಂಯೋಜಕಿ ನಯನಾ ಕೇಶವ ಭಟ್ ಅವರು ಆಸ್ಟ್ರಿಯಾದ ಸಾಲ್ಜ್‌ಬರ್ಗ್‌ನ ಪ್ರತಿಷ್ಠಿತ ‘2026 ಆರ್ಟ್ಸ್​​ ಆ್ಯಂಡ್ ಕಲ್ಚರ್ ಅಡ್ವಾನ್ಸ್​ಮೆಂಟ್ ಅವಾರ್ಡ್​’ಗೆ ಭಾಜನರಾಗಿದ್ದಾರೆ. 6,000 ಯೂರೋ ಗೌರವಧನ ಹೊಂದಿರುವ ಈ ಪ್ರಶಸ್ತಿ, ಅವರ ಅಂತರರಾಷ್ಟ್ರೀಯ ಕಲಾ ಸಾಧನೆಗೆ ಸಂದ ಮನ್ನಣೆಯಾಗಿದೆ.

ಕರ್ನಾಟಕ ಮೂಲದ ಕಲಾವಿದೆ, ಟಿವಿ9 ಮಾಜಿ ಉದ್ಯೋಗಿ ನಯನಾ ಕೇಶವ ಭಟ್‌ಗೆ ಆಸ್ಟ್ರಿಯಾದ ಪ್ರತಿಷ್ಠಿತ ಪ್ರಶಸ್ತಿ
ಕನ್ನಡತಿ ಕಲಾವಿದೆ ನಯನಾಗೆ ಆಸ್ಟ್ರಿಯಾದ ಪ್ರತಿಷ್ಠಿತ ಪ್ರಶಸ್ತಿ

Updated on: Nov 26, 2026 | 8:30 PM

ಬೆಂಗಳೂರು, ನವೆಂಬರ್ 26: ಕರ್ನಾಟಕದ ಉಡುಪಿ ಮೂಲದ ನೃತ್ಯ ಸಂಯೋಜಕಿ, ನರ್ತಕಿ, ಕಲಾ ಸಂಘಟಕಿ ಹಾಗೂ ‘ಟಿವಿ9’ ಮಾಜಿ ಉದ್ಯೋಗಿ ನಯನಾ ಕೇಶವ ಭಟ್ ಆಸ್ಟ್ರಿಯಾದ ಸಾಲ್ಜ್‌ಬರ್ಗ್ ಪ್ರಾಂತೀಯ ರಾಜಧಾನಿಯ ಪ್ರತಿಷ್ಠಿತ ‘2026 ಆರ್ಟ್ಸ್​​ ಆ್ಯಂಡ್ ಕಲ್ಚರ್ ಅಡ್ವಾನ್ಸ್​ಮೆಂಟ್ ಅವಾರ್ಡ್​’ಗೆ (2026 Arts & Culture Advancement Award) ಪ್ರಶಸ್ತಿಗೆ ಭಾಜನರಾಗಿದ್ದಾರೆ. ‘ಟಿವಿ9 ಕನ್ನಡ’ದಲ್ಲಿ 2006-2007ರಲ್ಲಿ ಉದ್ಯೋಗಿಯಾಗಿ ಕಾರ್ಯನಿರ್ವಹಿಸಿದ್ದ ನಯನಾ, ಇದೀಗ ಅಂತರರಾಷ್ಟ್ರೀಯ ಕಲಾ ವೇದಿಕೆಯಲ್ಲಿ ತಮ್ಮ ಪ್ರತಿಭೆಯ ಮೂಲಕ ಕನ್ನಡ ನಾಡಿನ ಹೆಮ್ಮೆಯನ್ನು ಹೆಚ್ಚಿಸಿದ್ದಾರೆ.

ಸಾಲ್ಜ್‌ಬರ್ಗ್‌ನ ಸಾಂಸ್ಕೃತಿಕ ನಿಧಿಯು 1964ರಿಂದ ಕಲೆ, ಸಂಸ್ಕೃತಿ ಮತ್ತು ಶೈಕ್ಷಣಿಕ ಕ್ಷೇತ್ರಗಳಲ್ಲಿ ಅಸಾಧಾರಣ ಸಾಧನೆ ಮಾಡಿದವರಿಗೆ ಪ್ರಶಸ್ತಿ ನೀಡುತ್ತಾ ಬಂದಿದೆ. ನಯನಾ ಅವರಿಗೆ ದೊರೆತಿರುವ ಈ ಗೌರವವು 6,000 ಯೂರೋ ನಗದು ಬಹುಮಾನವನ್ನು ಒಳಗೊಂಡಿದೆ. 2012ರಿಂದ ಸಾಲ್ಜ್‌ಬರ್ಗ್‌ನಲ್ಲಿ ನೆಲೆಸಿರುವ ಅವರು, ಅಲ್ಲಿನ ಸ್ವತಂತ್ರ ನೃತ್ಯ ಮತ್ತು ರಂಗಭೂಮಿ ಕ್ಷೇತ್ರದಲ್ಲಿ ವಿಶಿಷ್ಟ ಗುರುತನ್ನು ಮೂಡಿಸಿದ್ದಾರೆ.

Loading...

ಭರತನಾಟ್ಯ ಮತ್ತು ಕಥಕ್‌ನಂತಹ ಭಾರತೀಯ ಶಾಸ್ತ್ರೀಯ ನೃತ್ಯ ಪ್ರಕಾರಗಳಲ್ಲಿ ಪರಿಣತಿ ಹೊಂದಿರುವ ನಯನಾ, ಸಾಲ್ಜ್‌ಬರ್ಗ್‌ನ ಪ್ರತಿಷ್ಠಿತ SEAD ಸಂಸ್ಥೆಯಲ್ಲಿ ಸಮಕಾಲೀನ ನೃತ್ಯ ಸಂಯೋಜನೆಯನ್ನೂ ಅಭ್ಯಾಸ ಮಾಡಿದ್ದಾರೆ. ಭಾರತೀಯ ನೃತ್ಯ ಪರಂಪರೆಯನ್ನು ಆಧುನಿಕ ರಂಗಪ್ರಯೋಗ ಮತ್ತು ಆಶು ನೃತ್ಯದೊಂದಿಗೆ ಬೆಸೆಯುವ ಅವರ ಕಲಾ ಪ್ರಯೋಗಗಳು ಗಮನ ಸೆಳೆದಿವೆ. ‘Heartlands’, ‘Tides of Passage’ ಮತ್ತು ‘Way Stations’ ಅವರ ಪ್ರಮುಖ ನೃತ್ಯ ಕೃತಿಗಳಾಗಿವೆ.

2017ರಲ್ಲಿ ನಯನಾ ಸ್ಥಾಪಿಸಿದ ‘INFLUX’ ಕಲಾ ವೇದಿಕೆಯು ವಿವಿಧ ಸಂಸ್ಕೃತಿ ಮತ್ತು ತಲೆಮಾರುಗಳ ಕಲಾವಿದರನ್ನು ಒಗ್ಗೂಡಿಸುವ ವೇದಿಕೆಯಾಗಿ ಬೆಳೆದಿದೆ. ‘Salzburg Improvisation Evenings’ ಮತ್ತು ‘Research Lab’ ಕಾರ್ಯಕ್ರಮಗಳ ಮೂಲಕ ಕಲಾವಿದರಿಗೆ ಹೊಸ ಪ್ರಯೋಗಗಳ ಅವಕಾಶ ಕಲ್ಪಿಸಿದ್ದಾರೆ. 2025ರಿಂದ ಸಾಲ್ಜ್‌ಬರ್ಗ್ ನಗರಪಾಲಿಕೆಯ ‘City Encounters’ ಯೋಜನೆಯ ನೇತೃತ್ವವನ್ನೂ ವಹಿಸಿದ್ದಾರೆ.

ನಯನಾ ಅವರ ಕಲಾ ಪಯಣದ ಆರಂಭ ಉಡುಪಿನಿಂದಲೇ ಶುರುವಾಗಿತ್ತು. ಕೇಶವ ಭಟ್ ಕುಳಮರ್ವ ಮತ್ತು ವೀಣಾ ಎಲ್.ಎಚ್. ದಂಪತಿಯ ಪುತ್ರಿಯಾದ ಅವರು, ಮಣಿಪಾಲ ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ ಪದವಿ ಪಡೆದಿದ್ದಾರೆ. ಕಲಾ ಕ್ಷೇತ್ರಕ್ಕೆ ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಳ್ಳುವ ಮೊದಲು ಮಾಧ್ಯಮ ಕ್ಷೇತ್ರದಲ್ಲಿಯೂ ಕೆಲಸ ಮಾಡಿದ್ದಾರೆ. ‘ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್’ನಲ್ಲಿ ಉಪ ಸಂಪಾದಕಿಯಾಗಿ, ಟಿವಿ9 ಕನ್ನಡದಲ್ಲಿ ವರದಿಗಾರ್ತಿಯಾಗಿ ಹಾಗೂ ಈಟಿವಿಯಲ್ಲಿ ಕಾರ್ಯಕ್ರಮ ನಿರ್ಮಾಪಕಿಯಾಗಿ ಕಾರ್ಯನಿರ್ವಹಿಸಿದ್ದಾರೆ.

ಭರತನಾಟ್ಯವನ್ನು ಗುರು ಶುಭದಾ ಸುಧೀರ್, ಗುರು ಮಿನಲ್ ಪ್ರಭು ಮತ್ತು ವಿಯೆನ್ನಾದ ನಾಟ್ಯಮಂದಿರದ ಗುರು ರಾಧಾ ಅಂಜಲಿ ಅವರ ಮಾರ್ಗದರ್ಶನದಲ್ಲಿ ಕಲಿತಿದ್ದಾರೆ. ಬಳಿಕ SEAD ಸಂಸ್ಥೆಯಲ್ಲಿ ನೃತ್ಯ ಸಂಯೋಜನೆಯಲ್ಲಿ ಸ್ನಾತಕೋತ್ತರ ಡಿಪ್ಲೊಮಾ ಪಡೆದಿದ್ದಾರೆ. ಆಶು ನೃತ್ಯದ ಕುರಿತು ವಿಶೇಷ ಅಧ್ಯಯನವನ್ನೂ ನಡೆಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಗಣಪತಿ ಶರ್ಮಾ

ಕೇರಳದ ಕಾಸರಗೋಡು ಮೂಲದ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 14 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ವರದಿಗಾರಿಕೆ ಅನುಭವದ ಜತೆಗೆ ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು. ವಿಜಯ ಕರ್ನಾಟಕ, ಸಮಯ ನ್ಯೂಸ್ ಟಿವಿ, ವಿಜಯವಾಣಿ, ಪ್ರಜಾವಾಣಿ ಪತ್ರಿಕೆಗಳು ಹಾಗೂ ಡಿಜಿಟಲ್ ಮೀಡಿಯಾದಲ್ಲಿ ಕೆಲಸ ಮಾಡಿದ ಅನುಭವ. 2022 ರಿಂದ ಟಿವಿ9 ಕನ್ನಡ ಡಿಜಿಟಲ್​ನಲ್ಲಿ ಕಾರ್ಯನಿರ್ವಹಣೆ.

Read More
Loading...
Unable to load recommendations.
Follow Us