
ಬೆಂಗಳೂರು, ಮೇ 26: ಇಂಧನಗಳ ಬೆಲೆ ಸತತ ಏರಿಕೆಯಿಂದ ಈಗಾಗಲೇ ಗ್ರಾಹಕರ ಜೇಬಿಗೆ ಕತ್ತರಿ ಬಿದ್ದುರುವ ನಡುವೆ ಶೀಘ್ರವೇ ಅಗತ್ಯ ವಸ್ತುಗಳ ಬೆಲೆಯೂ ಹೆಚ್ಚಾಗುವ ಮುನ್ಸೂಚನೆ ಸಿಕ್ಕಿದೆ. ಕಳೆದ 10 ದಿನಗಳಲ್ಲಿ ಡೀಸೆಲ್ ದರವು ಒಟ್ಟು 7.81 ರೂ. ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಕರ್ನಾಟಕದ ಲಾರಿ ಮಾಲೀಕರು ಹಾಗೂ ಸಾರಿಗೆ ಸಂಸ್ಥೆಗಳು ಸರಕು ಸಾಗಣೆ ದರವನ್ನು ಕನಿಷ್ಠ ಶೇ. 10ರಷ್ಟು ಹೆಚ್ಚಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ಒಂದೊಮ್ಮೆ ಸರಕು ಸಾಗಣೆ ವಾಹನಗಳ ಬಾಡಿಗೆ ದರ ಏರಿಕೆ ಆಗಿದ್ದೇ ಆದಲ್ಲಿ ಇದರ ಪರಿಣಾಮವಾಗಿ ತರಕಾರಿ, ಪ್ಲೈವುಡ್, ಕಬ್ಬಿಣ ಸೇರಿದಂತೆ ವಿವಿಧ ವಸ್ತುಗಳ ಬೆಲೆ ಏರಿಕೆಯಾಗುವ ಆತಂಕ ವ್ಯಕ್ತವಾಗಿದೆ. ಈ ಕುರಿತು ಮಾಹಿತಿ ನೀಡಿರುವ ಕರ್ನಾಟಕ ಲಾರಿ ಮಾಲಕರು ಮತ್ತು ಏಜೆಂಟ್ ಅಸೋಸಿಯೇಷನ್ ಅಧ್ಯಕ್ಷ ಜಿ.ಆರ್. ಶಣ್ಮುಗಪ್ಪ, ಇಂಧನ ದರ ಏರಿಕೆಯಾಗುತ್ತಿರುವ ಸಂದರ್ಭದಲ್ಲಿ ಸರಕು ಸಾಗಣೆ ದರ ಹೆಚ್ಚಿಸುವುದನ್ನು ಬಿಟ್ಟು ನಮಗೆ ಬೇರೆ ಆಯ್ಕೆಯೇ ಇಲ್ಲ ಎಂದಿದ್ದಾರೆ. ಡೀಸೆಲ್ ದರ ಏರಿದಾಗ ಸಾರಿಗೆ ವೆಚ್ಚವೂ ಸ್ವಯಂಚಾಲಿತವಾಗಿ ಹೆಚ್ಚುತ್ತದೆ. ಅದನ್ನು ತಪ್ಪಿಸಲು ಸಾಧ್ಯವಿಲ್ಲ” ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಆರ್ಥಿಕ ಅಪರಾಧಗಳ ಭಾರಿ ಏರಿಕೆ; ಪ್ರತಿ 2.5 ಗಂಟೆಗೆ ದಾಖಲಾಗ್ತಿದೆ ಒಂದು ಆರ್ಥಿಕ ವಂಚನೆ ಕೇಸ್!
ಡೀಸೆಲ್ ದರ ಏರಿಕೆಗೆ ಅನುಗುಣವಾಗಿ ಸರಕು ಸಾಗಣೆ ದರವನ್ನು ಶೇ.10ರಷ್ಟು ಹೆಚ್ಚಿಸುವ ಕುರಿತು ಚರ್ಚಿಸಲು ಬುಧವಾರ (ಮೇ 27) ಸಾರಿಗೆ ಸಂಸ್ಥೆಗಳ ಸಭೆ ಕರೆಯಲಾಗಿದೆ ಎಂದು ಶಣ್ಮುಗಪ್ಪ ಹೇಳಿದ್ದಾರೆ. ಸಾರಿಗೆ ವಲಯ ಜಿಎಸ್‌ಟಿ ಹಾಗೂ ಇತರೆ ತೆರಿಗೆಗಳ ಮೂಲಕ ಸರ್ಕಾರಕ್ಕೆ ಭಾರೀ ಆದಾಯ ನೀಡುತ್ತಿದ್ದರೂ, ಹೆಚ್ಚುತ್ತಿರುವ ಕಾರ್ಯಾಚರಣೆ ವೆಚ್ಚದ ನಡುವೆ ಯಾವುದೇ ನೇರ ಪರಿಹಾರ ಸಿಗುತ್ತಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮುಂದಿನ ವಾರದಲ್ಲೂ ಪೆಟ್ರೋಲ್ ಮತ್ತು ಡೀಸೆಲ್ ದರ ಮತ್ತೆ ಏರಿಕೆಯಾಗುವ ನಿರೀಕ್ಷೆಯಿದೆ. ಹೀಗಾಗಿ ಲಾಜಿಸ್ಟಿಕ್ಸ್ ವೆಚ್ಚ ಸಹಜವಾಗಿಯೇ ಹೆಚ್ಚಲಿದೆ. ಜೂನ್ ಮೊದಲ ವಾರದಿಂದ ಗ್ರಾಹಕರು ಚಿಲ್ಲರೆ ಮಾರುಕಟ್ಟೆಯಲ್ಲಿ ಪ್ರತಿ ಕಿಲೋಗೆ ಕನಿಷ್ಠ 50 ಪೈಸೆ ಹೆಚ್ಚುವರಿ ದರವನ್ನು ಪಾವತಿಸಬೇಕಾಗಬಹುದು ಎಂದು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಸಲಹೆಗಾರ ರಮೇಶ್ ಚಂದ್ರ ಲಹೋಟಿ ತಿಳಿಸಿರೋದಾಗಿ ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 4:28 pm, Tue, 26 May 26