ಬಗೆದಷ್ಟು ಕೌತಕ: ಲಕ್ಕುಂಡಿಯಲ್ಲಿ 4ನೇ ದಿನದ ಉತ್ಖನನದಲ್ಲಿ ಸಿಕ್ಕಿದ್ದೇನು? ಇಲ್ಲಿದೆ ಮಾಹಿತಿ

ಗದಗ ಲಕ್ಕುಂಡಿಯಲ್ಲಿ ಚಿನ್ನದ ನಿಧಿ ಸಿಕ್ಕ ನಂತರ ನಡೆಯುತ್ತಿರುವ ಉತ್ಖನನ ಕಾರ್ಯದ ನಾಲ್ಕನೇ ದಿನದಂದು ಶಿಲಾಯುಗದ ಕೊಡಲಿ, ಪ್ರಾಚೀನ ದೇವಸ್ಥಾನದ ಅವಶೇಷಗಳು ಪತ್ತೆಯಾಗಿವೆ. ಲಕ್ಕುಂಡಿಯ ಕಲಾ ಶ್ರೀಮಂತಿಕೆಯನ್ನು ಈ ಶಿಲ್ಪಕಲೆಗಳು ಸಾರುತ್ತಿವೆ. ಅಗೆತದ ವೇಳೆ ಕಾರ್ಮಿಕರು ಹೆಚ್ಚಿನ ವೇತನಕ್ಕೆ ಆಗ್ರಹಿಸಿದ್ದು, ಸ್ವಯಂಘೋಷಿತ ಸ್ವಾಮೀಜಿಯೊಬ್ಬರು ನಾಟಕೀಯವಾಗಿ ವರ್ತಿಸಿದ ಘಟನೆ ಕೂಡ ನಡೆದಿದೆ.

ಬಗೆದಷ್ಟು ಕೌತಕ: ಲಕ್ಕುಂಡಿಯಲ್ಲಿ 4ನೇ ದಿನದ ಉತ್ಖನನದಲ್ಲಿ ಸಿಕ್ಕಿದ್ದೇನು? ಇಲ್ಲಿದೆ ಮಾಹಿತಿ
ಲಕ್ಕುಂಡಿ ಗ್ರಾಮದಲ್ಲಿ 4ನೇ ‌ದಿನದ ಉತ್ಖನನ ಕಾರ್ಯ
Edited By:

Updated on: Jan 19, 2026 | 7:50 PM

ಗದಗ, ಜನವರಿ 19: ಲಕ್ಕುಂಡಿ (Lakkundi) ಶಿಲ್ಪಕಲೆಗಳ, ದೇವಾಲಯಗಳ ಸ್ವರ್ಗ, ಚಿನ್ನದ ನಾಡು. ಇಲ್ಲಿ ಚಿನ್ನದ ನಿಧಿ ಸಿಕ್ಕ ಬೆನ್ನಲ್ಲೇ ಉತ್ಖನನ ಕಾರ್ಯ ಆರಂಭವಾಗಿದೆ. ಕೋಟೆ ಗೋಡೆಯಲ್ಲಿ ಹುದುಗಿ ಹೋಗಿರುವ ರಾಶಿ ರಾಶಿ ಶಿಲ್ಪಕಲೆಗಳು ಟಿವಿ9 ಕ್ಯಾವೆರಾದಲ್ಲಿ ಸೆರೆಯಾಗಿವೆ. ಈ ನಡುವೆ ಉತ್ಖನ ನಡೆಯುತ್ತಿರುವ ಜಾಗದಲ್ಲಿ ಇಂದು ಕೂಡ ಪುರಾತನ ಶಿಲೆಗಳು ಪತ್ತೆಯಾಗಿವೆ. ಪುರಾತನ ಕಾಲದ ಕೊಡಲಿ, ಗಂಟೆ, ನಾಗರ ಮೂರ್ತಿ, ಶಿವಲಿಂಗದ ಪಾನಿ ಪೀಠ ಸೇರಿದಂತೆ ಹಲವು ಅವಶೇಷಗಳು ಪತ್ತೆಯಾಗಿದ್ದು, ತೀವ್ರ ಕುತೂಹಲ‌ ಮೂಡಿಸುತ್ತಿದೆ. ಇನ್ನು ಈ ವೇಳೆ ಕಾವಿದಾರಿಯೊಬ್ಬ ಉತ್ಖನನ ಜಾಗಕ್ಕೆ ಎಂಟ್ರಿಕೊಟ್ಟು ವಿಚಿತ್ರವಾಗಿ ವರ್ತಿಸಿದ್ದಾರೆ.

ಇಂದು ಸಿಕ್ಕಿದ್ದೇನು? 

ಗದಗ ತಾಲೂಕಿನ ಐತಿಹಾಸಿಕ ಲಕ್ಕುಂಡಿ ಗ್ರಾಮದಲ್ಲಿ ನಿಧಿ ಸಿಕ್ಕ ಬೆನ್ನಲ್ಲೇ ಉತ್ಖನನ ಕಾರ್ಯ ಆರಂಭವಾಗಿದೆ. ಇಂದು 4ನೇ ದಿನದ ಉತ್ಖನನ ಕಾರ್ಯ ನಡೆದಿದೆ. ಐತಿಹಾಸಿಕ ದೇವಾಲಯಗಳಿಗೆ ಬಳಸಿದ ಕಲಾಕೃತಿ ಹೊಂದಿರುವ ಶಿಲೆಗಳು ಪತ್ತೆಯಾಗಿದೆ. ಕಲೆಗಳ ಶ್ರೀಮಂತ ನಾಡು ಲಕ್ಕುಂಡಿ ರಾಜ್ಯದ ಜನರ ಕುತೂಹಲ ಹೆಚ್ಚಿಸುತ್ತಿದೆ. ಚಿನ್ನದಲ್ಲಿ‌ ಮಾತ್ರ ಶ್ರೀಮಂತಿಕೆ ಅಲ್ಲ. ಕಲೆಗಳಲ್ಲೂ ಶ್ರೀಮಂತಿಕೆ ಹೊಂದಿದ ನಾಡು ಲಕ್ಕುಂಡಿ ಅನ್ನೋದು ಶಿಲ್ಪಕಲೆಗಳು ಸಾರಿ ಸಾರಿ ಹೇಳುತ್ತಿವೆ.

ಇದನ್ನೂ ಓದಿ: ಲಕ್ಕುಂಡಿ: 4ನೇ ದಿನದ ಉತ್ಖನನ ವೇಳೆ ಸಿಕ್ತು ಪುರಾತನ ಶಿಲೆ; ವಿಡಿಯೋ ನೋಡಿ

4ನೇ ದಿನದ ಉತ್ಖನನ ಜಾಗದಲ್ಲಿ ಆಯುಧ ಮಾದರಿಯ ಕಲ್ಲು ಪತ್ತೆಯಾಗಿದೆ. ಇದು ಶಿಲಾಯುಗದಲ್ಲಿ ಬಳಕೆಯಾಗುತ್ತಿದ್ದ ಕೊಡಲೆ ಆಕಾರದ ಶಿಲೆ ಪತ್ತೆಯಾಗಿದೆ. ಅಂಡಾಕಾರದಲ್ಲಿದ್ದು, ಮುಂದಿನ ಒಂದು ಭಾಗ ಮೊನಚಾಗಿದೆ. ಐತಿಹಾಸಿಕ ದೇವಸ್ಥಾನದ ಸ್ತಂಭದ ಮತ್ತು ವಿತಾನದ (ಛತ್ತು) ಮಧ್ಯದಲ್ಲಿರುವ ಬೋದಿಗೆ ಭಾಗದ ಅವಶೇಷ ಪತ್ತೆ ಆಗಿದೆ. ಇದೆ ವೇಳೆ ಲೋಹದ ಗಂಟೆಯೊಂದು ಪತ್ತೆಯಾಗಿದೆ. ಪುರಾತತ್ವ ಇಲಾಖೆ ಸಿಬ್ಬಂದಿಗಳು ಪರಿಶೀಲನೆ ಮಾಡಿ ವಶಕ್ಕೆ ಪಡೆದುಕೊಂಡಿದ್ದಾರೆ.

ದಿನಗೂಲಿ ಹೆಚ್ಚಿಸುವಂತೆ ಕಾರ್ಮಿಕರ ಆಗ್ರಹ

ಇನ್ನು 4ನೇ ದಿನದ ಉತ್ಖನನ ಕಾರ್ಯ ಇಂದು ತಡವಾಗಿ ಆರಂಭವಾಯಿತು. ಕಾರಣ ಉತ್ಖನನ ಕಾರ್ಮಿಕರು ಸರ್ಕಾರದಿಂದ ಕೊಡುವ ವೇತನ ವಿಚಾರದಲ್ಲಿ ಅಪಸ್ವರ ಎತ್ತಿದ್ದಾರೆ. ಬೆಳಿಗ್ಗೆ 8 ಗಂಟೆಗೆ ಆರಂಭವಾಗಬೇಕಿದ್ದ ಉತ್ಖನ ಕೆಲಸ 45 ನಿಮಿಷ ತಡವಾಗಿದೆ. ಉತ್ಖನನ ಕಾರ್ಮಿಕರು ಹೆಚ್ಚಿನ ವೇತನ ನೀಡುವಂತೆ ಆಗ್ರಹಿಸಿದರು. ದಿನಕ್ಕೆ 374 ರೂ ವೇತನ ನೀಡ್ತಿದ್ದಾರೆ. ಉದ್ಯೋಗ ಖಾತ್ರಿಯಲ್ಲಿ ದಿನಕ್ಕೆ 4 ಗಂಟೆ ಕೆಲಸ ಮಾಡಿದರೆ 374 ರೂ ನೀಡಲಾಗುತ್ತದೆ. ಆದರೆ ಇಲ್ಲಿ 10 ಗಂಟೆ ವರೆಗೆ ಉರಿ ಬಿಸಿಲಿನಲ್ಲಿ ಕೆಲಸ ಮಾಡುತ್ತಿದ್ದು, ಕೇವಲ 374 ರೂ ಸಂಬಳ‌ ಕೊಡುತ್ತಿದ್ದಾರೆ. ನಮಗೆ 600 ರೂ ವೇತನ ನೀಡಬೇಕು ಅಂತ ಆಗ್ರಹಿಸಿದರು.

ಇತರೆ ಕೂಲಿ ಕೆಲಸ, ಜಮೀನು ಕೆಲಸ ಹಾಗೂ ಗಾರಿ ಕೆಲಸಕ್ಕೆ ಹೋದರೆ ಕಡಿಮೆ ಸಮಯ ಹೆಚ್ಚಿನ ವೇತನ ಸಿಗುತ್ತೆ. ಇಲ್ಲಿ ಹೆಚ್ಚು ಸಮಯ ಕೆಲಸ‌ ಮಾಡುತ್ತೇವೆ, ಆದರೆ ಕಡಿಮೆ ಕೂಲಿ ಕೊಡುತ್ತಾರೆ. ಬೇರೆ ಬೇರೆ ಕೆಲಸಕ್ಕೆ ಮಹಿಳೆಯರಿಗೆ 500 ರಿಂದ 600 ರೂ ವೇತನ ಸಿಗುತ್ತೆ. ಪುರುಷ ಕಾರ್ಮಿಕರು 1000 ಸಾವಿರ ರೂ.ವರೆಗೆ ದುಡಿಯುತ್ತೇವೆ. ಇಲ್ಲಿ ಹೆಚ್ಚು ಸಮಯ, ಕಡಿಮೆ ಕೂಲಿ ಕೊಡುತ್ತಾರೆ ಅಂತ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಚಿನ್ನದ ಚಾಮುಂಡಿ ವಿಗ್ರಹ ಇದೆ ಎಂದ ‘ಬುರುಡೆಬಾಬಾ’!

ಉತ್ಖನನ ಸ್ಥಳಕ್ಕೆ ಸ್ವಯಂ ಘೋಷಿಸಿತ ಹಿಂಬದಿ ನಡೆಯುವ ಸ್ವಾಮೀಜಿ ಆಗಮಿಸಿ, ಚಿತ್ರವಿಚಿತ್ರವಾಗಿ ವರ್ತಿಸಿದರು. ಹೈಡ್ರಾಮಾದಿಂದ ಜನ ಕೂಗಾಡಲು ಶುರುಮಾಡಿದರು. ನಾನು ಶಿವಯ್ಯ ಹಿರೇಮಠ ಎಂಬ ಸ್ವಾಮೀಜಿ. ನಾನೊಬ್ಬ ಪವಾಡ ಪುರುಷ. ನಾನು ನಿಂತ ಜಾಗದಲ್ಲಿ ಸಾವಿರ ಕೆಜಿ ಚಾಮುಂಡಿ‌ ಚಿನ್ನದ ಮೂರ್ತಿ, ಕಿರಿಟ ಇದೆ ಎಂದು ಜನರನ್ನ ನಂಬಿಸುವ ಕೆಲಸ ಮಾಡಿದರು. ಕೈಯಲ್ಲಿ ಗಜಲಿಂಬೆ ಹಿಡಿದುಕೊಂಡು ಡ್ರಾಮಾ ನಡೆಸಿದರು.

ಇದನ್ನೂ ಓದಿ: ಲಕ್ಕುಂಡಿ ಉತ್ಖನನ ಸ್ಥಳದಲ್ಲಿ ಸ್ವಾಮೀಜಿ ಹೈಡ್ರಾಮಾ: ಗ್ರಾಮಸ್ಥರಿಗೆ ಬೆದರಿ ಓಡಿದ ಸ್ವಯಂಘೋಷಿತ ಪವಾಡ ಪುರುಷ!

ಮೊದ ಮೊದಲು ಸ್ವಾಮಿಜಿಯ ಮಾತುಗಳು, ಅವರ ಆಕ್ಟಿಂಗ್ ಜನರಿಗೆ ತೀವ್ರ ಕುತೂಲ ಮೂಡಿಸಿತ್ತು. ಸ್ವಾಮೀಜಿ ಹೇಳುವುದು ಸುಳ್ಳು ಎಂದು ತಿಳಿದ ಜನರು ತರಾಟೆ ತೆಗೆದುಕೊಂಡರು. ಬಳಿಕ ಉತ್ಖನನ ಸ್ಥಳದಿಂದಲೇ ಓಡಿಸಿದರು. ಸದ್ಯ ಉತ್ಖನನ ಸ್ಥಳದಲ್ಲಿ ಇನ್ನು ಏನೆಲ್ಲಾ ಅವಶೇಷಗಳು ಪತ್ತೆಯಾಗುತ್ತವೆ ಕಾಯ್ದು ನೋಡಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.