ಬಿಲ್ ನೀಡದೆ ಗದಗ ಜಿಲ್ಲಾ ಪಂಚಾಯತಿ ಕಿರಿಕ್! ಸಿಇಓ ಕಚೇರಿ ಮುಂದೆ ವಿಷದ ಬಾಟಲಿ ಹಿಡಿದು ಆಕ್ರೋಶ ವ್ಯಕ್ತಪಡಿಸಿದ ಗುತ್ತಿಗೆದಾರರು
ಜಿಲ್ಲಾ ಪಂಚಾಯತಿ ಕಾಮಗಾರಿ ಮಾಡಿದ ಗುತ್ತಿಗೆದಾರರು ಬೀದಿಗೆ ಬಂದಿದ್ದಾರೆ. ಕಾಮಗಾರಿ ಮಾಡಿ ಮೂರು ವರ್ಷಗಳು ಕಳೆದರೂ ಬಿಲ್ ಪಾವತಿ ಮಾಡಿಲ್ಲ ಅಂತ ರೊಚ್ಚಿಗೆದ್ದ ಗುತ್ತಿಗೆದಾರರು ನಿನ್ನೆ ಸಿಇಓ ಚೇಂಬರ್ಗೆ ಮುತ್ತಿಗೆ ಹಾಕಿ ಆಕ್ರೋಶ ಹೊರಹಾಕಿದ್ರು.
ಗದಗ: ಕಾಮಗಾರಿ ಬಿಲ್ (Bill) ಪಾವತಿಯಾಗಿಲ್ಲ ಎಂದು ಬೆಳಗಾವಿ ಜಿಲ್ಲೆಯಲ್ಲಿ ಗುತ್ತಿಗೆದಾರ (Contractor) ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣ ಇನ್ನೂ ಮಾಸಿಲ್ಲ. ಈ ನಡುವೆ ಅಭಿವೃದ್ಧಿ ಕಾಮಗಾರಿ ಮಾಡಿದ ಗುತ್ತಿಗೆದಾರರಿಗೆ ಬಿಲ್ ನೀಡದೆ ಜಿಲ್ಲಾ ಪಂಚಾಯತಿ ಸತಾಯಿಸುತ್ತಿದೆ ಎಂದು ಆರೋಪಿಸಿ ಗುತ್ತಿಗೆದಾರರು, ನಿನ್ನೆ (ಜೂನ್ 20) ಧರಣಿ ಮಾಡಿದ್ದಾರೆ. ವಿಷದ ಬಾಟಲಿ ಸಮೇತ ಬಂದ ಗುತ್ತಿಗೆದಾರರು ಜಿಲ್ಲಾ ಪಂಚಾಯತಿ ಸಿಇಓ ಕಚೇರಿಗೆ ನುಗ್ಗಿದ್ದರು. ಪೊಲೀಸರು ಪ್ರತಿಭಟನಕಾರರನ್ನು ತಡೆಯಲು ಹರಸಾಹಸಪಟ್ಟರು. ಈ ವೇಳೆ ಪೊಲೀಸರು ಹಾಗೂ ಗುತ್ತಿಗೆದಾರರ ನಡುವೆ ನೂಕಾಟ, ತಳ್ಳಾಟ ಉಂಟಾಗಿ ಹೈಡ್ರಾಮಾ ನಡೆಯಿತು.
ಜಿಲ್ಲೆಯಲ್ಲಿ ಜಿಲ್ಲಾ ಪಂಚಾಯತಿ ಕಾಮಗಾರಿ ಮಾಡಿದ ಗುತ್ತಿಗೆದಾರರು ಬೀದಿಗೆ ಬಂದಿದ್ದಾರೆ. ಕಾಮಗಾರಿ ಮಾಡಿ ಮೂರು ವರ್ಷಗಳು ಕಳೆದರೂ ಬಿಲ್ ಪಾವತಿ ಮಾಡಿಲ್ಲ ಅಂತ ರೊಚ್ಚಿಗೆದ್ದ ಗುತ್ತಿಗೆದಾರರು ನಿನ್ನೆ ಸಿಇಓ ಚೇಂಬರ್ಗೆ ಮುತ್ತಿಗೆ ಹಾಕಿ ಆಕ್ರೋಶ ಹೊರಹಾಕಿದ್ರು. ಚಿನ್ನ ಅಡವಿಟ್ಟು, ಸಾಲ ಮಾಡಿ ಕಾಮಗಾರಿ ಮಾಡಿದ್ದ ಗುತ್ತಿಗೆದಾರರು ಅಕ್ಷರಶಃ ತಾಳ್ಮೆ ಕಳೆದುಕೊಂಡಿದ್ದರು. ಸಿಇಓ ಕಚೇರಿ ಮುಂದೆ ದಿಢೀರ್ ಪ್ರತಿಭಟನೆ ಮಾಡಿ ಸಿಇಓಗೆ ಬಿಸಿ ಮುಟ್ಟಿಸಿದ್ರು.
ಜಿಲ್ಲೆಯ ಕಣಗಿನಾಳ, ಹುಯಿಲಗೋಳ, ನೀಲಗುಂದ ಹಾಗೂ ಹಿರೇವಡ್ಡಟ್ಟಿ ಸೇರಿದಂತೆ ಹಲವು ಗ್ರಾಮ ಪಂಚಾಯತಿ ಅಧ್ಯಕ್ಷರು, ಸದಸ್ಯರು ಸೇರಿ ಗುತ್ತಿಗೆದಾರರು ಆಗಮಿಸಿದ್ದರು. ಮೂರು ವರ್ಷಗಳಿಂದ ಗ್ರಾಮದಲ್ಲಿ ಅಭಿವೃದ್ಧಿ ಕೆಲಸ ಮಾಡಿದ ಕಾಮಗಾರಿಗಳಿಗೆ ಈವರೆಗೂ ಬಿಲ್ ನೀಡಿಲ್ಲ. ಸಾಮಾಗ್ರಿಗಳ ಖರೀದಿ, ರೈತರ ಕೃಷಿ ಹೊಂಡ, ಇಂಗು ಗುಂಡಿ, ಸೇರಿದಂತೆ ನರೇಗಾ ಯೋಜನೆ ಅಡಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಸದ್ಯಕ್ಕೆ ಬಿಲ್ ನೀಡಬೇಕಿತ್ತು. ಆದರೆ ಪಿಡಿಓಗಳನ್ನು ದಿಢೀರ್ ಆಗಿ ಸಿಇಓ ವರ್ಗಾವಣೆ ಮಾಡಿದ್ದಾರೆ ಎಂದು ಗುತ್ತಿಗೆದಾರರು ಆರೋಪಿಸಿದರು.
ನಮಗೆ ಬಿಲ್ ಬರದಿದ್ದರೆ ಗುತ್ತಿಗೆದಾರ ಸಂತೋಷ್ನ ರೀತಿ ನಾವು ಆತ್ಮಹತ್ಯೆ ಮಾಡಿಕೊಳ್ಳಬೇಕಾಗುತ್ತದೆ. ಇದಕ್ಕೆ ಸಿಇಓ ಮೇಡಂ ಡಾ. ಸುಶೀಲಾ ಅದರೆ ಹೊಣೆ ಅಂತಾ ಗುತ್ತಿಗೆದಾರ ಗುರುರಾಜ್ ಹಾಗೂ ಸದಸ್ಯ ಉಮೇಶ್ ಆಕ್ರೋಶ ವ್ಯಕ್ತಪಡಿಸಿದರು.
ಗುತ್ತಿಗೆದಾರರು ಹಾಗೂ ಗ್ರಾಮ ಪಂಚಾಯತಿ ಅಧ್ಯಕ್ಷರು ಹಾಗೂ ಸದಸ್ಯರು ಬಿಲ್ ಕೇಳಲು ಬಂದರೆ ಸಿಇಓ ಮೇಡಂ ಕಚೇರಿ ಬಾಗಿಲು ಹಾಕಿಕೊಂಡು ಕುಳಿತ್ತಿದ್ದರು. ಎರಡ್ಮೂರು ಗಂಟೆ ಕಾಯಿಸಿದ್ದಾರೆ. ಒಳಗಡೆ ಕರೆದು ಮಾತನಾಡಿದರೆ ಸಾಕಿತ್ತು. ಆದರೆ ಸಿಇಓ ಅವರ ನಿರ್ಲಕ್ಷ್ಯಕ್ಕೆ ದೊಡ್ಡ ಗಲಾಟೆ ನಡೆಯಿತು ಎಂದು ಗುತ್ತಿಗೆದಾರರು ತಿಳಿಸಿದ್ದಾರೆ.
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ