AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇನ್ನೊಬ್ಬರ ಜತೆ ಸರ್ಕಾರ ರಚಿಸಲು ಆಗದು, ಸ್ವತಂತ್ರ ಸರ್ಕಾರ ರಚಿಸಲು ಅವಕಾಶ ಮಾಡಿಕೊಡಿ: ಕುಮಾರಸ್ವಾಮಿ ಮನವಿ

ಇದೇ ವೇಳೆ ಕೆರೆ ಭೂಮಿ ಪೂಜೆ ಕಾರ್ಯಕ್ರಮಕ್ಕೆ ಆಹ್ವಾನ ನೀಡಿ ದಿಢೀರ್ ರದ್ದುಗೊಳಿಸಿ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರಿಗೆ ಅವಮಾನ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ.

ಇನ್ನೊಬ್ಬರ ಜತೆ ಸರ್ಕಾರ ರಚಿಸಲು ಆಗದು, ಸ್ವತಂತ್ರ ಸರ್ಕಾರ ರಚಿಸಲು ಅವಕಾಶ ಮಾಡಿಕೊಡಿ: ಕುಮಾರಸ್ವಾಮಿ ಮನವಿ
ಹೆಚ್​ ಡಿ ಕುಮಾರಸ್ವಾಮಿ
TV9 Web
| Updated By: guruganesh bhat|

Updated on: Aug 23, 2021 | 3:30 PM

Share

ಗದಗ: 75 ವರ್ಷದಿಂದ ಕಾಂಗ್ರೆಸ್, ಬಿಜೆಪಿ ಸರ್ಕಾರ ನೋಡಿದ್ದೀರಿ. ನಗೆ 20 ವರ್ಷ ಅಧಿಕಾರ ಬೇಡ, 5 ವರ್ಷ ಕೊಡಿ ಸಾಕು. ಒಂದು ಚುನಾವಣೆ ಪರೀಕ್ಷೆ ಮಾಡಿ. ನಿಮ್ಮ ಬದುಕನ್ನು ಒಳ್ಳೆಯ ರೀತಿಯಲ್ಲಿ ಮಾಡುವೆ. ಇನ್ನೊಬ್ಬರ ಜೊತೆ ಸರ್ಕಾರ ಮಾಡೋದಕ್ಕೆ ಆಗಲ್ಲ. ಸ್ವತಂತ್ರ ಸರ್ಕಾರ ಕೊಡಿ. ಯಾವ ಸರ್ಕಾರಕ್ಕೂ ಅರ್ಜಿ ಕೊಡದ ರೀತಿಯಲ್ಲಿ ಯೋಜನೆಗಳನ್ನು ಸಿದ್ಧ ಮಾಡಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ ಜನರ ಬಳಿ ಮನವಿ ಮಾಡಿದರು.

ಇದೇ ವೇಳೆ ಕೆರೆ ಭೂಮಿ ಪೂಜೆ ಕಾರ್ಯಕ್ರಮಕ್ಕೆ ಆಹ್ವಾನ ನೀಡಿ ದಿಢೀರ್ ರದ್ದುಗೊಳಿಸಿ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರಿಗೆ ಅವಮಾನ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಇಂದು ಗದಗ ಜಿಲ್ಲೆಯ ಸುಗ್ನಳ್ಳಿ ಗ್ರಾಮದ ಅಲದಮ್ಮನ ಕೆರೆ ಭೂಮಿ ಪೂಜೆ ಕಾರ್ಯಕ್ರಮ ನಿಗದಿಯಾಗಿತ್ತು. ಆದರೆ ದಿಢೀರನೇ ಕಾರ್ಯಕ್ರಮ ರದ್ದುಗೊಂಡಿದ್ದು, ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಮಾಜಿ ಸಿಎಂ ಕುಮಾರಸ್ವಾಮಿ ಅವರಿಗೆ ಅವಮಾನ ಮಾಡಲಾಗಿದೆ ಎಂದು ಜೆಡಿಎಸ್ ಕಾರ್ಯಕರ್ತರು ಆರೋಪಿಸಿದ್ದಾರೆ. ಈ ಕುರಿತು ಸ್ವತಃ ಪ್ರತಿಕ್ರಿಯೆ ನೀಡಿದ ಮಾಜಿ ಸಿಎಂ ಕುಮಾರಸ್ವಾಮಿ, ‘ಮುಖ್ಯಮಂತ್ರಿಯಾಗಿದ್ದಾಗ ಗ್ರಾಮ ವಾಸ್ತವ್ಯಕ್ಕೆ ಈ ಗ್ರಾಮಕ್ಕೆ ಆಗಮಿಸಿದ್ದಾಗ ಸುಗ್ನಳ್ಳಿ ಕೆರೆಗೆ ಅನುದಾನ ಒದಗಿಸಿದ್ದೆ. ಇದೀಗ ಹೀಗಾಗಿ ಕೆರೆ ಭೂಮಿ ಪೂಜೆ ನಡೆಯಲಿದ್ದು ನನಗೆ ಆಹ್ವಾನ ನೀಡಿದ್ದರು. ಶಿರಹಟ್ಟಿ ಬಿಜೆಪಿ ಶಾಸಕ ರಾಮಣ್ಣ ಲಮಾಣಿ ಸ್ವತಃ ಆಹ್ವಾನ ನೀಡಿದ್ದರು. ಉಸ್ತುವಾರಿ ಸಚಿವ ಸಿ ಸಿ ಪಾಟೀಲ್ ಅವರೊಂದಿಗೂ ಮಾತನಾಡಿದ್ದೆ. ಕಾರ್ಯಕ್ರಮದಲ್ಲಿ ಭಾಗವಹಿಸಲು ನಾನು ಗದಗಕ್ಕೆ ಆಗಮಿಸಿದ್ದೆ. ಆದರೆ ನಿನ್ನೆ ರಾತ್ರಿ ಅನಿರೀಕ್ಷಿತವಾಗಿ ಇಂದಿನ ಕಾರ್ಯಕ್ರಮನ್ನು ರದ್ದುಗೊಳಿಸಿದ್ದಾರೆ. ಯಾಕೆ ಹೀಗೆ ನಡೆದಿದೆ ಎಂದು ನನಗೆ ತಿಳಿದಿಲ್ಲ. ಆದರೆ ರಾಜಕೀಯ ಮಾಡದೇ ಜನರ ಪರವಾಗಿ ಕೆಲಸ ನಿರ್ವಹಿಸಿ ಎಂದಷ್ಟೇ ಇಲ್ಲಿಯ ಜನಪ್ರತಿನಿಧಿಗಳಿಗೆ ಸಲಹೆ ನೀಡುತ್ತೇನೆ ಎಂದು  ತಿಳಿಸಿದರು.

ಜನರಿಗೆ ಗೊತ್ತಾಗುತ್ತದೆ, ಯಾರು ಕೆಲಸ ಮಾಡಿದ್ದಾರೆಂದು? ನನ್ನ ಸರ್ಕಾರದಲ್ಲಿ ಹಣ ಬಿಡುಗಡೆ ಆಗಿದೆ ಎಂದು ಅಭಿವೃದ್ಧಿಗೆ ತಡೆ ಮಾಡಬೇಡಿ. ಅಭಿವೃದ್ಧಿಯ ಕ್ರೆಡಿಟ್​ನ್ನು ಕುಮಾರಸ್ವಾಮಿ ತೆಗೆದುಕೊಳ್ಳುತ್ತಾರೆ ಎಂದು ಸ್ಥಗಿತ ಮಾಡಬೇಡಿ. ಸ್ಥಳಿಯ ಶಾಸಕರಿಲ್ಲದೇ ಅಧಿಕೃತವಾಗಿ ಕಾಮಗಾರಿಗೆ ನಾನು ಚಾಲನೆ ನೀಡುವುದಿಲ್ಲ. ಸುಗ್ಗನಹಳ್ಳಿ ಗ್ರಾಮಕ್ಕೆ ತೆರಳಿ ಜನರನ್ನು ಭೇಟಿ ಮಾಡುವ ಕಾರ್ಯಕ್ರಮ ಹಮ್ಮಿಕೊಂಡಿದ್ದೇನಷ್ಟೇ. ಸ್ವತಃ ಇಲ್ಲಿನ ಬಿಜೆಪಿ ಶಾಸಕರೇ ಅ‌ನುದಾನ ಕೇಳಿದ್ದರು. ಆ ಪ್ರಕಾರ‌ ಮೂಲಭೂತ ಸೌಕರ್ಯ ಸೇರಿ 50 ಕೋಟಿ ಬಿಡುಗಡೆ ಮಾಡಿದ್ದರ ಕುರಿತು ಶಾಸಕ ಲಮಾಣಿ ಅವರೇ ಹೇಳಿಕೆ ನೀಡಿದ್ದಾರೆ. ಬಿಜೆಪಿ ಶಾಸಕರು ಎಂದು ನಾನು ನನ್ನ ಸರ್ಕಾರದ ಅವಧಿಯಲ್ಲಿ ಸಣ್ಣತನ ತೋರಿಸಿಲ್ಲ. ಆದರೆ ಯಾಕೆ ಅವರು ಕಾರ್ಯಕ್ರಮವನ್ನು ಮುಂದಕ್ಕೆ ಹಾಕಿದ್ದಾರೋ ಗೊತ್ತಿಲ್ಲ. ನೀವೇ ಬರಬೇಕು. ಜನ ನಿಮ್ಮನ್ನು ಬಯಸ್ತಾರೆ‌ ಎಂದು ಅವರು ನನ್ನಲ್ಲಿ ಹೇಳಿದ್ದರು. ಒಟ್ಟಿನಲ್ಲಿ ಜನರಿಗೆ ಗೊತ್ತಾಗುತ್ತದೆ, ಯಾರು ಕೆಲಸ ಮಾಡಿದ್ದಾರೆ ಅಂತ, ಮುಂದಿನ ದಿನಗಳಲ್ಲಿ ಇನ್ನಷ್ಟು ವೇಗವಾಗಿ ಕೆಲಸ ಮಾಡಿ ಎಂದಷ್ಟೆ ನಾನು ವಿನಂತಿ ಮಾಡುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸಲಹೆ ನೀಡಿದರು.

ಸ್ಥಳೀಯ ಸಂಸ್ಥೆಗಳ ಚುನಾವಣೆ ಗಂಭೀರವಾಗಿ ಪರಿಗಣಿಸಿದ್ದೇವೆ. ಹೀಗಾಗಿ ಜೆಡಿಎಸ್‌ನಿಂದ ಪ್ರಬಲ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತಿದ್ದೇವೆ. ಪ್ರಾದೇಶಿಕ ಪಕ್ಷದ ಅವಶ್ಯಕತೆ ಇದೆ ಎಂಬ ಭಾವನೆ ಜನರಲ್ಲಿದೆ. ಹೀಗಾಗಿ ಜೆಡಿಎಸ್ ಗೆಲ್ಲುತ್ತದೆ. ತಾ.ಪಂ., ಜಿ.ಪಂ. ಚುನಾವಣೆ ಫಲಿತಾಂಶದಿಂದ ತಿಳಿದುಬರಲಿದೆ ಎಂದು ಅವರು ಇದೇ ಸಂದರ್ಭದಲ್ಲಿ ವಿಶ್ವಾಸ ವ್ಯಕ್ತಪಡಿಸಿದರು.

ಇದನ್ನೂ ಓದಿ: 

Burkina Faso: ಆಫ್ರಿಕಾ ಖಂಡದ ಪುಟ್ಟ ದೇಶ ಬುರ್ಕಿನಾ ಫಾಸೋದಲ್ಲಿ ಉಗ್ರರ ಉಪಟಳ; 80 ಜನರು ಬಲಿ: ಭಾರತಕ್ಕೂ ಈ ದೇಶಕ್ಕೂ ಏನು ಸಂಬಂಧ?

ಅಮೆರಿಕ ಕೆಂಡಾಮಂಡಲ: 2ನೇ ಮಹಾಯುದ್ಧದ ಐತಿಹಾಸಿಕ ಚಿತ್ರಕ್ಕೆ ತಾಲಿಬಾನ್ ಅಣಕ, ಬೈಡೆನ್ ರಾಜೀನಾಮೆಗೆ ಹೆಚ್ಚಾಯ್ತು ಒತ್ತಡ

(Former CM HD Kumaraswamy requests in Gadag to give a chance to form independent JDS government)