ಅಮೆರಿಕ ಕೆಂಡಾಮಂಡಲ: 2ನೇ ಮಹಾಯುದ್ಧದ ಐತಿಹಾಸಿಕ ಚಿತ್ರಕ್ಕೆ ತಾಲಿಬಾನ್ ಅಣಕ, ಬೈಡೆನ್ ರಾಜೀನಾಮೆಗೆ ಹೆಚ್ಚಾಯ್ತು ಒತ್ತಡ
ಬೈಡೆನ್ ಈ ಕ್ಷಣವೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಅವರು ರಾಜೀನಾಮೆ ನೀಡದಿದ್ದರೆ ವಾಗ್ದಂಡನೆ ವಿಧಿಸಿ ವಜಾ ಮಾಡಬೇಕು ಎಂದು ಅಮೆರಿಕದಲ್ಲಿ ಹಲವರು ಆಗ್ರಹಿಸುತ್ತಿದ್ದಾರೆ.
ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ ವಶಪಡಿಸಿಕೊಂಡ ನಂತರ ತನ್ನ ಬೆನ್ನನ್ನು ತಾನೇ ತಟ್ಟಿಕೊಳ್ಳುವ ಪ್ರಚಾರಾಂದೋಲನ (ಪ್ರೊಪಗಂಡ) ವಿಡಿಯೊ, ಛಾಯಾಚಿತ್ರಗಳನ್ನು ಬಿಡುಗಡೆ ಮಾಡುತ್ತಿರುವ ತಾಲಿಬಾನ್ ಉಗ್ರರು ಇದೀಗ 2ನೇ ಮಹಾಯುದ್ಧದಲ್ಲಿ ಅಮೆರಿಕದ ಗೆಲುವಿನ ಪ್ರತೀಕ ಎನಿಸಿರುವ ಐತಿಹಾಸಿಕ ಚಿತ್ರವನ್ನೇ ಅಣಕಿಸಿದ್ದಾರೆ. 1945ರಲ್ಲಿ ಜಪಾನ್ನ ಇವೊ ಜಿಮಾ ದ್ವೀಪವನ್ನು ಪ್ರಬಲ ಹೋರಾಟದ ನಂತರ ಅಮೆರಿಕದ ನೌಕಾಪಡೆ ವಶಪಡಿಸಿಕೊಂಡಿತ್ತು. ಇವೊ ಜಿಮಾ ದ್ವೀಪದಲ್ಲಿ ಅಮೆರಿಕದ ಯೋಧರು ತಮ್ಮ ದೇಶದ ಧ್ವಜ ನೆಡುವ ದೃಶ್ಯ ವಿಶ್ವಯುದ್ಧದ ಮಹತ್ವದ ಕ್ಷಣಗಳಲ್ಲಿ ಒಂದು ಎಂದು ದಾಖಲಾಗಿತ್ತು. ಇದೀಗ ಅಫ್ಘಾನಿಸ್ತಾನವನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿರುವ ತಾಲಿಬಾನ್ ಸಹ, ತನ್ನ ಹೋರಾಟಗಾರರು ಸಂಘಟನೆಯ ಧ್ವಜ ನೆಡುವ ಚಿತ್ರವೊಂದನ್ನು ಬಿಡುಗಡೆ ಮಾಡಿದೆ. ಇದು ಇವೊ ಜಿಮಾ ದ್ವೀಪದಲ್ಲಿ ಅಮೆರಿಕ ಯೋಧರು ತಮ್ಮ ದೇಶದ ಧ್ವಜ ನೆಟ್ಟ ದೃಶ್ಯವನ್ನೇ ಬಹುಪಾಲು ಹೋಲುತ್ತದೆ ಎನ್ನುವುದು ಗಮನಾರ್ಹ ಸಂಗತಿ.
ಅಮೆರಿಕ ನಿರ್ಮಿತ ಅತ್ಯಾಧುನಿಕ ಯುದ್ಧಸಾಧನ, ಶಸ್ತ್ರಸಜ್ಜಿತರಾಗಿರುವ ತಾಲಿಬಾನ್ ಹೋರಾಟಗಾರರ ಪ್ರತಿಷ್ಠಿತ ಬದ್ರಿ 313 ದಳದ ಒಂದಿಷ್ಟು ಸದಸ್ಯರು ಈ ಪ್ರೊಪಗಂಡ ಚಿತ್ರಕ್ಕಾಗಿ ಪೋಸ್ ಕೊಟ್ಟಿದ್ದಾರೆ. ಈ ಚಿತ್ರ ಇದೀಗ ಅಮೆರಿಕದಲ್ಲಿ ಆಕ್ರೋಶ ಹುಟ್ಟುಹಾಕಿದೆ. ಅಮೆರಿಕಕ್ಕೆ ಇದರಿಂದ ಅತಿಹೆಚ್ಚು ಅವಮಾನವಾಗಿದೆ ಎಂದು ಹಲವು ಸುದ್ದಿ ಮಾಧ್ಯಮಗಳು ವರದಿ ಮಾಡಿವೆ.
ತಾಲಿಬಾನ್ನ ಈ ಕೃತ್ಯದಿಂದ ಅಮೆರಿಕದ ಹೆಮ್ಮೆಯ ಗರಿಗಳಿಗೆ ಮಸಿ ಮೆತ್ತಿದಂತೆ ಆಗಿದೆ ಎಂದು ಕನ್ಸರ್ವೇಟಿವ್ ಪಕ್ಷದ ಸದಸ್ಯರು ಸಿಟ್ಟು ಹೊರಹಾಕಿದ್ದಾರೆ. 2ನೇ ಮಹಾಯುದ್ಧದಲ್ಲಿ ಅಮೆರಿಕ ಪಡೆಗಳಿಗೆ ಜಪಾನ್ ಆಕ್ರಮಿಸಲು ಅವಕಾಶ ಮಾಡಿಕೊಟ್ಟ ಮಹತ್ವದ ಯುದ್ಧಗಳಲ್ಲಿ ಇವೊ ಜಿಮಾ ಸಹ ಒಂದು. ಅಲ್ಲಿನ ಸುರಿಬಚಿ ಪರ್ವತದ ಮೇಲೆ 1945ರಲ್ಲಿ ಅಮೆರಿಕದ ಧ್ವಜ ಹಾರಿಸುವ ಮೂಲಕ ಮುನ್ನಡೆಯನ್ನು ಮನವರಿಕೆ ಮಾಡಿಕೊಟ್ಟಿದ್ದರು.
ಬಹುತೇಕ ಟೀಕಾಕಾರರು ಅಮೆರಿಕದ ಸಶಸ್ತ್ರಪಡೆಗಳ ಕಮಾಂಡರ್ ಇನ್ ಚೀಫ್ ಸಹ ಆಗಿರುವ ಅಧ್ಯಕ್ಷ ಜೊ ಬೈಡೆನ್ ವಿರುದ್ಧ ಹರಿಹಾಯ್ದಿದ್ದಾರೆ. ಇದ್ದಕ್ಕಿದ್ದಂತೆ ಅಫ್ಘಾನಿಸ್ತಾನದಿಂದ ಸೇನಾಪಡೆಗಳನ್ನು ಹಿಂದಕ್ಕೆ ಕರೆಸಿಕೊಳ್ಳುವ ಮೂಲಕ ಅಮೆರಿಕ ಮತ್ತು ಅದರ ಮಿತ್ರಪಕ್ಷಗಳಿಗೆ ಸೇರಿದವರ ಜೀವವನ್ನು ಬೈಡೆನ್ ಅಪಾಯಕ್ಕೀಡು ಮಾಡಿದರು ಎಂದು ಟೀಕಿಸಲಾಗುತ್ತಿದೆ.
ಅಮೆರಿಕದಲ್ಲಿ ಗುಪ್ತಗಾಮಿನಿಯಂತೆ ಹರಿಯುತ್ತಿದ್ದ ಬೈಡೆನ್ ವಿರುದ್ಧದ ಆಕ್ರೋಶಕ್ಕೆ ಈ ಸುದ್ದಿ ತುಪ್ಪ ಸುರಿದಿದೆ. ‘ಬೈಡೆನ್ ಈ ಕ್ಷಣವೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಅವರು ರಾಜೀನಾಮೆ ನೀಡದಿದ್ದರೆ ವಾಗ್ದಂಡನೆ ವಿಧಿಸಿ ವಜಾ ಮಾಡಬೇಕು’ ಎಂದು ಟಿವಿ ನಿರೂಪಕ ಜಾನ್ ಕಾರ್ಡಿಲೊ ಟೀಕಿಸಿದ್ದಾರೆ. ನೌಕಾಪಡೆಯಲ್ಲಿ ಕಮಾಂಡೊ ಆಗಿ ಕಾರ್ಯನಿರ್ವಹಿಸಿ ನಿವೃತ್ತರಾಗಿರುವ ಜೊನಾಥನ್ ಗಿಲಿಯಮ್ ಸಹ ತಮ್ಮ ಪಾಡ್ಕಾಸ್ಟ್ನಲ್ಲಿ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ‘ಇದು ದಿನದಿಂದ ದಿನಕ್ಕೆ ಇನ್ನಷ್ಟು ಹದಗೆಡುತ್ತದೆ’ ಎಂದು ಅವರು ಪರಿಸ್ಥಿತಿಯನ್ನು ವಿಮರ್ಶಿಸಿದ್ದಾರೆ.
‘ತಾಲಿಬಾನ್ ಈಗ ಏನು ಮಾಡಿದೆಯೋ ಅದು ಜೊ ಬೈಡೆನ್ರ ಹೆಮ್ಮೆ. ಇಡೀ ಜಗತ್ತು ಇದನ್ನು ನೋಡಿದೆ’ ಎಂದು ಅಮೆರಿಕದ ಕಾಂಗ್ರೆಸ್ ಸದಸ್ಯರಾದ ಎಲಿಸ್ ಸ್ಟಿಫನಿಕ್ ಹೇಳಿದ್ದಾರೆ. ‘ನಾವು ಈಗ ಜಗತ್ತಿನ ಕಣ್ಣಿನಲ್ಲಿ ನಗುವ ಸರಕಾಗಿದ್ದೇವೆ’ ಎಂದು ಅಂಕಣಕಾರ್ತಿ ಮೆಗಾನ್ ಮೆಕ್ಗೈನ್ ಹೇಳಿದ್ದಾರೆ. ಅಫ್ಘಾನ್ ರಾಷ್ಟ್ರೀಯ ಸೇನೆಯು ತಾಲಿಬಾನ್ಗೆ ಶರಣಾದ ರೀತಿಯ ಬಗ್ಗೆ ವಿಶ್ವದಲ್ಲಿ ಅಚ್ಚರಿಯ ಜೊತೆಗೆ ಬೇಸರವೂ ವ್ಯಕ್ತವಾಗಿದೆ. ಅಫ್ಘಾನ್ ಸೇನೆಗಾಗಿ ಅಮೆರಿಕ ನೀಡಿದ್ದ ಅತ್ಯಾಧುನಿಕ ಶಸ್ತ್ರಾಸ್ತ್ರಗಳು ಇದೀಗ ತಾಲಿಬಾನ್ ಉಗ್ರರ ಕೈಗೆ ಸಿಕ್ಕಿವೆ.
ತಾಲಿಬಾನ್ ವಶದಲ್ಲಿ ಈಗ ಅಮೆರಿಕ ನಿರ್ಮಿತ 2000ಕ್ಕೂ ಹೆಚ್ಚು ಹಮ್ವೀ ಸೇರಿದಂತೆ ಹಲವು ಸಶಸ್ತ್ರ ವಾಹನಗಳು, ಬ್ಲಾಕ್ಹಾಕ್, ದಾಳಿ ಹೆಲಿಕಾಪ್ಟರ್, ಮಿಲಿಟರಿ ಡ್ರೋಣ್ ಸೇರಿದಂತೆ 40ಕ್ಕೂ ಹೆಚ್ಚು ವೈಮಾನಿಕ ಯುದ್ಧೋಪಕರಣಗಳು, ಸುಮಾರು 6 ಲಕ್ಷ ಎಂ16 ಅಸಾಲ್ಟ್ ರೈಫಲ್ಗಳು, 1,62,000 ಸಂವಹನ ಉಪಕರಣಗಳು, 16,000 ನೈಟ್ ವಿಷನ್ ಗಾಗಲ್ಸ್ ತಾಲಿಬಾನ್ಗೆ ಸಿಕ್ಕಿವೆ.
ಅಫ್ಘಾನಿಸ್ತಾನದಲ್ಲಿ ಅಮೆರಿಕ ನಡೆಯ ಬಗ್ಗೆ ವ್ಯಕ್ತವಾಗಿರುವ ಟೀಕೆಗಳನ್ನು ಅಧ್ಯಕ್ಷ ಜೋ ಬೈಡೆನ್ ತಳ್ಳಿ ಹಾಕಿದ್ದಾರೆ. ಅಫ್ಘಾನ್ ಸೇನೆಯು ತಾಲಿಬಾನ್ ವಿರುದ್ಧ ಸರಿಯಾಗಿ ಹೋರಾಡಲಿಲ್ಲ. ಅಲ್ಲಿನ ನಾಯಕರು ದೃಢ ನಿರ್ಧಾರಗಳನ್ನು ತೆಗೆದುಕೊಳ್ಳಲಿಲ್ಲ. ಅಫ್ಘಾನಿಸ್ತಾನದ ಒಳಿತಿಗಾಗಿ ಅಮೆರಿಕದ ಸುಮಾರು 20 ವರ್ಷಗಳ ಕಾಲ ಏನೆಲ್ಲಾ ಮಾಡಬಹುದೋ, ಅದೆಲ್ಲನ್ನೂ ಮಾಡಿತ್ತು ಎಂದು ತಮ್ಮ ನಿಲುವು ಸಮರ್ಥಿಸಿಕೊಂಡಿದ್ದಾರೆ.
(Outrage in America Over Taliban mocking US with iconic World War II photo of iwo jima)
ಇದನ್ನೂ ಓದಿ: ಊಹಿಸಿದಷ್ಟೂ ಆಪಾಯ: ತಾಲಿಬಾನ್ ಕೈವಶವಾದ ಅಮೆರಿಕ ನಿರ್ಮಿತ ಮಾರಣಾಂತಿಕ ಆಯುಧಗಳು