ಸಿಕ್ಕ ನಿಧಿಯನ್ನು ಸರ್ಕಾರಕ್ಕೊಪ್ಪಿಸಿ ಈಗ ವಾಪಸ್ ಕೇಳುತ್ತಿರುವುದೇಕೆ ಕುಟುಂಬ?
ಗದಗ ಲಕ್ಕುಂಡಿಯಲ್ಲಿ ಕುಟುಂಬವೊಂದಕ್ಕೆ ಮನೆಗೆ ಅಡಿಪಾಯ ಹಾಕುವ ವೇಳೆ ಅಪಾರ ಪ್ರಮಾಣದಲ್ಲಿ ಚಿನ್ನಾಭರಣ ದೊರೆತಿತ್ತು. ಆ ನಿಧಿಯನ್ನು ಕುಟುಂಬ ಸರ್ಕಾರಕ್ಕೊಪಿಸಿ, ಜಿಲ್ಲಾಡಳಿತದಿಂದ ಸನ್ಮಾನವನ್ನೂ ಸ್ವೀಕರಿಸಿತ್ತು. ಆದರೀಗ ಪ್ರಕರಣವೀಗ ಹೊಸ ತಿರುವು ಪಡೆದುಕೊಂಡಿದ್ದು, ಸಿಕ್ಕ ಚಿನ್ನವನ್ನು ಸರ್ಕಾರಕ್ಕೆ ನೀಡಿದ ಕುಟುಂಬವೀಗ ಚಿನ್ನ ವಾಪಸ್ ಕೇಳುತ್ತಿದೆ. ಕಾರಣವೇನೆಂಬ ಮಾಹಿತಿ ಇಲ್ಲಿದೆ.

ಗದಗ, ಜನವರಿ 11: ಜಿಲ್ಲೆಯ ಲಕ್ಕುಂಡಿ ಗ್ರಾಮದಲ್ಲಿ ಗಂಗವ್ವ ಬಸವರಾಜ ರಿತ್ತಿ ಎಂಬುವವರ ಮನೆ ಜಾಗದಲ್ಲಿ ಅಡಿಪಾಯ ಅಗೆಯುವ ಸಂದರ್ಭದಲ್ಲಿ 1 ಕೆಜಿಗೂ ಹೆಚ್ಚು ತೂಕದ ಚಿನ್ನಾಭರಣಗಳು ತುಂಬಿದ್ದ ತಂಬಿಗೆಯೊಂದು ದೊರೆತಿತ್ತು. ಹೀಗೆ ಸಿಕ್ಕ ನಿಧಿಯನ್ನು ತಾಯಿ-ಮಗ ಸರ್ಕಾರಕ್ಕೊಪ್ಪಿಸಿದ್ದರು. ಈ ಹಿನ್ನೆಲೆ ಕುಟುಂಬಕ್ಕೆ ಜಿಲ್ಲಾಡಳಿತ ಸನ್ಮಾನವನ್ನೂ ಮಾಡಿತ್ತು. ಆದರೆ ಪ್ರಕರಣವೀಗ ಹೊಸ ತಿರುವು ಪಡೆದುಕೊಂಡಿದೆ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿರುವ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಅಧಿಕಾರಿ, ಸಿಕ್ಕಿರುವ ಚಿನ್ನ ನಿಧಿಯಲ್ಲವೆಂದು ಸ್ಪಷ್ಟಪಡಿಸಿದ್ದಾರೆ. ಅಷ್ಟೇ ಅಲ್ಲದೆ ಅನುಮತಿಯಿಲ್ಲದೆ ಮನೆ ಕಟ್ಟಲು ಮುಂದಾಗಿದ್ದ ಕುಟುಂಬದ ಜಾಗವೂ ಕೈತಪ್ಪುವ ಹಂತದಲ್ಲಿದೆ.
‘ಇದು ನಿಧಿಯೇ ಅಲ್ಲ’
ಚಿನ್ನ ಸಿಕ್ಕ ಸ್ಥಳಕ್ಕೆ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಧಾರವಾಡ ವಲಯದ ಅಧೀಕ್ಷಕರಾದ ರಮೇಶ್ ಮೂಲಿಮನಿ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಲಕ್ಕುಂಡಿಯಲ್ಲಿ ಸಿಕ್ಕಿದ್ದು ನಿಧಿಯಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ನಿಧಿ, ನಿಧಿ ಎಂದು ಹೇಳಲಾಗುತ್ತಿದೆ, ಆದರೆ ಇದು ನಿಧಿಯ ಲಕ್ಷಣಗಳನ್ನು ಹೊಂದಿಲ್ಲ. ಚಿನ್ನ ಯಾವ ಕಾಲಕ್ಕೆ ಸೇರಿದ್ದು ಎಂಬುದನ್ನು ತಾಂತ್ರಿಕವಾಗಿ ಪರಿಶೀಲಿಸಲಾಗುತ್ತದೆ. ಮೇಲ್ನೋಟಕ್ಕೆ ನೋಡಿದಾಗ ಬಹಳ ಹಳೆಯದಾಗಿ ಕಾಣಿಸುತ್ತಿಲ್ಲ. ಬಂಗಾರ ಮನೆಯಲ್ಲಿ ಸಿಕ್ಕಿದೆ ಅಂದ್ರೆ ಇದು ಕುಟುಂಬಕ್ಕೆ ಸೇರಿದ್ದು. ದೇವಸ್ಥಾನದಲ್ಲಿ ಸಿಕ್ಕಿದರೆ ಅದು ರಾಜಮನೆತನದ್ದು. ಇದು ರಾಜ ಮನೆತನಕ್ಕೆ ಸೇರಿದ್ದಾದರೆ ಲಾಂಛನ ಇರುತ್ತಿತ್ತು ಎಂದು ರಮೇಶ್ ಸ್ಪಷ್ಟನೆ ನೀಡಿದ್ದಾರೆ.
ನಮ್ಮ ಬಂಗಾರ ವಾಪಾಸ್ ನೀಡಿ ಎನ್ನುತ್ತಿರುವ ಕುಟುಂಬ
ಅಧಿಕಾರಿಯ ಈ ಹೇಳಿಕೆಯ ಬೆನ್ನಲ್ಲೇ ಗ್ರಾಮಸ್ಥರು ಹಾಗೂ ಚಿನ್ನ ಸಿಕ್ಕ ಜಾಗದ ಮಾಲೀಕರು ಹೊಸ ಆಗ್ರಹ ಮುಂದಿಟ್ಟಿದ್ದಾರೆ. ನಿಧಿಯೇ ಅಲ್ಲ ಎಂದಾದರೆ, ಅದು ತಮ್ಮ ಪೂರ್ವಜರು ಮನೆಯಲ್ಲಿ ಇಟ್ಟುಕೊಂಡಿದ್ದ ಚಿನ್ನಾಭರಣಗಳಾಗಿದ್ದು, ಅವುಗಳನ್ನು ಕುಟುಂಬಕ್ಕೆ ವಾಪಸ್ ನೀಡಬೇಕೆಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ. ಬಂಗಾರ ಮನೆ ಒಳಗೇ ಪತ್ತೆಯಾಗಿರುವುದರಿಂದ ಅದು ಕುಟುಂಬದ ಸ್ವತ್ತು ಎನ್ನುವುದು ಅವರ ವಾದವಾಗಿದೆ.
ಇದನ್ನೂ ಓದಿ ನಿಧಿ ಸಿಕ್ಕ ಜಾಗದಲ್ಲಿ ಮತ್ತೆ ನಡೆಯುತ್ತಾ ಉತ್ಖನನ? ಕುಟುಂಬಕ್ಕೆ ಮತ್ತಷ್ಟು ಸಂಕಷ್ಟ!
ಚಿನ್ನ ಸಿಕ್ಕ ಜಾಗದಲ್ಲಿ ಉತ್ಖನನದ ಸಾಧ್ಯತೆ
ಈ ನಡುವೆ, ಚಿನ್ನ ಸಿಕ್ಕ ಸ್ಥಳವನ್ನು ನಿಷಿದ್ಧ ಪ್ರದೇಶವೆಂದು ಘೋಷಿಸಲಾಗಿದ್ದು, ಮನೆ ನಿರ್ಮಾಣ ಕಾರ್ಯ ಅರ್ಧಕ್ಕೆ ನಿಂತಿದೆ. ಪ್ರಾಚೀನ ಟಂಕಶಾಲೆ ಹಾಗೂ ರಾಜವಂಶಗಳ ಅವಶೇಷಗಳನ್ನು ಹೊಂದಿರುವ ಈ ಜಾಗದಲ್ಲಿ ರಾಜ್ಯ ಸರ್ಕಾರದಿಂದ ಮತ್ತಷ್ಟು ಉತ್ಖನನ ಕಾರ್ಯಕ್ಕೆ ಸಿದ್ಧತೆ ನಡೆದಿದೆ. ಮನೆಯ ಯಜಮಾನನನ್ನು ಕಳೆದುಕೊಂಡಿರುವ ಆ ಬಡ ಕುಟುಂಬ ಸಿಕ್ಕ ನಿಧಿಯನ್ನೂ ಸರ್ಕಾರಕ್ಕೊಪ್ಪಿಸಿ, ಮನೆಯನ್ನೂ ಕಟ್ಟಿಕೊಳ್ಳಲಾಗದೆ ಸಂಕಷ್ಟ ಎದುರಿಸುತ್ತಿದೆ. ತಾಯಿ ಹಾಗೂ ಚಿಕ್ಕ ಮಗನಿರುವ ಕುಟುಂಬಕ್ಕೆ ಸರ್ಕಾರ ಮನೆ ನಿರ್ಮಿಸಿಕೊಡಬೇಕು ಅಥವಾ ನಿವೇಶನ ನೀಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
