
ಗದಗ, ಜನವರಿ 18: ಲಕ್ಕುಂಡಿ (Lakkundi) ಐತಿಹಾಸಿಕ ನಾಡು. 101 ದೇಗುಲಗಳು, ನೂರೊಂದು ಬಾವಿ ಇರುವ ಬೀಡು. ಚಾಲಕ್ಯರು, ರಾಷ್ಟ್ರಕೂಟರು, ವಿಜಯನಗರದ ಅರಸರು ಆಳಿರುವ ರಾಜ ಗಾಂಭಿರ್ಯದ ನೆಲೆ ಲಕ್ಕುಂಡಿ. ಇದೇ ಐತಿಹಾಸಿಕ ನಾಡು ಲಕ್ಕುಂಡಿಯಲ್ಲಿ ಕಳೆದ ಮೂರು ದಿನಗಳಿಂದ ಉತ್ಖನನ (Excavation) ಕಾರ್ಯ ಭರದಿಂದ ಸಾಗಿದೆ. ಶೋಧದ ವೇಳೆ ಭೂಗರ್ಭದಲ್ಲಿ ಶಿವಲಿಂಗ, ಶಿವಲಿಂಗದ ಅವಶೇಷ, ನಾಗರಕಲ್ಲು ಸೇರಿ ಪುರಾತನ ವಸ್ತುಗಳು ಪತ್ತೆಯಾಗಿವೆ.
ಉತ್ಖನನದ ವೇಳೆ ನಾಗರ ಕಲ್ಲು ಪತ್ತೆಯಾಗಿದೆ. ನಾಗರ ಹೆಡೆ ಕೆತ್ತನೆಯ ಮತ್ತೊಂದು ಕಲಾಕೃತಿ ಪತ್ತೆಯಾಗಿದ್ದು, ಮತ್ತಷ್ಟು ಕುತೂಹಲ ಹುಟ್ಟಿಸಿದೆ. ಲಕ್ಕುಂಡಿ ಉತ್ಖನನ ಸ್ಥಳಕ್ಕೆ ಪುರಾತತ್ವ ಇಲಾಖೆ ಮೈಸೂರು ವಲಯ ಆಯುಕ್ತ ದೇವರಾಜು ಸೇರಿ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಜಿಲ್ಲೆಯ ಲಕ್ಕುಂಡಿ ಗ್ರಾಮದ ಗತವೈಭವದ ದಿನಗಳನ್ನು ನೆನಪಿಸುತ್ತಿವೆ. ಠಂಕಶಾಲೆ, ಯುದ್ಧಭೂಮಿ, ರಾಜಾಳ್ವಿಕೆ ನಾಡು, ಸಂಪದ್ಭರಿತ ಬೀಡಾಗಿದ್ದ ಲಕ್ಕುಂಡಿಯ ಇತಿಹಾಸವನ್ನು ಮರುಕಳಿಸುತ್ತಿವೆ. ಜ.16ರಿಂದಲೇ ಉತ್ಖನನ ಮಾಡಲಾಗುತ್ತಿದೆ. ಇದಕ್ಕೆ ಕಾರಣ 10ನೇ ತಾರೀಕು ರಿತ್ತಿ ಕುಟುಂಬಕ್ಕೆ ಮನೆಯ ಪಾಯ ಅಗೆಯುವಾಗ 466 ಗ್ರಾಂ ನಿಧಿ ಸಿಕ್ಕಿದ್ದು. ಆದರೆ ಇದಕ್ಕೂ ಮೊದಲೇ ಕೇಂದ್ರ ಸರ್ಕಾರಕ್ಕೆ ಭಾರತೀಯ ಪುರಾತತ್ವ ಇಲಾಖೆ ಲಕ್ಕುಂಡಿಯ ಭೂಗರ್ಭದಲ್ಲಿ ಹುದುಗಿರುವ ಐತಿಹಾಸಿಕ ಕುರುಹುಗಳ ಸಂಶೋಧನೆಗೆ ಪ್ರಸ್ತಾವನೆ ಸಲ್ಲಿಸಿತ್ತು.
ಇದನ್ನೂ ಓದಿ: Gadag: ಉತ್ಖನನದ ವೇಳೆ ಲಕ್ಕುಂಡಿಯಲ್ಲಿ ಪತ್ತೆಯಾಯ್ತು ಪುರಾತನ ಶಿವಲಿಂಗ!
ಆರ್ಕಾಲಾಜಿಕಲ್ ಸರ್ವೆ ಆಫ್ ಇಂಡಿಯಾ ಸಲ್ಲಿಸಿದ್ದ ಪ್ರಸ್ತಾವನೆಗೆ 2025ರ ಮೇ 15ರಂದೇ ಕೇಂದ್ರ ಸರ್ಕಾರ ಒಪ್ಪಿಗೆ ಸೂಚಿಸಿತ್ತು. ಇತ್ತ, ಜೂನ್ 3ರಂದು ಉತ್ಖನನ ಕಾರ್ಯಕ್ಕೆ ಸಿಎಂ ಸಿದ್ದರಾಮಯ್ಯ ಭೂಮಿ ಪೂಜೆ ನೆರವೇರಿಸಿದ್ದರು. ಸಾಕಷ್ಟು ಮಳೆ ಕಾರಣಕ್ಕೆ ಉತ್ಖನನ ಕಾರ್ಯ ಪ್ರಾರಂಭ ವಿಳಂಬವಾಗಿತ್ತು. ಇದೇ ಹೊತ್ತಲ್ಲಿ ರಿತ್ತಿ ಕುಟುಂಬಕ್ಕೆ 466 ಗ್ರಾಂ ನಿಧಿ ಸಿಕ್ಕಿದ್ದು ಕುತೂಹಲಕ್ಕೆ ಕಾರಣ ಆಗಿದೆ.
ಲಕ್ಕುಂಡಿಯಲ್ಲಿ ಗತವೈಭವ ಮರುಕಳಿಸೋದಕ್ಕೆ ರಾಜ್ಯ ಪುರಾತತ್ವ ಇಲಾಖೆ ಮುಂದಾಗಿದೆ. ಇದೇ ಕಾರಣಕ್ಕಾಗೇ ಉತ್ಖನನ ಕಾರ್ಯ ನಡೆಸಲಾಗ್ತಿದೆ. ಭೂಗರ್ಭ ಶೋಧದ ವೇಳೆ 3ನೇ ದಿನವಾದ ಇಂದು ವೀರಭದ್ರೇಶ್ವರ ದೇವಾಲಯ ಪಕ್ಕದ ಕೋಟೆ ಗೋಡೆಯಲ್ಲಿ ಪುರಾತನ ಕಾಲದ ಶಿವಲಿಂಗ ಪತ್ತೆಯಾಗಿದೆ. ಯಾವ ಕಾಲದ್ದು ಅನ್ನೋ ಬಗ್ಗೆ ಪುರಾತತ್ವ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.
3ನೇ ದಿನದ ಶೋಧದ ವೇಳೆ ಶಿವಲಿಂಗ ಮತ್ತು ನಾಗರಕಲ್ಲು ಸಿಕ್ರೆ, ಎರಡನೇ ದಿನದ ಉತ್ಖನನದ ವೇಳೆ ಪುರಾತನ ವಸ್ತು ಸಿಕ್ಕಿತ್ತು. ಇದು ಶಿವಲಿಂಗ ಪೂಜೆ ನೀರು ಹರಿಯುವ ವಸ್ತುವಿನಂತೆ ಇದೆ ಎಂದು Tv9ಗೆ ಲಕ್ಕುಂಡಿ ಪ್ರಾಧಿಕಾರದ ಸದಸ್ಯರು ಮಾಹಿತಿ ನೀಡಿದ್ದರು. ಇಷ್ಟೇ ಅಲ್ಲ, ಒಡೆದ ಮಣ್ಣಿನ ಮಡಕೆಯ ಚೂರುಗಳು ಕೂಡ 2ನೇ ದಿನದ ಉತ್ಖನನ ವೇಳೆ ಸಿಕ್ಕಿದ್ದವು.
ಇನ್ನು, ಎಷ್ಟು ದಿನ ಉತ್ಖನನ ಕಾರ್ಯ ನಡೆಯುತ್ತೆ ಅನ್ನೋ ಪ್ರಶ್ನೆಗೆ ಉತ್ತರಿಸಿದ ರಾಜ್ಯ ಪುರಾತತ್ವ ಇಲಾಖೆ ಆಯುಕ್ತ ಎ.ದೇವರಾಜು, ಸಿಗುವ ಪ್ರಾಚ್ಯಾವಶೇಷಗಳ ಆಧಾರದ ಮೇಲೆ ಉತ್ಖನನದ ವಿಸ್ತರಣೆ ಅಥವಾ ಮುಕ್ತಾಯ ಬಗ್ಗೆ ನಿರ್ಧಾರ ತೆಗೆದುಕೊಳ್ತೇವೆ. ಜೊತೆಗೆ ಸಮಗ್ರ ಅಭಿವೃದ್ಧಿಗೆ ಲಕ್ಕುಂಡಿ ಗ್ರಾಮದಲ್ಲಿ ಅಧ್ಯಯನ ನಡೆದಿದೆ ಅಂತಲೂ Tv9ಗೆ ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ: ಕೊನೆಗೂ ನಿಜವಾಯ್ತಾ ನಂಬಿಕೆ?: ಲಕ್ಕುಂಡಿಯಲ್ಲಿ ಉತ್ಖನನದ ವೇಳೆ ಬೃಹತ್ ಹಾವು ಪ್ರತ್ಯಕ್ಷ!
ಉತ್ಖನನ ನಡೆಯುತ್ತಿರುವ ಸ್ಥಳಕ್ಕೆ ಭೇಟಿ ನೀಡಿ ಗದಗ ಡಿಸಿ ಸಿ.ಎನ್.ಶ್ರೀಧರ್ ಪರಿಶೀಲನೆ ಮಾಡಿದ್ದಾರೆ. ಶಿವಲಿಂಗ ಗೋಚರವಾದ ಕೋಟೆ ಗೋಡೆಯನ್ನೂ ವೀಕ್ಷಿಸಿದ್ದಾರೆ. ಡಿಸಿಗೆ ಪುರಾತತ್ವ ಇಲಾಖೆ ಅಧಿಕಾರಿಗಳು ಸಾಥ್ ಕೊಟ್ಟಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನ ಓದಲು ಇಲ್ಲಿ ಕ್ಲಿಕ್ ಮಾಡಿ.