
ಗದಗ, ಏಪ್ರಿಲ್ 1: ಗದಗ (Gadag) ಜಿಲ್ಲೆಯ ನರಗುಂದ ತಾಲೂಕಿನಲ್ಲಿ ಮರಳು ಗಣಿಗಾರಿಕೆ ಎಗ್ಗಿಲ್ಲದೇ ಸಾಗಿದ್ದು, ಕಾನೂನಿನ ಭಯವಿಲ್ಲದೇ ಹಗಲು-ರಾತ್ರಿ ಮರಳು ಲೂಟಿ ಮಾಡಲಾಗುತ್ತಿದೆ. ಸಕ್ರಮದ ಪರವಾನಗಿ ಪಡೆದು ಅದರ ಮರೆಯಲ್ಲಿ ಅಕ್ರಮವಾಗಿ ಮರಳು ಸಾಗಿಸುವ ಮೂಲಕ ಸರ್ಕಾರಕ್ಕೆ ನಿತ್ಯ ಲಕ್ಷಾಂತರ ರೂಪಾಯಿ ತೆರಿಗೆ ವಂಚನೆ ಮಾಡಲಾಗುತ್ತಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ನರಗುಂದ ತಾಲೂಕಿನ ವಾಸನ, ಕಲ್ಲಾಪುರ ಹಾಗೂ ಶಿರೋಳ ಗ್ರಾಮಗಳ ವ್ಯಾಪ್ತಿಯ ಪಟ್ಟಾ ಭೂಮಿಯಲ್ಲಿ ಮರಳು ತೆಗೆಯಲು ಸರ್ಕಾರದಿಂದ ಅನುಮತಿ ಪಡೆಯಲಾಗಿದೆ. ಆದರೆ, ನಿಯಮದ ಪ್ರಕಾರ 10-12 ಟನ್‌ಗೆ ಬಿಲ್ ಮಾಡಿ, ವಾಸ್ತವದಲ್ಲಿ 15-18 ಟನ್ ಮರಳನ್ನು ಓವರ್‌ಲೋಡ್ ಮಾಡಿ ಸಾಗಿಸಲಾಗುತ್ತಿದೆ. ಗಣಿಗಾರಿಕೆ ನಡೆಯುವ ಜಾಗದಲ್ಲಿ ಸಿಸಿ ಕ್ಯಾಮರಾ ಅಳವಡಿಸಿಲ್ಲ ಹಾಗೂ ವೇ-ಬ್ರಿಡ್ಜ್ (ತೂಕದ ಯಂತ್ರ) ವ್ಯವಸ್ಥೆಯೂ ಇಲ್ಲದೆ ಬೇಕಾಬಿಟ್ಟಿ ಲೂಟಿ ಮಾಡಲಾಗುತ್ತಿದೆ.
ಅಚ್ಚರಿಯ ವಿಷಯವೆಂದರೆ, ಈ ಓವರ್‌ಲೋಡ್ ಟಿಪ್ಪರ್‌ಗಳು ನರಗುಂದ ಪೊಲೀಸ್ ಠಾಣೆ ಹಾಗೂ ತಹಶೀಲ್ದಾರ್ ಕಚೇರಿಯ ಮುಂದೆಯೇ ರಾಜಾರೋಷವಾಗಿ ಸಂಚರಿಸುತ್ತಿದ್ದರೂ ಅಧಿಕಾರಿಗಳು ಮಾತ್ರ ‘ಡೋಂಟ್ ಕೇರ್’ ಎನ್ನುತ್ತಿದ್ದಾರೆ. ಬೋಟ್ ಬಳಸಿ ಮರಳು ಫಿಲ್ಟರ್ ಮಾಡುವುದು ನಿಷೇಧವಿದ್ದರೂ, ಇಲ್ಲಿ ಬಹಿರಂಗವಾಗಿ ಬೋಟ್ ಬಳಸಿ ಮರಳು ತೆಗೆಯಲಾಗುತ್ತಿದೆ. ಅಧಿಕಾರಿಗಳು ಲೂಟಿಕೋರರೊಂದಿಗೆ ಕೈಜೋಡಿಸಿ ಕುಂಭಕರ್ಣ ನಿದ್ದೆಗೆ ಜಾರಿದ್ದಾರೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಾಸನ ಗ್ರಾಮದಲ್ಲಿ ಕೆಲವು ಪಟ್ಟಾ ಜಮೀನುಗಳ ಲೀಜ್ ಅವಧಿ ಮುಗಿದಿದ್ದರೂ ರಾತ್ರೋರಾತ್ರಿ ಮರಳು ಲೂಟಿ ಮುಂದುವರಿದಿದೆ. ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ್ ಹಾಗೂ ಎಸಿ ಗಂಗಪ್ಪ ಅವರ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ.
ಇದನ್ನೂ ಓದಿ: ಪ್ರತ್ಯೇಕ ಘಟನೆ: ರಜೆ ತಂದ ಆಪತ್ತು; ಈಜಲು ತೆರಳಿದ್ದ ಐವರು ಬಾಲಕರು ನೀರುಪಾಲು
ಜಿಲ್ಲಾಡಳಿತವೇ ಈ ದಂಧೆಗೆ ರಕ್ಷಣೆ ನೀಡುತ್ತಿದೆಯೇ ಎಂಬ ಅನುಮಾನ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗುತ್ತಿದೆ. ಇನ್ನಾದರೂ ಜಿಲ್ಲಾಡಳಿತ ಎಚ್ಚೆತ್ತು ತೆರಿಗೆ ಕಳ್ಳರ ವಿರುದ್ಧ ಕ್ರಮ ಕೈಗೊಳ್ಳಬೇಕಿದೆ.