ಸಾಮಾನ್ಯವಾಗಿ ಉದ್ಯಮಿ (Businessman) ಎಂದರೆ ನಮ್ಮ ಮನಸ್ಸಿಗೆ ಮೂಡುವ ಚಿತ್ರಣ ಸದಾ ತನ್ನ ವ್ಯವಹಾರಗಳಲ್ಲಿ ಮುಳುಗಿರುವ, ಉದ್ಯಮದಲ್ಲಿ ಎಷ್ಟು ಲಾಭ ಮಾಡಿದೆ ಎಂದು ಚಿಂತಿಸುವ, ಹಣಕಾಸಿನ ಲೆಕ್ಕಾಚಾರದ ಪುಸ್ತಕವೇ ಸಾಹಿತ್ಯ ಎಂಬಂತೆ ಭಾವಿಸುವ ವ್ಯಕ್ತಿಗಳು. ಆದರೆ ಗದಗ ನಗರದ ಈ ಹೋಟೆಲ್ ಉದ್ಯಮಿ (Hotel Business) ಅಂತಹ ಚಿತ್ರಣಕ್ಕೆ ತದ್ವಿರುದ್ಧವಾಗಿದ್ದಾರೆ! ಹೋಟೆಲ್ ಉದ್ಯಮಿ ಎನ್ನುವುದಕ್ಕಿಂತಲೂ ಓರ್ವ ಭಾಷಾ, ಕಲಾ ಪ್ರೇಮಿಯಾಗಿ, ಕಲಾಚೇತನ ಎಂಬ ಸಂಸ್ಥೆಯ ಸ್ಥಾಪಕರಾಗಿ, ಕಲೆ ಮತ್ತು ಕನ್ನಡ ಭಾಷೆಗೆ ಅಪಾರ ಕೊಡುಗೆ ಸಲ್ಲಿಸಿದ್ದಾರೆ. ಇದು ಮತ್ಯಾರೂ ಅಲ್ಲ, ಗದಗದ ನೇಸರ ಉಪಾಹಾರ ಹೋಟೆಲ್‌ನ ಮಾಲೀಕ, ಕಾವೆಂಶ್ರೀ ಎಂಬ ಕಾವ್ಯನಾಮದಿಂದಲೇ ಖ್ಯಾತರಾದ ಕಾಳಮಂಜಿ ವೆಂಕಟಗಿರಿಯಪ್ಪ ಶ್ರೀನಿವಾಸ್ ಅವರ ಬಗ್ಗೆ.
ಮೂಲತಃ ಶರಾವತಿ ತೀರದ ಲಿಂಗನಮಕ್ಕಿ ಸಮೀಪದ ಹಳ್ಳಿಯಲ್ಲಿ ಜನಿಸಿದ ಕಾವೆಂಶ್ರೀ ಅವರದು ಬಾಲ್ಯದಿಂದಲೇ ಕೃಷಿ ಹಿನ್ನೆಲೆಯ ಬಡತನದ ಜೀವನ. ತಂದೆ ಯಕ್ಷಗಾನ ಕಲಾವಿದರಾದ ಜನ್ನೆ ವೆಂಕಟಗಿರಿಯಪ್ಪನವರು ಕಾವೆಂಶ್ರೀ ಸಣ್ಣವರಿದ್ದಾಗಲೇ ಅಸುನೀಗಿದರು. ಬಳಿಕ ಅಣ್ಣ ಜನ್ನೆ ಗೋವಿಂದರಾವ್ ಅವರ ಆಶ್ರಯದಲ್ಲಿ ಬೆಳೆದರು. ಲಿಂಗನಮಕ್ಕಿಯಲ್ಲಿ ಪ್ರಾಥಮಿಕ ಶಿಕ್ಷಣ, ಜೋಗ ಜಲಪಾತದ ಪರಿಸರದಲ್ಲಿ ಪ್ರೌಢ ಶಿಕ್ಷಣ, ಗದಗಿನಲ್ಲಿ ಚಿತ್ರಕಲಾ ಪದವಿ, ಮೈಸೂರು ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮ ಡಿಪ್ಲೊಮಾ, ಹಾಗೂ ಹಂಪಿ ವಿಶ್ವವಿದ್ಯಾನಿಲಯದಿಂದ ‘ರಂಗಸಂಕಥನಕಾರ ಚಿಟ್ಟಾಣಿ ರಾಮಚಂದ್ರ ಹೆಗಡೆ: ಒಂದು ಅಧ್ಯಯನ’ ಎಂಬ ಮಹಾಪ್ರಬಂಧಕ್ಕೆ ಡಿ-ಲಿಟ್ (ಡಾಕ್ಟರೇಟ್) ಪದವಿ. ಇದು ಕಾವೆಂಶ್ರೀ ಅವರ ಶ್ರೀಮಂತ ಶೈಕ್ಷಣಿಕ ಹಿನ್ನೆಲೆ.
ಗದಗಿನಲ್ಲಿ ಹೋಟೆಲ್ ಉದ್ಯಮಿಯಾದರೂ, ಕಾವೆಂಶ್ರೀ ಅವರಿಗೆ ಸಾಹಿತ್ಯ ಮತ್ತು ಕಲೆಗೆ ಏನಾದರೂ ಕೊಡುಗೆ ನೀಡಬೇಕೆಂಬ ಹಂಬಲ. ಅದಕ್ಕಾಗಿ 1996ರಲ್ಲಿ ಕಲಾಚೇತನ ಸಾಂಸ್ಕೃತಿಕ ಸಂಘಟನೆಯನ್ನು ಸ್ಥಾಪಿಸಿದರು. ಕಳೆದ 25 ವರ್ಷಗಳಲ್ಲಿ ಕಲೆಯನ್ನು ಬೆಳೆಸುತ್ತಾ, ತಾನೂ ಬೆಳೆದ ಸಂಘಟನೆ ಇಂದು ಕಲಾಚೇತನ ಸಾಂಸ್ಕೃತಿಕ ಅಕಾಡೆಮಿಯಾಗಿ ಹೊರಹೊಮ್ಮಿದೆ. ಅಕಾಡೆಮಿಯ ಮೂಲಕ ಹಿರಿಯ ಸಾಹಿತಿಗಳಾದ ಡಾ. ಎಸ್.ಎಲ್. ಭೈರಪ್ಪ, ಪಾಟೀಲ ಪುಟ್ಟಪ್ಪ, ಡಾ. ಎಸ್.ಎನ್ ತಾರಾನಾಥ, ಡಾ. ವೀವೇಕ ರೈ, ಪ್ರೊ.ದೊಡ್ಡರಂಗೇಗೌಡ, ಡಾ. ಸುಮತೀಂದ್ರ ನಾಡಿಗ, ಡಾ. ನರಹಳ್ಳಿ ಬಾಲಸುಬ್ರಹ್ಮಣ್ಯ, ಸಂತೋಷ್ ಕುಮಾರ್ ಗುಲ್ವಾಡಿ, ಡಾ. ಸಿದ್ಧಲಿಂಗ ಪಟ್ಟಣಶೆಟ್ಟಿ, ಡಾ. ಅರವಿಂದ ಮಾಲಗತ್ತಿ, ಜಯಂತ ಕಾಯ್ಕಿಣಿ ಮತ್ತಿತರರು ಉಪನ್ಯಾಸ ನೀಡಿ, ಉತ್ತರ ಕರ್ನಾಟಕದಲ್ಲಿ ಸಾಹಿತ್ಯದ ಕಂಪನ್ನು ಪಸರಿಸಿದ್ದಾರೆ.
ಅದರೊಡನೆ ನಾಡಿಗೆ ಕಲೆ – ಸಾಹಿತ್ಯ ಕ್ಷೇತ್ರದಲ್ಲಿ ಕೊಡುಗೆ ನೀಡಿದ ಹತ್ತು ಹಲವು ಗಣ್ಯರನ್ನು ಕಲಾಚೇತನ ಸಾಂಸ್ಕೃತಿಕ ಅಕಾಡೆಮಿ ಸನ್ಮಾನಿಸಿ, ಗೌರವಿಸಿದೆ. ಅದರೊಡನೆ ಅಸಂಖ್ಯಾತ ಸಂಗೀತ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಅಕಾಡೆಮಿ ವೇದಿಕೆ ಒದಗಿಸಿದೆ.
ಇಷ್ಟೆಲ್ಲ ಕಾರ್ಯಗಳನ್ನು ಕಾವೆಂಶ್ರೀ ಅವರು ತಮ್ಮ ಹೊಟೆಲ್ ಉದ್ಯಮದ ಜೊತೆಜೊತೆಗೆ, ಅದರಿಂದ ಪಡೆದ ಲಾಭವನ್ನು ಸದುಪಯೋಗ ಪಡಿಸಿಕೊಂಡು ನಡೆಸುತ್ತಿದ್ದಾರೆ. ಪ್ರತಿ ವರ್ಷವೂ ತನ್ನ ಆದಾಯದಲ್ಲಿ ಎರಡು ಲಕ್ಷ ರೂಪಾಯಿಗಳನ್ನು ಕಲಾ ಸೇವೆಗೆಂದೇ ಮುಡಿಪಾಗಿಟ್ಟ ಕಾವೆಂಶ್ರೀ ಅವರು ಇದಕ್ಕಾಗಿ ಎಂದೂ ಸರ್ಕಾರದ ಬಾಗಿಲು ತಟ್ಟಿದವರಲ್ಲ. ತನ್ನ ಹೋಟೆಲ್ ಆದಾಯದ ಒಂದು ಪಾಲು ಕಲೆಗೆ ಮೀಸಲು, ನಾನು ಉಳಿದ ಆದಾಯದಲ್ಲೇ ತೃಪ್ತ ಎನ್ನುತ್ತಾರೆ ಕಾವೆಂಶ್ರೀ.
ಇದನ್ನೂ ಓದಿ: ಯಶಸ್ವಿ ಪುರುಷನ ಹಿಂದೆ ಮಹಿಳೆ; ಹೆಂಡತಿಯಿಂದ ಹಣ ಪಡೆದು ಸಕ್ಸಸ್ ಕಂಡ ಉದ್ಯಮಿಗಳಿವರು
ಕಾವೆಂಶ್ರೀ ಕಲಾಸೇವೆ ಗಮನಕ್ಕೆ ಬಂದಾಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಕಲಾಚೇತನ ಸಂಸ್ಥೆಗೆ 12 ಲಕ್ಷ ರೂಪಾಯಿಗಳನ್ನು ಒದಗಿಸುವ ಭರವಸೆ ನೀಡಿದ್ದರು. ಅದರಲ್ಲಿ ಒಂದು ಲಕ್ಷ ರೂಪಾಯಿಯಷ್ಟೇ ಬಂದಿದೆ. ಸರ್ಕಾರದಿಂದ ಉತ್ತಮ ಪ್ರೋತ್ಸಾಹ, ಹಣಕಾಸು ನೆರವು ದೊರೆತಲ್ಲಿ ಕಲೆ, ಸಾಹಿತ್ಯ ಸೇವೆಯನ್ನು ಇನ್ನಷ್ಟು ಚೆನ್ನಾಗಿ ನಡೆಸಿಕೊಂಡು ಹೋಗಬಹುದು ಎನ್ನುತ್ತಾರೆ ಕಾವೆಂಶ್ರೀ.
ಕಾವೆಂಶ್ರೀ ಅವರು ಯಾವುದೇ ಫಲಾಪೇಕ್ಷೆ ಇಲ್ಲದೆ ಕಲಾಸೇವೆ ನಡೆಸುತ್ತಾ ಬಂದವರು. ಕಲಾಚೇತನ ಸಾಂಸ್ಕೃತಿಕ ಅಕಾಡೆಮಿ ಈಗಾಗಲೇ 25 ವರ್ಷಗಳನ್ನು ಪೂರೈಸಿದ್ದು, ಬೆಳ್ಳಿ ಹಬ್ಬದ ಸಂಭ್ರಮದಲ್ಲಿದೆ. ಅವರು ಪ್ರಚಾರ ಬಯಸದಿದ್ದರೂ, ಅವರ ಕಲಾಸೇವೆಯನ್ನು ಗುರುತಿಸಿ, ಹಲವು ಸಂಘಟನೆಗಳು, ಕಲಾಪ್ರೇಮಿಗಳು, ಗದುಗಿನ ತೋಂಟದಾರ್ಯ ಜಗದ್ಗುರು ಡಾ.ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳು ಸೇರಿದಂತೆ ಹಲವರು ಸನ್ಮಾನಿಸಿದ್ದಾರೆ.
ಡಿಸೆಂಬರ್ ತಿಂಗಳಲ್ಲಿ ಪ್ರಸಾರವಾದ ‘ಮನ್ ಕಿ ಬಾತ್’ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಕಾವೆಂಶ್ರೀ ಅವರ ಕಲಾ ಸೇವೆ ಮತ್ತು ಸಾಧನೆಯನ್ನು ಗುರುತಿಸಿ ಶ್ಲಾಘಿಸಿದ್ದಾರೆ. ‘ಕರ್ನಾಟಕದ ಕಲೆ ಮತ್ತು ಸಂಸ್ಕೃತಿಯನ್ನು ಪುನರುಜ್ಜೀವನಗೊಳಿಸುವಲ್ಲಿ ಕಾಳಮಂಜಿ ವೆಂಕಟಗಿರಿಯಪ್ಪ ಶ್ರೀನಿವಾಸ್ ಅವರು 25 ವರ್ಷಗಳಿಂದ ಪಟ್ಟುಬಿಡದೆ ತಮ್ಮನ್ಮು ತಾವು ತೊಡಗಿಸಿಕೊಂಡಿದ್ದಾರೆ. ಅವರ ಕಲಾಪೋಷಣೆ ಒಂದು ತಪಸ್ಸಿನಂತೆ ಮುಂದುವರಿದಿದೆ’ ಎಂದು ಪ್ರಧಾನಿ ಶ್ಲಾಘಿಸಿದ್ದು ರಜತ ಸಂಭ್ರಮದಲ್ಲಿರುವ ಕಾವೆಂಶ್ರೀಗೆ ಮೋದಿ ಹಾರೈಕೆಯ ಬೆಳ್ಳಿ ಕಿರೀಟವನ್ನು ದೊರಕಿಸಿಕೊಟ್ಟಂತಾಗಿದೆ. ತಾನು ಹುಟ್ಟಿ ಬೆಳೆದ ಮಲೆನಾಡಿನ ಪರಿಸರವೇ ಕಲೆ, ಸಾಹಿತ್ಯ, ಸಂಘಟನೆಗಳಿಗೆ ಸ್ಫೂರ್ತಿ ಎನ್ನುವ ಕಾವೆಂಶ್ರೀ, ಮಡದಿ ನರ್ಮದಾ, ಮಗಳು ಇಬ್ಬನಿ, ಪುತ್ರ ನೇಸರ ನೀಡುವ ಸಹಕಾರವೇ ತನ್ನ ಶಕ್ತಿ ಎನ್ನುತ್ತಾರೆ.
ಮತ್ತಷ್ಟು ಓದಲು ಇಲ್ಲಿ ಕ್ಲಿಕ್ ಮಾಡಿ