ನಿವೇಶನ ಹಕ್ಕುಪತ್ರಕ್ಕಾಗಿ ಬಡ ಕುಟುಂಬಗಳ ಅಹೋರಾತ್ರಿ ಧರಣಿ! ಲಕ್ಕುಂಡಿ ಗ್ರಾ. ಪಂ. ಅಂಗಳದಲ್ಲಿ ರಾತ್ರಿಯಿಡೀ ಮಲಗುವ ಮೂಲಕ ಮಹಿಳೆಯರ ಪ್ರತಿಭಟನೆ
ಜಿಲ್ಲಾ ಪಂಚಾಯತ್ ಸಿಇಓ ಡಾ. ಸುಶೀಲಾ ಅವ್ರೂ ಈ ವಿಷಯಲ್ಲಿ ನಿರ್ಲಕ್ಷ್ಯ ತೋರಿದ್ದಾರೆ ಅಂತ ಆರೋಪಿಸಿದ್ದಾರೆ. ಕ್ಷೇತ್ರದ ಶಾಸಕರ ಗಮನಕ್ಕೆ ತಂದ್ರೂ ಡೋಂಟ್ ಕೇರ್ ಎಂದಿದ್ದಾರೆ ಅಂತ ಕ್ಷೇತ್ರದ ಶಾಸಕ ಸಚಿವ ಸಿ ಸಿ ಪಾಟೀಲ್ ವಿರುದ್ಧ ಮಹಿಳೆಯರು ಗರಂ ಆಗಿದ್ದರು. ಹಕ್ಕುಪತ್ರ ಹಂಚಿಕೆ ಮಾಡದಿದ್ರೆ ಮತದಾನ ಬಹಿಷ್ಕಾರ ಎಚ್ಚರಿಕೆ ನೀಡಿದ್ದಾರೆ.
ಲಕ್ಕುಂಡಿ ಉತ್ಸವಕ್ಕೂ ಮೊದಲು ಬಡ ಕುಟುಂಬಗಳು ಹಕ್ಕುಪತ್ರಕ್ಕಾಗಿ ಹೋರಾಟಕ್ಕೆ ಸಜ್ಜಾಗಿದ್ದವು. ಆಗ ಕ್ಷೇತ್ರದ ಶಾಸಕರು, ಅಧಿಕಾರಿಗಳು ಲಕ್ಕುಂಡಿ ಉತ್ಸವದಲ್ಲಿ ಹಕ್ಕು ಪತ್ರ ನೀಡ್ತೀವಿ ಅಂತ ಹೇಳಿದ್ದರು. ಮುಂದೆ ಅದ್ಧೂರಿ ಉತ್ಸವ ಮಾಡಿಯೂ ಬಡವರಿಗೆ ಹಕ್ಕು ಪತ್ರ ಮಾತ್ರ ಸಿಗಲಿಲ್ಲ. ಹೀಗಾಗಿ ಈಗ ಈ ಬಡ ಕುಟುಂಬಗಳು ಅಹೋರಾತ್ರಿ ಹೋರಾಟ ಶುರು ಮಾಡಿದ್ದಾರೆ. ಬಡ ಮಹಿಳೆಯರು ಪಂಚಾಯತಿ ಅಂಗಳದಲ್ಲೇ ರಾತ್ರಿಯಿಡೀ ಮಲಗುವ ಮೂಲಕ ಸರ್ಕಾರದ ವಿರುದ್ಧ ಸಿಡಿದೆದ್ದಿದ್ದಾರೆ. ಐದು ವರ್ಷ ನಮ್ಮ ಜೀವನದ ಜೊತೆ ಚೆಲ್ಲಾಟವಾಡಿದ್ದಾರೆ. ಅಂಥ ಜನಪ್ರತಿನಧಿಗಳಿಗೆ ಈ ಬಾರಿ ತಕ್ಕ ಪಾಠ ಕಲಿಸ್ತೀವಿ ಅಂತ ನಾರಿಯರು ಎಚ್ಚರಿಕೆ ನೀಡಿದ್ದಾರೆ. ನಿವೇಶನ ಹಕ್ಕುಪತ್ರಕ್ಕಾಗಿ ಬಡ ಕುಟುಂಬಗಳ ಅಹೋರಾತ್ರಿ ಧರಣಿ…! ಲಕ್ಕುಂಡಿ ಗ್ರಾಮ ಪಂಚಾಯತಿ ಅಂಗಳದಲ್ಲಿ ರಾತ್ರಿಯಿಡೀ ಮಲಗುವ ಮೂಲಕ ಮಹಿಳೆಯರ ಪ್ರತಿಭಟನೆ…! ಬಡ ಮಹಿಳೆಯರು ಕಣ್ಣೀರಿಟ್ಟರೂ ಕರಗುತ್ತಿಲ್ಲ ಕಲ್ಲುಮನಸುಗಳು ಅಂತ ಕಿಡಿಕಿಡಿ! 72 ಕುಟುಂಬಗಳು ಮೂರು ದಿನಗಳಿಂದ ಅಹೋರಾತ್ರಿ ಧರಣಿ ಮಾಡ್ತಾಯಿದ್ದರೂ ಕ್ಷೇತ್ರದ ಶಾಸಕರು, ಸದಸ್ಯರು ಹಾಗೂ ಅಧಿಕಾರಿಗಳು ಡೋಂಟ್ ಕೇರ್…! ಆಡಳಿತ ಯಂತ್ರದ ವಿರುದ್ದ ಸಿಡಿದೆದ್ದ ಬಡ ಕುಟುಂಬಗಳು..! ಮೂರು ದಿನಗಳ ಬಳಿಕ ಬಂದ ತಾಲೂಕ ಪಂಚಾಯತ್ ಅಧಿಕಾರಿಗೆ ಹಿಗ್ಗಾಮುಗ್ಗಾ ತರಾಟೆ…! ಮಹಿಳೆಯರ ರೋಷಾವೇಷಕ್ಕೆ ಬಂದ ದಾರಿಗೆ ಸುಂಕವಿಲ್ಲದೇ ಹೋದ ಅಧಿಕಾರಿ…!
ಕನಸಿನ ಮನೆಗಳ ಹಕ್ಕುಪತ್ರಕ್ಕಾಗಿ ಎರಡು ದಶಕಗಳಿಂದ ಬಡ ಕುಟುಂಬಗಳ ಹೋರಾಟ. ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಆಟಕ್ಕೆ ಬಡ ಕುಟುಂಬಗಳಿಗೆ ಸಿಗ್ತಿಲ್ಲ ಹಕ್ಕುಪತ್ರ. ಹಕ್ಕು ಪತ್ರಕ್ಕಾಗಿ ಪಂಚಾಯತ್ ಎದುರು ಹೋರಾಟದಲ್ಲಿ ಕಣ್ಣೀರು ಹಾಕಿದ ಮಹಿಳೆಯರು. ಅಧಿಕಾರಿಗಳ, ಶಾಸಕರ ಸುಳ್ಳು ಭರವಸೆಗೆ ಸಿಡಿದೆದ್ದ ನಾರಿಯರು. ಮತ್ತೆ ಕಥೆ ಹೇಳಿ ಮೂಗಿಗೆ ತುಪ್ಪ ಸವರಲು ಬಂದ ಅಧಿಕಾರಿಯನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡು ಓಡಿಸಿದ ನಾರಿಯರು.
ಹೌದು ಮಹಿಳೆಯರು ರೌದ್ರಾವತಾರದ ದೃಶ್ಯಗಳು ಕಂಡಿದ್ದು, ಗದಗ ತಾಲೂಕಿನ ಐತಿಹಾಸಿ ಲಕ್ಕುಂಡಿ ಗ್ರಾಮದಲ್ಲಿ. ಲಕ್ಕುಂಡಿ ಗ್ರಾಮದ ಸರ್ವೇ ನಂಬರ್ 294, 7 ಎಕೆರೆ ಜಮೀನು ರಾಜ್ಯಪಾಲರ ಹೆಸರಿನಲ್ಲಿದೆ. ಹೀಗಾಗಿ ಎರಡು ದಶಕಗಳ ಹಿಂದೆ ಇಲ್ಲಿ ಬಡ ಕುಟುಂಬಗಳಿಗೆ ನಿವೇಶನ ನೀಡಲು ಈ ಜಾಗ ಮೀಸಲು ಇಡಲಾಗಿದೆ. 2018ರಲ್ಲಿ ಲಕ್ಕುಂಡಿ ಗ್ರಾಮ ಪಂಚಾಯತ್ ಗ್ರಾಮ ಸಭೆಯಲ್ಲಿ ಸಾಮಾನ್ಯ, ಎಸ್ಸಿ, ಎಸ್ಟಿ, ವೀಕಲಚೇತನರು ಸೇರಿ ವಿವಿಧ ಜಾತಿಗಳ 172 ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ. ಆದ್ರೆ, ನಾಲ್ಕು ವರ್ಷಗಳೇ ಕಳೆದ್ರೂ ಗ್ರಾಮ ಪಂಚಾಯತ್ ಅಧಿಕಾರಿಗಳು ಫಲಾನುಭವಿಗಳಿಗೆ ಹಕ್ಕು ಪತ್ರ ನೀಡುತ್ತಿಲ್ಲ.
ಸಾಕಷ್ಟು ಬಾರಿ ಪ್ರತಿಭಟನೆ, ಅಹೋರಾತ್ರಿ ಧರಣಿ ಮಾಡಿದ್ದರೂ ಜನಪ್ರತಿನಿಧಿಗಳು, ಅಧಿಕಾರಿಗಳು ನಾನಾ ಕಾರಣ ಹೇಳಿ ಬಚಾವ್ ಆಗಿದ್ದರು. ಆದ್ರೆ, ಈಗ 172 ಕುಟುಂಬಗಳ ಮಹಿಳೆಯರು ರೊಚ್ಚಿಗೆದ್ದಿದ್ದಾರೆ. ಮತ್ತೆ ಈಗ ಪಂಚಾಯತ್ ಎದುರು ಮಕ್ಕಳ ಸಮೇತ ಅನಿರ್ಧಿಷ್ಠಾವಧಿ ಅಹೋರಾತ್ರಿ ಧರಣಿ ನಡೆಸಿದ್ದಾರೆ. ಮೂರು ದಿನಗಳಿಂದ ಮಹಿಳೆಯರು ಪಂಚಾಯತ್ ಅಂಗಳದಲ್ಲೇ ರಾತ್ರಿಯಿಡೀ ಮಲಗುವ ಮೂಲಕ ಜಿಲ್ಲಾಡಳಿತ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಲಕ್ಕುಂಡಿ ನರಗುಂದ ಕ್ಷೇತ್ರದ ವ್ಯಾಪ್ತಿಗೆ ಬರುತ್ತೆ. ಹೀಗಾಗಿ ಕ್ಷೇತ್ರದ ಶಾಸಕರೂ ಆದ ಸಚಿವ ಸಿ ಸಿ ಪಾಟೀಲ್ ಅವ್ರಿಗೂ ಮಹಿಳೆಯರು ಸಾಕಷ್ಟು ಬಾರಿ ಮನವಿ ಮಾಡಿದ್ದಾರೆ. ಆದ್ರೂ ಪ್ರಯೋಜನವಾಗಿಲ್ಲ ಅಂತ ಮಹಿಳೆಯರು ಸಿ ಸಿ ಪಾಟೀಲ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಲಕ್ಕುಂಡಿ ಉತ್ಸವದ ವೇಳೆ ಹೋರಾಟ ಮಾಡುವುದಾಗಿ ಹೇಳಿದ್ದೆವು. ಆದ್ರೆ ಶಾಸಕರು, ಅಧಿಕಾರಿಗಳು ಲಕ್ಕುಂಡಿ ಉತ್ಸವದಲ್ಲಿ ಹಕ್ಕು ಪತ್ರ ಕೊಡ್ತೀವಿ ಅಂದ್ರು. ಆದ್ರೆ, ಅದ್ಧೂರಿ ಉತ್ಸವ ಮಾಡಿದರೂ ನಮಗೆ ಹಕ್ಕುಪತ್ರ ಕೊಟ್ಟಿಲ್ಲ ಅಂತ ಕಿಡಿಕಾರಿದ್ದಾರೆ. ಹೀಗಾಗಿ ಈಗ ಯಾರ ಮಾತೂ ಕೇಳಲ್ಲ. ಹಕ್ಕುಪತ್ರ ಕೊಡದಿದ್ರೆ ಮುಂಬರುವ ಚುನಾವಣೆ ಬಹಿಷ್ಕಾರ ಮಾಡುವ ಎಚ್ಚರಿಕೆಯ ಮಾತನ್ನೂ ರವಾನಿಸಿದ್ದಾರೆ.
ಅಹೋರಾತ್ರಿ ಧರಣಿ ಸತ್ಯಾಗ್ರಹ ಶುರು ಮಾಡಿ ಮೂರು ದಿನಗಳ ಬಳಿಕ ತಾಲೂಕು ಪಂಚಾಯತ್ ಅಧಿಕಾರಿಗಳು ಮೊನ್ನೆ ಗ್ರಾಮಕ್ಕೆ ಆಗಮಿಸಿದ್ದಾರೆ. ಆಗ ರೊಚ್ಚಿಗೆದ್ದ ಮಹಿಳೆಯರು ಅಧಿಕಾರಿಯನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡ್ರು. ನಿಮ್ಮ ಸುಳ್ಳು, ಮೋಸದ ಭರವಸೆಗೆ ನಾವು ಬಗ್ಗಲ್ಲ. ಹಕ್ಕು ಪತ್ರ ಕೈಯಲ್ಲಿ ಹಿಡ್ಕೊಂಡು ಬನ್ನಿ ಆಗ ಮಾತುಕತೆ ಅಂತ ಅಧಿಕಾರಿಗೆ ಹೇಳಿ ಕಳಿಸಿದ್ದಾರೆ. ಹೀಗಾಗಿ ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಅಧಿಕಾರಿ ವಾಪಸ್ ಆಗಿದ್ದಾರೆ.
ಇನ್ನು ಜಿಲ್ಲಾ ಪಂಚಾಯತ್ ಸಿಇಓ ಡಾ. ಸುಶೀಲಾ ಅವ್ರೂ ಈ ವಿಷಯಲ್ಲಿ ನಿರ್ಲಕ್ಷ್ಯ ತೋರಿದ್ದಾರೆ ಅಂತ ಆರೋಪಿಸಿದ್ದಾರೆ. ಕ್ಷೇತ್ರದ ಶಾಸಕರ ಗಮನಕ್ಕೆ ತಂದ್ರೂ ಡೋಂಟ್ ಕೇರ್ ಎಂದಿದ್ದಾರೆ ಅಂತ ಕ್ಷೇತ್ರದ ಶಾಸಕ ಸಚಿವ ಸಿ ಸಿ ಪಾಟೀಲ್ ವಿರುದ್ಧ ಮಹಿಳೆಯರು ಗರಂ ಆಗಿದ್ದರು. ಹಕ್ಕುಪತ್ರ ಹಂಚಿಕೆ ಮಾಡದಿದ್ರೆ ಮತದಾನ ಬಹಿಷ್ಕಾರ ಎಚ್ಚರಿಕೆ ನೀಡಿದ್ದಾರೆ. ಹಕ್ಕು ಪತ್ರ ಕೊಡುವರೆಗೂ ಪಂಚಾಯತಿ ಬಿಟ್ಟು ಹೋಗಲ್ಲ ಅಂತ ಪಟ್ಟು ಹಿಡಿದ್ದಾರೆ.
sಈ ಬಾರಿ ಹೆಣ ಬಿದ್ರೂ ಇಲ್ಲಿಂದ ಕದಲಲ್ಲ ಅಂತ ಜಿಲ್ಲಾಡಳಿಕ್ಕೆ ಮಹಿಳೆಯರ ಎಚ್ಚರಿಕೆ ನೀಡಿದ್ದಾರೆ. ಐದು ವರ್ಷದಿಂದ ಅಧಿಕಾರಿಗಳು, ಜನಪ್ರತಿನಿಧಿಗಳ ನಾಟಕ ನೋಡಿ ಸಾಕಾಗಿದೆ ಅಂತ ಕೈತಗೊಂಡ ಮಹಿಳಾ ಮಣಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಧಿಕಾರಿಗಳ, ಜನಪ್ರತಿನಿಧಿಗಳ ಎದರು ಕಣ್ಣೀರು ಹಾಕಿದ್ರೂ ಕಲ್ಲು ಮನಸ್ಸುಗಳು ಕರಗುತ್ತಿಲ್ಲ. ಈ ಬಗ್ಗೆ ಅಧಿಕಾರಿಗಳನ್ನು ಕೇಳಿದ್ರೆ ಹೇಳೋದು ಹೀಗೆ.
ನಿವೇಶನ ಹಕ್ಕು ಪತ್ರ ನೀಡಲು ಪಂಚಾಯತ್ ಸದಸ್ಯರು ಹಣ ಕೇಳಿದ್ರು. ಕೆಲ ಬಡವರ ಸಾಲಸೋಲ ಮಾಡಿ ಹಣವೂ ಕೊಟ್ಟಿದ್ದಾರೆ. ಆದ್ರೆ, ಐದು ವರ್ಷವಾದ್ರೂ ಹಕ್ಕ ಪತ್ರ ನೀಡುತ್ತಿಲ್ಲ ಅಂತ ಕಿಡಿಕಾರಿದ್ದಾರೆ. ಐದು ವರ್ಷ ವಿಳಂಬಕ್ಕೆ ಪಂಚಾಯತ್ ಸದಸ್ಯರೇ ಕಾರಣ ಎಲ್ಲದಕ್ಕೂ ಇವ್ರೇ ಕಲ್ಲು ಹಾಕಿದ್ದಾರೆ. ಆದ್ರೆ, ಕ್ಷೇತ್ರದ ಶಾಸಕರೂ ಆದ ಸಚಿವ ಸಿ ಸಿ ಪಾಟೀಲ್ರು ಮನಸ್ಸು ಮಾಡಿದ್ರೆ ಹಕ್ಕುಪತ್ರ ಕೊಡಿಸಲು ಆಗಲ್ವಾ? ಅಂತ ಮಹಿಳೆಯರು ಪ್ರಶ್ನೆ ಮಾಡಿದ್ದಾರೆ. ಸೂರಿಗಾಗಿ ಮಹಿಳೆಯರು ಪಂಚಾಯತ್ ಅಂಗಳದಲ್ಲಿ ಮಲಗುವಂತೆ ಮಾಡಿದ ಜನಪ್ರತಿನಧಿಗಳು ಹಾಗೂ ಅಧಿಕಾರಿಗಳ ವಿರುದ್ಧ ಇಡೀ ಲಕ್ಕುಂಡಿ ಛೀ ಥೂ ಅಂತಿದೆ.
ವರದಿ: ಸಂಜೀವ ಪಾಂಡ್ರೆ, ಟಿವಿ9, ಗದಗ