12 ಲಕ್ಷ ಸಾಲಕ್ಕೆ 12 ನಿವೇಶನ: ಗದಗದಲ್ಲಿ ಬಡ್ಡಿ ಬಕಾಸುರರ ಅಟ್ಟಹಾಸಕ್ಕೆ ವೃದ್ಧೆ ನರಳಾಟ
ಯಲ್ಲಪ್ಪ ಮಿಸ್ಕಿನ್ ಆದರೆ ಜನ ಬಡ್ಡಿ ಯಲ್ಲಪ್ಪ ಅಂತ್ಲೇ ಕರೆಯೋದು. ಗದಗದಲ್ಲಿ ಕೇಸರ್ ಫೈನಾನ್ಸ್ ಇಟ್ಟುಕೊಂಡು ಸಾಲ ಕೊಟ್ಟು ಬಡ್ಡಿ ದಂಧೆ ನಡೆಸುತ್ತಾಬೆ. ಅದರಂತೆ ಬಡ್ಡಿ ಬಕಾಸುರರ ಕೇವಲ 12 ಲಕ್ಷ ರೂ ಸಾಲ ನೀಡಿ ಕೋಟ್ಯಂತರ ರೂ ಬೆಲೆ ಬಾಳುವ 12 ಪ್ಲ್ಯಾಟ್ಗಳನ್ನು ಬರೆಸಿಕೊಂಡಿದ್ದಾನೆ. ಇದರಿಂದ ವೃದ್ಧ ಮಹಿಳೆ ಈ ಬಡ್ಡಿ ಬಕಾಸುರನ ಅಟ್ಟಹಾಸಕ್ಕೆ ಕಂಗಾಲಾಗಿದ್ದಾಳೆ,

ಗದಗ, (ಮಾರ್ಚ್ 15): ಗದಗದಲ್ಲಿ (Gadag) ಬಡ್ಡಿ ದಂಧೆಕೋರರ ಹಾವಳಿಗೆ ಸಾಲಗಾರರು ತತ್ತರಿಸಿ ಹೋಗಿದ್ದಾರೆ. ಬಿಡಿಗಾಸಿನ ಸಾಲಕ್ಕೆ ಬಡ್ಡಿ, ಚಕ್ರ ಬಡ್ಡಿ ಎಂದು ಜನರ ರಕ್ತ ಹೀರುತ್ತಿದ್ದಾರೆ. ಬಡ್ಡಿ ಬಕಾಸುರ ಯಲ್ಲಪ್ಪ ಮಿಸ್ಕಿನ್(yallappa miskin), ಆತನ ಪುತ್ರ ವಿಕಾಸ್ ಮಿಸ್ಕಿನ್, ಸುನಿಲ್ ಸೇಠ್ ಎಂಬುವರು 12 ಲಕ್ಷ ರೂಪಾಯಿ ಸಾಲ ಕೊಟ್ಟು ಕೋಟ್ಯಂತರ ಬೆಲೆ ಬಾಳುವ 12 ಫ್ಲ್ಯಾಟ್ಗಳನ್ನ ಬರೆಸಿಕೊಂಡಿದ್ದಾರಂತೆ. ಅದೂ ಜೀವ ಬೆದರಿಕೆ ಹಾಕಿ ನಿವೇಶನಗಳನ್ನ ಬರೆಸಿಕೊಂಡಿರುವ ಎನ್ನುವ ಆರೋಪ ಕೇಳಿ ಬಂದಿದೆ.
ಮಹಿಳೆ ಹೆಸರು ಅಂಬಿಕಾ ಕಬಾಡಿ, ಈಕೆಯ ತಾಯಿ ಸುರೇಖಾ ಕಬಾಡಿಗೆ, 12ಲಕ್ಷ ಸಾಲ ನೀಡಿದ್ದ ಬಡ್ಡಿ ಬಕಾಸುರ ಯಲ್ಲಪ್ಪ ಮಿಸ್ಕಿನ್ ಅಂಡ್ ಗ್ಯಾಂಗ್ ಕೊಲೆ ಬೆದರಿಕೆ ಹಾಕಿ 12 ನಿವೇಶನಗಳನ್ನ ಬರೆಸಿಕೊಂಡಿದ್ದಾರಂತೆ. ಇದೀಗ ಮತ್ತೆ ವೃದ್ಧೆ ಸುರೇಖಾ ಮೇಲೆ ಹಲ್ಲೆ ಮಾಡಿ, ತಲೆಗೆ ಪಿಸ್ತೂಲ್ ಇಟ್ಟು ಕಮರ್ಷಿಯಲ್ ಪ್ಲ್ಯಾಟ್ಗಳನ್ನ ಬರೆದುಕೊಡುವಂತೆ ಬೆದರಿಕೆ ಹಾಕುತ್ತಿದ್ದಾರಂತೆ.
ಇದನ್ನೂ ಓದಿ: ಗದುಗಿನ ಬಡ್ಡಿ ಯಲ್ಲಪ್ಪಗೆ ಸೇರಿದ ಮನೆಗಳಲ್ಲಿ ಲಾಕರ್ಗಳು ಒಡೆದಂತೆಲ್ಲ ಕೋಟಿಗಟ್ಟಲೆ ಹಣ ಮತ್ತು ಚಿನ್ನಾಭರಣ!
ನಮ್ಮ ತಾಯಿ ಮೇಲೆ ಗೂಂಡಾಗಳು ಹಲ್ಲೆ ಮಾಡಿದ್ದಾರೆ. ನಮ್ಮ ಚಿಕ್ಕಪ್ಪ ಹೇಮಾಸಾ ಕಬಾಡಿ ಅವರ ಆಧಾರ ಕಾರ್ಡ್ ನಕಲಿ ಮಾಡಿ ಜಮೀನು ಕಬಳಿಸಿದ್ದಾರೆ. ಅದು ಪಿತ್ರಾರ್ಜಿತ ಆಸ್ತಿ. ಮಕ್ಕಳ್ಯಾರು ಸಹಿ ಮಾಡಿಲ್ಲ. ಆದ್ರೂ ಜಮೀನು ನೋಂದಣಿ ಅದ್ಹೇಗಾಯ್ತು ಗೊತ್ತಿಲ್ಲ. ಪೊಲೀಸ್ರಿಗೆ ಕಂಪ್ಲೆಂಟ್ ಕೊಟ್ರೂ ದೂರು ದಾಖಲಿಸಿಕೊಳ್ಳುತ್ತಿಲ್ಲ. ಪೊಲೀಸ್ರು ಕೂಡ ಬಡ್ಡಿ ಬಕಾಸುರರ ಬೆನ್ನಿಗೆ ನಿಂತಿದ್ದಾರೆ. ಕೊಟ್ಟ ಸಾಲವನ್ನು ಬಡ್ಡಿ ಸಮೇತ ಕೊಡುತ್ತೇವೆ ಅಂದರೂ ಪ್ಲ್ಯಾಟ್ ವಾಪಸ್ ಕೊಡುತ್ತಿಲ್ಲ ಎಂದು ಅಂಬಿಕಾ ಕಬಾಡಿ ಆರೋಪಿಸಿದ್ದಾರೆ.
ಕಳೆದ ತಿಂಗಳಷ್ಟೇ ಬಡ್ಡಿ ಬಕಾಸುರ ಯಲ್ಲಪ್ಪ ಮಿಸ್ಕಿನ್ ಮನೆ ಮೇಲೆ ಪೊಲೀಸರು ದಾಳಿ ಮಾಡಿದ್ದರು. ಗದಗ ನಗರದ ಬೆಟಗೇರಿಯ ಬಡ್ಡಿ ಬಕಾಸುರ ಯಲ್ಲಪ್ಪ ಮಿಸ್ಕಿನ್ ಮನೆ ಮೇಲೆ ಪೊಲೀಸರ ದಾಳಿ ನಡೆಸಿದ್ದ ವೇಳೆ 5 ಕೋಟಿ ಹಣ, ಕೆಜಿ ಚಿನ್ನ ಸಿಕ್ಕಿತ್ತು. ಅಪಾರ ಹಣ ನೋಡಿ ಪೊಲೀಸ್ ಅಧಿಕಾರಿಗಳೇ ದಂಗಾಗಿದ್ದರು. ಅಲ್ಲದೇ ಕಂತೆ ಕಂತೆ ಹಣ ಎಣಿಸಲು ಪೊಲೀಸರು ಸುಸ್ತಾಗಿ ಹೋಗಿದ್ದರು. ಇದೀಗ ಕೊಲೆ ಬೆದರಿಕೆ, ಬಡ್ಡಿ ಅಟ್ಟಹಾಸ ಆರೋಪ ಕೇಳಿ ಬಂದಿದ್ದು, ಇದು ಬಡ್ಡಿ ಬಕಾಸುರರ ಅಟ್ಟಹಾಸಕ್ಕೆ ಸಾಕ್ಷಿಯಾಗಿದೆ.




