ತಾಂಡಾದಲ್ಲಿ ನ್ಯಾಯ ಪಂಚಾಯತ್ ಮಾಡುವ ನಾಯಕ-ಆದರ್ಶದ ಪಾಠ ಮಾಡುವ ಪ್ರೊಫೆಸರ್ ನಾಗರಿಕ ಸಮಾಜ ತಲೆ ತಗ್ಗಿಸುವ ಕೆಲಸ ಮಾಡಿದ
ಗಂಡು ಮಗುವಿಗಾಗಿ ಇನ್ನೊಂದು ಮದುವೆ ಮಾಡಿಕೊಂಡಿದ್ದಾನೆ ಎನ್ನುವ ಸತ್ಯ ಸರೋಜಾಗೆ ಗೊತ್ತಾಗಿದೆ. ಆಗಲೇ ಗಂಡನ ವಿರುದ್ಧ ಸಿಡಿದು ಕಾನೂನು ಹೋರಾಟಕ್ಕೆ ಇಳದಿದ್ದಾಳೆ.
ಗದಗ: ತಾಂಡಾದಲ್ಲಿ ನ್ಯಾಯ ಪಂಚಾಯತಿ ಮಾಡುವ ನಾಯಕ, ವಿದ್ಯಾರ್ಥಿಗಳಿಗೆ ಆದರ್ಶದ ಪಾಠ ಮಾಡುವ ಪ್ರೊಫೆಸರ್. ಆದರೆ ಇಡೀ ನಾಗರಿಕ ಸಮಾಜ ತಲೆ ತಗ್ಗಿಸುವಂತ ನೀಚ ಕೆಲಸ ಮಾಡಿದ್ದಾನೆ. ಹೌದು ಗಂಡು ಮಕ್ಕಳು ಹುಟ್ಟಿಲ್ಲ ಎಂದು ಪ್ರೀತಿ ಮಾಡಿ ಮದುವೆಯಾದ ಪತ್ನಿಗೆ ಮೋಸ ಮಾಡಿ ಎರಡನೇಯ ಮದುವೆಯಾಗಿದ್ದಾನೆ. ಇತ್ತ ಮೊದಲ ಪತ್ನಿ ಮೂವರು ಹೆಣ್ಣು ಮಕ್ಕಳನ್ನು ಕಟ್ಟಿಕೊಂಡು ನ್ಯಾಯಕ್ಕಾಗಿ ಅಲೆದಾಡುತ್ತಿದ್ದಾಳೆ.
ಷಣ್ಮುಖಪ್ಪ ಕಾರಭಾರಿ ಗದಗ ನಗರದ ಪ್ರತಿಷ್ಠಿತ ವಿದ್ಯಾಸಂಸ್ಥೆಯಲ್ಲಿ ಪ್ರೊಫೆಸರಾಗಿ ಕೆಲಸ ಮಾಡುತ್ತಿದ್ದಾನೆ. ಈತ ಕಳೆದ 10 ವರ್ಷಗಳ ಹಿಂದೆ ಗದಗ ತಾಲೂಕಿನ ಅಡವಿ ಸೋಮಾಪುರ ತಾಂಡಾದ ಸರೋಜಾ ಎನ್ನುವ ಹುಡುಗಿಯನ್ನು ಪ್ರೀತಿಸಿ ಮದುವೆಯಾಗಿದ್ದ. ಮದುವೆ ಸಮಯದಲ್ಲಿ ಲಕ್ಷಾಂತರ ರೂಪಾಯಿ ಹಣ ಹಾಗೂ ಚಿನ್ನವನ್ನು ಹಾಕಿ ಅದ್ದೂರಿಯಾಗಿ ಮದುವೆ ಮಾಡಿಕೊಡಲಾಗಿತ್ತು. ಆರೇಳು ವರ್ಷ ಸುಂದರ ಸಂಸಾರ ಮಾಡಿದ್ದಾರೆ. ಈ ವೇಳೆ ಷಣ್ಮುಖಪ್ಪ ಕಾರಭಾರಿ ಹಾಗೂ ಸರೋಜಾಗೆ ಮೂವರು ಮುದ್ದಾದ ಹೆಣ್ಣು ಮಕ್ಕಳು ಜನಿಸಿವೆ. ಆದರೆ ಈ ಷಣ್ಮುಖಪ್ಪ ಕಾರಭಾರಿಗೆ ಗಂಡು ಮಕ್ಕಳು ಬೇಕು ಎನ್ನುವ ಹುಚ್ಚು.
ನಿನಗೆ ಗಂಡು ಮಕ್ಕಳು ಆಗಿಲ್ಲಾ ಎಂದು ದಿನನಿತ್ಯದ ಕುಡಿದು ಬಂದು ಪತ್ನಿಗೆ, ದೈಹಿಕ ಹಾಗೂ ಮಾನಸಿಕವಾಗಿ ಹಿಂಸೆ ನೀಡಿದ್ದಾನೆ. ಆದರೂ ಪತ್ನಿ ಸಹಿಸಿಕೊಂಡು ಜೀವನ ನಡೆಸುತ್ತಿದ್ದಳು. ಆದರೆ, ಈಗ ಗಂಡು ಮಗುವಿಗಾಗಿ ಇನ್ನೊಂದು ಮದುವೆ ಮಾಡಿಕೊಂಡಿದ್ದಾನೆ ಎನ್ನುವ ಸತ್ಯ ಸರೋಜಾಗೆ ಗೊತ್ತಾಗಿದೆ. ಆಗಲೇ ಗಂಡನ ವಿರುದ್ಧ ಸಿಡಿದು ಕಾನೂನು ಹೋರಾಟಕ್ಕೆ ಇಳದಿದ್ದಾಳೆ.
10 ವರ್ಷ ಸಂಸಾರ ಮಾಡಿದ ಗಂಡನ ವಿರುದ್ಧ ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾಳೆ. ಆದರೆ, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಹೊರತು ಅನ್ಯಾಯ ಮಾಡಿದ ಕಿರಾತಕ ಗಂಡನನ್ನು ಬಂಧಿಸುತ್ತಿಲ್ಲ. ಬದಲಾಗಿ ಆ ಕಿರಾತಕನಿಗೆ ಸಾಥ್ ನೀಡುತ್ತಿದ್ದಾರೆ ಎಂದು ನೊಂದ ಮಹಿಳೆ ಸರೋಜಾ ಆರೋಪಿಸಿದ್ದು, ನಮಗೆ ನ್ಯಾಯ ಕೊಡಿ ಎಂದು ಪೊಲೀಸರ ಬಳಿ ಅಂಗಲಾಚುತ್ತಿದ್ದಾರೆ.
ಇನ್ನೂ ಈ ಪ್ರೊಫೆಸರ್ ಅಡವಿ ಸೋಮಾಪುರ ತಾಂಡಾದ ನಾಯಕ. ಇಡೀ ಗ್ರಾಮದಲ್ಲಿ ಏನಾದರೂ ಆದರೆ ಇದೇ ಷಣ್ಮುಖಪ್ಪ ಕಾರಭಾರಿ ನ್ಯಾಯ ಪಂಚಾಯತಿ ಮಾಡುತ್ತಾನೆ. ಅಲ್ಲದೆ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಪಾಠವನ್ನು ಮಾಡುವ ಪ್ರೊಫೆಸರ್. ಆದರೆ, ಗಂಡು ಮಕ್ಕಳು ಹುಟ್ಟಿಲ್ಲ ಎಂದು ಎರಡನೇಯ ಮದುವೆಯಾಗಿದ್ದು, ಯಾವ ನ್ಯಾಯ ಎಂದು ಸರೋಜಾ ಅವರ ತಂದೆ ರಾಮಣ್ಣ ಬೇಸರ ವ್ಯಕ್ತಪಡಿಸಿದ್ದಾರೆ.
ಷಣ್ಮುಖಪ್ಪ ಪ್ರೊಫೆಸರ್ ಹುದ್ದೆಗೆ ಹೋಗುವಾಗ ಲಕ್ಷಾಂತರ ರೂಪಾಯಿ ಹಣವನ್ನು ಸಾಲವನ್ನಾಗಿ ಪಡೆದು ಈತನಿಗೆ ನೀಡಿದ್ದಾರೆ. ಮದುವೆ ಸಮಯದಲ್ಲಿ ಚಿನ್ನ, ಹಣ ಹಾಗೂ ಒಂದು ಸೈಟ್ ಕೂಡಾ ನೀಡಿದ್ದಾರೆ. ಒಬ್ಬಳೇ ಮಗಳು ಎಂದು ಸರೋಜಾ ಪೋಷಕರು ಎಲ್ಲವನ್ನು ಮಗಳ ಗಂಡನಿಗೆ ತ್ಯಾಗ ಮಾಡಿದ್ದಾರೆ. ಆದರೆ, ಈ ಕಿರಾತಕ ಉಂಡೂ ಹೋದ ಕೊಂಡು ಹೋದ ಎಂಬಂತೆ ಮಾವನ ಮನೆ ಸ್ವಚ್ಛ ಮಾಡಿದ್ದಾನೆ.
ಮುದ್ದಾದ ಮೂರು ಮಕ್ಕಳು ಹಾಗೂ ಪ್ರೀತಿಸಿ ಮದುವೆಯಾದ ಪತ್ನಿಯನ್ನು ಬಿಟ್ಟು ಗಂಡು ಮಗು ಬೇಕು ಎಂದು ಈಗ ಇನ್ನೊಬ್ಬಳ ಜೊತೆ ಮದುವೆಯಾಗಿದ್ದಾನೆ. ಇಂಥ ನೀಚನಿಂದ ನನ್ನ ಮಗಳಿಗೆ ಅನ್ಯಾಯವಾಗಿದೆ. ನನ್ನ ಮಗಳಿಗೆ ಬಂದ ಸ್ಥಿತಿ ಬೇರೆಯಾವ ಹೆಣ್ಣು ಮಗಳಿಗೆ ಬರದಿರಲಿ. ಹೀಗಾಗಿ ನಮಗೆ ನ್ಯಾಯ ಕೊಡಿಸಿ ಎಂದು ಸರೋಜಾ ತಂದೆ ರಾಮಣ್ಣ ಒತ್ತಾಯಿಸಿದ್ದಾರೆ.
ವರದಿ: ಸಂಜೀವ ಪಾಂಡ್ರೆ
ಇದನ್ನೂ ಓದಿ: ಒಂದೆಡೆ ಸಾವಿನಲ್ಲೂ ಒಂದಾದ ಹಿರಿಯ ದಂಪತಿ; ಮತ್ತೊಂದೆಡೆ ಮದುವೆಗೆ ನಿರಾಕರಣೆ -ಕಾರಿನಲ್ಲಿ ಪ್ರೇಮಿಗಳ ಸಜೀವ ದಹನ
ಮದುವೆಯಾಗಿ 20 ವರ್ಷದ ನಂತರ ಪತ್ನಿಯನ್ನು ಕೊಂದು ಜಮೀನಿನಲ್ಲಿ ಹೂತಿಟ್ಟ ಆರೋಪದಡಿ ಗಂಡನ ಬಂಧನ
Published On - 4:37 pm, Fri, 3 September 21