Gadag: ನಿವೃತ್ತ ಯೋಧ ಅಂತಾನೂ ನೋಡದೆ ಎದೆಗೂಡು ಮುರಿದಿದ್ದಾರೆ ನೆರೆಮನೆಯವರು, ಅಸಲಿ ವಿಷಯ ಏನು?

ಗಮನಾರ್ಹ ಸಂಗತಿಯೆಂದರೆ ಯೋಧ ಶೇಖರಪ್ಪ ಹಾಗೂ ಹಂಚಿನಾಳ ಕುಟುಂಬಸ್ಥರು ಸಂಬಂಧಿಕರು! ಚರಂಡಿ ಕಲ್ಲು ಈ ಎರಡು ಕುಟುಂಬಗಳನ್ನು ಹೊಡೆದಾಡುವಂತೆ ಮಾಡಿದೆ. ಅದ್ರೆ, ಅಸಲಿ ಕಥೆಯೇ ಬೇರೆಯಿದೆ.

Gadag: ನಿವೃತ್ತ ಯೋಧ ಅಂತಾನೂ ನೋಡದೆ ಎದೆಗೂಡು ಮುರಿದಿದ್ದಾರೆ ನೆರೆಮನೆಯವರು, ಅಸಲಿ ವಿಷಯ ಏನು?
ನಿವೃತ್ತ ಯೋಧ ಅಂತಾನೂ ನೋಡದೆ ಎದೆಗೂಡು ಮುರಿದಿದ್ದಾರೆ ನೆರೆ ಮನೆಯವರು
Follow us
TV9 Web
| Updated By: ಸಾಧು ಶ್ರೀನಾಥ್​

Updated on: Jan 21, 2023 | 1:42 PM

ಹೆಣ್ಣು, ಹೊನ್ನು, ಮಣ್ಣಿಗಾಗಿ ಜಗಳ, ಕೊಲೆಗಳಾಗುವುದು ಕೇಳಿದ್ದೇವೆ. ಇಲ್ಲಾಂದ್ರೆ ಕುಡಿದ ಅಮಲಿನಲ್ಲಿ ಜಗಳ ಆಡೋದನ್ನು ನೋಡಿದ್ದೇವೆ. ಆದ್ರೆ ಇಲ್ಲಿ ನಿವೃತ್ತ ಯೋಧನ ಕುಟುಂಬದ ಮೇಲೆ ಮೂವರು ಸೇರಿ ಹಲ್ಲೆ (Attack) ಮಾಡಿದ್ದು, ನಿವೃತ್ತ ಯೋಧ (Soldier) ಆಸ್ಪತ್ರೆಯಲ್ಲಿ ಗೋಳಾಡುತ್ತಿದ್ದಾರೆ. ಆದ್ರೆ, ಸ್ವತಃ ಆ ನಿವೃತ್ತ ಯೋಧನೇ ನಮ್ಮ ಮೇಲೆ ಹಲ್ಲೆ ಮಾಡಿದ್ದಾನೆ ಅಂತಾ ಪಕ್ಕದ ಮನೆಯವರು (Neighbour) ಆರೋಪಿಸಿದ್ದಾರೆ. ಇನ್ನು ಪೊಲೀಸ್ರಿಗೆ ದೂರು ನೀಡಿದ್ರೂ ಡೋಂಟ್ ಕೇರ್ ಅಂತಿದಾರೆ ಅಂತಾ ಯೋಧನ ಕುಟುಂಬ ಆರೋಪ ಮಾಡಿದೆ. ಈ ಮಧ್ಯೆ, ದೇಶ ಸೇವೆ ಮಾಡಿದ ನಿವೃತ್ತ ಯೋಧನ ಕುಟುಂಬಕ್ಕೆ ರಕ್ಷಣೆ ಇಲ್ಲದಂತಾಗಿದೆ ಅಂತ ಯೋಧನ ಕುಟುಂಬ ಕಣ್ಣೀರು ಹಾಕ್ತಾಯಿದೆ. ಆದ್ರೆ, ಈ ಜಗಳದ ಕಥೆ ಕೇಳಿದ್ರೆ ಬೆಚ್ಚಿಬಿಳ್ತೀರಿ. ಎರಡು ಕುಟುಂಬಗಳ ಬೀದಿ ಜಗಳ ನಡೆದಿದ್ದಾದ್ರೂ ಯಾಕೇ ಅನ್ನೋದೇ ವಿಚಿತ್ರ. ಅಷ್ಟಕ್ಕೂ ಆಗಿದ್ದಾದ್ರೂ ಏನು ಅಂತೀರಾ? ಈ ಸ್ಟೋರಿ ನೋಡಿ.

ಹಲ್ಲೆಗೊಳಗಾಗಿ ಜಿಮ್ಸ್ ಆಸ್ಪತ್ರೆಯ ಬೆಡ್ ಮೇಲೆ ಗೋಳಾಡುತ್ತಿರೋ ನಿವೃತ್ತ ಯೋಧ. ಮತ್ತೊಂದೆಡೆ ನಿವೃತ್ತ ಯೋಧನ ಪತ್ನಿ ನರಳಾಟ. ದೇಶ ಸೇವೆ ಮಾಡಿದ ತಂದೆಗೆ ರಕ್ಷಣೆ ಇಲ್ಲಾ ಅಂತ ಮಗಳ ಕಣ್ಣೀರು. ಎಸ್.. ಈ ದೃಶ್ಯಗಳು ಕಂಡಿದ್ದು ಗದಗ (Gadag) ನಗರದ ಜಿಮ್ಸ್ ಆಸ್ಪತ್ರೆಯಲ್ಲಿ. ಅಂದ್ಹಾಗೆ ಬೆಡ್ ಮೇಲೆ ಹಾಗೆ ನರಳಾಡುತ್ತಿರುವ ನಿವೃತ್ತ ಯೋಧನ ಹೆಸ್ರು ಶೇಖರಪ್ಪ ಬಕನಿಂಗಿ ಪತ್ತಿ ಅಕ್ಕಮಹಾದೇವಿ. ಗದಗ ತಾಲೂಕಿನ ನಾರಾಯಣಪೂರ ಗ್ರಾಮದಲ್ಲಿ ಮುತ್ತಪ್ಪ ಚಂಚಿನಾಳ ಹಾಗೂ ಯೋಧ ಶೇಖರಪ್ಪ ಬಕನಿಂಗಿ ಕುಟುಂಬಗಳ ಮನೆಗಳು ಅಕ್ಕಪಕ್ಕವೇ ಇವೆ. ಆದ್ರೆ, ಈ ಕುಟುಂಬಗಳ ನಡುವೆ ಹೊಡೆದಾಟ ನಡೆದ ವಿಷಯ ಕೇಳಿದ್ರೆ ನೀವು ಬೆಚ್ಚಿಬೀಳ್ತೀರಿ.

ಹೌದು ಇಲ್ಲಿ ಈ ಕುಟುಂಬಗಳ ನಡುವೆ ಗಲಾಟೆಯಾಗಿದ್ದು, ಚರಂಡಿ ಮೇಲಿನ ಕಲ್ಲಿನ ವಿಷಯದಲ್ಲಿ. ಹಂಚಿನಾಳ ಕುಟುಂಬ ಚರಂಡಿ ದಾಟಲು ಕಲ್ಲು ಹಾಕಿದ್ದಾರಂತೆ. ಯಾರೂ ಈ ಕಲ್ಲು ಹಾಕಿದ್ದು ಅಂತ ಯೋಧನ ಕುಟುಂಬ ಪ್ರಶ್ನೆ ಮಾಡಿದೆ. ಈ ವೇಳೆ ಮಾತಿಗೆ ಮಾತು ಬೆಳೆದು ಎರಡೂ ಕುಟುಂಬಗಳ ನಡುವೆ ಗಲಾಟೆಯಾಗಿದೆ. ಇದು ಕೈ ಕೈ ಮಿಲಾಯಿಸುವ ಹಂತಕ್ಕೆ ಹೋಗಿ ಹೊಡದಾಡಿಕೊಂಡಿದ್ದಾರೆ.

ಆದ್ರೆ ಅಲ್ಲಿದ್ದಿದ್ದು ಯೋಧ ಮತ್ತು ಪತ್ನಿ ಇಬ್ಬರೇ. ಹೀಗಾಗಿ ಮರೆಯಪ್ಪ ಹಂಚಿನಾಳ, ಮುತ್ತಪ್ಪ ಹಂಚಿನಾಳ ಶೋಭವ್ವ ಹಂಚಿನಾಳ ಸೇರಿ ಯೋಧ ಶೇಖರಪ್ಪ, ಪತ್ನಿ ಅಕ್ಕಮಹಾದೇವಿ ಮೇಲೆ ಹಲ್ಲೆ ಮಾಡಿದ್ದಾರೆ ಅಂತ ಯೋಧನ ಕುಟುಂಬ ಆರೋಪಿಸಿದೆ. ನೆರೆಯ ಆ ಮೂವರೂ ಸೇರಿ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಇದ್ರಿಂದ ಎದೆ ಭಾಗದಲ್ಲಿ ಎಲುಬು ಮುರಿದಿದೆ ಅಂತ ವೈದ್ಯರು ಹೇಳಿದ್ದಾರೆ ಎಂದು ಯೋಧ ಆಸ್ಪತ್ರೆಯಲ್ಲಿ ಗೋಳಾಡುತ್ತಿದ್ದಾರೆ. ಹಲ್ಲೆಯಾಗಿ ನಮ್ಮ ತಂದೆ ಆಸ್ಪತ್ರೆಗೆ ದಾಖಲಾಗಿದ್ದರೂ ಪೊಲೀಸ್ರು ಮಾತ್ರ ಸಹಾಯಕ್ಕೆ ಬಂದಿಲ್ಲ. ದೇಶ ಸೇವೆ ಮಾಡಿದ ಯೋಧನ ಕುಟುಂಬಕ್ಕೆ ರಕ್ಷಣೆ ಇಲ್ಲದಂತಾಗಿದೆ ಅಂತ ಯೋಧನ ಮಗಳು ಕಣ್ಣೀರು ಹಾಕಿದ್ದಾಳೆ. ಪೊಲೀಸ್ರ ವಿರುದ್ಧ ಅಸಮಾಧ ವ್ಯಕ್ತಪಡಿಸಿದ್ದಾರೆ.

ಗಲಾಟೆ ವೇಳೆ ಯೋಧನ ಕೊರಳಲ್ಲಿದ್ದ 11 ಗ್ರಾಮ ಬಂಗಾರ ಚೈನ್, ಪತ್ನಿ ಅಕ್ಕಮಹಾದೇವಿಯ 3 ಗ್ರಾಂ ಕಿವಿಯೋಲೆ ಮಾಯವಾಗಿದೆ. ಹಲ್ಲೆಯಾಗಿ ಎರಡು ದಿನಗಳಿಂದ ಗದಗ ಜಿಮ್ಸ್ ಆಸ್ಪತ್ರೆಯಲ್ಲಿ ಯೋಧನ ಕುಟುಂಬ ನರಳಾಡುತ್ತಿದ್ರೂ ಗದಗ ಗ್ರಾಮೀಣ ಪೊಲೀಸ್ರು ಸುಳಿದಿಲ್ಲ ಅಂತ ಯೋಧನ ಕುಟುಂಬ ಕಿಡಿಕಾರಿದೆ. ಆದ್ರೆ, ಹಂಚಿನಾಳ ಕುಟುಂಬ ಮಾತ್ರ ನಾವು ಹಲ್ಲೆ ಮಾಡಿಲ್ಲ. ಯೋಧನೇ ನನ್ನ ಬ್ಲೌಸ್ ಹಿಡಿದು ಎಳೆದಿದ್ದಾನೆ. ಆಗ ಕೆಳಬಿದ್ದಿದ್ದಾನೆ. ನಾನು ನಿವೃತ್ತ ಯೋಧ ಅಂತ ನಮ್ಮ ಮೇಲೆ ಅವಾಜ್ ಹಾಕಿದ್ದಾನೆ. ಆತನಿಂದ ನಮ್ಮ ಕುಟುಂಬದ ಮೇಲೆ ನಿರಂತರ ದಬ್ಬಾಳಿಕೆ ನಡೆದಿದೆ ಅಂತ ಶೋಭವ್ವ ಹಂಚಿನಾಳೆ ಯೋಧನ ವಿರುದ್ಧ ಪ್ರತಿ ಆರೋಪ ಮಾಡಿದ್ದಾರೆ. ನಮ್ಮನ್ನೇ ಯೋಧ ಶೇಖರಪ್ಪ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ ಅಂತ ಕಣ್ಣೀರು ಹಾಕಿದ್ದಾರೆ.

ಗಮನಾರ್ಹ ಸಂಗತಿಯೆಂದರೆ ಯೋಧ ಶೇಖರಪ್ಪ ಹಾಗೂ ಹಂಚಿನಾಳ ಕುಟುಂಬಸ್ಥರು ಸಂಬಂಧಿಕರು! ಚರಂಡಿ ಕಲ್ಲು ಈ ಎರಡು ಕುಟುಂಬಗಳನ್ನು ಹೊಡೆದಾಡುವಂತೆ ಮಾಡಿದೆ. ಅದ್ರೆ, ಅಸಲಿ ಕಥೆಯೇ ಬೇರೆಯಿದೆ. ಗೋಮಾಳ ಜಾಗದಲ್ಲಿ ಹಂಚಿನಾಳ ಕುಟುಂಬ ಶೆಡ್ ಹಾಕಿಕೊಂಡಿದೆ. ಇದಕ್ಕೆ ಯೋಧ ಶೇಖರಪ್ಪ ತಕರಾರು ಮಾಡಿ ಗ್ರಾಮ ಪಂಚಾಯತ್ ಗೆ ತಕರಾರು ಅರ್ಜಿ ನೀಡಿದ್ದಾನೆ. ಹೀಗಾಗಿಯೇ ಹಂಚಿನಾಳ ಕುಟುಂಬಸ್ಥರು ಯೋಧನ ಮೇಲೆ ಸಿಟ್ಟಾಗಿ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ. ಅದೇನೆ ಇರಲಿ ಪೊಲೀಸ್ರ ತನಿಖೆ ಬಳಿಕವೇ ತಪ್ಪು ಯಾರದು, ಸರಿ ಯಾರು ಅನ್ನೋ ವಿಚಾರ ಗೊತ್ತಾಗಲಿದೆ.

ವರದಿ: ಸಂಜೀವ ಪಾಂಡ್ರೆ, ಟಿವಿ 9, ಗದಗ