ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಖಡಕ್​ ಮಾರ್ಗಸೂಚಿ

ಗಣೇಶ ಚತುರ್ಥಿ ಆಚರಣೆಗೆ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್‌ಪಿಸಿಬಿ) ಮಾರ್ಗಸೂಚಿಗಳನ್ನು ಹೊರಡಿಸಿದೆ. ಪಿಒಪಿ ಮೂರ್ತಿಗಳ ನಿಷೇಧ, ನೈಸರ್ಗಿಕ ವಸ್ತುಗಳಿಂದ ತಯಾರಾದ ಮೂರ್ತಿಗಳ ಬಳಕೆ, ವೈಜ್ಞಾನಿಕ ವಿಸರ್ಜನೆ, ಧ್ವನಿವರ್ಧಕ ಮತ್ತು ಪಟಾಕಿಗಳ ಬಳಕೆಯ ಮೇಲಿನ ಕೆಲವು ಕಟ್ಟುನಿಟ್ಟನ ನಿಯಮಗಳು ಸೇರಿದಂತೆ ಮುಂತಾದ ಪ್ರಮುಖ ಅಂಶಗಳನ್ನು ಈ ಮಾರ್ಗಸೂಚಿ ಒಳಗೊಂಡಿದೆ. ಪರಿಸರ ಸಂರಕ್ಷಣೆಗೆ ಆದ್ಯತೆ ನೀಡಿ ಹಬ್ಬವನ್ನು ಆಚರಿಸಲು ಕೆಎಸ್‌ಪಿಸಿಬಿ ಕರೆ ನೀಡಿದೆ.

ಗಣೇಶ ಮೂರ್ತಿ ಪ್ರತಿಷ್ಠಾಪನೆಗೆ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಖಡಕ್​ ಮಾರ್ಗಸೂಚಿ
ಗಣೇಶ
Updated By: ವಿವೇಕ ಬಿರಾದಾರ

Updated on: Aug 23, 2025 | 8:45 PM

ಬೆಂಗಳೂರು, ಆಗಸ್ಟ್​ 23: ಗಣೇಶ ಚತುರ್ಥಿಗೆ (Ganesh Chaturthi 2025) ಇನ್ನೇನು ಕೆಲವೇ ದಿನಗಳಿದ್ದು, ಬೆಂಗಳೂರಿನಲ್ಲಿ (Bengaluru) ಹಬ್ಬದ ಆಚರಣೆಗೆ ಸಾರ್ವಜನಿಕ ಗಣೇಶ (Ganesh) ಮಂಡಳಿಗಳು ಸಿದ್ಧತೆ ಬರದಿಂದ ನಡೆಸುತ್ತಿವೆ. ಹಬ್ಬದ ಆಚರಣೆ ಸಂಬಂಧ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ (KSPCB) ಮಾರ್ಗಸೂಚಿ ಬಿಡುಗಡೆ ಮಾಡಿದೆ. ರಾಜ್ಯಾದ್ಯಂತ ಪ್ಲಾಸ್ಟರ್ ಆಫ್ ಪ್ಯಾರೀಸ್ ವಿಗ್ರಹಗಳ ತಯಾರಿಕೆ ಹಾಗೂ ಮಾರಾಟವನ್ನು ನಿಷೇಧಿಸಿದೆ. ಅನಧಿಕೃತವಾಗಿ ತಯಾರಿಸುವ/ಮಾರಾಟ ಮಾಡುವ ವ್ಯಕ್ತಿ/ಸಂಸ್ಥೆಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಕೆಎಸ್​ಪಿಸಿಬಿ ಮಾರ್ಗಸೂಚಿಯಲ್ಲಿ ಉಲ್ಲೇಖಿಸಿದೆ.

ಪ್ಲಾಸ್ಟರ್ ಆಫ್ ಪ್ಯಾರೀಸ್ ವಿಗ್ರಹ/ ಬಣ್ಣಲೇಪಿತ ವಿಗ್ರಹಗಳನ್ನು ಯಾವುದೇ ನದಿ, ಕಾಲುವೆ, ಬಾವಿ ಹಾಗೂ ಇತರೆ ಜಲಮೂಲಗಳಲ್ಲಿ ವಿಸರ್ಜಿಸುವುದನ್ನು ನಿಷೇಧಿಸಲಾಗಿದೆ. ನೈಸರ್ಗಿಕ ವಸ್ತುಗಳಿಂದ ತಯಾರಿಸಿದ ಹಾಗೂ ನೈಸರ್ಗಿಕ ಬಣ್ಣಲೇಪಿತ ಮೂರ್ತಿಗಳನ್ನು ಪ್ರತಿಷ್ಠಾಪಿಸಿ.

ವೈಜ್ಞಾನಿಕ ರೀತಿಯಲ್ಲಿ ವಿಸರ್ಜನೆ

ಗೌರಿಗಣೇಶ ಮೂರ್ತಿಗಳನ್ನು ವಿಸರ್ಜಿಸುವ ಸಂದರ್ಭದಲ್ಲಿ ಹಸಿಕಸ (ಹೂವು, ಹಣ್ಣು, ಬಾಳೆಕಂಬ, ಮಾವಿನ ತೋರಣ, ಇತ್ಯಾದಿ ಅಲಂಕಾರಿಕ ವಸ್ತುಗಳು) ಪ್ರತ್ಯೇಕಿಸಿ ಮೂರ್ತಿಗಳೊಂದಿಗೆ ನೀರಿಗೆ ವಿಸರ್ಜಿಸದೆ, ಪ್ರತ್ಯೇಕವಾಗಿ ವಿಲೇವಾರಿ ಮಾಡಲು ಕ್ರಮವಹಿಸಬೇಕು.

ಸಾರ್ವಜನಿಕವಾಗಿ ಪ್ರತಿಷ್ಠಾಪಿಸಲಾಗುವ ಗಣೇಶ ವಿಗ್ರಹಗಳನ್ನು ಕಡ್ಡಾಯವಾಗಿ ಸ್ಥಳೀಯ ಸಂಸ್ಥೆಗಳು ಮತ್ತು ಪೊಲೀಸ್‌ ಇಲಾಖೆಯಿಂದ ನಿಬಂಧನೆಗಳೊಪಟ್ಟ ಅನುಮತಿಗಳನ್ನು ಪಡೆದ ನಂತರವೇ ಸ್ಥಾಪಿಸುವುದು. ಏಕಬಳಕೆ ಪ್ಲಾಸ್ಟಿಕ್‌ ಉಪಯೋಗಿಸುವುದು ಹಾಗೂ ರಾತ್ರಿ 10.00 ರಿಂದ ಬೆ 6.00 ರವರೆಗೆ ಧ್ವನಿವರ್ಧಕಗಳ ಬಳಕೆ ನಿಷೇಧಿಸಿದೆ. ಹಸಿರು ಪಟಾಕಿಗಳ ಹೊರತಾಗಿ ಯಾವುದೇ ಪಟಾಕಿಗಳನ್ನು ಸುಡುವುದನ್ನು ಸಂಪೂರ್ಣವಾಗಿ ನಿಷೇಧಿಸಿದೆ.

ಇದನ್ನೂ ಓದಿ: ಗಣೇಶ ವಿಸರ್ಜನೆ ಸ್ಥಳ ನಿಗದಿ ಮಾಡಿದ ಬಿಬಿಎಂಪಿ: ಕಲ್ಯಾಣಿ, ಸಂಚಾರಿ ಟ್ಯಾಂಕ್‌ಗಳ ವಿವರ ಇಲ್ಲಿದೆ

ಗಣೇಶ ಮೂರ್ತಿಯ ವಿಸರ್ಜನೆ ಸಂದರ್ಭದಲ್ಲಿ ತೆಪ್ಪ ಬಳಕೆ ಮಾಡಿದ್ದಲ್ಲಿ ಕೇವಲ ಎರಡರಿಂದ ಮೂರು ಜನರಿಗೆ ಮಾತ್ರ ತೆಪ್ಪದಲ್ಲಿ ಹೋಗಲು ಅವಕಾಸ. ಕಡ್ಡಾಯವಾಗಿ ಲೈಫ್ ಜಾಕೇಟ್ ಬಳಸಿಕೊಂಡು ನುರಿತ ಈಜುಗಾರರ ಸಮ್ಮುಖದಲ್ಲಿ ಗಣಪತಿ ವಿಸರ್ಜಿಸಬೇಕು.

ಆ.27 ರಿಂದ ಸೆ.15ರವರೆಗೆ ಬೈಕ್ ರ್ಯಾಲಿ, ಡಿ.ಜಿ. ಸಿಸ್ಟಂ ಬಳಕೆ ಹಾಗೂ ಕಲರ್ ಪೇಪರ್ ಬ್ಲಾಸ್ಟಿಂಗ್/ ಸಿಡಿಮದ್ದು ಸಿಡಿಸುವುದನ್ನು ನಿಷೇಧಿಸಲಾಗಿದೆ. ಒಂದು ವೇಳೆ ನಿಯಮ ಉಲ್ಲಂಘಿಸಿ ಬಳಕೆ ಮಾಡಿದರೇ ಅಂತವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ತಿಳಿಸಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ