ಪಿಒಪಿ ಗಣೇಶ ಬಳಸುವುದಿಲ್ಲ ಅಂತ ಸಮಿತಿಗಳಿಂದ ಮುಚ್ಚಳಿಕೆ ಬರೆಸಿಕೊಂಡು ಪೆಂಡಾಲ್ಗೆ ಅನುಮತಿ ನೀಡಿ: ಖಂಡ್ರೆ
ಕರ್ನಾಟಕದ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರು ಗಣೇಶೋತ್ಸವದಲ್ಲಿ ಪಿಒಪಿ ಗಣೇಶ ಮೂರ್ತಿಗಳ ಬಳಸದಂತೆ ಮನವಿ ಮಾಡಿದ್ದಾರೆ. ಪಿಒಪಿ ಮೂರ್ತಿಗಳು ನೀರಿನಲ್ಲಿ ಕರಗದೆ ಜಲಚರಗಳಿಗೆ ಹಾನಿಕಾರಕ ಎಂದು ಅವರು ತಿಳಿಸಿದ್ದಾರೆ. ಪರಿಸರ ಸ್ನೇಹಿ ಮಣ್ಣಿನ ಮೂರ್ತಿಗಳನ್ನು ಬಳಸುವಂತೆ ಮತ್ತು ಶಬ್ದ ಮಾಲಿನ್ಯವನ್ನು ತಡೆಯುವಂತೆ ಅವರು ಮನವಿ ಮಾಡಿದ್ದಾರೆ. ಗಣೇಶೋತ್ಸವವನ್ನು ಪರಿಸರ ಸ್ನೇಹಿಯಾಗಿ ಆಚರಿಸುವಂತೆ ಸಚಿವರು ಕರೆ ನೀಡಿದ್ದಾರೆ.

ಬೆಂಗಳೂರು, ಆಗಸ್ಟ್ 23: ಪ್ಲಾಸ್ಟರ್ ಆಫ್ ಪ್ಯಾರೀಸ್ (POP) ಗಣೇಶ ಮೂರ್ತಿಗಳನ್ನು (Ganesh Idol) ಬಳಸುವುದಿಲ್ಲ ಎಂದು ಸಾರ್ವಜನಿಕ ಗಣೇಶೋತ್ಸವ (Ganesh Festival) ಸಮಿತಿಗಳಿಂದ ಮುಚ್ಚಳಿಕೆ ಬರೆಸಿಕೊಂಡು ಪೆಂಡಾಲ್ಗೆ ಅನುಮತಿ ನೀಡುವಂತೆ ಸ್ಥಳೀಯಾಡಳಿತ ಸಂಸ್ಥೆಗಳಿಗೆ ಅರಣ್ಯ ಇಲಾಖೆ ಸಚಿವ ಈಶ್ವರ್ ಖಂಡ್ರೆ (Eshwar Khandre) ಅವರು ಸೂಚನೆ ನೀಡಿದ್ದಾರೆ.
ಈ ಕುರಿತು ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಟ್ವೀಟ್ ಮಾಡಿದ ಅವರು, “ಪಿಒಪಿ ಗಣೇಶ ಮೂರ್ತಿಗಳಲ್ಲಿರುವ ವಿಷಕಾರಿ ಅಂಶಗಳು ನೀರಿನಲ್ಲಿ ಸೇರಿ ಜಲಚರಗಳ ಸಾವಿಗೆ ಕಾರಣವಾಗುತ್ತವೆ. ಹೀಗಾಗಿ, ಗಣೇಶೋತ್ಸವ ಸಮಿತಿಗಳು ಮತ್ತು ಸಾರ್ವಜನಿಕರು ಪಿಒಪಿ ಗಣಪತಿ ಮೂರ್ತಿಗಳನ್ನು ಖರೀದಿಸದೆ, ಪರಿಸರ ಸ್ನೇಹಿಯಾದ ಮಣ್ಣಿನ ಗಣಪತಿ ಮೂರ್ತಿಗಳನ್ನು ಪೂಜಿಸಬೇಕು” ಎಂದು ಮನವಿ ಮಾಡಿದ್ದಾರೆ.
“ನಾವು ಭಕ್ತಿಭಾವದಿಂದ ಆಚರಿಸುವ ಗಣೇಶೋತ್ಸವದಿಂದ ಜಲಚರ ಜೀವಿಗಳಿಗೆ ಹಾನಿಯಾಗಬಾರದು. ಆದ್ದರಿಂದ ಎಲ್ಲರೂ ಪಿಓಪಿ ಮೂರ್ತಿಗಳನ್ನು ಖರೀದಿಸದೆ, ಪರಿಸರ ಸ್ನೇಹಿಯಾದ ಮಣ್ಣಿನ ಗಣಪ ಮೂರ್ತಿಗಳನ್ನು ಪೂಜಿಸಿ ವಿಸರ್ಜಿಸಬೇಕು ಎಂದು ನಾನು ವಿನಂತಿಸುತ್ತೇನೆ” ಎಂದು ಟ್ವೀಟ್ ಮಾಡಿದ್ದಾರೆ.
“ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಶೇ.90ರಷ್ಟು ಮಣ್ಣಿನ ಗಣಪತಿಯನ್ನೇ ಪೂಜಿಸಲಾಗುತ್ತಿದೆ. ಆ ಜಿಲ್ಲೆಗಳಲ್ಲಿ ಸಾಧ್ಯವಾಗುತ್ತಿರುವುದಾದರೆ ಉಳಿದ ಜಿಲ್ಲೆಗಳಲ್ಲಿ ಏಕೆ ಸಾಧ್ಯವಾಗಬಾರದು? ಈ ನಿಟ್ಟಿನಲ್ಲಿ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಜಿಲ್ಲಾಡಳಿತ, ತಾಲೂಕು ಆಡಳಿತ ಮತ್ತು ಸ್ಥಳೀಯ ಸಂಸ್ಥೆಗಳು ಹೆಚ್ಚಿನ ಜಾಗೃತಿ ಮೂಡಿಸಬೇಕು” ಎಂದು ಸೂಚನೆ ನೀಡಿದ್ದಾರೆ.
ಇದನ್ನೂ ಓದಿ: ಪಿಒಪಿ ಗಣೇಶ ತಯಾರಿ, ಮಾರಾಟ ಮಾಡಿದ್ರೆ ಕ್ರಿಮಿನಲ್ ಕೇಸ್; ಗಣೇಶ ಚತುರ್ಥಿಗೆ ಬಿಬಿಎಂಪಿ ಮಾರ್ಗಸೂಚಿ ಬಿಡುಗಡೆ
“POP ಗೌರಿ-ಗಣೇಶ ಮೂರ್ತಿಗಳು ನೀರಿನಲ್ಲಿ ಕರಗುವುದಿಲ್ಲ. ಜೊತೆಗೆ ವಿಷಕಾರಕ ಅಂಶಗಳನ್ನು ನೀರಿನಲ್ಲಿ ಸೇರಿಸುತ್ತವೆ. ಭಾರಲೋಹ ಮಿಶ್ರಿತ ರಾಸಾಯನಿಕ ಬಣ್ಣಗಳು ಜಲಚರಗಳ ಸಾವಿಗೆ ಕಾರಣವಾಗುತ್ತವೆ. ಇಡೀ ಜಗತ್ತೇ ಇಂದು ಜಾಗತಿಕ ತಾಪಮಾನ ಏರಿಕೆ ಮತ್ತು ಹವಾಮಾನ ಬದಲಾವಣೆಯ ಸವಾಲನ್ನು ಎದುರಿಸುತ್ತಿದೆ. ಅತಿವೃಷ್ಟಿ, ಅನಾಹುತಗಳು ಹೆಚ್ಚುತ್ತಿರುವ ಈ ಸಮಯದಲ್ಲಿ ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿ” ಎಂದರು.
ಟ್ವಿಟರ್ ಪೋಸ್ಟ್
ಪ್ಲಾಸ್ಟರ್ ಆಫ್ ಪ್ಯಾರೀಸ್ (ಪಿಒಪಿ) ಗಣೇಶ ಮೂರ್ತಿಗಳನ್ನು ಬಳಸುವುದಿಲ್ಲ ಎಂದು ಸಾರ್ವಜನಿಕ ಗಣೇಶೋತ್ಸವ ಸಮಿತಿಗಳಿಂದ ಮುಚ್ಚಳಿಕೆ ಬರೆಸಿಕೊಂಡು ಪೆಂಡಾಲ್ ಗೆ ಅನುಮತಿ ನೀಡುವಂತೆ ಸ್ಥಳೀಯಾಡಳಿತ ಸಂಸ್ಥೆಗಳಿಗೆ ಸೂಚಿಸಲಾಗಿದೆ ಎಂದು ಅರಣ್ಯ ಸಚಿವರಾದ ಈಶ್ವರ್ ಖಂಡ್ರೆ ಅವರು ತಿಳಿಸಿದ್ದಾರೆ. @eshwar_khandre pic.twitter.com/EwJCPlZHlp
— DIPR Karnataka (@KarnatakaVarthe) August 22, 2025
“ಗಣೇಶೋತ್ಸವವನ್ನು ಆಚರಿಸುವ ಎಲ್ಲರೂ ಪರಿಸರ ಸ್ನೇಹಿಯಾಗಿ ವರ್ತಿಸಿ ಮುಂದಿನ ಪೀಳಿಗೆಗೆ ಹಸಿರು ಭೂಮಿಯನ್ನು ಉಳಿಸೋಣ ” ಎಂದು ಕರೆ ನೀಡಿದ್ದಾರೆ.
“ಗಣೇಶೋತ್ಸವದ ವೇಳೆ ಪಟಾಕಿ ಹಚ್ಚಲಾಗುತ್ತದೆ. 125 ಡೆಸಿಬೆಲ್ಗಿಂತ ಹೆಚ್ಚು ಶಬ್ಧ ಮಾಡುವ ಪಟಾಕಿ ಸಿಡಿಸದಂತೆ ಮತ್ತು ರಾತ್ರಿ 8 ರಿಂದ 10 ಗಂಟೆಯೊಳಗೆ ಮಾತ್ರ ಪಟಾಕಿ ಸಿಡಿಸುವಂತೆ ಸುಪ್ರೀಂ ಕೋರ್ಟ್ ಆದೇಶ ನೀಡಿದ್ದು, ಇದನ್ನು ಎಲ್ಲರೂ ಪಾಲಿಸಬೇಕು. ಪರಿಸರಕ್ಕೆ ಮಾರಕವಾದ ಪಟಾಕಿ ಬಳಸದೆ, ಹಸಿರು ಪಟಾಕಿ ಸಿಡಿಸಬೇಕು” ಎಂದು ತಿಳಿಸಿದ್ದಾರೆ.




