ಬಿಎಲ್ ಸಂತೋಷ್ ಕುರಿತು ಅವಹೇಳನ ಆರೋಪ: ಮಹೇಶ್ ಶೆಟ್ಟಿ ತಿಮರೋಡಿಗೆ ಜಾಮೀನು
ಬಿಜೆಪಿ ನಾಯಕ ಬಿ.ಎಲ್. ಸಂತೋಷ್ ಅವರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಅವರಿಗೆ ಜಾಮೀನು ದೊರೆತಿದೆ. ಬ್ರಹ್ಮಾವರ ತಾಲೂಕು ನ್ಯಾಯಾಲಯವು ಜಾಮೀನು ನೀಡಿದೆ. ನ್ಯಾಯಾಲಯವು ಭವಿಷ್ಯದಲ್ಲಿ ಇಂತಹ ಹೇಳಿಕೆಗಳನ್ನು ನೀಡದಂತೆ ಎಚ್ಚರಿಸಿದೆ.

ಉಡುಪಿ, ಆಗಸ್ಟ್ 23: ಬಿಜೆಪಿ (BJP) ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿಎಲ್ ಸಂತೋಷ್ (BL Santosh) ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ ಬಂಧಿತರಾಗಿದ್ದ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ (Mahesh Shetty Timarodi) ಅವರಿಗೆ ಜಾಮೀನು ನೀಡಲಾಗಿದೆ. ಬ್ರಹ್ಮಾವರ ತಾಲೂಕು ಸಂಚಾರಿ ಪೀಠ ಜಾಮೀನು ಮಂಜೂರು ಮಾಡಿದೆ.
ಮಹೇಶ್ ಶೆಟ್ಟಿ ತಿಮರೋಡಿ ಸಲ್ಲಿಸಿದ ಜಾಮೀನು ಅರ್ಜಿ ವಿಚಾರಣೆ ನಡೆಸಿದ, ಉಡುಪಿ ಹೆಚ್ಚುವರಿ ಸಿವಿಲ್ ನ್ಯಾಯದೀಶರು ಹಾಗೂ ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿಗಳ ನ್ಯಾಯಾಲಯ ನ್ಯಾಯಾದೀಶ ಎನ್.ಎ ನಾಗೇಶ್ ಅವರು, ಇನ್ಮುಂದೆ ಈ ತರದ ನ್ಯೂ ಸೆನ್ಸ್ ಮಾಡಕೂಡದು ಎಂದು ಎಚ್ಚರಿಸಿ, ಜಾಮೀನು ಮಂಜೂರು ಮಾಡಿದರು.
ಮಹೇಶ್ ಶೆಟ್ಟಿ ತಿಮರೋಡಿ ಪರ ವಕೀಲ ವಿಜಯ ವಾಸು ಪೂಜಾರಿ ವಾದ ಮಂಡಿಸಿದರು. “ಬಂಧಿಸಿದ ಪ್ರಕ್ರಿಯೆ ಕ್ರಮಬದ್ಧವಾಗಿಲ್ಲ. ಪ್ರಥಮ ನೋಟಿಸ್ ನೀಡಿ ಅದರ ಅವಧಿ ಮುಗಿಯುವ ಮುನ್ನವೇ ಎರಡನೇ ನೋಟಿಸ್ ನೀಡಿದ್ದಾರೆ. ತಿಮರೋಡಿಯವರ ಹೇಳಿಕೆಯಿಂದ ಯಾವುದೇ ಕೋಮು ಗಲಭೆಗಳು ಆಗಿಲ್ಲ. ತಿಮರೋಡಿ ಕೂಡ ಓರ್ವ ಹಿಂದೂ ನಾಯಕ. ಇನ್ನೊಂದು ಧರ್ಮವನ್ನು ಅವರು ದೂಷಿಸಿಲ್ಲ” ಎಂದು ಪೀಠಕ್ಕೆ ತಿಳಿಸಿದರು.
ನಮ್ಮ ಹೋರಾಟ ಮುಂದುವರಿಯಲಿದೆ: ತಿಮರೋಡಿ
ನಮ್ಮ ಹೋರಾಟ ಮುಂದುವರಿಯಲಿದೆ. ಸಹಕಾರ ನೀಡಿದ ವಕೀಲರಿಗೆ ನಾನು ಅಭಿನಂದನೆ ಸಲ್ಲಿಸುವೆ. ಮಾಸ್ಕ್ಮ್ಯಾನ್ ಬಂಧನವಾಗಿರುವ ಬಗ್ಗೆ ನನಗೆ ಗೊತ್ತಿಲ್ಲ. ಸುಜಾತ ಭಟ್ ಕುರಿತು ಏನನ್ನೂ ಹೇಳಲ್ಲ. ನಮ್ಮನ್ನು ಯಾರು ಕೂಡ ದಿಕ್ಕು ತಪ್ಪಿಸುವುದಕ್ಕೆ ಸಾಧ್ಯವಿಲ್ಲ. ಅಣ್ಣಪ್ಪ, ಮಂಜುನಾಥ ಸ್ವಾಮಿ ಮಾತ್ರ ಸಾಧ್ಯ. ಇಂದು ಎಲ್ಲವೂ ಒಳ್ಳೆ ರೀತಿಯಲ್ಲಿ ಆಗಿದೆ. ಸುಜಾತ ಭಟ್ ಅವರು ನಮ್ಮ ಹೋರಾಟದಲ್ಲಿಯೇ ಇಲ್ಲ. ನಾವು ಸುಜಾತ ಭಟ್ರನ್ನ ನಂಬಿದವರಲ್ಲ ಎಂದು ಮಹೇಶ್ ಶೆಟ್ಟಿ ತಿಮರೋಡಿ ಹೇಳಿದರು.
ಏನಿದು ಮಹೇಶ್ ಶೆಟ್ಟಿ ತಿಮರೋಡಿ ಪ್ರಕರಣ?
ಧರ್ಮಸ್ಥಳ ಪ್ರಕರಣ ಸಂಬಂಧ ಮಹೇಶ್ ಶೆಟ್ಟಿ ತಿಮರೋಡಿ ಅನೇಕ ಹೇಳಿಕೆಗಳನ್ನು ನೀಡಿದ್ದಾರೆ. ಹಲವಾರು ಮಂದಿಯ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ ಆರೋಪ ಅವರ ಮೇಲಿದೆ. ಅದೇ ರೀತಿ, ಬಿ ಎಲ್ ಸಂತೋಷ್ ವಿರುದ್ಧವೂ ಅವಹೇಳನಕಾರಿಯಾಗಿ ಮಾತನಾಡಿದ್ದರು ಎಂಬ ಆರೋಪವಿದೆ. ಈ ಬಗ್ಗೆ ಉಡುಪಿಯ ಬಿಜೆಪಿ ಮುಖಂಡರು ಬ್ರಹ್ಮಾವರ ಪೊಲೀಸರಿಗೆ ದೂರು ನೀಡಿದ್ದರು. ಅದರಂತೆ, ವಿಚಾರಣೆಗೆ ಹಾಜರಾಗುವಂತೆ ತಿಮರೋಡಿಗೆ ಬ್ರಹ್ಮಾವರ ಪೊಲೀಸರು ನೋಟಿಸ್ ನೀಡಿದ್ದರು.
ತಿಮರೋಡಿಗೆ 2 ಬಾರಿ ಪೊಲೀಸರು ನೋಟಿಸ್ ಕೊಟ್ಟಿದ್ದರು. ಕೊನೆಯದಾದಗಿ ಬುಧವಾರ (ಆ.20) ದಂದು ನೋಟಿಸ್ ನೀಡಲಾಗಿತ್ತು. ಗುರುವಾರ ಬೆಳಗ್ಗೆ 9 ಗಂಟೆಯೊಳಗೆ ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಲಾಗಿತ್ತು. ಆದರೆ, ಆ ನೋಟಿಸ್ಗೆ, ‘15 ದಿನಗೊಳಗೆ ಹಾಜರಾಗುತ್ತೇನೆ’ ಎಂದು ತಿಮರೋಡಿ ಉತ್ತರಿಸಿದ್ದರು. ಪೊಲೀಸರು ಕೊಟ್ಟ ನೋಟಿಸ್ನಲ್ಲೇ ಉತ್ತರಿಸಿ ಸಹಿ ಮಾಡಿದ್ದರು. ಈ ಬೆಳವಣಿಗೆ ನಂತರ ಪೊಲೀಸರು ಅವರ ನಿವಾಸಕ್ಕೆ ತೆರಳಿ ಬಂಧಿಸಿದ್ದರು.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:27 pm, Sat, 23 August 25



