ಬೆಂಗಳೂರು, ಆಗಸ್ಟ್ 07: ವಾಚ್ ಅಂದ್ರೆ ಹೆಚ್ಎಮ್ಟಿ ಅಂತ ತಟ್ಟನೆ ಹೇಳುವ ಕಾಲವಿತ್ತು. ಹೆಚ್ಎಮ್ಟಿ ವಾಚ್ ಕಟ್ಟಿಕೊಂಡರೆ ಆತ ಶ್ರೀಮಂತ ಎಂಬ ಭಾವನೆ ಮೂಡುತ್ತಿತ್ತು. ಹೆಚ್ಎಮ್ಟಿ ವಾಚ್ ಪ್ರತಿಷ್ಠೆಯ ಸಂಕೇತವಾಗಿತ್ತು. ಆದರೆ, ಇದೀಗ ಹೆಚ್ಎಮ್ಟಿ ತೆರೆಮರೆಗೆ ಸರೆಯುತ್ತಿದೆ. ಹಿಂದೂಸ್ತಾನ್ ಮೆಷಿನ್ ಟೂಲ್ಸ್ (HMT) ಕಂಪನಿ ಅಳಿವಿನ ಅಂಚಿನಲ್ಲಿದೆ. ಹೆಚ್ಎಮ್ಟಿ ಕಂಪನಿ ಪುನಶ್ಚೇತನಕ್ಕೆ ಕೇಂದ್ರ ಭಾರೀ ಕೈಗಾರಿಕೆ ಮತ್ತು ಉಕ್ಕು ಸಚಿವ ಹೆಚ್ಡಿ ಕುಮಾರಸ್ವಾಮಿ (HD Kumaraswamy) ಟೊಂಕ ಕಟ್ಟಿ ನಿಂತಿದ್ದಾರೆ.
ಉಡುಗೊರೆಯಾಗಿ ನೀಡಲು ಹೆಚ್ಎಮ್ಟಿ ವಾಚ್ನ್ನೇ ಆಯ್ಕೆ ಮಾಡಿ ಎಂದು ಹೆಚ್ಡಿ ಕುಮಾರಸ್ವಾಮಿ ಅವರು ಕರ್ನಾಟಕದ ಸಂಸದರಿಗೆ ಕರೆಕೊಟ್ಟಿದ್ದಾರೆ. ಗೌರಿ ಗಣೇಶ ಹಬ್ಬದ ಪ್ರಯುಕ್ತ ಹೆಚ್ಡಿ ಕುಮಾರಸ್ವಾಮಿ ಅವರು ತಮ್ಮ ಪುತ್ರ ನಿಖಿಲ್ ಕುಮಾರಸ್ವಾಮಿಗೆ ಎಚ್‌ಎಂಟಿ ವಾಚ್ ಉಡುಗೊರೆಯಾಗಿ ನೀಡಿದ್ದರು.
ಈ ಕುರಿತು ಜೆಡಿಎಸ್ ಯುವ ನಾಯಕ ನಿಖಿಲ್ ಕುಮಾರಸ್ವಾಮಿ ಟ್ವೀಟ್ ಮಾಡಿ, “HMT ಕೈಗಡಿಯಾರ ಒಂದು ಕಾಲದಲ್ಲಿ ಭಾರತದ ಹೃದಯ ಬಡಿತವಾಗಿತ್ತು. ಎಲ್ಲರ ಪಾಲಿಗೂ ಅದು ನಿತ್ಯನಾಡಿಯಾಗಿತ್ತು. ನಮ್ಮ ತಲೆಮಾರಿನ ಯುವಜನರಿಗೆ HMT ವಾಚ್ ಎಂದರೆ ಅದೊಂದು ದಂತಕಥೆ. ನನ್ನ ತಂದೆ, ಹೆಚ್.ಡಿ.ಕುಮಾರಸ್ವಾಮಿ ಅವರು ಗೌರಿಹಬ್ಬದ ದಿನದಂದು HMT ಕೈಗಡಿಯಾರ ಖರೀದಿಸಿ ನನ್ನ ಕೈಗೆ ಕಟ್ಟಿದರು” ಯುವ ಜನರು ನಮ್ಮ ನಾಡಿನ ಹೆಮ್ಮೆಯ ಪ್ರತೀಕವಾದ HMT ಕೈಗಡಿಯಾರಗಳನ್ನೇ ಕಟ್ಟಬೇಕು ಎಂಬುದು ನನ್ನ ವಿನಂತಿ. ನಾನು HMT ಕೈಗಡಿಯಾರ ಕಟ್ಟಿದ್ದೇನೆ, ನೀವೂ ಕಟ್ಟಿ”. ಎಂದು ಕರೆ ಕೊಟ್ಟಿದ್ದಾರೆ.
ಇದನ್ನೂ ಓದಿ: ಕೋವಿಡ್ ಹಗರಣ ತನಿಖಾ ವರದಿ ಮಾತ್ರವಲ್ಲ, ಕೆಂಪಣ್ಣ ಆಯೋಗದ ವರದಿ ಬಗ್ಗೆಯೂ ಸಂಪುಟದಲ್ಲಿ ಚರ್ಚಿಸಲಿ: ಕುಮಾರಸ್ವಾಮಿ
ಮಧ್ಯಪ್ರದೇಶದ ಖಾಂಡ್ವಾ ಕ್ಷೇತ್ರದ ಲೋಕಸಭಾ ಸಂಸದ ಜ್ಞಾನೇಶ್ವರ್ ಪಾಟೀಲ್ ಅವರು ನನಗೆ (ಹೆಚ್ಡಿ ಕುಮಾರಸ್ವಾಮಿ) ಒಂದು ಜೊತೆ ಎಚ್‌ಎಂಟಿ ವಾಚ್‌ಗಳನ್ನು ಉಡುಗೊರೆಯಾಗಿ ನೀಡಿದ್ದರು. ಮತ್ತು ಕಂಪನಿಯನ್ನು ಪುನರುಜ್ಜೀವನಗೊಳಿಸಲು ಕ್ರಮಕೈಗೊಳ್ಳುವಂತೆ ಕೇಳಿಕೊಂಡರು ಎಂದು ಹೆಚ್ಡಿ ಕುಮಾರಸ್ವಾಮಿ ಹೇಳಿದರು.
ಹೆಚ್ಡಿ ಕುಮಾರಸ್ವಾಮಿ ಅವರು ಕೇಂದ್ರ ಸಚಿವರಾದ ಬಳಿಕ, ಜೆಡಿಎಸ್ ಶಾಸಕ ಸುರೇಶ್‌ಬಾಬು ಹೆಚ್ಎಮ್ಟಿ ಕೈಗಡಿಯಾರವನ್ನು ಉಡುಗೊರೆಯಾಗಿ ನೀಡಿದ್ದರು.
ಕಂಪನಿಯ ಕಳೆದುಹೋದ ವೈಭವವನ್ನು ಪುನರುಜ್ಜೀವನಗೊಳಿಸಲು ಹೆಚ್ಡಿ ಕುಮಾರಸ್ವಾಮಿ ಅವರು ಪಣ ತೊಟ್ಟಿದ್ದಾರೆ. ಆ ನಿಟ್ಟಿನಲ್ಲಿ ಹೆಚ್ಡಿ ಕುಮಾರಸ್ವಾಮಿ ಅವರು ಬೆಂಗಳೂರು, ಹೈದರಾಬಾದ್, ಅಜ್ಮೀರ್ ಮತ್ತು ಕೇರಳದ ಎಚ್‌ಎಂಟಿಯ ಎಲ್ಲ ಘಟಕಗಳಿಗೆ ಭೇಟಿ ನೀಡಿದ್ದಾರೆ. ಕುಮಾರಸ್ವಾಮಿ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹೆಚ್ಎಮ್ಟಿ ಕೈಗಡಿಯಾರವನ್ನು ಉಡುಗೊರೆಯಾಗಿ ನೀಡಲು ಮುಂದಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:23 pm, Sat, 7 September 24