ಚಿನ್ನ ವಂಚನೆ ಕೇಸ್: ಐಶ್ವರ್ಯ ಗೌಡಗೆ ಸಂಬಂಧಿಸಿದ ಕೋಟ್ಯಾಂತರ ರೂಪಾಯಿ ಮೌಲ್ಯದ ಆಸ್ತಿ ಮುಟ್ಟುಗೋಲು
ಚಿನ್ನಾಭರಣ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಐಶ್ವರ್ಯ ಗೌಡಗೆ ಸಂಬಂಧಿಸಿದ ಕೋಟ್ಯಾಂತರ ರೂಪಾಯಿ ಮೌಲ್ಯದ ಸ್ಥಿರಾಸ್ತಿ ಮತ್ತು ಚರಾಸ್ತಿಯನ್ನು ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ಮುಟ್ಟುಗೋಲು ಹಾಕಿಕೊಂಡಿದ್ದಾರೆ. ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಇದೇ ವರ್ಷ ಏಪ್ರಿಲ್ 24 ರಂದು ಐಶ್ವರ್ಯ ಗೌಡ ಅವರ ನಿವಾಸ ಮತ್ತು ಫ್ಲಾಟ್ ಮೇಲೆ ಮಾಡಿ, ಶೋಧ ನಡೆಸಿದ್ದರು. ಇದೀಗ ಅಧಿಕಾರಿಗಳು ಆಸ್ತಿ ಮುಟ್ಟುಗೋಲು ಹಾಕಿಕೊಂಡಿದ್ದಾರೆ.

ಬೆಂಗಳೂರು, ಜೂನ್ 23: ಕೋಟ್ಯಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ವಂಚಿಸಿದ ಆರೋಪ ಹೊತ್ತಿರುವ ಐಶ್ವರ್ಯಾ ಗೌಡ (Aishwarya Gowda) ಅವರಿಗೆ ಸಂಬಂಧಿಸಿದ 3.98 ಕೋಟಿ ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶನಾಲಯ (ED) ಮುಟ್ಟುಗೋಲು ಹಾಕಿಕೊಂಡಿದೆ. ಐಶ್ವರ್ಯಗೌಡ ಅವರಿಗೆ ಸೇರಿದ ಅಂದಾಜು 2.01 ಕೋಟಿ ರೂ. ಸ್ಥಿರಾಸ್ತಿ ಮತ್ತು ಅಂದಾಜು 1.97 ಕೋಟಿ ರೂ. ಮೌಲ್ಯದ ಚರಾಸ್ತಿಗಳನ್ನು ತಾತ್ಕಾಲಿಕವಾಗಿ ಮುಟ್ಟುಗೋಲು ಹಾಕಿಕೊಂಡಿದೆ. ಐಶ್ವರ್ಯಗೌಡ ಅವರಿಗೆ ಸಂಬಂಧಿಸಿದ ಒಟ್ಟು 3.98 ಕೋಟಿ ರೂ. ಆಸ್ತಿಯನ್ನು ಇಡಿ ಅಧಿಕಾರಿಗಳು ಮುಟ್ಟುಗೋಲು ಹಾಕಿಕೊಂಡಿದ್ದಾರೆ.
ಐಶ್ವರ್ಯ ಗೌಡ ನಿವಾಸದ ಮೇಲೆ ಇಡಿ ದಾಳಿ
ಐಶ್ವರ್ಯ ಗೌಡ ಅವರ ನಿವಾಸ ಮತ್ತು ಗೊರಗುಂಟೆಪಾಳ್ಯದಲ್ಲಿರುವ ಫ್ಲಾಟ್ ಮೇಲೆ ಇಡಿ ಅಧಿಕಾರಿಗಳು ಏಪ್ರಿಲ್ 24 ರಂದು ದಾಳಿ ಮಾಡಿದ್ದರು. ಐಶ್ವರ್ಯ, ಆಕೆಯ ಪತಿ ಹರೀಶ್ ಮತ್ತು ಇತರರ ವಿರುದ್ಧ ತನಿಖೆ ನಡೆಸಿದ್ದ ಇಡಿ ಆರೋಪಿಗಳು ಹೆಚ್ಚಿನ ಲಾಭ ನೀಡುವುದಾಗಿ ಹಣ ಪಡೆದಿದ್ದರು. ಆದರೆ ಪಡೆದ ಹಣವನ್ನ ವಾಪಸ್ ನೀಡದೆ ವಂಚಿದ್ದರು. ಆರೋಪಿಗಳ ವಿರುದ್ಧ ಹಣ ನೀಡಿದವರಿಗೆ ದೊಡ್ಡ ರಾಜಕಾರಣಿಗಳ ಹೆಸರು ಹೇಳಿ ಬೆದರಿಕೆ ಹಾಕಿದ್ದ ಆರೋಪ ಇತ್ತು.
ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ಇಡಿ ತನಿಖೆ ನಡೆಸುತ್ತಿದೆ. ಪ್ರಕರಣ ಸಂಬಂಧ ಆರೋಪಿಗಳಿಗೆ ಸಂಬಂಧಿಸಿದ ಸ್ಥಳಗಳ ಮೇಲೆ ಇಡಿ ದಾಳಿ ಮಾಡಿತ್ತು. ದಾಳಿ ವೇಳೆ ಅಕ್ರಮ ಹಣ ವರ್ಗಾವಣೆ ಸಂಬಂಧ ದಾಖಲೆಗಳು ಸಿಕ್ಕಿದ್ದವು. ತನಿಖೆ ವೇಳೆ ಅಕ್ರಮ ಹಣ ವರ್ಗಾವಣೆ ಕಂಡುಬಂದ ಹಿನ್ನೆಲೆಯಲ್ಲಿ ಐಶ್ವರ್ಯ ಮತ್ತು ಇತರರಿಗೆ ಸಂಬಂಧಿಸಿದ ಆಸ್ತಿಗಳನ್ನು ಇಡಿ ಮುಟ್ಟುಗೋಲು ಹಾಕಿಕೊಂಡಿದೆ.
ಐಶ್ವರ್ಯ ಗೌಡಗೆ ಜಾಮೀನು
ಬೆಂಗಳೂರು ನಗರ ಸೆಷನ್ಸ್ ನ್ಯಾಯಾಲಯ ಐಶ್ವರ್ಯಾ ಗೌಡ ಅವರಿಗೆ ಷರತ್ತುಬದ್ಧ ಜಾಮೀನು ನೀಡಿತ್ತು. ನ್ಯಾಯಾಲಯ ಐಶ್ವರ್ಯ ಗೌಡ ಅವರಿಗೆ ಐದು ಲಕ್ಷ ರೂ. ಮೌಲ್ಯದ ಶ್ಯೂರಿಟಿ ಬಾಂಡ್ ಹಾಗೂ ಹಲವು ಷರತ್ತುಗಳನ್ನು ವಿಧಿಸಿತ್ತು.
ED, Bengaluru has provisionally attached properties worth 3.98 Crore (approx.) in the form of flats, constructed building and land having value of Rs. 2.01 Crore (approx.) and movable properties in the form of cash and vehicle worth Rs. 1.97 Crore (approx.) under the PMLA, 2002…
— ED (@dir_ed) June 23, 2025
ಏನಿದು ಪ್ರಕರಣ?
ಚಿನ್ನ ಹೂಡಿಕೆಗೆ ದುಪ್ಪಟ್ಟು ಲಾಭ ಕೊಡುವುದಾಗಿ ನಂಬಿಸಿ ಹಲವು ಮಂದಿಗೆ ಐಶ್ವರ್ಯ ಗೌಡ ವಂಚಿಸಿದ ಪ್ರಕರಣ ದಾಖಲಾಗಿತ್ತು. ಮಾಜಿ ಸಂಸದ ಡಿ.ಕೆ.ಸುರೇಶ್ ಅವರ ಹೆಸರನ್ನು ದುರುಪಯೋಗಪಡಿಸಿಕೊಂಡು ಅಕ್ರಮ ಎಸಗಿದ್ದಾರೆ ಎಂದು ತನಿಖೆ ವೇಳೆ ಬಹಿರಂಗವಾಗಿತ್ತು. ಅಕ್ರಮ ಹಣ ವರ್ಗಾವಣೆ ಪ್ರಕರಣದ ತನಿಖೆ ನಡೆಸಿದ್ದ ಇಡಿ ಐಶ್ವರ್ಯ ಗೌಡ ಅವರನ್ನು ಏಪ್ರಿಲ್ 24 ರಂದು ಬಂಧಿಸಿತ್ತು. ಐಶ್ವರ್ಯ ಗೌಡ ಒಂದು ತಿಂಗಳು ಪರಪ್ಪನ ಅಗ್ರಹಾರದಲ್ಲಿದ್ದರು. ಐಶ್ವರ್ಯ ಗೌಡ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿದ್ದ ನಾಯ್ಯಾಲಯ ಷರತ್ತುಬದ್ಧ ಜಾಮೀನು ನೀಡಿತ್ತು.
ಇದನ್ನೂ ನೋಡಿ: ಐಶ್ವರ್ಯ ಗೌಡ ವಂಚನೆ ಪ್ರಕರಣ ಮತ್ತು ಡಿಕೆ ಸುರೇಶ್ ನಡುವೆ ಯಾವುದೇ ಸಂಬಂಧವಿಲ್ಲ: ಡಿಕೆ ಶಿವಕುಮಾರ್
ಡಿಕೆ ಸುರೇಶ್ ವಿಚಾರಣೆ
ಐವಶ್ವರ್ಯ ಗೌಡ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಅಧಿಕಾರಿಗಳು ಕಾಂಗ್ರೆಸ್ನ ಮಾಜಿ ಸಂಸದ ಡಿಕೆ ಸುರೇಶ್ ಅವರನ್ನು ವಿಚಾರಣೆ ನಡೆಸಿದರು. ಬೆಂಗಳೂರಿನ ಶಾಂತಿನಗರದಲ್ಲಿರುವ ಇಡಿ ಕಚೇರಿಯಲ್ಲಿ ವಿಚಾರಣೆ ನಡೆದಿದ್ದು, ಅಧಿಕಾರಿಗಳು ಡಿಕೆ ಸುರೇಶ್ ಅವರ ಬ್ಯಾಂಕ್ ದಾಖಲೆ, ಐಶ್ವರ್ಯ ಪರಿಚಯ, ಇಬ್ಬರ ನಡುವೆ ಹಣಕಾಸು ವ್ಯವಹಾರ ಇದೆಯಾ? ಎಂಬುವುದರ ಬಗ್ಗೆ ವಿಚಾರಣೆ ನಡೆಸಿದ್ದಾರೆ ಎಂದು ಮೂಲಗಳಿಂದ ಮಾಹಿತಿ ತಿಳಿದು ಬಂದಿದೆ. ಐಶ್ವರ್ಯ ಗೌಡ ಅವರು ನೀಡಿದ ಹೇಳಿಕೆಗಳನ್ನು ಆಧರಿಸಿ ಇಡಿ ಅಧಿಕಾರಿಗಳು ಡಿಕೆ ಸುರೇಶ್ ಅವರನ್ನು ವಿಚಾರಣೆಗೆ ಒಳಪಡಿಸಿದ್ದರು.
ವರದಿ: ಪ್ರದೀಪ್ ಚಿಕ್ಕಾಟಿ
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:27 pm, Mon, 23 June 25