ಐಶ್ವರ್ಯಾಗೌಡ ವಂಚನೆ ಕೇಸ್: ಡಿಕೆ ಸುರೇಶ್ ವಿಚಾರಣೆ ನಡೆಸಿದ ಇಡಿ
ಐಶ್ವರ್ಯಾ ಗೌಡ ವಂಚನೆ ಪ್ರಕರಣದಲ್ಲಿ ಮಾಜಿ ಕಾಂಗ್ರೆಸ್ ಸಂಸದ, ಬಮೂಲ್ ಅಧ್ಯಕ್ಷ ಡಿಕೆ ಸುರೇಶ್ ಸೋಮವಾರ ಬೆಂಗಳೂರಿನಲ್ಲಿ ಜಾರಿ ನಿರ್ದೇಶನಾಲಯ (ಇಡಿ) ವಿಚಾರಣೆಗೆ ಹಾಜರಾದರು. ಕೇಸ್‌ಗೂ ತಮಗೂ ಸಂಬಂಧ ಇಲ್ಲ ಎಂದು ಅವರು ಹೇಳಿದರೆ, ಇಡಿಯನ್ನು ಎದುರಿಸಲು ನಮ್ಮ ಕುಟುಂಬ ಸಿದ್ಧವಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ.

ಬೆಂಗಳೂರು, ಜೂನ್ 23: ಮಾಜಿ ಸಂಸದ ಡಿಕೆ ಸುರೇಶ್ (DK Suresh) ಹೆಸರು ಹೇಳಿಕೊಂಡು ಐಶ್ವರ್ಯಾ ಗೌಡ ವಂಚನೆ ಮಾಡಿರುವ ಪ್ರಕರಣ ಮತ್ತೆ ಮುನ್ನಲೆಗೆ ಬಂದಿದೆ. ಪ್ರಕರಣ ಸಂಬಂಧ ಡಿಕೆ ಸುರೇಶ್‌ಗೂ ಇಡಿ (ED) ನೋಟಿಸ್ ಜಾರಿ ಮಾಡಿತ್ತು. ಕಳೆದ ಮಂಗಳವಾರ ನೋಟಿಸ್ ನೀಡಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿತ್ತು. ಅದರಂತೆ ಕೆಲ ಸಮಯ ಕಾಲಾವಕಾಶ ಕೇಳಿದ್ದ ಸುರೇಶ್, ಸೋಮವಾರ ವಿಚಾರಣೆಗೆ ಹಾಜರಾದರು.
ವಿಚಾರಣೆ ವಿಳಂಬ: ಏರುಧ್ವನಿಯಲ್ಲಿ ಪ್ರಶ್ನಿಸಿದ ಸುರೇಶ್
ಸೋಮವಾರ ಬೆಳಗ್ಗೆ 11 ಗಂಟೆಗೆ ವಿಚಾರಣೆಗೆ ಬರುವಂತೆ ಇಡಿ ಸೂಚಿಸಿತ್ತು. ಆದರೆ, ಡಿಕೆ ಸುರೇಶ್ 11.15ಕ್ಕೆ ವಿಚಾರಣೆಗೆ ಹಾಜರಾದರು. ಲೇಟ್ ಆಗಿದ್ದಕ್ಕೆ ಕಚೇರಿ ಹೊರಗಡೆಯೇ ಡಿಕೆ ಸುರೇಶ್‌ರನ್ನು ಕೂರಿಸಲಾಗಿತ್ತು. ರಿಜಿಸ್ಟರ್‌ನಲ್ಲಿ ಸಹಿ ಮಾಡುವಂತೆ ಸೂಚಿಸಲಾಗಿತ್ತು. ಸಹಿ ಮಾಡಿದ ಬಳಿಕವೂ ಕಚೇರಿ ಸುರೇಶ್‌ರನ್ನು ಒಳಗೆ ಬಿಡಲು ಇಡಿ ಅಧಿಕಾರಿಗಳು ವಿಳಂಬ ಮಾಡಿದರು. ಈ ವೇಳೆ ಸುರೇಶ್, ಏರು ಧ್ವನಿಯಲ್ಲೇ ಪ್ರಶ್ನಿಸಿದ್ದಾರೆ. ಇಡಿ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ವಂಚನೆ ಪ್ರಕರಣಕ್ಕೂ ನನಗೂ ಸಂಬಂಧ ಇಲ್ಲ: ಡಿಕೆ ಸುರೇಶ್
ವಿಚಾರಣೆಗೆ ಆಗಮಿಸುವ ಮುನ್ನ ಮಾತನಾಡಿದ ಡಿಕೆ ಸುರೇಶ್, ವಂಚನೆ ಕೇಸ್‌ಗೂ ನನಗೂ ಸಂಬಂಧವಿಲ್ಲ ಎಂದಿದ್ದಾರೆ. ತನಿಖೆಗೆ ಸಹಕಾರ ಕೊಡುತ್ತೇನೆ ಎಂದಿದ್ದಾರೆ.
ಇಡಿ ಎದುರಿಸಲು ನಮ್ಮ ಕುಟುಂಬ ಸಿದ್ಧ: ಡಿಕೆ ಶಿವಕುಮಾರ್
ಡಿಕೆ ಸುರೇಶ್ ಇಡಿ ವಿಚಾರಣೆ ಬಗ್ಗೆ ಪ್ರತಿಕ್ರಿಯಿಸಿದ ಡಿಸಿಎಂ ಡಿಕೆ ಶಿವಕುಮಾರ್, ನಮ್ಮ ಕುಟುಂಬ ಇಡಿಯನ್ನು ಎದುರಿಸಲು ಸಿದ್ಧವಾಗಿದೆ. ಡಿ.ಕೆ ಸುರೇಶ್ ವಿಚಾರಣೆಗೆ ಸ್ಪಂದಿಸ್ತಾರೆ ಎಂದಿದ್ದಾರೆ.
ಇದನ್ನೂ ಓದಿ: ಯಾರೋ ಒಬ್ಬ ಮಿಮಿಕ್ರಿ ಕಲಾವಿದ ನನ್ನ ಧ್ವನಿಯನ್ನು ಅನುಕರಿಸಿ ಮಾತಾಡಿರುವಂತಿದೆ: ಡಿಕೆ ಸುರೇಶ್
ಬೆಂಗಳೂರಿನ ಶಾಂತಿನಗರ ಇಡಿ ಕಚೇರಿಯಲ್ಲಿ ಡಿ.ಕೆ ಸುರೇಶ್ ವಿಚಾರಣೆ ನಡೆದಿದೆ. 100 ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗಿತ್ತು.