ಮಂಗಳೂರು: ಹಲವು ಅತ್ಯಾಚಾರ, ಕೊಲೆ ಪ್ರಕರಣದಲ್ಲಿ ಶವ ಹೂತುಹಾಕಿದ್ದೆ ಎಂದು ಶರಣಾಗಲು ಮುಂದಾದ ವ್ಯಕ್ತಿ!
ದಕ್ಷಿಣ ಕನ್ನಡ ಜಿಲ್ಲೆಯ ಗ್ರಾಮವೊಂದರಲ್ಲಿ ನಡೆದಿರುವ ಹಲವು ಅತ್ಯಾಚಾರ ಮತ್ತು ಕೊಲೆಗಳನ್ನು ಮುಚ್ಚಿಹಾಕಲು ಮೃತದೇಹಗಳನ್ನು ಹೂಳಲಾಗಿದೆ ಎಂದು ಹೇಳಿಕೊಂಡಿರುವ ವ್ಯಕ್ತಿಯೊಬ್ಬ ಶರಣಾಗುವುದಾಗಿ ತಿಳಿಸಿರುವ ಪತ್ರವೊಂದು ವೈರಲ್ ಆಗಿದೆ. ವಕೀಲರ ಪತ್ರದ ಮೂಲಕ ಈ ವಿಷಯ ತಿಳಿದುಬಂದಿದ್ದು, ಪೊಲೀಸರು ವಕೀಲರನ್ನು ಸಂಪರ್ಕಿಸಿದ್ದಾರೆ. ಈ ಬೆಳವಣಿಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆತಂಕ ಸೃಷ್ಟಿಸಿದೆ. ಈ ವಿಚಾರವಾಗಿ ಪೊಲೀಸರು ನೀಡಿರುವ ಮಾಹಿತಿ ಇಲ್ಲಿದೆ.

ಮಂಗಳೂರು, ಜೂನ್ 23: ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಗ್ರಾಮವೊಂದರಲ್ಲಿ ನಡೆದಿರುವ ಹಲವು ಅತ್ಯಾಚಾರ ಮತ್ತು ಕೊಲೆ ಪ್ರಕರಣಗಳನ್ನು ಮುಚ್ಚಿಹಾಕುವುದಕ್ಕಾಗಿ ಮೃತದೇಹಗಳನ್ನು ಹೂತು ಹಾಕಿದ್ದೆ ಎಂದು ಹೇಳಿಕೊಂಡಿರುವ ವ್ಯಕ್ತಿಯೊಬ್ಬ ಪೊಲೀಸರಿಗೆ ಶರಣಾಗಲು ಮುಂದಾಗಿದ್ದಾನೆ. ಈ ಸಂಬಂಧ ವಕೀಲರೊಬ್ಬರ ಬಳಿ ವಿಚಾರ ವಿನಿಮಯ ಮಾಡಿಕೊಂಡಿರುವ ವ್ಯಕ್ತಿ, ಪೊಲೀಸರ ಸಮ್ಮುಖದಲ್ಲಿ ಶವಗಳನ್ನು ಹೊರತೆಗೆಯಲು ನಿರ್ಧರಿಸಿರುವುದಾಗಿ ಹೇಳಿಕೊಂಡಿದ್ದಾನೆ.
ಆರೋಪಿ ಶರಣಾಗತಿಗೆ ಒಪ್ಪಿಕೊಂಡಿರುವ ಬಗ್ಗೆ ವಕೀಲರು ಬಿಡುಗಡೆ ಮಾಡಿದ ಮಾಹಿತಿ ಪತ್ರವೊಂದು ವೈರಲ್ ಆಗಿದ್ದು, ಈ ವಿಚಾರವಾಗಿ ಅಡ್ವೋಕೇಟ್ ಅನ್ನು ಸಂಪರ್ಕಿಸಿ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರು ಮಾಹಿತಿ ಪಡೆದಿದ್ದಾರೆ.
ವೈರಲ್ ಆಗಿರುವ ಪತ್ರದಲ್ಲೇನಿದೆ?
‘‘ಗ್ರಾಮವೊಂದರಲ್ಲಿ ನಡೆದಿರುವ ಹಲವಾರು ಹತ್ಯೆ, ಹೆಣ್ಣು ಮಕ್ಕಳ ಮೇಲಿನ ಅತ್ಯಾಚಾರ ಮತ್ತು ಕೊಲೆಗಳನ್ನು ಮುಚ್ಚಿಹಾಕುವ ಸಲುವಾಗಿ, ಮೃತ ದೇಹಗಳನ್ನು ಹೂತು ಹಾಕಿದ್ದ ವ್ಯಕ್ತಿಯೊಬ್ಬ ತನ್ನ ಪಾಪಪ್ರಜ್ಞೆಯನ್ನು ಪರಿಹರಿಸಿಕೊಳ್ಳಲು ಪೊಲೀಸ್ ಠಾಣೆಗೆ ಕೂಡಲೇ ಹಾಜರಾಗಿ ಶರಣಾಗುವ ನಿರ್ಧಾರ ಮಾಡಿರುತ್ತಾನೆ. ಮತ್ತು, ತಾನು ಹೂತು ಹಾಕಿರುವ ಮೃತದೇಹಗಳನ್ನು ಪೋಲೀಸರ ಸಮ್ಮುಖದಲ್ಲಿ ಹೊರತೆಗೆಯುವ ನಿರ್ಧಾರ ಮಾಡಿರುತ್ತಾನೆ. ಇತ್ತೀಚೆಗೆ ಹೊರ ತೆಗೆದ ಕಳೇಬರವೊಂದುನ್ನು ಪೋಲೀಸರಿಗೆ ಒಪ್ಪಿಸುವುದಾಗಿ ಹೇಳಿದ್ದಾನೆ. ಇದು ಸಾರ್ವಜನಿಕ ಮಾಹಿತಿಗಾಗಿ’’ ಎಂದು ನಾಗರಾಜ್ ಪಿಎನ್, ಓಜಸ್ವಿ ಗೌಡ ಹಾಗೂ ಸಚಿನ್ ಎಸ್ ದೇಶಪಾಂಡೆ ಎಂಬವರ ಸಹಿಯುಳ್ಳ ಪತ್ರ ವೈರಲ್ ಆಗಿದೆ.
ಪೊಲೀಸರು ಹೇಳಿದ್ದೇನು?
ಗ್ರಾಮವೊಂದರಲ್ಲಿ ನಡೆದಿರುವ ಅಪರಾಧ ಕೃತ್ಯಗಳ ಬಗ್ಗೆ, ವ್ಯಕ್ತಿಯೊಬ್ಬ ಠಾಣೆಗೆ ಬಂದು ಮಾಹಿತಿ ನೀಡುವುದಾಗಿ ಬರವಣಿಗೆ ಇರುವ ಪತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾಗಿರುವುದು ಕಂಡುಬಂದಿರುತ್ತದೆ. ಈ ಪತ್ರದ ನೈಜತೆಯನ್ನು ಪರಿಶೀಲಿಸುವ ಸಲುವಾಗಿ, ಪತ್ರದಲ್ಲಿ ನಮೂದಿಸಲಾಗಿದ್ದ ಬೆಂಗಳೂರಿನ ವಕೀಲರಿಗೆ ದಕ್ಷಿಣ ಕನ್ನಡ ಪೊಲೀಸರು ಸಂಪರ್ಕಿಸಿದಾಗ, ವಕೀಲರು ವ್ಯಕ್ತಿಯೋರ್ವ ತನ್ನ ಬಳಿ ಬಂದು ಗ್ರಾಮವೊಂದರಲ್ಲಿ ನಡೆದಿರುವ ಅಪರಾಧ ಕೃತ್ಯಗಳ ಬಗ್ಗೆ ತನಗೆ ಮಾಹಿತಿ ಇರುವುದಾಗಿ ಹಾಗೂ ತಾನು ಪೊಲೀಸ್ ಠಾಣೆಗೆ ಶರಣಾಗಿ ಮಾಹಿತಿಯನ್ನು ನೀಡಲು ಸಿದ್ದವಿರುವುದಾಗಿ ತಿಳಿಸಿರುತ್ತಾರೆ. ಆ ವ್ಯಕ್ತಿಗೆ ಅಗತ್ಯವಾದ ಕಾನೂನು ಸುರಕ್ಷತೆಯನ್ನು ಕಲ್ಪಿಸಿ, ಆ ಬಳಿಕ ಆತನನ್ನು ಹಾಜರುಪಡಿಸುವುದಾಗಿ ವಕೀಲರು ತಿಳಿಸಿರುತ್ತಾರೆ ಎಂದು ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: ಮಂಗಳೂರು: ಅಪಾಯ ಆಹ್ವಾನಿಸುವ ರನ್ವೇ, ವಿಮಾನ ದುರಂತ ಸಂಭವಿಸಿ 15 ವರ್ಷವಾದರೂ ಈಡೇರಿಲ್ಲ ವಿಸ್ತರಣೆ ಬೇಡಿಕೆ
ಅದರಂತೆ ಆ ವ್ಯಕ್ತಿ ಹಾಜರಾಗಿ ಮಾಹಿತಿ ನೀಡಿದಲ್ಲಿ, ಮುಂದಿನ ಕಾನೂನುಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಭರವಸೆ ನೀಡಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:07 pm, Mon, 23 June 25







