ಮೊಟ್ಟೆ ಸರಬರಾಜಿನಲ್ಲೂ ಭಾರಿ ಗೋಲ್ಮಾಲ್.. ಕಡಿಮೆ ತೂಕದ ಕಳಪೆ ಮೊಟ್ಟೆ ನೀಡಿ ಹಣ ಲೂಟಿ
ಮಕ್ಕಳ ಆರೋಗ್ಯದ ಹಿತದೃಷ್ಟಿಯಿಂದ ರಾಯಚೂರಿನ ಅಂಗನವಾಡಿಗಳಿಗೆ ಮೊಟ್ಟೆ ಪೂರೈಕೆ ಮಾಡಲಾಗ್ತಿದೆ. ಅದ್ರಂತೆ ಮೊಟ್ಟೆಯೂ ಅಂಗನವಾಡಿ ಮಕ್ಕಳಿಗೆ ಸಿಗುತ್ತಿದೆ. ಇದು ಖುಷಿ ವಿಚಾರವೇ ಸರಿ.. ಆದ್ರೆ, ಪುಟ್ಟ ಪುಟ್ಟ ಮಕ್ಕಳು ಸೇವಿಸುತ್ತಿರೋ ಮೊಟ್ಟೆ ಎಷ್ಟು ಗುಣಮಟ್ಟದ ಮೊಟ್ಟೆ ಅಂತಾ ಪರಿಶೀಲನೆ ಮಾಡಿದ್ರೆ, ಅಚ್ಚರಿ ವಿಷ್ಯ ಬೆಳಕಿಗೆ ಬಂದಿದೆ. ಮೊಟ್ಟೆಯಲ್ಲೂ ಕೋಟಿ ಕೋಟಿ ಕೊಳ್ಳೆ ಹೊಡೆದಿರೋ ಮಾಹಿತಿ ಬಯಲಾಗಿದೆ.
ರಾಯಚೂರು: ಜಿಲ್ಲೆಯಾದ್ಯಂತ ಅಂಗನವಾಡಿ ಕೇಂದ್ರಗಳಿಗೆ ಮೊಟ್ಟೆ ಸರಬರಾಜು ಮಾಡಲಾಗುತ್ತಿದೆ. ಮಕ್ಕಳ ಪೌಷ್ಠಿಕತೆಗೆ, ಆರೋಗ್ಯದ ಹಿತದೃಷ್ಟಿಯಿಂದ ಸರ್ಕಾರ ಪ್ರತಿ ಅಂಗನವಾಡಿ ಕೇಂದ್ರದ ಮಕ್ಕಳಿಗೆ ಮೊಟ್ಟೆಗಳನ್ನ ಪೂರೈಕೆ ಮಾಡುತ್ತಿದೆ. ಕಡ್ಡಾಯವಾಗಿ ಪ್ರತಿ ಮಗುವಿಗೂ 60 ಗ್ರಾಂ ತೂಕದ ಮೊಟ್ಟೆ ನೀಡಬೇಕು. ಆದ್ರೆ ರಾಯಚೂರು ಜಿಲ್ಲೆಯ ಎಲ್ಲಾ ತಾಲೂಕು ಕೇಂದ್ರಗಳಲ್ಲೂ ಕೇವಲ 30 ಗ್ರಾಂ ತೂಕದ ಕಳಪೆ ಗುಣಮಟ್ಟದ ಮೊಟ್ಟೆಗಳು ಪೂರೈಕೆಯಾಗುತ್ತಿದ್ಯಂತೆ. ಹೀಗಾಗಿ ಅಂಗನವಾಡಿ ಮಕ್ಕಳಿಗೆ ಪೂರೈಕೆ ಆಗ್ತಿರೋ ಮೊಟ್ಟೆಯಲ್ಲೂ ಹಣ ಲೂಟಿ ಮಾಡ್ತಿದ್ದಾರೆ ಅಂತಾ ಜನ ಆಕ್ರೋಶ ಹೊರ ಹಾಕ್ತಿದ್ದಾರೆ. ಈ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಜಿಲ್ಲಾ ಪಂಚಾಯಿತಿ ಸಿಇಒಗೆ ಸ್ಥಳೀಯರು ದೂರು ಸಲ್ಲಿಸಿದ್ದಾರೆ.
ಇನ್ನು, ಜಿಲ್ಲೆಯ ದೇವದುರ್ಗ ತಾಲೂಕಿನಲ್ಲಿ ತಾಂಡವಾಡ್ತಿದ್ದ ಮಕ್ಕಳ ಅಪೌಷ್ಠಿಕತೆ ಬಗ್ಗೆ ಈ ಹಿಂದೆ ಟಿವಿ9 ವರದಿ ಮಾಡಿತ್ತು. ಅನ್ನ..ಅನ್ನ..ಅನ್ನ ಅನ್ನೋ ಹೆಸರಿಲ್ಲಿ ಟಿವಿ9 ಅಭಿಯಾನ ಮಾಡಿ, ಸರ್ಕಾರದ ಕಣ್ಣು ತೆರೆಸಿತ್ತು. ಆದ್ರೆ ಈಗ ಅಪೌಷ್ಠಿಕ ಮಕ್ಕಳಿಗೆ ಪೂರೈಕೆ ಮಾಡುವ ಮೊಟ್ಟೆ ಪೂರೈಕೆ ಸ್ಕೀಮ್ನಲ್ಲೂ ಅಕ್ರಮ ನಡೀತಿದ್ಯಂತೆ. ಅದು ಕೂಡ ಜಿಲ್ಲೆಯಾದ್ಯಂತ ಒಂದು ಕೋಟಿ 30 ಲಕ್ಷಕ್ಕೂ ಅಧಿಕ ಮೌಲ್ಯದ ಕಳಪೆ ಗುಣಮಟ್ಟದ ಮೊಟ್ಟೆಗಳನ್ನ ಪೂರೈಕೆ ಮಾಡಿ ಭಾರಿ ಅಕ್ರಮ ಮಾಡ್ಲಾಗಿದೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ. ಈ ಬಗ್ಗೆ ರಾಯಚೂರು ಜಿಲ್ಲಾ ಪಂಚಾಯಿತಿ ಕೂಡ ಗಂಭೀರವಾಗಿ ಪರಿಗಣಿಸಿ, ತನಿಖೆ ನಡೆಸಿ ವರದಿ ನೀಡುವಂತೆ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಆದೇಶಿಸಿದೆ. ಮಾಜಿ ಪುರಸಭೆ ಸದಸ್ಯರು ಕೂಡ ಸೂಕ್ತ ತನಿಖೆ ಆಗ್ಲೇಬೇಕು ಅಂತಾ ಆಗ್ರಹಿಸ್ತಿದ್ದಾರೆ.
ಒಟ್ನಲ್ಲಿ, ರಾಯಚೂರು ಜಿಲ್ಲೆಯಾದ್ಯಂತ ಸರಬರಾಜು ಮಾಡಲಾದ ಮೊಟ್ಟೆಗಳು ಕಳಪೆ ಗುಣಮಟ್ಟದಿಂದ ಕೂಡಿದೆ ಅನ್ನೋದು ಮೇಲ್ನೋಟಕ್ಕೆ ಸಾಬೀತಾಗಿದೆ. ಇನ್ನಾದ್ರೂ ಸರ್ಕಾರ ಎಚ್ಚೆತ್ತುಕೊಂಡು ರಾಯಚೂರು ಜಿಲ್ಲೆಯಲ್ಲಿ ನಡೆಯುತ್ತಿರುವ ಅಧಿಕಾರಿಗಳ ಅಂದಾ ದರ್ಬಾರ್ಗೆ ಕಡಿವಾಣ ಹಾಕಲೇಬೇಕಿದೆ.
ಇದನ್ನೂ ಓದಿ: ಸೈಕಲ್ ಹತ್ತಿ ಬ್ರೆಡ್-ಮೊಟ್ಟೆಗಳನ್ನು ಮಾರಾಟ ಮಾಡಲು ಹೊರಟಿದ್ದಾರೆ ಸೋನು ಸೂದ್! ವಿಡಿಯೋ ನೋಡಿ