ಕರ್ನಾಟಕದ ಜನತೆಗೆ ಗುಡ್ ನ್ಯೂಸ್: ಮುಂದಿನ ಬೇಸಿಗೆಯಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಆಗಲ್ಲ ಎಂದ ತಜ್ಞರು

ಈ ವರ್ಷ ಮುಂಗಾರು ಮಳೆ ಕೃಪೆಯಿಂದ ಕರ್ನಾಟಕದ 14 ಪ್ರಮುಖ ಜಲಾಶಯಗಳು ಶೇ 70 ಕ್ಕಿಂತ ಹೆಚ್ಚು ತುಂಬಿವೆ. ಕಾವೇರಿ ಜಲಾನಯನ ಪ್ರದೇಶದ ಜಲಾಶಯಗಳು ಶೇ 95 ರಷ್ಟು ತುಂಬಿದ್ದು, ಉತ್ತರ ಕರ್ನಾಟಕದ ಕೃಷ್ಣಾ ಜಲಾನಯನ ಪ್ರದೇಶದ ಜಲಾಶಯಗಳು ಸಹ ಶೇ 81 ರಷ್ಟು ಭರ್ತಿಯಾಗಿವೆ. ಇದರಿಂದ ಮುಂದಿನ ಬೇಸಿಗೆಯಲ್ಲಿ ನೀರಿನ ಸಂಕಷ್ಟ ಎದುರಾಗದು ಎಂದು ತಜ್ಞರು ಹೇಳಿದ್ದಾರೆ.

ಕರ್ನಾಟಕದ ಜನತೆಗೆ ಗುಡ್ ನ್ಯೂಸ್: ಮುಂದಿನ ಬೇಸಿಗೆಯಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಆಗಲ್ಲ ಎಂದ ತಜ್ಞರು
ಬೆಳಗಾವಿಯಲ್ಲಿ ಉಕ್ಕಿಹರಿಯುತ್ತಿರುವ ಕೃಷ್ಣಾ ನದಿ

Updated on: Jul 29, 2025 | 2:09 PM

ಬೆಂಗಳೂರು, ಜುಲೈ 29: ಈ ವರ್ಷ ಅವಧಿಗೂ ಮುನ್ನವೇ ಕರ್ನಾಟಕ (Karnataka) ಪ್ರವೇಶಿಸಿರುವ ಮುಂಗಾರು ಮಳೆ (Monsoon Rain ವಾಡಿಕೆಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಸುರಿಯುತ್ತಿದೆ. ನದಿಗಳ ಜಲಾನಯನ ಪ್ರದೇಶಗಳಲ್ಲಿ ಭಾರಿ ಮಳೆಯಾಗುತ್ತಿರುವ ಕಾರಣ ರಾಜ್ಯದ 14 ಪ್ರಮುಖ ಜಲಾಶಯಗಳಲ್ಲಿ ನೀರಿನ ಮಟ್ಟವು ಶೇ 70 ರಷ್ಟು ದಾಟಿದೆ. ಮುಂಗಾರು ಮಳೆಯ ಅವಧಿ ಇನ್ನೂ ಒಂದೂವರೆ ತಿಂಗಳು ಬಾಕಿ ಉಳಿದಿದ್ದು, ಇನ್ನಷ್ಟು ಮಳೆಯಾಗುವ ಮುನ್ಸೂಚನೆ ಇದೆ. ಹೀಗಾಗಿ ಮುಂದಿನ ವರ್ಷ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಂಕಷ್ಟ ಎದುರಾಗದು ಎಂದು ತಜ್ಞರು ತಿಳಿಸಿದ್ದಾರೆ. ಮೂರು ಜಲವಿದ್ಯುತ್ ಸ್ಥಾವರಗಳುಳ್ಳ ಜಲಾಶಯಗಳೂ ಸೇರಿದಂತೆ ರಾಜ್ಯದ ಪ್ರಮುಖ ಜಲಾಶಯಗಳಲ್ಲಿ ಜುಲೈ 28ರ ವೇಳೆಗೆ 715.92 ಟಿಎಂಸಿ ಅಡಿ ನೀರು ಸಂಗ್ರಹವಾಗಿದೆ. ಅವುಗಳ ಒಟ್ಟು ಸಾಮರ್ಥ್ಯ 895.62 ಟಿಎಂಸಿ ಆಗಿದೆ.

ಕಳೆದ ವರ್ಷ ಜುಲೈ 28 ರಂದು ರಾಜ್ಯದ ಅಣೆಕಟ್ಟೆಗಳಲ್ಲಿ 687.37 ಟಿಎಂಸಿ ಅಡಿ ನೀರು ಸಂಗ್ರಹವಾಗಿತ್ತು. ಈ ಬಾರಿ ಒಟ್ಟಾರೆಯಾಗಿ, ಜಲಾಶಯಗಳು ಅವುಗಳ ಸಾಮರ್ಥ್ಯದ ಶೇಕಡಾ 80 ರಷ್ಟು ತುಂಬಿವೆ.

ಕಾವೇರಿ ಜಲಾನಯನ ಪ್ರದೇಶಗಳ ಡ್ಯಾಂಗಳೆಲ್ಲ ಬಹುತೇಕ ಭರ್ತಿ

ಕಾವೇರಿ ಜಲಾನಯನ ಪ್ರದೇಶದಲ್ಲಿರುವ ಜಲಾಶಯಗಳಲ್ಲಿ ಅವುಗಳ ಸಾಮರ್ಥ್ಯದ ಸುಮಾರು ಶೇ 95 ರಷ್ಟು ನೀರು ಈಗಾಗಲೇ ಸಂಗ್ರಹವಾಗಿದೆ. ಹೇಮಾವತಿ ಮತ್ತು ಕೆಆರ್‌ಎಸ್ ಶೇ 97 ರಷ್ಟು ಭರ್ತಿಯಾಗಿವೆ. ಹಳೆಯ ಮೈಸೂರು ಪ್ರದೇಶದ ಜೀವನಾಡಿ ಎಂದು ಪರಿಗಣಿಸಲಾದ ಕೆಆರ್‌ಎಸ್, 1958 ರ ನಂತರ ಮೊದಲ ಬಾರಿಗೆ ಜೂನ್‌ನಲ್ಲಿ ಗರಿಷ್ಠ ಸಾಮರ್ಥ್ಯವನ್ನು ತಲುಪಿತ್ತು. ಒಟ್ಟು ಸಾಮರ್ಥ್ಯ 49.45 ಟಿಎಂಸಿ ಅಡಿಗಳಾಗಿದ್ದು, 47.79 ಟಿಎಂಸಿ ಅಡಿ ನೀರನ್ನು ಸಂಗ್ರಹಿಸಿದೆ.

ಇದನ್ನೂ ಓದಿ
ಕರ್ನಾಟಕದ ಎಲ್ಲ ಭಾಗಗಳಲ್ಲಿ ಧಾರಾಕಾರ ಮಳೆ, ಜಲಾಶಯಗಳು ಭರ್ತಿ
ತುಂಗಭದ್ರಾ ಜಲಾಶದಿಂದ ಏಕಾಏಕಿ ನುಗ್ಗಿ ಬಂದ ನೀರು, ಶ್ವಾನಗಳು ಎಸ್ಕೇಪ್
ತಡೆಗೋಡೆ ಇಲ್ಲದಿದ್ದರೆ ಕಾಲುವೆಯಲ್ಲಿ ಹರಿದು ಹೋಗಬಹುದಾಗಿದ್ದ ಕಾರು
ಸೇತುವೆ ಮೇಲೆ ವಾಹನಗಳ ಸಂಚಾರ ಬಂದ್, ಸವಾರರಿಗೆ ಪರದಾಟ

ಕಾವೇರಿ ಜಲಾನಯನ ಪ್ರದೇಶದಲ್ಲಿ ಹಾರಂಗಿ ಜಲಾಶಯದಲ್ಲಿ ತುಸು ಕಡಿಮೆ ನೀರು ಸಂಗ್ರಹವಾಗಿದ್ದು, ಒಟ್ಟು 8.5 ಟಿಎಂಸಿ ಅಡಿಗಳಲ್ಲಿ ಶೇ 79 ರಷ್ಟು ಭರ್ತಿಯಾಗಿದೆ.ಜಲಾಶಯದ ಒಳಹರಿವಿಗಿಂತ ಹೊರಹರಿವು ಹೆಚ್ಚಿರುವುದರಿಂದ ಸಂಗ್ರಹ ಕಡಿಮೆ ಇದೆ. ಆದರೆ, ಬೇಸಿಗೆಯ ತಿಂಗಳುಗಳಲ್ಲಿ ನೀರಾವರಿ ಮತ್ತು ಕುಡಿಯಲು ಸಾಕಷ್ಟು ನೀರನ್ನು ಸಂಗ್ರಹಿಸಿಟ್ಟುಕೊಳ್ಳುವ ಭರವಸೆ ಇದೆ ಎಂದು ಜಲಾಶಯದ ನಿರ್ವಹಣೆ ಅಧಿಕಾರಿಗಳು ಹೇಳಿದ್ದಾರೆ.

ಇದನ್ನೂ ಓದಿ: ಪಶ್ಚಿಮಘಟ್ಟ ಸಾಲಿನಲ್ಲಿ ನಿಲ್ಲದ ಮಳೆ, ಉಕ್ಕಿ ಹರಿಯುತ್ತಿರುವ ಕೃಷ್ಣೆ, ಕುಡಚಿ-ಉಗಾರ ಸೇತುವೆ ಮುಳುಗಡೆ

ಉತ್ತರ ಕರ್ನಾಟಕದ ಕೃಷ್ಣಾ ಜಲಾನಯನ ಪ್ರದೇಶದಲ್ಲಿ ಆರು ಪ್ರಮುಖ ಜಲಾಶಯಗಳಿದ್ದು, ಅವು ಸುಮಾರು ಶೇ 81 ರಷ್ಟು ತುಂಬಿವೆ. ತುಂಗಭದ್ರಾ ಜಲಾಶಯದಲ್ಲಿ ಹೆಚ್ಚಿನ ಪ್ರಮಾಣದ ಹೂಳು ಸಂಗ್ರಹವಿದ್ದು, ಅದರ ಸಂಗ್ರಹ ಸಾಮರ್ಥ್ಯ 105.79 ಅಡಿಗಳಾಗಿದ್ದು, ಈ ಬಾರಿ 75 ಟಿಎಂಸಿ ಅಡಿಗಳಷ್ಟು ನೀರು ಸಂಗ್ರಹವಾಗಿದೆ. ಕಳೆದ ವರ್ಷ ಜಲಾಶಯದ ಒಂದು ಕ್ರೆಸ್ಟ್​ಗೇಟ್ ತುಂಡಾಗಿದ್ದ ಪರಿಣಾಮ ದುರಂತ ಸಂಭವಿಸಿ ಅಪಾರ ನೀರು ಪೋಲಾಗಿತ್ತು. ಹೀಗಾಗಿ ಮುನ್ನೆಚ್ಚರಿಕಾ ಕ್ರಮವಾಗಿ ಹೆಚ್ಚಿನ ನೀರು ಬಿಡುಗಡೆ ಮಾಡಲಾಗುತ್ತಿದೆ ಎಂದು ಜಲಾಶಯ ಆಡಳಿತ ಮೂಲಗಳು ತಿಳಿಸಿವೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ