ಕೊನೆಗೂ ಬಂತು ಜೂನ್ ತಿಂಗಳ ಗೃಹಲಕ್ಷ್ಮಿ ಹಣ: ಆದರೂ ತಣಿದಿಲ್ಲ ಗೃಹಲಕ್ಷ್ಮಿಯರ ಅಸಮಾಧಾನ
ಕಾಂಗ್ರೆಸ್ ಸರ್ಕಾರದ ಮಹತ್ವಕಾಂಕ್ಷೆಯ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಒಂದಲ್ಲ ಒಂದು ಕಾರಣಕ್ಕೆ ಸುದ್ದಿಯಲ್ಲಿ ಇದ್ದೇ ಇರುತ್ತದೆ. ಇದೀಗ ಎರಡು ತಿಂಗಳ ಹಣ ವರ್ಗಾವಣೆ ಮಾಡುತ್ತೇವೆ ಎಂದು ಭರವಸೆ ನೀಡಿ ಒಂದೇ ತಿಂಗಳ ಹಣ ಬಿಡುಗಡೆ ಮಾಡಲಾಗಿದೆ. ಇದು ಗೃಹಲಕ್ಷ್ಮಿಯರ ಅಸಮಾಧಾನಕ್ಕೆ ಕಾರಣವಾಗಿದೆ.
ಬೆಂಗಳೂರು, ಅಕ್ಟೋಬರ್ 15: ಎರಡು ತಿಂಗಳ ಗೃಹಲಕ್ಷ್ಮಿ ಹಣವನ್ನು ಒಟ್ಟಿಗೇ ಬ್ಯಾಂಕ್ ಖಾತೆಗೆ ವರ್ಗಾವಣೆ ಹಾಕುವುದಾಗಿ ಹೇಳಿದ್ದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಇದೀಗ ಒಂದೇ ತಿಂಗಳ ಹಣ ವರ್ಗಾವಣೆ ಮಾಡಿ ಗೃಹಿಣಿಯರ ಕೆಂಗಣ್ಣಿಗೆ ಗುರಿಯಾಗಿದೆ. ನಮಗೆ ಹಣವೂ ಬೇಡ ನಾವು ಬ್ಯಾಂಕುಗಳಿಗೆ ಅಲೆಯುವುದೂ ಬೇಡ ಎಂದು ಗೃಹಿಣಿಯರು ಸರ್ಕಾರದ ವಿರುದ್ಧ ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ಗೃಹಲಕ್ಷ್ಮಿ ಯೋಜನೆಯ ಮೂರು ತಿಂಗಳ ಹಣ ಬಾಕಿ ಇದ್ದು, ಈ ತಿಂಗಳಲ್ಲಿ ಬಾಕಿ ಇರುವ ಎರಡು ತಿಂಗಳ ಹಣವನ್ನೂ ವರ್ಗಾವಣೆ ಮಾಡಲಾಗುವುದು ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕಾರ್ ಹೇಳಿದ್ದರು. ಆದರೆ ಸದ್ಯ ಗೃಹಲಕ್ಷ್ಮಿಯರ ಖಾತೆಗೆ ಕೇವಲ ಜೂನ್ ತಿಂಗಳ ಹಣ ಮಾತ್ರ ಜಮೆಯಾಗಿದ್ದು, ಜುಲೈ ತಿಂಗಳ ಹಣ ಬರಲಿದೆ ಎಂದುಕೊಂಡಿದ್ದ ಮಹಿಳೆಯರಿಗೆ ನಿರಾಸೆಯಾಗಿದೆ.
ಕಳೆದ 7 ನೇ ತಾರೀಖು ಜೂನ್ ತಿಂಗಳ ಹಣ ಹಾಗೂ 9 ನೇ ತಾರೀಖು ಜುಲೈ ತಿಂಗಳ ಹಣ ಜಮೆಯಾಗಲಿದೆ ಎಂದು ಲಕ್ಷ್ಮೀ ಹೆಬ್ಬಾಳ್ಕಾರ್ ಹೇಳಿದ್ದರು. ಆದರೆ ಈಗ ಕೇವಲ ಒಂದು ತಿಂಗಳ ಹಣ ಬಂದಿದೆ.
ಶೇ 55ರಷ್ಟು ಮಂದಿಗೆ ಮಾತ್ರ ಹಣ ಜಮೆ
ಸದ್ಯ ಗೃಹಲಕ್ಷ್ಮಿ ಯೋಜನೆಯಲ್ಲಿ 1.23 ಲಕ್ಷದಷ್ಟು ಫಲಾನುಭವಿಗಳಿದ್ದಾರೆ. ಇವರಲ್ಲಿ ಸದ್ಯ ಶೇ 55 ರಷ್ಟು ಫಲಾನುಭವಿಗಳ ಖಾತೆಗೆ ಹಣ ಜಮಾವಣೆಯಾಗಿದೆ. ಇನ್ನು ಶೇ 45 ರಷ್ಟು ಮಹಿಳೆಯರಿಗೆ ತಲುಪಬೇಕಾದ ಹಣ ಇನ್ನಷ್ಟೇ ಜಮೆಯಾಗಬೇಕಿದೆ. ಆದರೆ, ಜುಲೈ ತಿಂಗಳ ಹಣವನ್ನು ಈ ತಿಂಗಳೇ ಜಮೆ ಮಾಡುತ್ತೇವೆ ಎಂದು ಭರವಸೆ ನೀಡಿ ಒಂದೇ ತಿಂಗಳ ಹಣ ಹಾಕಿ ಸುಮ್ಮನಾಗಿದೆ ಸರ್ಕಾರ. ಈ ವಾರವಾದರೂ ಎರಡು ತಿಂಗಳ ಹಣ ಒಟ್ಟಿಗೆ ಜಮಾವಣೆಯಾಗುತ್ತದೆಯಾ ಎನ್ನುವ ನಿರೀಕ್ಷೆಯಲ್ಲಿ ಗೃಹಲಕ್ಷ್ಮಿಯರು ಇದ್ದಾರೆ.
ಕೆಲವರಿಗೆ ಒಂದು ತಿಂಗಳ ಹಣ ಬಂದಿದೆ. ಇನ್ನು ಹಲವರಿಗೆ ಆ ಹಣ ಕೂಡ ಬಂದಿಲ್ಲ. ಹೀಗಾಗಿ ಬ್ಯಾಂಕಿಗೆ ಅಲೆದು ಸಾಕಾಗಿದೆ. ನಮಗೆ ಯಾವ ದುಡ್ಡು ಕೂಡ ಬೇಡ ಎಂದು ಫಲಾನುಭವಿ ಅಶ್ವಿನಿ, ನಂಜಮ್ಮ ಎಂಬವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳುವುದೇನು?
ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪ್ರತಿಕ್ರಿಯಿಸಿ, ಎರಡು ಕಂತಿನ ಹಣವನ್ನು ಜಮೆ ಮಾಡಿದ್ದೇವೆ. ಎಲ್ಲಾ ಜಿಲ್ಲೆಯವರಿಗೂ ಈಗಾಗಲೇ ಎರಡು ತಿಂಗಳ ಹಣ ಜಮೆ ಮಾಡಿದ್ದೇವೆ. ನಾವು ಭರವಸೆ ಕೊಟ್ಟಿದ್ದಂತೆಯೇ ಎರಡು ತಿಂಗಳ ಬಿಲ್ ಕ್ಲಿಯರ್ ಮಾಡಿದ್ದೇವೆ. ಹದಿನಾಲ್ಕು ಬಿಲ್ಗಳನ್ನು ಟ್ರಜರಿಗೆ ಹಾಕಲಾಗಿದ್ದು ಡಿಸ್ಪ್ಲೇ ಆಗ್ತಿರಲಿಲ್ಲ. ಎರಡ್ಮೂರು ಲಕ್ಷ ಗೃಹಲಕ್ಷ್ಮಿ ಅವರಿಗೆ ಹೋಗಿರಲಿಲ್ಲ. ಅದು ಕೂಡ ಈಗ ಡಿಸ್ಪ್ಲೇ ಆಗುತ್ತಿದೆ ಎಂಬ ಮಾಹಿತಿ ಬಂದಿದೆ. ಶೀಘ್ರ ಆ ಹಣ ಫಲಾನುಭವಿಗಳ ಖಾತೆಗಳಿಗೆ ಜಮೆಯಾಗಲಿದೆ ಎಂದರು.
1.22 ಕೋಟಿ ಫಲಾನುಭವಿಗಳ ಕುಟುಂಬಕ್ಕೆ ಹಣ ಜಮೆಯಾಗಿದೆ. ಎರಡು ತಿಂಗಳಿಗೆ ಐದು ಸಾವಿರ ಕೋಟಿ ರೂಪಾಯಿ ಹಣ ಬಿಡುಗಡೆ ಮಾಡಿದ್ದೇನೆ. 80,000 ಜನರಿಗೆ ತಾಂತ್ರಿಕ ದೋಷ ಬಂದಿದೆ. ಜೆಎಸ್‌ಟಿ, ಐಟಿ ಅವರಿಂದ ಸಹಕಾರ ಸಿಕ್ಕಿಲ್ಲ. ಹೀಗಾಗಿ ಅವರಿಗೆ ಹಣ ಜಮೆ ಮಾಡಲು ಆಗುತ್ತಿಲ್ಲ. ಆದರೆ, ದಿನಕ್ಕೆ ಇನ್ನೂರು ಮುನ್ನೂರು ಜನರದ್ದು ಸರಿ ಮಾಡುತ್ತಿದ್ದೇವೆ ಎಂದು ಹೆಬ್ಬಾಳ್ಕರ್ ಹೇಳಿದರು.
ಇದನ್ನೂ ಓದಿ: ರಾಜ್ಯಪಾಲ ಗೆಹ್ಲೋಟ್‌ಗೆ ದಿಢೀರ್ Z ಶ್ರೇಣಿಯ ಭದ್ರತೆ, ಅಚ್ಚರಿ ಮೂಡಿಸಿದ ಕೇಂದ್ರದ ನಡೆ
ಒಟ್ಟಿನಲ್ಲಿ ದಸರಾಗೆ ಬ್ಯಾಂಕ್ ಖಾತೆಗೆ ಎರಡು ತಿಂಗಳ ಹಣ ಜಮೆಯಾಗಲಿದೆ ಎಂದುಕೊಂಡಿದ್ದ ಮಹಿಳೆಯರಿಗೆ ನಿರಾಸೆಯಾಗಿದ್ದು, ಒಂದು ತಿಂಗಳ ಹಣವಾದರೂ ಖಾತೆಗೆ ಜಮಾವಣೆ ಆಯಿತಲ್ಲ ಎಂದು ಕೆಲ ಗೃಹಿಣಿಯರು ಖುಷಿ ವ್ಯಕ್ತಪಡಿಸುತ್ತಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ