ಸರ್ಕಾರದ 5 ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ನೇಮಕ, ರೇವಣ್ಣ ಅಧ್ಯಕ್ಷ
ರಾಜ್ಯ, ಜಿಲ್ಲಾ, ತಾಲೂಕು ಹಾಗೂ ವಿಧಾನಸಭೆ ಕ್ಷೇತ್ರ ಮಟ್ಟದಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ರಚನೆ ಮಾಡಲಾಗಿದೆ. ಸಮಿತಿಗೆ ಓರ್ವ ಅಧ್ಯಕ್ಷ ಮತ್ತು ನಾಲ್ವರನ್ನು ಉಪಾಧ್ಯಕ್ಷರನ್ನಾಗಿ ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಇನ್ನು ಅಧ್ಯಕ್ಷರಿಗೆ ಕ್ಯಾಬಿನೆಟ್ ದರ್ಜೆ ಸ್ಥಾನಮಾನ ನೀಡಲಾಗಿದೆ. ಹಾಗಾದ್ರೆ, ಸಮಿತಿಯಲ್ಲಿ ಯಾರೆಲ್ಲಾ ಇದ್ದಾರೆ ಎನ್ನುವ ವಿವರ ಇಲ್ಲಿದೆ.
ಬೆಂಗಳೂರು, (ಫೆಬ್ರವರಿ 28): ಸಿದ್ದರಾಮಯ್ಯ (CM Siddaramaiah)ನೇತೃತ್ವ ಸರ್ಕಾರದ ಮಹತ್ವಾಕಾಂಕ್ಷೆ ಐದು ಗ್ಯಾರಂಟಿ ಯೋಜನೆಗಳ (Congress Guarantee Scheme) ಅನುಷ್ಠಾನ ಸಮಿತಿ (Implementation Committee of Guarantee Schemes) ನೇಮಕ ಮಾಡಿದೆ. ಸಮಿತಿಗೆ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರ ನೇಮಕಕ್ಕೆ ಸಿಎಂ ಸಿದ್ದರಾಮಯ್ಯ ಅವರು ಅನುಮೋದನೆ ನೀಡಿದ್ದು, ಸಚಿವ ಸಂಪುಟ ದರ್ಜೆ ಸ್ಥಾನಮಾನದೊಂದಿಗೆ ಮಾಜಿ ಸಚಿವ ಹೆಚ್.ಎಂ.ರೇವಣ್ಣ ಅವರನ್ನು ಸಮಿತಿ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಇನ್ನು ಉಪಾಧ್ಯಕ್ಷರಾಗಿ ಮೆಹರೋಜ್ ಖಾನ್, ಡಾ.ಪುಷ್ಪಾ ಅಮರನಾಥ್, ಎಸ್.ಆರ್.ಪಾಟೀಲ್, ಸೂರಜ್ ಹೆಗ್ಡೆ ಅವರನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಇದೇ ವೇಳೆ, 44 ಮಂದಿ ನಿಗಮ ಮಂಡಳಿಗಳ ಅಧ್ಯಕ್ಷರ ಪಟ್ಟಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅನುಮೋದಿಸಿದ್ದಾರೆ. ಈ ಪಟ್ಟಿ ಆಯಾ ಇಲಾಖೆಗಳಿಗೆ ರವಾನೆಯಾಗಿದ್ದು, ನಾಳೆ(ಫೆ.29) ಆಯಾ ಇಲಾಖೆಗಳಿಂದ ಪ್ರತಿಯೊಬ್ಬರಿಗೂ ವೈಯುಕ್ತಿಕವಾಗಿ ನೇಮಕ ಆದೇಶ ರವಾನೆಯಾಗಲಿದೆ ಎಂದು ಸಿಎಂ ಕಚೇರಿ ಮಾಹಿತಿ ನೀಡಿದೆ.
ಇದನ್ನೂ ಓದಿ: ರಾಜ್ಯ ಸರ್ಕಾರದಿಂದ ಮತ್ತೊಂದು ಸಿಹಿ ಸುದ್ದಿ: ಗ್ರಾಮ ಸಹಾಯಕರ ವೇತನ ಹೆಚ್ಚಳ
ಕೆಲ ದಿನಗಳ ಹಿಂದೆ ಅಷ್ಟೇ ಕೆಪಿಸಿಸಿ ಕಚೇರಿಯಲ್ಲಿ ನಡೆದ ಕಾಂಗ್ರೆಸ್ ಜಿಲ್ಲಾಧ್ಯಕ್ಷರು, ರಾಜ್ಯ ಪದಾಧಿಕಾರಿಗಳು ಮತ್ತು ಜಿಲ್ಲಾ ಉಸ್ತುವಾರಿ ಸಚಿವರ ಸಭೆಯಲ್ಲಿ ಮಾತನಾಡಿದ್ದ ಸಿಎಂ ಸಿದ್ದರಾಮಯ್ಯ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ರಚನೆ ಮಾಡುವುದಾಗಿ ಹೇಳಿದ್ದು, ರಾಜ್ಯ ಮಟ್ಟದ ಸಮಿತಿ ಅಧ್ಯಕ್ಷರಿಗೆ ಸಂಪುಟ ದರ್ಜೆ ಸ್ಥಾನಮಾನ ನೀಡುವುದಾಗಿ ಘೋಷಣೆ ಮಾಡಿದ್ದರು. ಅಲ್ಲದೇ ರಾಜ್ಯ, ಜಿಲ್ಲಾ, ತಾಲೂಕು ಹಾಗೂ ವಿಧಾನಸಭೆ ಕ್ಷೇತ್ರ ಮಟ್ಟದಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ರಚನೆ ಮಾಡುವುದಾಗಿ ಹೇಳಿದ್ದರು.
ವಾರ್ಷಿಕ 16 ಕೋಟಿ ರೂ. ವೆಚ್ಚ
ಈ ಅನುಷ್ಠಾನ ಸಮಿತಿ ನಿರ್ವಹಣೆಗೆ ವಾರ್ಷಿಕವಾಗಿ 16 ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ. ಗ್ಯಾರಂಟಿ ಯೋಜನೆಗಳ ಸಮರ್ಪಕ ಅನುಷ್ಠಾನದ ಹಿನ್ನೆಲೆಯಲ್ಲಿ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಮಾಹಿತಿ ನೀಡಿದ್ದರು.
ಲೋಕಸಭಾ ಚುನಾವಣೆ ಲೆಕ್ಕಾಚಾರ?
ಈಗ ಸಿಎಂ ಸಿದ್ದರಾಮಯ್ಯ ಅವರು ತೆಗೆದುಕೊಂಡಿರುವ ನಿರ್ಧಾರದ ಹಿಂದೆ ಲೋಕಸಭಾ ಚುನಾವಣೆ ಲೆಕ್ಕಾಚಾರಗಳು ಅಡಗಿವೆ ಎಂದು ಹೇಳಲಾಗುತ್ತಿದೆ. ಕಾರಣ, ಗ್ಯಾರಂಟಿ ಯೋಜನೆಗಳು ಎಷ್ಟರ ಮಟ್ಟಿಗೆ ರಾಜ್ಯದಲ್ಲಿ ಜಾರಿ ಆಗಿದೆ? ಯಾರಿಗೆಲ್ಲ ಈ ಯೋಜನೆ ತಲುಪಿಲ್ಲ? ಜನರಲ್ಲಿ ಗ್ಯಾರಂಟಿ ಯೋಜನೆಗಳ ಬಗ್ಗೆ ಯಾವ ಅಭಿಪ್ರಾಯ ಇದೆ? ಎಂಬೆಲ್ಲ ಮಾಹಿತಿಗಳನ್ನು ಈ ಸಮಿತಿ ಕಲೆ ಹಾಕಲಾಗಿದೆ. ಈ ಮೂಲಕ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಯಾವ ರೀತಿ ತಂತ್ರಗಾರಿಕೆಯನ್ನು ಹೆಣೆಯಬೇಕು ಎಂಬ ಲೆಕ್ಕಾಚಾರದಲ್ಲಿ ಕಾಂಗ್ರೆಸ್ ಚಿಂತನೆ ನಡೆಸಿದೆ ಎನ್ನಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ