ಸಿಡಿ ಆರೋಪಿ ಶ್ರವಣ್ ಸಹೋದರ ನಾಪತ್ತೆ ಪ್ರಕರಣ: ಹೇಬಿಯಸ್ ಕಾರ್ಪಸ್ ಅರ್ಜಿ ಸುಖಾಂತ್ಯ
ಅಕ್ರಮ ಬಂಧನದಲ್ಲಿ ಇಲ್ಲವೆಂದು ಅರ್ಜಿದಾರರೇ ಹೇಳಿರುವ ಕಾರಣ ಹೇಬಿಯಸ್ ಕಾರ್ಪಸ್ ಪ್ರಕರಣ ಸುಖಾಂತ್ಯಗೊಂಡಿದೆ.
ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ಪ್ರಮುಖ ಆರೋಪಿ ಎನ್ನಲಾಗಿರುವ ಶ್ರವಣ್ ಸೋದರ ಚೇತನ್ ನಾಪತ್ತೆಗೆ ಸಂಬಂಧಿಸಿದ ಹೇಬಿಯಸ್ ಕಾರ್ಪಸ್ ಅರ್ಜಿಯನ್ನು ಕರ್ನಾಟಕ ಉಚ್ಛ ನ್ಯಾಯಾಲಯ ವಿಚಾರಣೆ ಮಾಡಿ, ಇತ್ಯರ್ಥ ಪಡಿಸಿದೆ. ಶ್ರವಣ್ ತಂದೆ ಸೂರ್ಯಕುಮಾರ್ ಅವರು ಸಲ್ಲಿಸಿದ್ದ ಹೇಬಿಯಸ್ ಕಾರ್ಪಸ್ ವಿಚಾರಣೆ ಮಾಡಿದ್ದು, ಅರ್ಜಿದಾರ ಸೂರ್ಯಕುಮಾರ್ ಉಪಸ್ಥಿತಿಯಲ್ಲಿ ಪ್ರಕರಣ ಇತ್ಯರ್ಥಗೊಂಡಿದೆ.
ಈ ವೇಳೆ, ನಾಪತ್ತೆಯಾಗಿರುವ ಚೇತನ್ ಸಂಬಂಧಿಯೊಂದಿಗೆ ತಿರುಪತಿಗೆ ತೆರಳಿದ್ದಾನೆ, ಆತ ನನ್ನ ಸಂಪರ್ಕದಲ್ಲಿದ್ದಾನೆ ಎಂದು ಸೂರ್ಯಕುಮಾರ್ ಹೇಳಿಕೆ ನೀಡಿದ್ದಾರೆ. ಅದಕ್ಕೂ ಮುನ್ನ ಚೇತನ್ನನ್ನು ನಿನ್ನೆ 1.30ರ ಸುಮಾರಿಗೆ ವಕೀಲರು ಸಂಪರ್ಕಿಸಿದ್ದಾರೆ, ಅವರ ಸೂಚನೆ ಮೇರೆಗೆ ಮೊಬೈಲ್ ಸ್ವಿಚ್ ಆಫ್ ಆಗಿದೆ ಎಂದು ಸರ್ಕಾರಿ ವಕೀಲರು ಆರೋಪ ಮಾಡಿದ್ದಾರೆ. ಆದರೂ, ಅಕ್ರಮ ಬಂಧನದಲ್ಲಿ ಇಲ್ಲವೆಂದು ಅರ್ಜಿದಾರರೇ ಹೇಳಿರುವ ಕಾರಣ ಹೇಬಿಯಸ್ ಕಾರ್ಪಸ್ ಪ್ರಕರಣ ಸುಖಾಂತ್ಯಗೊಂಡಿದೆ.
ಈ ಮಧ್ಯೆ, ಸರ್ಕಾರಿ ವಕೀಲರ ಆರೋಪಕ್ಕೆ ಹಿರಿಯ ವಕೀಲ ಎ.ಎಸ್.ಪೊನ್ನಣ್ಣ ಆಕ್ಷೇಪ ವ್ಯಕ್ತಪಡಿಸಿದ್ದು, ಪೊಲೀಸರಿಂದ ಕಾನೂನುಬಾಹಿರವಾಗಿ ಮೊಬೈಲ್ ಕದ್ದಾಲಿಕೆ ಆಗಿದೆ ಎಂಬ ಆರೋಪವೂ ಕೇಳಿಬಂದಿತು.
ಮಾರ್ಚ್ 16ರಿಂದ ನನ್ನ ಪುತ್ರ ಚೇತನ್ ನಾಪತ್ತೆಯಾಗಿದ್ದಾನೆ. ಚೇತನ್ನನ್ನು ಪೊಲೀಸರು ಅಕ್ರಮ ಬಂಧನದಲ್ಲಿ ಇರಿಸಿದ್ದಾರೆ. ಕಬ್ಬನ್ ಪಾರ್ಕ್ ಠಾಣೆಗೆ ಹೋಗಿದ್ದ ಚೇತನ್ ಮಾರ್ಚ್ 16ರಿಂದ ಮರಳಿ ಬಂದಿಲ್ಲವೆಂದು ಆತನ ತಂದೆ ಸೂರ್ಯಕುಮಾರ್ ಕೋರ್ಟ್ ಮೊರೆ ಹೋಗಿದ್ದರು. ನಿನ್ನೆ ಏನಾಗಿತ್ತು.. ಇಲ್ಲಿದೆ ವರದಿ: ಜಾರಕಿಹೊಳಿ ಸಿಡಿ ಪ್ರಕರಣ: ಎಸ್ಐಟಿ ಪೊಲೀಸರಿಗೆ ಬಿಸಿ ಮುಟ್ಟಿಸಿದ ಕೋರ್ಟ್, ಯುವಕನನ್ನು ಶನಿವಾರ ಹಾಜರು ಪಡಿಸುವಂತೆ ಆದೇಶ