ಹಾಸನ: ಹಾಲು ಉತ್ಪಾದಕರ ಸಂಘದಲ್ಲಿ ಹಣ ದುರ್ಬಳಕೆ ಆರೋಪ; ಸಾವಿರಾರು ಲೀಟರ್ ಹಾಲು ಚೆಲ್ಲಿ ರೈತರ ಆಕ್ರೋಶ
ಹಾಲು ಉತ್ಪಾದಕರ ಸಂಘದಲ್ಲಿ ಹಣ ದುರ್ಬಳಕೆ ಆರೋಪದ ಹಿನ್ನಲೆ ಸಂಘದ ಎದುರು ಬರೊಬ್ಬರಿ 1048 ಲೀಟರ್ ಹಾಲು ಚೆಲ್ಲಿ ರೈತರು(Farmers) ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹಾಸನ, ನ.03: ಹಾಲು ಉತ್ಪಾದಕರ ಸಂಘದಲ್ಲಿ ಹಣ ದುರ್ಬಳಕೆ ಆರೋಪದ ಹಿನ್ನಲೆ ಸಂಘದ ಎದುರು ಬರೊಬ್ಬರಿ 1048 ಲೀಟರ್ ಹಾಲು ಚೆಲ್ಲಿ ರೈತರು(Farmers) ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೌದು, ಹಾಸನ ಜಿಲ್ಲೆ ಚನ್ನರಾಯಪಟ್ಟಣ (Channarayapatna)ತಾಲೂಕಿನ ಹಡನೇಹಳ್ಳಿಯಲ್ಲಿರುವ ಸ್ವ-ಸಹಾಯ ಸಂಘದ ಕಾರ್ಯದರ್ಶಿ ಜಯಂತಿ ಎಂಬುವವರ ವಿರುದ್ಧ ಹಣ ದುರ್ಬಳಕೆ ಮಾಡಿಕೊಂಡ ಆರೋಪ ಕೇಳಿಬಂದಿದೆ.
ಲೆಕ್ಕ ಕೊಡುವವರೆಗೂ ಜಯಂತಿ ಹಾಲು ಪಡೆಯಬಾರದೆಂದು ನಿರ್ಧಾರ
ಕಳೆದ 20 ವರ್ಷದಿಂದ ಜಯಂತಿ ಅವರು ಸಂಘದ ಕಾರ್ಯದರ್ಶಿ ಆಗಿದ್ದು, ಹಣ ದುರ್ಬಳಕೆ ಮಾಡಿರುವುದಾಗಿ ಗ್ರಾಮಸ್ಥರು ಆರೋಪಿಸಿದ್ದಾರೆ. ಇನ್ನು ಕಳೆದ ಎರಡು ತಿಂಗಳ ಹಿಂದೆ ನೂತನ ಕಮಿಟಿ ರಚನೆಯಾಗಿದ್ದು, ಹೊಸ ಕಮಿಟಿಗೂ ಕೂಡ ಲೆಕ್ಕಪತ್ರ ನೀಡಿಲ್ಲವಂತೆ. ಈ ಹಿನ್ನಲೆ ರೊಚ್ಚಿಗೆದ್ದ ರೈತರು ಲೆಕ್ಕ ಕೊಡುವವರೆಗೂ ಜಯಂತಿ ಹಾಲು ಪಡೆಯಬಾರದೆಂದು ಸಭೆ ಸೇರಿಸಿ ನಿರ್ಧಾರ ಮಾಡಿದ್ದಾರೆ.
ಸಂಘದ ಎದುರು 1048 ಲೀಟರ್ ಹಾಲು ರಸ್ತೆಗೆ ಚೆಲ್ಲಿ ಆಕ್ರೋಶ
ಎರಡು ದಿನಗಳಿಂದ ಪ್ರಧಾನ ಡೇರಿಗೆ ಹಾಲು ಕಳಿಸುತ್ತಿದ್ದ ಉತ್ಪಾದಕರು, ರೈತರಿಂದ ಹಾಲು ಪಡೆಯದಂತೆ ಇಂದು ಪ್ರಧಾನ ಡೇರಿ ಮೇಲ್ವಿಚಾರಕಿ ಮಂಜುಶ್ರೀ ಅವರು ಸಂಘಕ್ಕೆ ಪತ್ರ ಬರೆದಿದ್ದರು. ಸಂಜೆ ಉತ್ಪಾದಕರಿಂದ ಹಾಲು ಪಡೆಯಲು ನಿರಾಕರಿಸಿದ ಹಿನ್ನೆಲೆ ಕಾರ್ಯದರ್ಶಿ, ಮೇಲ್ವಿಚಾರಕಿ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ಹೊರಹಾಕಿದ್ದಾರೆ. ಅಷ್ಟೇ ಅಲ್ಲ, ಹಾಲಿನ ಕ್ಯಾನ್‌ಗಳನ್ನು ಎಸೆದು ಆಕ್ರೋಶ ವ್ಯಕ್ತಪಡಿಸಿದ ರೈತರು, ಸಾವಿರಾರು ಲೀಟರ್ ಹಾಲನ್ನು ರಸ್ತೆಗೆ ಚೆಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನು ಪ್ರತಿಭಟನಾಕಾರರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟಿದ್ದು, ಈ ಕುರಿತು ಶ್ರವಣಬೆಳಗೊಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ