ಹಾಸನಾಂಬೆ ದರ್ಶನಕ್ಕೆ ಭಕ್ತಸಾಗರ: ಮಾಜಿ ಪ್ರಧಾನಿ ದೇವೇಗೌಡ ಸೇರಿ ಸಾವಿರಾರು ಭಕ್ತರಿಂದ ದೇವಿಯ ದರ್ಶನ
ಹಾಸನಾಂಬೆಯ ಸಾರ್ವಜನಿಕ ದರ್ಶನಕ್ಕೆ ಶುಕ್ರವಾರ ಭವ್ಯ ಚಾಲನೆ ದೊರೆತಿದೆ. ಗುರುವಾರ ಮದ್ಯಾಹ್ನ 12-23ಕ್ಕೆ ದೇಗುಲದ ಬಾಗಿಲು ತೆರೆದು ದೇಗುಲದ ಸ್ವಚ್ಛತೆ ಹಾಗೂ ದೇವಿಗೆ ಅಲಂಕಾರ ಮತ್ತು ನೈವೇದ್ಯ ಪೂಜೆಗಳ ಬಳಿಕ ಇಂದು 6-30ಕ್ಕೆ ಹಾಸನಾಂಬೆ ದರ್ಶನಕ್ಕೆ ಅವಕಾಶ ನೀಡಲಾಯಿತು.

ಹಾಸನ, ನವೆಂಬರ್ 3: ವರ್ಷಕ್ಕೊಮ್ಮೆ ದರ್ಶನ ಕರುಣಿಸುವ ಹಾಸನದ ಅಧಿದೇವತೆ ಹಾಸನಾಂಬೆಯ (Hasanamba Temple) ಸಾರ್ವಜನಿಕ ದರ್ಶನೋತ್ಸವದ ಮೊದಲ ದಿನವಾದ ಶುಕ್ರವಾರವೇ ಶಕ್ತಿದೇವತೆಯನ್ನು ಕಣ್ತುಂಬಿಕೊಳ್ಳಲು ಜನ ಸಾಗರವೇ ಹರಿದು ಬಂದಿದೆ. ಗುರುವಾರ ಮದ್ಯರಾತ್ರಿಯಿಂದಲೇ ಸರತಿ ಸಾಲಿನಲ್ಲಿ ನಿಂತು ಗಂಟೆಗಟ್ಟಲೆ ಕಾದು ಸರ್ವಾಲಂಕಾರ ಭೂಷಿತೆಯಾದ ಹಾಸನಾಂಬೆಯನ್ನು ಸಾವಿರಾರು ಭಕ್ತರು ಕಣ್ತುಂಬಿಕೊಂಡಿದ್ದಾರೆ. ಶಕ್ತಿದೇವಿಯ ದರ್ಶನಕ್ಕೆ ಹೊರರಾಜ್ಯಗಳಿಂದಲೂ ಭಕ್ತರ ದಂಡು ಹರಿದು ಬಂದಿದೆ. ಮಾಜಿ ಪ್ರಧಾನಿ ಹೆಚ್ಡಿ ದೇವೇಗೌಡ, ಮಾಜಿ ಸಚಿವ ಹೆಚ್ಡಿ ರೇವಣ್ಣ, ಸಚಿವರು, ಶಾಸಕರು, ಗಣ್ಯರು ಸೇರಿ ಸಾವಿರಾರು ಮಂದಿ ದೇವಿಯ ದರ್ಶನ ಪಡೆದರು.
ಹಾಸನಾಂಬೆಯ ಸಾರ್ವಜನಿಕ ದರ್ಶನಕ್ಕೆ ಶುಕ್ರವಾರ ಭವ್ಯ ಚಾಲನೆ ದೊರೆತಿದೆ. ಗುರುವಾರ ಮದ್ಯಾಹ್ನ 12-23ಕ್ಕೆ ದೇಗುಲದ ಬಾಗಿಲು ತೆರೆದು ದೇಗುಲದ ಸ್ವಚ್ಛತೆ ಹಾಗೂ ದೇವಿಗೆ ಅಲಂಕಾರ ಮತ್ತು ನೈವೇದ್ಯ ಪೂಜೆಗಳ ಬಳಿಕ ಇಂದು 6-30ಕ್ಕೆ ಹಾಸನಾಂಬೆ ದರ್ಶನಕ್ಕೆ ಅವಕಾಶ ನೀಡಲಾಯಿತು. ಶುಕ್ರವಾರವಾದ್ದರಿಂದ ಶಕ್ತಿ ದೇವತೆ ದರ್ಶನಕ್ಕೆ ಪ್ರಾಧಾನ್ಯತೆ ಇರೋ ಕಾರಣ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದ ಭಕ್ತರು ಹಾಸನಾಂಬೆಗೆ ನಮಿಸಿದರು. ಮೊದಲ ದಿನವೇ ಬೆಳ್ಳಂಬೆಳಿಗ್ಗೆ ದೇವಿ ದರ್ಶನಕ್ಕೆ ಆಗಮಿಸಿ ಗರ್ಭಗುಡಿಯಲ್ಲಿ ಕುಳಿತು ವಿಶೇಷ ಪೂಜೆ ಸಲ್ಲಿಸಿದ ಮಾಜಿ ಸಚಿವ ರೇವಣ್ಣ, ರಾಜ್ಯದಲ್ಲಿ ಬರಗಾಲ ಇದೆ ಜನರಿಗೆ ಸಾಕಷ್ಟು ಸಂಕಷ್ಟ ಎದುರಾಗಿದೆ, ಕಾವೇರಿ ವಿವಾದ ಕೂಡ ಜನರನ್ನ ಆತಂಕಕ್ಕೀಡುಮಾಡಿದ್ದು ಎಲ್ಲರ ಕಷ್ಟಗಳು ದೂರವಾಗಲಿ, ರಾಜ್ಯದಲ್ಲಿ ಸಮೃದ್ದಿ ನೆಲೆಸಲಿ ಎಂದು ಪ್ರಾರ್ಥನೆ ಮಾಡಿದರು.
ಹೀಗಿದೆ ದರ್ಶನದ ವೇಳಾಪಟ್ಟಿ
ಶುಕ್ರವಾರ ಬೆಳಿಗ್ಗೆಯಿಂದ ಸಂಜೆ 6ಗಂಟೆವರೆಗೂ ಭಕ್ತರಿಗೆ ದರ್ಶನಕ್ಕೆ ಅವಕಾಶ ಇತ್ತು. ಸಂಜೆ 6 ಗಂಟೆ ಬಳಿಕ ದರ್ಶನ ಕೊನೆಗೊಳಿಸಲಾಯಿತು. ಬಳಿಕ ಮತ್ತೆ ಶನಿವಾರ ಬೆಳಿಗ್ಗೆ 4 ಗಂಟೆಗೆ ದರ್ಶನ ಆರಂಭವಾದರೆ ನವೆಂಬರ್ 15ರ ಮುಂಜಾನೆವರೆಗೂ ಕೂಡ ದೇವಿ ದರ್ಶನಕ್ಕೆ ಅವಕಾಶ ಇದೆ.
ಮಹಿಳೆಯರಿಗೆ ಉಚಿತ ಬಸ್: ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ನಿರೀಕ್ಷೆ
ಈ ವರ್ಷ ರಾಜ್ಯ ಸರ್ಕಾರವು ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಶಕ್ತಿ ಯೋಜನೆ ಜಾರಿಗೊಳಿಸಿರುವ ಕಾರಣದಿಂದ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸೋ ನಿರೀಕ್ಷೆ ಇದ್ದು, ಅಂದಾಜು 10ರಿಂದ 12 ಲಕ್ಷ ಭಕ್ತರು ಆಗಮಿಸೋ ಸಾಧ್ಯತೆ ಇದೆ.
ಶುಕ್ರವಾರ ಬೆಳಗ್ಗೆ 9.30ರ ಸುಮಾರಿಗೆ ಪತ್ನಿ ಚೆನ್ನಮ್ಮ ಹಾಗೂ ಇಬ್ಬರು ಪುತ್ರಿಯರ ಜೊತೆಗೆ ದೇವಾಲಯಕ್ಕೆ ಆಗಮಿಸಿದ ಮಾಜಿ ಪ್ರದಾನಿ ದೇವೇಗೌಡರು ಹಾಸನಾಂಬೆ ದರ್ಶನ ಪಡೆದುಕೊಂಡರು. ವ್ಹೀಲ್ ಚೇರ್ ಮೂಲಕವೇ ಹಾಸನಾಂಬೆ ದರ್ಶನಕ್ಕೆ ಬಂದ ಗೌಡರು, ದೇವಿಯ ಆಶೀರ್ವಾದ ಪಡೆದುಕೊಂಡರು. ದೇವಿಯ ದರ್ಶನ ಪಡೆದು ಮಾತನಾಡಿದ ಗೌಡರು ನಾಡಿನ ಜನತೆಗೆ ಒಳಿತಾಗಲಿ ಎಂದು ಬೇಡಿಕೊಂಡಿದ್ದೇನೆ, ನನಗೆ ಅರೋಗ್ಯಕೊಡು ಮುಂದಿನ ವರ್ಷ ನಡೆದುಕೊಂಡು ಬರುವ ಶಕ್ತಿ ನೀಡು ಎಂದು ಬೇಡಿಕೊಂಡಿದ್ದೇನೆ ಎಂದು ಹೇಳಿದರು.
ಇದನ್ನೂ ಓದಿ: ಹಾಸನಾಂಬೆಯ ದರ್ಶನ ಪಡೆದು ಜಿಲ್ಲಾಡಳಿತವನ್ನ ಹಾಡಿ ಹೊಗಳಿದ ದೇವೇಗೌಡ
ವರ್ಷಕ್ಕೊಮ್ಮೆ ಮಾತ್ರ ದರ್ಶನ ನೀಡೋ ಹಾಸನಾಂಬೆ ಕಣ್ತುಂಬಿಕೊಳ್ಳಲು ಎಲ್ಲೆಡೆಗಳಿಂದ ಭಕ್ತರು ಆಗಮಿಸುವ ಜೊತೆಗೆ ಗಣ್ಯರು ಸಿನಿಮಾ ನಟರು ಕೂಡ ದೇವಿಯ ಆಶೀರ್ವಾದ ಪಡೆಯಲು ಹಾಸನದತ್ತ ಬರುತ್ತಿದ್ದಾರೆ. ಒಟ್ಟು 12 ದಿನಗಳು ಸಾರ್ವಜನಿಕ ಭಕ್ತರಿಗೆ ದರ್ಶನಕ್ಕೆ ಅವಕಾಶ ಇದ್ದು ಲಕ್ಷ ಲಕ್ಷ ಭಕ್ತರು ಹಾಸನದತ್ತ ಆಗಮಿಸುತ್ತಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:45 pm, Fri, 3 November 23