AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೇಲೂರಿನಲ್ಲಿ ಗಣೇಶ ಮೂರ್ತಿಗೆ ಚಪ್ಪಲಿ ಹಾರ ಪ್ರಕರಣ: ಕೊನೆಗೂ ಆರೋಪಿ ಅರೆಸ್ಟ್

ಹಾಸನ ಜಿಲ್ಲೆಯ ಐತಿಹಾಸಿಕ ನಗರಿ ಬೇಲೂರಿನಲ್ಲಿ ಇಂದು ವಿಕೃತ ಘಟನೆ ನಡೆದಿದೆ. ಪುರಸಭೆ ಆವರಣದಲ್ಲಿನ ಪ್ರಸಿದ್ಧ ವರಸಿದ್ದಿ ವಿನಾಯಕನ ದೇಗುಲದ ಗಣೇಶನ ವಿಗ್ರಹದ ಮೇಲೆ ಯಾರೋ ಕಿಡಿಗೇಡಿಗಳು ಚಪ್ಪಲಿ ಇಟ್ಟಿದ್ದು, ಹಿಂದೂ ಸಂಘಟನೆಗಳಲ್ಲಿ ರೋಷಾಗ್ನಿ ಹೊತ್ತಿಸಿದೆ. ವ್ಯಾಪಕ ಆಕ್ರೋಶವಾಗುತ್ತಿದ್ದಂತೆಯೇ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು, ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬೇಲೂರಿನಲ್ಲಿ ಗಣೇಶ ಮೂರ್ತಿಗೆ ಚಪ್ಪಲಿ ಹಾರ ಪ್ರಕರಣ: ಕೊನೆಗೂ ಆರೋಪಿ ಅರೆಸ್ಟ್
Belur Ganesh Row
ಮಂಜುನಾಥ ಕೆಬಿ
| Edited By: |

Updated on:Sep 21, 2025 | 7:33 PM

Share

ಹಾಸನ, (ಸಪ್ಟೆಂಬರ್ 21): ಬೇಲೂರಿನಲ್ಲಿ ದೇವಾಲಯದ ಒಳಗಿನ ಗಣಪನ ವಿಗ್ರಹಕ್ಕೆ ಚಪ್ಪಲಿ ಹಾರ ಹಾಕಿದ ಪ್ರಕರಣಕ್ಕೆ (Belur Ganesh idol desecration) ಸಂಬಂಧಿಸಿದಂತೆ ಸಿಸಿಟಿವಿ ಆಧರಿಸಿ ಮಹಿಳೆಯೋರ್ವಳನ್ನು ಪೊಲೀಸರು ಬಂಧಿಸಿದ್ದಾರೆ. ಪುರಸಭೆ ಆವರಣದಲ್ಲಿರುವ ವರಸಿಧಿ ಗಣಪತಿ ಮೂರ್ತಿಗೆ ಮಹಿಳೆಯೊಬ್ಬರು ಚಪ್ಪಲಿ ಹಾರ ಹಾಕಿದ್ದು, ಆಕೆ ಒಳ ಬಂದಿರುವುದು, ಹೊರ ಹೋಗಿರುವುದು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇದನ್ನು ಆಧರಿಸಿ ಪೊಲೀಸರು ಕೊನೆಗೂ ಮಹಿಳೆಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹಾಸನದ (Hassan) ಗುಡ್ಡೇನಹಳ್ಳಿ ಬಳಿ ಲೀಲಮ್ಮ ಎನ್ನುವ ಮಹಿಳೆಯನ್ನು ಬಾಣಾವರ PSI ಸುರೇಶ್ ನೇತೃತ್ವದ‌ ತಂಡ ಬಂಧಿಸಿದ್ದು, ವಿಚಾರಣೆಗೊಳಪಡಿಸಿದ್ದಾರೆ.

ಮಹಿಳೆ ಬಂಧನದ ಬಗ್ಗೆ ಹಾಸನ ಎಸ್ಪಿ ಹೇಳಿದ್ದೇನು?

ಲೀಲಮ್ಮ ಬಂಧನ ಸಂಬಂಧ ಹಾಸನ ಪೊಲೀಸ್ ವರಿಷ್ಠಾಧಿಕಾರಿ ಮೊಹಮ್ಮದ್ ಸುಜೀತಾ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು,  ಹಾಸನದ ವಿಜಯನಗರ ಬಡಾವಣೆ ನಿವಾಸಿ ಲೀಲಮ್ಮ ಎನ್ನುವ ಮಹಿಳೆಯನ್ನು ಬಂಧಿಸಲಾಗಿದ್ದು, ಬಂಧಿತ ಲೀಲಮ್ಮಗೆ ಮಾನಸಿಕ ಸ್ಥಿಮಿತವಿಲ್ಲವೆನ್ನುವ ಮಾಹಿತಿಯಿದೆ. ನಿನ್ನೆ ರಾತ್ರಿ 8.30ಕ್ಕೆ ಹಾಸನದಿಂದ ಬೇಲೂರು ಕಡೆ ಬಸ್ ಹತ್ತಿದ್ದಳು. ನಂತರ ಚಿಕ್ಕಮಗಳೂರಿಗೆ ಹೋಗಿ ವಾಪಸ್ ಬೇಲೂರಿಗೆ ಬಂದಿದ್ದಳು. ಬೇಲೂರಿನಲ್ಲಿ ಬಸ್ ಇಳಿದು ಪುರಸಭೆ ಆವರಣಕ್ಕೆ ತೆರಳಿದ್ದ ಮಹಿಳೆಯ ಸಂಪೂರ್ಣ ಚಲನವಲನ ಸಿಸಿಟಿವಿಯಲ್ಲಿ ಸೆರೆಯಾಗಿದೆ. ದೇಗುಲಕ್ಕೆ ಹೋಗಿ ಬಂದ ಬಳಿಕ ಮತ್ತೆ ಹಾಸನಕ್ಕೆ ಬಂದಿರುವ ಮಾಹಿತಿ ಇದೆ. ಹಾಸನದ ವಿಜಯನಗರದಲ್ಲಿರುವ ಮನೆ ಬಳಿ ವಶಕ್ಕೆ ಪಡೆದಿದ್ದು, ಲೀಲಮ್ಮಗೆ ಸದ್ಯಕ್ಕೆ ವೈದ್ಯಕೀಯ ಪರೀಕ್ಷೆ ಅಗತ್ಯವಿದೆ. ಲೀಲಮ್ಮರನ್ನು ವಶಕ್ಕೆ ಪಡೆದು ಘಟನೆ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಈ ಹಿಂದೆ ಮನೆಯಲ್ಲೂ ಇದೇ ರೀತಿ ವರ್ತಿಸಿದ್ದ ಬಗ್ಗೆ ಮಾಹಿತಿಯಿದೆ ಎಂದು ಮಾಹಿತಿ ನೀಡಿದರು.

ಇದನ್ನೂ ಓದಿ: ಬೇಲೂರು ಗಣೇಶಮೂರ್ತಿಗೆ ಚಪ್ಪಲಿ ಹಾರ ಹಾಕಿದ್ಯಾರು? ಇಲ್ಲಿದೆ CCTV ದೃಶ್ಯ

ಪುರಸಭೆ ಆವರಣದಲ್ಲಿರುವ ದೇವಸ್ಥಾನದೊಳಗೆ ಲೀಲಮ್ಮ ಒಳಗೆ ಪ್ರವೇಶಿಸಿರುವುದು ಹಾಗೂ ಹೊರ ಹೋಗಿರುವುದು ಅಲ್ಲಿನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಬಳಿಕ ಈ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ದೇವಾಲಯದ ಅಧ್ಯಕ್ಷ ವಿರೂಪಾಕ್ಷ ಅವರು ದೂರು ದಾಖಲಿಸಿದ್ದರು. ಇನ್ನು ಆರೋಪಿಯನ್ನು ಬೇಗ ಬಂಧಿಸಿ ಕಾನೂನು ಕ್ರಮಕೈಗೊಳ್ಳುವಂತೆ ಪ್ರತಿಭಟನೆ ಜೋರಾಗುತ್ತಿದ್ದಂತೆಯೇ ಪೊಲೀಸರು ಆರೋಪಿ ಬಂಧನಕ್ಕೆ 8 ತಂಡಗಳನ್ನು ರಚಿಸಿತ್ತು.

ಸಿಸಿಟಿವಿ ದೃಶ್ಯದಲ್ಲಿ ಮಹಿಳೆಯೊಬ್ಬಳು ಈ ಕೃತ್ಯ ಎಸೆಗಿರೋದು ಬಯಲಾಗಿತ್ತು. ಚಪ್ಪಲಿ ಧರಿಸಿ ಹೋಗಿದ್ದ ಮಹಿಳೆ ಬರುವಾಗ ಬರಿಗಾಲಿನಲ್ಲಿ ಬಂದಿರುವುದು ಸಿಸಿಟಿವಿಯಲ್ಲಿ ಸರೆಯಾಗಿತ್ತು. ಹೀಗಾಗಿ ಆಕೆಯೇ ಕೃತ್ಯ ಎಸಗಿದ್ದಾಳೆ ಅನ್ನೋ ಶಂಕೆ ವ್ಯಕ್ತವಾಗಿತ್ತು. ಸದ್ಯ ಪೊಲೀಸರು ಮಹಿಳೆಯನ್ನು ಬಂಧಿಸಿದ್ದು ತೀವ್ರ ತನಿಖೆಗೆ ನಡೆಸಿದ್ದಾರೆ.

ಇನ್ನು ಮಹಿಳೆ ಬಂಧನಕ್ಕೂ ಮುನ್ನವೇ ಪೊಲೀಸರು ಆಕೆ ಮಾನಸಿಕ ಅಸ್ವಸ್ಥೆ ಎಂದು ಹೇಳಿಕೆ ನೀಡಿದ್ದರು. ಇದರಿಂದ ಹಿಂದೂಪರ ಸಂಘಟನೆಗಳು ಹಾಗೂ ಬಿಜೆಪಿ ನಾಯಕರ ಆಕ್ರೋಶಕ್ಕೆ ಕಾರಣವಾಗಿತ್ತು. ಮಾನಸಿಕ ಅಸ್ವಸ್ಥೆಗೆ ಅಷ್ಟು ಬುದ್ದಿ ಹೇಗೆ ಬಂತೆಂದು ಬಿಜೆಪಿಗರು ಪ್ರಶ್ನಿಸಿದ್ದಾರೆ.

ಒಟ್ಟಿನಲ್ಲಿ ಆಕೆಯೇ ಕೃತ್ಯ ಎಸಗಿದ್ದಾಳಾ ಅಥವಾ ಇದರ ಹಿಂದೆ ಯಾರದ್ದಾದ್ರು ಕೈವಾಡ ಇದೆಯಾ ಎನ್ನುವುದು ತನಿಖೆ ನಂತರವೇ ಗೊತ್ತಾಗಲಿದೆ.

Published On - 7:23 pm, Sun, 21 September 25