ಹಾಸನದಲ್ಲಿ ತಾಯಿ, ಇಬ್ಬರು ಮಕ್ಕಳ ಸಾವು ಪ್ರಕರಣಕ್ಕೆ ಬಿಗ್ ಟ್ವಿಸ್ಟ್; ಹೊಸ ವರ್ಷಾಚರಣೆಗೆ ಮನೆಗೆ ಬಂದಿದ್ದ ಗೆಳೆಯನಿಂದ ಕೃತ್ಯ
ಪತಿ ಇಲ್ಲದ ವೇಳೆ ಮನೆಗೆ ಬಂದಿದ್ದ ವಿಜಯಪುರ ಮೂಲದ ನಿಂಗಪ್ಪ ಕಾಗವಾಡ ಎಂಬ ವ್ಯಕ್ತಿ ಹಣಕ್ಕಾಗಿ ಶಿವಮ್ಮನನ್ನು ಪೀಡಿಸಿ ಆಕೆ ಹಣ ನೀಡಲು ನಿರಾಕರಿಸಿದಾಗ ಶಿವಮ್ಮ, ಮಕ್ಕಳಾದ ಪವನ್(10), ಸಿಂಚನಾ(8) ಹತ್ಯೆ ಮಾಡಿ ಪರಾರಿಯಾಗಿದ್ದ ಆರೋಪಿ ಅರೆಸ್ಟ್ ಆಗಿದ್ದಾನೆ.

ಹಾಸನ, ಜ.07: ಹಾಸನದಲ್ಲಿ ತಾಯಿ, ಇಬ್ಬರು ಮಕ್ಕಳ ಸಾವು ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ(Hassan Mother Children Death). ಪತಿ ಮನೆಯಲ್ಲಿ ಇಲ್ಲದಿದ್ದಾಗ ಮನೆಗೆ ಬಂದಿದ್ದ ಸ್ನೇಹಿತ (Friend) ಕೊಲೆ ಮಾಡಿ ಎಸ್ಕೇಪ್ ಆಗಿದ್ದ ಎಂಬ ಭಯಾನಕ ಸತ್ಯ ಬಯಲಾಗಿದೆ. ಪತಿ ಇಲ್ಲದ ವೇಳೆ ಮನೆಗೆ ಬಂದಿದ್ದ ವಿಜಯಪುರ ಮೂಲದ ನಿಂಗಪ್ಪ ಕಾಗವಾಡ ಎಂಬ ವ್ಯಕ್ತಿ ಹಣಕ್ಕಾಗಿ ಶಿವಮ್ಮನನ್ನು ಪೀಡಿಸಿ ಆಕೆ ಹಣ ನೀಡಲು ನಿರಾಕರಿಸಿದಾಗ ಶಿವಮ್ಮ, ಮಕ್ಕಳಾದ ಪವನ್(10), ಸಿಂಚನಾ(8) ಹತ್ಯೆ ಮಾಡಿ ಪರಾರಿಯಾಗಿದ್ದ. ಸದ್ಯ ಆರೋಪಿಯನ್ನು ಪೆನ್ಷನ್ ಮೊಹಲ್ಲಾ ಪೊಲೀಸರು ಬಂಧಿಸಿದ್ದಾರೆ.
ಜ.01ರಂದು ಹಾಸನ ಹೊರವಲಯದ ದಾಸರಕೊಪ್ಪಲಿನ ಮನೆಯೊಂದರಲ್ಲಿ ತಾಯಿ ಹಾಗೂ ಇಬ್ಬರು ಮಕ್ಕಳು ನಿಗೂಡ ರೀತಿಯಲ್ಲಿ ಮೃತಪಟ್ಟಿದ್ದರು. ಬೇಕರಿ ಕೆಲಸಕ್ಕೆ ತುಮಕೂರಿಗೆ ಹೋಗಿದ್ದ ಪತಿ ಮನೆಗೆ ಬಂದು ನೋಡಿದಾಗ ಘಟನೆ ಬಯಲಾಗಿತ್ತು. ಪ್ರಕರಣದಲ್ಲಿ ಹಲವು ಅನುಮಾನಗಳು ಹುಟ್ಟಿಕೊಂಡಿದ್ದು ಇದು ಕೊಲೆಯೋ ಆತ್ಮಹತ್ಯೆಯೋ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದರು. ಸದ್ಯ ಕೊಲೆಯ ಹಿಂದಿನ ರಹಸ್ಯ ಬಯಲಾಗಿದೆ. ಗಂಡನಿಲ್ಲದ ವೇಳೆ ಮನೆಗೆ ಬಂದಿದ್ದ ಸ್ನೇಹಿತನೇ ಕೊಲೆ ಮಾಡಿದ್ದು ಆರೋಪಿಯನ್ನು ಬಂಧಿಸಲಾಗಿದೆ. ರೀಲ್ಸ್ ಸುಂದರಿ ಗೆಳತಿಯನ್ನೇ ಕೊಲೆಗೈದು ತಲೆ ಮರಿಸಿಕೊಂಡಿದ್ದ ಗೆಳೆಯ ಈಗ ಜೈಲು ಸೇರಿದ್ದಾನೆ.
ಇದನ್ನೂ ಓದಿ: ಹಾಸನದ ಮನೆಯೊಂದರಲ್ಲಿ ತಾಯಿ, ಇಬ್ಬರು ಮಕ್ಕಳ ನಿಗೂಢ ಸಾವು; ಪತಿ ಮನೆಗೆ ಬಂದಾಗ ಘಟನೆ ಬಯಲು
ಹೊಸ ವರ್ಷ ಆಚರಿಸಲು ಗೆಳೆಯನನ್ನು ಮನೆಗೆ ಕರಿಸಿ ಕೊಲೆಯಾದ ಮಹಿಳೆ
ಮೃತ ಶಿವಮ್ಮ ಪತಿ ತೀರ್ಥಪ್ರಸಾದ್ ಅವರು ಬಿಜಾಪುರದಲ್ಲಿ ಬೇಕರಿ ಇಟ್ಟಿದ್ದರು. ಈ ವೇಳೆ ಬಿಜಾಪುರ ಮೂಲದ ನಿಂಗಪ್ಪ ಕಾಗವಾಡ ಹಾಗೂ ಶಿವಮ್ಮನ ಸ್ನೇಹ ಬೇಳೆದಿತ್ತು. ಬಿಜಾಪುರದಲ್ಲಿ ಬೇಕರಿ ಲಾಸ್ ಆಗಿದ್ದರಿಂದ ಮುಚ್ಚಿ ವಾಪಸ್ ಬಂದು ತುಮಕೂರಿನ ಬೇಕರಿಯಲ್ಲಿ ಶಿವಮ್ಮ ಪತಿ ತೀರ್ಥ ಕೆಲಸ ಮಾಡುತ್ತಿದ್ದರು. ದೂರವಿದ್ದ ಗಂಡನಿಗೆ ಮರೆಮಾಚಿ ಗೆಳೆಯ ನಿಂಗಪ್ಪನ ಜೊತೆ ಶಿವಮ್ಮ ಸಲುಗೆಯಿಂದಿದ್ದರು. ಕಾರು ಚಾಲಕ ಎಂದು ತನ್ನ ಪತಿಗೆ ಗೆಳೆಯನ ಪರಿಚಯ ಮಾಡಿಕೊಟಿದ್ದರು.
ಹೊಸ ವರ್ಷದಂದು ಗಂಡ ಬೇಕರಿ ಕೆಲಸಕ್ಕೆ ಆಚೆ ಹೋಗಿದ್ದಾನೆಂದು ಹೊಸ ವರ್ಷಾಚರಣೆಗೆ ಶಿವಮ್ಮ ತನ್ನ ಸ್ನೇಹಿತನನ್ನು ಮನೆಗೆ ಕರೆಸಿಕೊಂಡಿದ್ದರು. ಈ ವೇಳೆ ಮೃತ ಶಿವಮ್ಮ ಹಾಗೂ ಆರೋಪಿ ನಡುವೆ ಹಣಕ್ಕೆ ಜಗಳವಾಗಿದೆ. ಆರೋಪಿ ಹಣ ನೀಡುವಂತೆ ಪೀಡಿಸಿದ್ದಾನೆ. ನಿರಾಕರಿಸಿದಕ್ಕೆ ಕತ್ತು ಹಿಸುಕಿ ಶಿವಮ್ಮ ಕೊಲೆ ಮಾಡಿದ್ದಾನೆ. ಬಳಿಕ ಮಕ್ಕಳಾದ ಸಿಂಚನಾ, ಪವನ್ ಹತ್ಯೆ ಮಾಡಿ ಅಡುಗೆ ಸಿಲಿಂಡರ್ ಪೈಪ್ ತೆಗೆದು ಶಿವಮ್ಮನ ಮೊಬೈಲ್, ತಾಳಿ ಸರದೊಂದಿಗೆ ಎಸ್ಕೇಪ್ ಆಗಿದ್ದಾನೆ. ಮರು ದಿನ ಶಿವಮ್ಮ ಪತಿ ಮನೆಗೆ ಬಂದಾಗ ತಾಯಿ-ಮಕ್ಕಳ ಶವ ಕಂಡು ಶಾಕ್ ಆಗಿದ್ದಾರೆ. ಸದ್ಯ ಕೊಲೆ ಆರೋಪಿ ಅರೆಸ್ಟ್ ಆಗಿದ್ದು ಜೈಲು ಸೇರಿದ್ದಾನೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ