ಹಾಸನದ ಮನೆಯೊಂದರಲ್ಲಿ ತಾಯಿ, ಇಬ್ಬರು ಮಕ್ಕಳ ನಿಗೂಢ ಸಾವು; ಪತಿ ಮನೆಗೆ ಬಂದಾಗ ಘಟನೆ ಬಯಲು
ಹಾಸನದ ಹೊರವಲಯದ ದಾಸರಕೊಪ್ಪಲಿನಲ್ಲಿ ತಾಯಿ ಮತ್ತು ಇಬ್ಬರು ಮಕ್ಕಳು ನಿಗೂಢವಾಗಿ ಮೃತಪಟ್ಟಿದ್ದಾರೆ. 36 ವರ್ಷದ ತಾಯಿ ಶಿವಮ್ಮ, 7 ವರ್ಷದ ಸಿಂಚು, 10 ವರ್ಷದ ಪವನ್ ಮೃತ ದುರ್ದೈವಿಗಳು. ಗ್ಯಾಸ್ ಆನ್ ಮಾಡಿ ಆತ್ಮಹತ್ಯೆಗೆ ಶರಣಾಗಿರೋ ಶಂಕೆ ವ್ಯಕ್ತವಾಗಿದೆ. ಪತ್ನಿ ಕರೆ ಸ್ವೀಕರಿಸುತ್ತಿಲ್ಲ ಎಂದು ಮನೆಗೆ ಬಂದಾಗ ಘಟನೆ ಬೆಳಕಿಗೆ ಬಂದಿದೆ.
ಹಾಸನ, ಜ.02: ಜಿಲ್ಲೆಯ ಹೊರವಲಯದಲ್ಲಿ ತಾಯಿ ಮಕ್ಕಳು ನಿಗೂಢವಾಗಿ ಸಾವಿಗೀಡಾಗಿದ್ದಾರೆ (Death). ತುಮಕೂರಿಗೆ ಹೋಗಿದ್ದ ಪತಿ ನಿನ್ನೆ ಸಂಜೆ ಹಾಸನಕ್ಕೆ ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ. ಹಾಸನದ ಹೊರವಲಯದ ದಾಸರಕೊಪ್ಪಲಿನಲ್ಲಿ ತಾಯಿ ಮತ್ತು ಇಬ್ಬರು ಮಕ್ಕಳು ನಿಗೂಢವಾಗಿ ಮೃತಪಟ್ಟಿದ್ದಾರೆ. 36 ವರ್ಷದ ತಾಯಿ ಶಿವಮ್ಮ, 7 ವರ್ಷದ ಸಿಂಚು, 10 ವರ್ಷದ ಪವನ್ ಮೃತ ದುರ್ದೈವಿಗಳು. ಗ್ಯಾಸ್ ಆನ್ ಮಾಡಿ ಆತ್ಮಹತ್ಯೆಗೆ ಶರಣಾಗಿರೋ ಶಂಕೆ ವ್ಯಕ್ತವಾಗಿದೆ. ಪತ್ನಿ ಶಿವಮ್ಮಗೆ ಎಷ್ಟೇ ಕರೆ (Call) ಮಾಡಿದರು ಸ್ವೀಕರಿಸದ ಹಿನ್ನೆಲೆಯಲ್ಲಿ ಅನುಮಾನಗೊಂಡು ಪತಿ ಮನೆಗೆ ಬಂದು ಬಾಗಿಲು ತೆರೆದು ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ಬೇಕರಿ ಕೆಲಸಕ್ಕೆ ತುಮಕೂರಿಗೆ ಹೋಗಿದ್ದ ಪತಿ ತೀರ್ಥ ಅವರು ನಿನ್ನೆ ಸಂಜೆವರೆಗೂ ತಮ್ಮ ಪತ್ನಿ ಜೊತೆ ಫೋನ್‌ನಲ್ಲಿ ಮಾತನಾಡಿದ್ದರು. ಬಳಿಕ ಎಷ್ಟೇ ಕರೆ ಮಾಡಿದರೋ ಪೋನ್ ತೆಗೆದಿಲ್ಲ. ಸಂಜೆ ಮನೆಗೆ ಬಂದು ನೋಡಿದಾಗ ಗ್ಯಾಸ್ ವಾಸನೆ ಬಂದಿದೆ. ಎಲ್ಲೋ ಹೋಗಿದ್ದಾರೆ ಬೆಳಗ್ಗೆ ಬರ್ತಾರೆ ಎಂದು ಮಹಡಿ ಮೇಲೆ ಹೋಗಿ ಮಲಗಿದ್ದಾರೆ. ಬೆಳಗ್ಗೆ ಕೀ ಮೇಕರ್ ಕರೆತಂದು ಬಾಗಿಲು ತೆರೆದಾಗ ಮೂವರು ಸಾವಿಗೀಡಾಗಿರೋದು ಬೆಳಕಿಗೆ ಬಂದಿದೆ.
ಇದನ್ನೂ ಓದಿ: ಚಿಕ್ಕಮಗಳೂರು: ಗೇರಮರಡಿ ಗ್ರಾಮದಲ್ಲಿ ದಲಿತರ ಪ್ರತಿಭಟನೆ ತೀವ್ರ, ಉದ್ವಿಗ್ನ ಪರಿಸ್ಥಿತಿ
ನಮ್ಮಿಬ್ಬರ ನಡುವೆ ಯಾವ ಸಮಸ್ಯೆಯೂ ಇಲ್ಲ
ಇನ್ನು ಪತ್ನಿ ಮಕ್ಕಳ ಸಾವಿನ ಬಗ್ಗೆ ಪತಿ ತೀರ್ಥ ಪ್ರತಿಕ್ರಿಯೆ ನೀಡಿದ್ದಾರೆ. ನಿನ್ನೆ ಸಂಜೆವರೆಗೂ ನಾನು ಪತ್ನಿ ಮಕ್ಕಳ ಜೊತೆ ಫೋನಲ್ಲಿ ಮಾತನಾಡಿದ್ದೆ. ನಿನ್ನೆ ಮಧ್ಯಾಹ್ನ 3 ಗಂಟೆಗೆ ತುಮಕೂರಿನಿಂದ ಹೊರಟು ಹಾಸನಕ್ಕೆ ಬಂದೆ. ಸಂಜೆ 6 ಗಂಟೆ ವೇಳೆಗೆ ಅವರ ಫೋನ್ ಸ್ವಿಚ್ ಆಫ್ ಆಗಿತ್ತು. ನಾನು ಬಂದು ಎಷ್ಟೇ ಬಾಗಿಲು ಬಡಿದರೂ ಬಾಗಿಲು ತೆರೆಯಲಿಲ್ಲ. ಮನೆಯ ಬಾಗಿಲಿಗೆ ಬೀಗ ಹಾಕಿದ್ದರಿಂದ ಎಲ್ಲೋ ಹೋಗಿರಬಹುದು ಎಂದು ಮನೆಯ ಮೇಲೆ ಮಲಗಿದ್ದೆ. ಬೆಳಿಗ್ಗೆ ಮನೆಯ ಬಾಗಿಲ ಹೊಸ ಕಿ ಮಾಡಿಸಿ ಬಾಗಿಲು ಓಪನ್ ಮಾಡಿದಾಗ ಅವರು ಮೃತಪಟ್ಟ ವಿಚಾರ ಗೊತ್ತಾಗಿದೆ. ನಾವು ಎಂಟು ತಿಂಗಳಿಂದ ಇಲ್ಲೇ ವಾಸವಾಗಿದ್ದೇವೆ. ನಾನು ಬೇಕರಿ ಕೆಲಸದ ನಿಮಿತ್ತ ತುಮಕೂರಿನಲ್ಲಿ ಇದ್ದೇನೆ. ನಾನು ಮನೆಯಿಂದ ಹೋಗಿ ಒಂದು ತಿಂಗಳಾಗಿತ್ತು. ನಿತ್ಯ ಪತ್ನಿ ಹಾಗು ಮಕ್ಕಳ ಜೊತೆ ಫೋನಲ್ಲಿ ಮಾತನಾಡುತ್ತಿದ್ದೆ. ನಿನ್ನೆ ಕೂಡ ಮಾತನಾಡಿಕೊಂಡೇ ಹಾಸನಕ್ಕೆ ಬಂದೆ. ಹೇಗೆ ಸಾವಾಗಿದೆ ಎಂದು ನನಗೂ ಗೊತ್ತಿಲ್ಲ. ನಮ್ಮಿಬ್ಬರ ನಡುವೆ ಏನೂ ಜಗಳ ಆಗಿಲ್ಲ. ಆತ್ಮಹತ್ಯೆ ಮಾಡಿಕೊಳ್ಳೋ ಸಮಸ್ಯೆ ಏನೂ ಇರಲಿಲ್ಲ ಎಂದು ತಿಳಿಸಿದ್ದಾರೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ