
ಹಾಸನ, ಅಕ್ಟೋಬರ್ 28: ಪ್ರಸಿದ್ಧ ಹಾಸನಾಂಬೆ ದೇವಿ ದರ್ಶನೋತ್ಸವ ನಾಳೆಯಿಂದ ನವೆಂಬರ್ 11ರ ವರೆಗೆ ನಡೆಯಲಿದ್ದು, 14 ದಿನಗಳ ಜಾತ್ರಾ ಮಹೋತ್ಸವದ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಕೆ. ಎಂ. ಶಿವಲಿಂಗೇಗೌಡ ಸಂಪೂರ್ಣ ಮಾಹಿತಿ ನೀಡಿದ್ದಾರೆ. ಧರ್ಮ ದರ್ಶನದ ಜೊತೆಗೆ ಭಕ್ತರ ಅನುಕೂಲಕ್ಕಾಗಿ 1 ಸಾವಿರ ಮತ್ತು 300 ರೂಪಾಯಿ ಟಿಕೆಟ್ ವ್ಯವಸ್ಥೆ ಮಾಡಲಾಗಿದೆ. ಗಣ್ಯರನ್ನು ಕರೆತಂದು ಜಿಲ್ಲಾಡಳಿತದ ವತಿಯಿಂದಲೇ ದೇವಿಯ ದರ್ಶನ ಮಾಡಿಸಲು ತೀರ್ಮಾನಿಸಲಾಗಿದ್ದು, ಬೆಳಿಗ್ಗೆ10.30 ರಿಂದ 12.30 ರ ನಡುವೆ ಎರಡು ಗಂಟೆಗಳ ಕಾಲ ಗಣ್ಯರಿಗೆ ದರ್ಶನಕ್ಕೆ ಅವಕಾಶ ಇರಲಿದೆ. ಗೋಲ್ಡನ್ ಪಾಸ್ ಪಡೆದವರಿಗೆ ಬೆಳಿಗ್ಗೆ8ರಿಂದ 10 ಗಂಟೆವರೆಗೆ ದರ್ಶನಕ್ಕೆ ಅವಕಾಶ ಇರಲಿದ್ದು, ಒಬ್ಬರು ಮಾತ್ರ ಇದರ ಪ್ರಯೋಜನ ಪಡೆಯಬಹುದು. ಮೊದಲ ಹಾಗೂ ಕೊನೆಯ ದಿನ ಯಾವುದೇ ಶಿಷ್ಟಾಚಾರ, ಪಾಸ್ ವ್ಯವಸ್ಥೆ ಇರುವುದಿಲ್ಲ ಎಂದವರು ತಿಳಿಸಿದ್ದಾರೆ.
ಪ್ರಸಾದವಾಗಿ ಎರಡು ಲಡ್ಡುಗಳಿಗೆ 56 ರೂ. ರೇಟ್ ನಿಗದಿ ಮಾಡಲಾಗಿದೆ. ದೊನ್ನೆ ಪ್ರಸಾದಕ್ಕೆ ಒಂದು ದೊನ್ನೆಗೆ 17 ರೂ. ಇರಲಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ. ದೇವಿಯ ದರ್ಶನಕ್ಕೆ ಸ್ಥಳೀಯರಿಗೆ ಪ್ರತ್ಯೇಕ ವ್ಯವಸ್ಥೆ ಮಾಡಬೇಕೆಂಬ ಬೇಡಿಕೆ ವಿಚಾರವಾಗಿಯೂ ಪ್ರತಿಕ್ರಿಯಿಸಿರುವ ಶಿವಲಿಂಗೇಗೌಡ, ಹಿಂದೆ ಕಡಿಮೆ ಭಕ್ತರು ಬರುತ್ತಿದ್ದರು. ಆದರೆ ಈಗ ಹಾಸನಾಂಬೆ ಉತ್ಸವ ನಾಡ ಹಬ್ಬವಾಗಿ ಬೆಳೆದಿದೆ. ಯಾರೂ ಸಂಕುಚಿತವಾಗಿ ಯೋಚನೆ ಮಾಡೋದು ಬೇಡ. ಲಕ್ಷಾಂತರ ಭಕ್ತರು ಬರುವ ವೇಳೇ ಸ್ಥಳೀಯರು ಎಂದು ಬೇರೆ ಅರ್ಥೈಸೋದು ಬೇಡ ಎಂದು ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: ಹಾಸನಾಂಬೆ ದರ್ಶನೋತ್ಸವ ಯಾವಾಗಿನಿಂದ?: ವಿವಿಐಪಿ, ಸಾಮಾನ್ಯ ಜನರ ದರ್ಶನಕ್ಕೆ ಸಮಯ ನಿಗದಿ, ಇಲ್ಲಿದೆ ಡಿಟೇಲ್ಸ್
ಹಾಸನಾಂಬಾ ದರ್ಶನೋತ್ಸವದ ವೇಳೆ ಮೈಸೂರು ದಸರಾ ಮಾದರಿಯಲ್ಲಿ ಕ್ರೀಡೆ, ಸಾಂಸ್ಕೃತಿಕ ಹಾಗೂ ಗ್ರಾಮೀಣ ಸೊಗಡು ಪ್ರತಿಬಿಂಬಿಸುವ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. 450 ಮಂದಿಯಿಂದ ಕುಸ್ತಿ ಪಂದ್ಯಾಟ ನಡೆಯಲಿದ್ದು, ಕಬಡ್ಡಿ ಸ್ಪರ್ಧೆ, ರಾಷ್ಟ್ರೀಯ ಮಟ್ಟದ ವಾಲಿಬಾಲ್ ಕ್ರೀಡಾಕೂಟ ಸಹ ನಡೆಯಲಿದೆ. ಹಳ್ಳಿಕಾರ್, ಅಮೃತ ಮಹಲ್ ತಳಿಯ ಜೋಡೆತ್ತುಗಳ ಪ್ರದರ್ಶನ ಇರಲಿದೆ. ಮಹಿಳೆಯರಿಗಾಗಿ ರಂಗೋಲಿ ಸ್ಪರ್ಧೆ, ಶ್ವಾನ ಪ್ರದರ್ಶನ, ಟಗರು, ಬೆಕ್ಕು ಮತ್ತು ಶ್ವಾನಗಳ ಪ್ರದರ್ಶನ ಕೂಡ ಆಯೋಜಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರು ಮಾಹಿತಿ ನೀಡಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.