ಹಾಸನ ಕಾಂಗ್ರೆಸ್ ಸಮಾವೇಶಕ್ಕೆ ಕ್ಷಣಗಣನೆ: ದೇವೇಗೌಡರ ತವರು ಜಿಲ್ಲೆಯಲ್ಲಿ ಜೆಡಿಎಸ್‌-ಬಿಜೆಪಿಗೆ ಟಕ್ಕರ್ ಕೊಡಲು ತಂತ್ರ

| Updated By: Ganapathi Sharma

Updated on: Dec 05, 2024 | 7:21 AM

ಸ್ವಾಭಿಮಾನಿ ಸಮಾವೇಶವಾ? ಜನಕಲ್ಯಾಣ ಸಮಾವೇಶವಾ? ಸಿಎಂ ಸಿದ್ದರಾಮಯ್ಯ ಅಭಿಮಾನಿಗಳ ಸಮಾವೇಶವಾ? ಕಾಂಗ್ರೆಸ್ ಸಮಾವೇಶವಾ? ಹೀಗೆ ಹತ್ತು ಹಲವು ಗೊಂದಲಗಳ ಮಧ್ಯೆ ಇವತ್ತು ಜನಕಲ್ಯಾಣ ಸ್ವಾಭಿಮಾನಿ ಸಮಾವೇಶಕ್ಕೆ ಹಾಸನ ಸಜ್ಜಾಗಿದೆ. ಒಕ್ಕಲಿಗ ಪ್ರಾಬಲ್ಯದ, ಜೆಡಿಎಸ್‌ ಭದ್ರಕೋಟೆಯಲ್ಲಿ ಕಾಂಗ್ರೆಸ್‌ ಕಹಳೆ ಊದಲು ಸಜ್ಜಾಗಿದೆ.

ಹಾಸನ ಕಾಂಗ್ರೆಸ್ ಸಮಾವೇಶಕ್ಕೆ ಕ್ಷಣಗಣನೆ: ದೇವೇಗೌಡರ ತವರು ಜಿಲ್ಲೆಯಲ್ಲಿ ಜೆಡಿಎಸ್‌-ಬಿಜೆಪಿಗೆ ಟಕ್ಕರ್ ಕೊಡಲು ತಂತ್ರ
ಹಾಸನ ಕಾಂಗ್ರೆಸ್ ಸಮಾವೇಶ
Follow us on

ಬೆಂಗಳೂರು, ಡಿಸೆಂಬರ್ 5: ಉಪಚುನಾವಣೆಯಲ್ಲಿ ಅಭೂತಪೂರ್ವ ಯಶಸ್ಸು ಸಾಧಿಸಿರುವ ಕಾಂಗ್ರೆಸ್​ ಈಗ ಮಾಜಿ ಪ್ರಧಾನಿ ಹೆಚ್​ಡಿ ದೇವೇಗೌಡರ ತವರು ಜಿಲ್ಲೆ ಹಾಸನದಲ್ಲಿ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದೆ. ಈ ಮೂಲಕ ಜೆಡಿಎಸ್‌-ಬಿಜೆಪಿ ಎರಡಕ್ಕೂ ಟಕ್ಕರ್‌ ಕೊಡಲು ‘ಕೈ’ ತಂತ್ರ ಹೂಡಿದ್ದು, ಎಲ್ಲರ ಚಿತ್ತ ಅತ್ತ ನೆಟ್ಟಿದೆ.

ಸಿಎಂ ಸಿದ್ದರಾಮಯ್ಯ ತಂಡ ವರ್ಸಸ್ ಡಿಸಿಎಂ ಡಿಕೆ ಶಿವಕುಮಾರ್ ತಂಡದ ನಡುವಣ ಮುಸುಕಿನ ಗುದ್ದಾಟದ ಮಧ್ಯೆ ಹಾಸನದಲ್ಲಿ ಕಾಂಗ್ರೆಸ್ ಶಕ್ತಿ ಪ್ರದರ್ಶನಕ್ಕೆ ಕ್ಷಣಗಣನೆ ಶುರುವಾಗಿದೆ. ಅರಸೀಕೆರೆ ರಸ್ತೆಯ ಎಸ್​ಎಂ ಕೃಷ್ಣ ನಗರದಲ್ಲಿರುವ ಕೆಎಸ್​ಸಿಎ ಕ್ರಿಕೆಟ್ ಮೈದಾನದಲ್ಲಿ ಬೃಹತ್ ವೇದಿಕೆ ಸಜ್ಜಾಗಿದೆ. ಲಕ್ಷ ಲಕ್ಷ ಜನರ ಆಗಮನದ ನಿರೀಕ್ಷೆ ಇದೆ.

ಎಷ್ಟು ಗಂಟೆಗೆ ಕಾಂಗ್ರೆಸ್ ಸಮಾವೇಶ?

ಬೆಳಗ್ಗೆ 11.30ಕ್ಕೆ ಹಾಸನದಲ್ಲಿ ಜನಕಲ್ಯಾಣ ಸಮಾವೇಶ ಉದ್ಘಾಟನೆ ಆಗಲಿದೆ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಸೇರಿದಂತೆ ಇಡೀ ಸಚಿವ ಸಂಪುಟ ದಂಡೇ ಕಾರ್ಯಕ್ರಮದಲ್ಲಿ ಭಾಗಿಯಾಗಲಿದೆ. 480 ಅಡಿ ಅಗಲ ಮತ್ತು 600 ಅಡಿ ಉದ್ದದ ಬೃಹತ್‌ ಟೆಂಟ್‌ ಹಾಕಲಾಗಿದೆ. ಸುಮಾರು 70 ಸಾವಿರ ಜನರು ಕೂರಲು ಆಸನಗಳ ವ್ಯವಸ್ಥೆ ಮಾಡಲಾಗಿದೆ.

ಬಿಗಿ ಭದ್ರತೆ, ಹೆಚ್ಚುವರಿ ಪೊಲೀಸ್ ನಿಯೋಜನೆ

ಲಕ್ಷಾಂತರ ಜನರು ಸಮಾವೇಶಕ್ಕೆ ಆಗಮಿಸುವ ನಿರೀಕ್ಷೆ ಇರುವುದರಿಂದ, ಪೊಲೀಸ್ ಇಲಾಖೆ ಸಾಕಷ್ಟು ಭದ್ರತಾ ವ್ಯವಸ್ಥೆ ಕೈಗೊಂಡಿದೆ. ಐವರು ಎಸ್ಪಿಗಳು, ಆರು ಎಎಸ್ಪಿಗಳು, 12 ಡಿವೈಎಸ್ಪಿ, 50ಕ್ಕೂಹೆಚ್ಚು ಸಿಪಿಐ, 80ಕ್ಕೂ ಹೆಚ್ಚು ಪಿಎಸ್​​​​ಐಗಳು ಸೇರಿ ಎರಡು ಸಾವಿರ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ.

ಈ ಇಡೀ ಸಮಾವೇಶದ ಪ್ರಮುಖ ಗುರಿಯೇ ಜೆಡಿಎಸ್‌ ಮತ್ತು ಬಿಜೆಪಿ ಮೈತ್ರಿ ಎನ್ನಲಾಗುತ್ತಿದೆ. ಇದಕ್ಕಾಗಿ ದೊಡ್ಡಗೌಡರ ತವರು ಜಿಲ್ಲೆ, ಕರ್ಮಭೂಮಿ, ಜೆಡಿಎಸ್ ಭದ್ರಕೋಟೆ ಹಾಸನದಿಂದಲೇ ಸಮಾವೇಶ ಏರ್ಪಡಿಸಲಾಗಿದೆ. ಹಳೆ ಮೈಸೂರಿನಲ್ಲಿ ಜೆಡಿಎಸ್ ಜೊತೆ ನೈತ್ರಿ ಮಾಡಿಕೊಂಡು ಬಿಜೆಪಿ ನೆಲೆಯೂರುತ್ತಿರುವುದನ್ನು ತಡೆದು ತಮ್ಮ ಪಕ್ಷದ ಹಿಡಿತ ಸಾಧಿಸುವುದು ಈ ಸಮಾವೇಶದ ಹಿಡನ್ ಅಜೆಂಡಾ eಂಬ ಚರ್ಚೆ ಇದೆ. ಅಹಿಂದ ವರ್ಗವನ್ನು ಒಗ್ಗೂಡಿಸಿ ಹಳೆ ಮೈಸೂರು ಭಾಗವನ್ನ ಕಬ್ಜ ಮಾಡುವ ರಣತಂತ್ರ ಎನ್ನಲಾಗುತ್ತಿದೆ.

ಉಪಚುನಾವಣೆ ಗೆಲುವಿನ ರಣೋತ್ಸಾಹದಲ್ಲಿರುವ ಕಾಂಗ್ರೆಸ್, ವಿಪಕ್ಷಗಳ ಮೇಲೆ ಸವಾರಿ ಮಾಡಲು ಹೊರಟಿದೆ. ತನ್ನ ಶಕ್ತಿಯನ್ನ ಮತ್ತಷ್ಟು ಹೆಚ್ಚಿಸಿಕೊಳ್ಳಲು ಮುಂದಾಗಿದೆ ಎಂದು ರಾಜಕೀಯ ಪಡಸಾಲೆಯಲ್ಲಿ ಚರ್ಚೆಗಳು ನಡೆಯುತ್ತಿವೆ. ಹಾಸನದಲ್ಲಿ ಎಲ್ಲೆಡೆ ಕೈ ನಾಯಕರ ಫ್ಲೆಕ್ಸ್‌ಗಳು ರಾರಾಜಿಸುತ್ತಿವೆ. ಕಾಂಗ್ರೆಸ್ ಬಾವುಟಗಳು ಹಾರಾಡುತ್ತಿವೆ.

ವೇದಿಕೆಯಲ್ಲಿ ಮಾತ್ರ ಜನಕಲ್ಯಾಣ ಸಮಾವೇಶ ಎಂದು ಇದ್ದರೂ ಇಡೀ ನಗರದಲ್ಲಿ ಸ್ವಾಭಿಮಾನಿ ಸಮಾವೇಶ ಹೆಸರಿನ ಫ್ಲೆಕ್ಸ್‌ಗಳೇ ಕಣ್ಣು ಕುಕ್ಕುತ್ತಿವೆ. ಇದು, ಈ ಸಮಾವೇಶ ಸಿದ್ದರಾಮಯ್ಯ ಅಭಿಮಾನಿಗಳ ಪ್ರಾಬಲ್ಯದ ಸಮಾವೇಶ ಎಂದು ಸಾರಿ ಹೇಳುತ್ತಿದೆ. ಹಾಸನ, ಮಂಡ್ಯ, ಮೈಸೂರು, ಚಾಮರಾಜನಗರ, ಕೊಡಗು, ಚಿಕ್ಕಮಗಳೂರು, ತುಮಕೂರಿನಿಂದ ಸಾವಿರಾರು ಬಸ್‌ಗಳ ಮೂಲಕ ಸಮಾವೇಶಕ್ಕೆ ಜನರು ಆಗಮಿಸುತ್ತಿದ್ದಾರೆ.

ಇದನ್ನೂ ಓದಿ: ಹಾಸನ ಕಾಂಗ್ರೆಸ್ ಕಾರ್ಯಕ್ರಮದ ದಿಕ್ಕೇ ಬದಲು: ಸ್ವಾಭಿಮಾನಿ ಅಲ್ಲ ಜನಕಲ್ಯಾಣ ಸಮಾವೇಶ ಎಂದ ಡಿಕೆ ಶಿವಕುಮಾರ್

ಇನ್ನು ಜೆಡಿಎಸ್ ಭದ್ರಕೋಟೆಯಲ್ಲಿ ನಡೆಯುತ್ತಿರುವ ಸಮಾವೇಶದ ಬಗ್ಗೆ ದೆಹಲಿಯಲ್ಲಿ ಪ್ರತಿಕ್ರಿಯಿಸಿರುವ ಹೆಚ್​ಡಿ ರೇವಣ್ಣ, ಸಮಾವೇಶ ಮಾಡಲಿ ನಾವೇನು ಹೆದರಲ್ಲ. ನಮ್ಮನ್ನ ಮುಗಿಸುವುದು ದೇವರು ಮಾತ್ರ, ಅಭಿವೃದ್ಧಿ ಮಾಡಲಿ ಎಂದು ಸವಾಲು ಹಾಕಿದ್ದಾರೆ.

ಒಟ್ಟಿನಲ್ಲಿ ಜೆಡಿಎಸ್ ಭದ್ರಕೋಟೆಯಲ್ಲಿ ಕೈ ಶಕ್ತಿ ಪ್ರದರ್ಶನಕ್ಕೆ ಹಾಸನ ಸಜ್ಜಾಗಿದೆ. ವಿಪಕ್ಷಗಳ ಆರೋಪಗಳಿಗೆ ಉತ್ತರ ನೀಡಲೆಂದೇ ನಡೆಯುತ್ತಿರುವ ಸಮಾವೇಶದಲ್ಲಿ ನಾಯಕರ ತಿರುಗೇಟು ಹೇಗಿರಲಿದೆ ಎಂಬ ಕುತೂಹಲ ಮೂಡಿದೆ.

ಕರ್ನಾಟಕದ  ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ