ನಾನು 1 ಸಾವಿರದ ವಾಚು ಕಟ್ತೇನೆ, 10 ಲಕ್ಷ ರೂ ವಾಚು ಕಟ್ತೇನೆ: ಡಿಕೆ ಶಿವಕುಮಾರ್‌

ಸಿಎಂ, ಡಿಸಿಎಂ ಬ್ರೇಕ್​ಫಾಸ್ಟ್​ಗೆ ಸೇರಿದ್ದಾಗ ಇಬ್ಬರ ಕೈಯಲ್ಲೂ ಇದ್ದ ವಾಚ್​​ ಇದೀಗ ರಾಜ್ಯ ರಾಜಕಾರಣದಲ್ಲಿ ವಾಗ್ಯುದ್ಧಕ್ಕೆ ವೇದಿಕೆ ಹಾಕಿಕೊಟ್ಟಿದೆ. ಕಾಂಗ್ರೆಸ್​​ ಮತ್ತು ಬಿಜೆಪಿ ಮಧ್ಯೆ ಸಂಘರ್ಷ ಸೃಷ್ಟಿಸಿದೆ. ಸದ್ಯ ಈ ಕುರಿತಾಗಿ ಹಾಸನದಲ್ಲಿ ಮಾತನಾಡಿರುವ ಡಿಸಿಎಂ ಡಿಕೆ ಶಿವಕುಮಾರ್​, ನನಗೆ ಎಷ್ಟು ವಾಚ್ ಬೇಕಾದ್ರೂ ಕಟ್ಟುವಷ್ಟು ಶಕ್ತಿ ಇದೆ ಎಂದಿದ್ದಾರೆ.

ನಾನು 1 ಸಾವಿರದ ವಾಚು ಕಟ್ತೇನೆ, 10 ಲಕ್ಷ ರೂ ವಾಚು ಕಟ್ತೇನೆ: ಡಿಕೆ ಶಿವಕುಮಾರ್‌
ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌
Edited By:

Updated on: Dec 06, 2025 | 4:25 PM

ಹಾಸನ, ಡಿಸೆಂಬರ್​ 06: ರಾಜ್ಯ ರಾಜಕೀಯದಲ್ಲಿ ಸದ್ಯ ಕೈ ಗಡಿಯಾರದ (watch) ಜಟಾಪಟಿ ಜೋರಾಗಿದೆ. ಕಾರ್ಟಿಯರ್ ವಾಚ್ ಸದ್ಯ ಕಾಂಗ್ರೆಸ್​​ ಮತ್ತು ಬಿಜೆಪಿ ನಡುವೆ ಸಂಘರ್ಷ ಸೃಷ್ಟಿಸಿದೆ. ಈ ವಿಚಾರವಾಗಿ ಇದೀಗ ಸ್ವತಃ ಡಿಸಿಎಂ ಡಿಕೆ ಶಿವಕುಮಾರ್ (DK Shivakumar)​​ ಪ್ರತಿಕ್ರಿಯಿಸಿದ್ದು, ನನಗೆ ಎಷ್ಟು ವಾಚ್ ಬೇಕಾದರೂ ಕಟ್ಟುವಷ್ಟು ಶಕ್ತಿ ಇದೆ. ನಾನು ಒಂದು ಸಾವಿರ ರೂ ವಾಚ್ ಕಟುತ್ತೇನೆ, 10 ಲಕ್ಷ ರೂ ವಾಚ್ ಕಟುತ್ತೇನೆ. ಅದು ನನ್ನ ಸಂಪಾದನೆಯ ಆಸ್ತಿ. ನನ್ನ ವ್ಯವಹಾರ ಏನು, ನನ್ನ ಬದುಕು ಏನೆಂದು ಬಿಜೆಪಿಯವರಿಗೆ ಗೊತ್ತಿದೆ ಎಂದು ಕಿಡಿಕಾರಿದ್ದಾರೆ.

ಅದು ಅವರವರ ವೈಯಕ್ತಿಕ ವಿಚಾರ ಎಂದ ಡಿಕೆ ಶಿವಕುಮಾರ್

ನಗರದಲ್ಲಿ ನಡೆದ ಸರ್ಕಾರದ ಸೇವೆಗಳ ಸಮರ್ಪಣಾ ಸಮಾವೇಶ ಕಾರ್ಯಕ್ರಮದಲ್ಲಿ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್​, ಯಾರು ಪ್ಯಾಂಟ್ ಹಾಕುತ್ತಾರೆ, ವಾಚ್ ಕಟ್ಟುತ್ತಾರೆ, ಕನ್ನಡಕ ಹಾಕುತ್ತಾರೆ ಅದನ್ನು ಕೇಳೋಕೆ ಬರಲ್ಲ, ಅದು ಅವರವರ ವೈಯಕ್ತಿಕ ವಿಚಾರ. ಕೆಲವರು ಸಾವಿರ ರೂಪಾಯಿ ಮೌಲ್ಯದ ಶೂ ಹಾಕಿಕೊಳ್ಳುತ್ತಾರೆ. ಮತ್ತೆ ಕೆಲವರು ಒಂದು ಲಕ್ಷ ರೂ ಮೌಲ್ಯದ ಶೂ ಹಾಕಿಕೊಳ್ಳುತ್ತಾರೆ ಎಂದಿದ್ದಾರೆ.

ಇದನ್ನೂ ಓದಿ: ಸಿಎಂ-ಡಿಸಿಎಂ ಬ್ರೇಕ್​​ ಫಾಸ್ಟ್​​​ನಲ್ಲಿ ನಾಟಿ ಕೋಳಿ ಬದಲಿಗೆ ಗಮನಸೆಳೆದ ವಾಚ್: ಇದರ ಬೆಲೆ 43 ಲಕ್ಷ ರೂ.

ಇಡಿ ನೋಟಿಸ್​ ವಿಚಾರವಾಗಿ ಮಾತನಾಡಿದ ಅವರು, ನೋಟಿಸ್ ಓದಿದ್ದೇನೆ, ಲಾಯರ್ ಜತೆ ಚರ್ಚಿಸಿ ವಿಚಾರಣೆಗೆ ಹೋಗುವೆ. ನೋಟಿಸ್ ನೀಡೋದು ಏನಿತ್ತು, ಪಕ್ಷಕ್ಕೆ ಹಣ ಕೊಡದೆ ಯಾರಿಗೆ ಕೊಡೋಣ ಎಂದು ಹೇಳಿದ್ದಾರೆ.

ನಮ್ಮ ಸರ್ಕಾರದ 6ನೇ ಗ್ಯಾರಂಟಿ ಈ ಭೂಮಿ ಗ್ಯಾರಂಟಿ

‘ಮಾನವನ ಬದುಕು ಶಾಶ್ವತವಲ್ಲ, ಬಿಟ್ಟೋಗುವ ಕೆಲಸ ಶಾಶ್ವತ’. ಮಾತು ನಿಧಾನವಾಗಿರಬೇಕು, ಕಾಯಕ ಪ್ರಧಾನವಾಗಿರಬೇಕು. ಹುಟ್ಟುವಾಗ ಖಾಲಿ ಕೈ, ಹೋಗುವಾಗ ಪಾಪಪುಣ್ಯ ಇರುತ್ತದೆ. ಕೃಷ್ಣ ಭೈರೇಗೌಡರ ಕೆಲಸ ಸರ್ಕಾರದ 6ನೇ ಗ್ಯಾರಂಟಿಯಾಗಿದೆ. ನಮ್ಮ ಸರ್ಕಾರದ 6ನೇ ಗ್ಯಾರಂಟಿ ಈ ಭೂಮಿ ಗ್ಯಾರಂಟಿ. 5 ಗ್ಯಾರಂಟಿ ಯೋಜನೆಗಳು ಸೇರಿ ಕಾಂಗ್ರೆಸ್ ಗಟ್ಟಿಯಾಗಿದೆ. ಗ್ಯಾರಂಟಿ ರೂಪದಲ್ಲಿ 1 ಲಕ್ಷ ಕೋಟಿ ಜನರ ಖಾತೆಗೆ ಹಾಕಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಕರ್ನಾಟಕದಲ್ಲಿ ಶೇ. 63ರಷ್ಟು ಭ್ರಷ್ಟಾಚಾರ: ಉಪಲೋಕಾಯುಕ್ತರ ಹೇಳಿಕೆ ಬೆನ್ನಲ್ಲೇ ಕಾಂಗ್ರೆಸ್​​ ಮೇಲೆ ಮುಗಿಬಿದ್ದ ಬಿಜೆಪಿ

ಮೇಕೆದಾಟು ಯೋಜನೆ ಜಾರಿಯಾದರೆ ಜನರಿಗೆ ನೀರು ಸಿಗುತ್ತದೆ. ಮಂಡ್ಯ, ಮೈಸೂರು ಭಾಗದ ಜನರಿಗೆ ಕಷ್ಟಕಾಲದಲ್ಲಿ ನೀರು ಸಿಗುತ್ತೆ. ದೇವರು ವರ ಅಥವಾ ಶಾಪ ಕೊಡಲ್ಲ, ಕೇವಲ ಅವಕಾಶ ಕೊಡುತ್ತಾನೆ. ಆ ಅವಕಾಶದಲ್ಲಿ ನಾವು ಏನು ಮಾಡುತ್ತೇವೆ ಅನ್ನೋದು ಮುಖ್ಯ. ಬೆಲೆ ಏರಿಕೆಯಿಂದ ಸಂಕಷ್ಟಕ್ಕೆ ಸಿಲುಕಿದವರಿಗೆ ನೆರವಾಗಲು ನಮ್ಮ ಸರ್ಕಾರ 5 ಗ್ಯಾರಂಟಿ ಯೋಜನೆ ಜಾರಿ ಮಾಡಿದೆವು. ನಮ್ಮದು ಅಭಿವೃದ್ಧಿ ಸರ್ಕಾರ, ಹೊಸ ಹುರುಪು ತಂದ ಸರ್ಕಾರ. ಹುಟ್ಟು ನಮ್ಮ ಕೈಯಲ್ಲಿಲ್ಲ, ಗುರಿ ಮುಟ್ಟುವುದು ಮಾತ್ರ ನಮ್ಮ ಕೈಯಲ್ಲಿದೆ. ನಮ್ಮ ಸರ್ಕಾರ ಕೊಟ್ಟ ಮಾತನ್ನು ಉಳಿಸಿಕೊಂಡಿದೆ ಎಂದು ಡಿಕೆ ಶಿವಕುಮಾರ್​ ಹೇಳಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.