ಹಾಸನದಲ್ಲಿ ಹೃದಯ ವಿದ್ರಾವಕ ಘಟನೆ; ಹೆತ್ತವರಿಗೆ ಬೇಡವಾದ ಮಗು ನಾಯಿ ಪಾಲು!

ಜನರು ನಾಯಿಯಿಂದ ಮೃತದೇಹವನ್ನು ಬಿಡಿಸಿದ್ದಾರೆ. ಅಷ್ಟರಲ್ಲೇ ಮಗುವಿನ ತಲೆಯ ಭಾಗ, ಎರಡು ಕೈ ಕಾಲಿನ ಭಾಗವನ್ನ ತಿಂದು ಮುಗಿಸಿದ್ದವು. ಮಗುವಿನ ಕರುಳ ಬಳ್ಳಿಗೆ ಆಸ್ಪತ್ರೆಯಲ್ಲಿ ಹಾಕಿರುವ ಕ್ಲಿಪ್ ಕೂಡ ಹಾಗೇ ಇತ್ತು.

ಹಾಸನದಲ್ಲಿ ಹೃದಯ ವಿದ್ರಾವಕ ಘಟನೆ; ಹೆತ್ತವರಿಗೆ ಬೇಡವಾದ ಮಗು ನಾಯಿ ಪಾಲು!
ಮಗು ಮೃತದೇಹವನ್ನು ಪೊಲಿಸರು ವಶಕ್ಕೆ ಪಡೆದಿದ್ದಾರೆ
Follow us
TV9 Web
| Updated By: sandhya thejappa

Updated on: Feb 06, 2022 | 12:38 PM

ಹಾಸನ: ಮಾನವೀಯತೆ ಸತ್ತಾಗ, ಮನುಷ್ಯತ್ವ ಮರೆತಾಗ ಏನಾಗುತ್ತದೆ ಎನ್ನುವುದಕ್ಕೆ ಹಾಸನದಲ್ಲಿ ಇಂದು (ಫೆ.06) ನಡೆದಿರುವ ಘಟನೆಯೇ ಸಾಕ್ಷಿ. ಸತ್ತ ಮನುಷ್ಯನಿಗೂ ಗೌರವಯುತ ಸಂಸ್ಕಾರ ಆಗಬೇಕು ಎನ್ನುವುದು ಕಾನೂನಿನ ನಿಯಮ ಅಷ್ಟೇ ಅಲ್ಲಾ, ಮನುಷ್ಯತ್ವ ಕೂಡ. ಹಾಗಾಗಿಯೇ ಯಾವುದೇ ಜಾತಿ, ಧರ್ಮ ಇರಲಿ, ಸತ್ತ ವ್ಯಕ್ತಿಗೆ ಸಂಪ್ರದಾಯಬದ್ಧವಾಗಿ ಪೂಜೆ ಸಲ್ಲಿಸಿ ಸಂಸ್ಕಾರ ಮಾಡಲಾಗುತ್ತದೆ. ಆದರೆ ಜಿಲ್ಲೆಯಲ್ಲಿ ಹೆತ್ತ ಹಸುಗೂಸನ್ನ ಬೀದಿಗೆ ಬಿಸಾಡಿ ಹೋಗಿದ್ದು, ಮಗು (Baby) ಮೃತದೇಹವನ್ನು ಬೀದಿ ನಾಯಿಗಳು (Street Dogs) ಎಳೆದಾಡಿಕೊಂಡು ತಿಂದಿವೆ. ಈ ಹೃದಯ ವಿದ್ರಾವಕ ಘಟನೆಗೆ ಹಾಸನದ ಜನತೆ ಮರುಗಿದ್ದಾರೆ.

ಇಂದು ಬೆಳಿಗ್ಗೆ ಹಾಸನ ನಗರದ ಹೊಸ ಬಸ್ ನಿಲ್ದಾಣದ ಬಳಿ ಕೆಲ ಆಟೋ ಚಾಲಕರು ನಾಯಿಯೊಂದು ಏನೊ ಹೊತ್ತೊಯ್ಯುತ್ತಿದೆ ಎಂದು ಗಮನಿಸಿದ್ದಾರೆ. ಪುಟ್ಟ ಮಗುವಿನ ಕಾಲಿನಂತೆ ಕಂಡಿದ್ದರಿಂದ ಹಿಂಬಾಲಿಸಿದ್ದಾರೆ. ಯಾವುದೋ ಪ್ರಾಣಿ ಇರಬೇಕು ಎಂದುಕೊಂಡವರಿಗೆ ಹತ್ತಿರ ಹೋಗಿ ನೋಡಿದಾಗ ಕಂದಮ್ಮನ ಮೃತದೇಹ ಎಂದು ತಿಳಿದಿದೆ. ಬಸ್ ನಿಲ್ದಾಣದ ಸಮೀಪ ಇರುವ ರೈಲ್ವೆ ಟ್ರ್ಯಾಕ್ ಕಡೆಯಿಂದ ನಾಯಿ ಹಸುಗೂಸಿನ ಮೃತದೇಹವನ್ನ ಹೊತ್ತು ತಂದಿದೆ.

ಜನರು ನಾಯಿಯಿಂದ ಮೃತದೇಹವನ್ನು ಬಿಡಿಸಿದ್ದಾರೆ. ಅಷ್ಟರಲ್ಲೇ ಮಗುವಿನ ತಲೆಯ ಭಾಗ, ಎರಡು ಕೈ ಕಾಲಿನ ಭಾಗವನ್ನ ತಿಂದು ಮುಗಿಸಿದ್ದವು. ಮಗುವಿನ ಕರುಳ ಬಳ್ಳಿಗೆ ಆಸ್ಪತ್ರೆಯಲ್ಲಿ ಹಾಕಿರುವ ಕ್ಲಿಪ್ ಕೂಡ ಹಾಗೇ ಇತ್ತು. ಇದನ್ನು ಗಮನಿಸಿದಾಗ ಯಾವುದೋ ಆಸ್ಪತ್ರೆಯಲ್ಲಿ ಹುಟ್ಟಿದ ಗಂಡು ಮಗುವನ್ನ ಹೆತ್ತವರು ಬಿಸಾಡಿ ಹೋಗಿದ್ದಾರೆ ಎಂದು ತಿಳಿದುಬಂದಿದೆ. ಮಗುವಿನ ಮೃತದೇಹವನ್ನ ನಾಯಿಯಿಂದ ರಕ್ಷಣೆ ಮಾಡಿ ಪೊಲೀಸರಿಗೆ ವಿಚಾರ ಮುಟ್ಟಿಸಿದ್ದಾರೆ. ತಕ್ಷಣ ಸ್ಥಳಕ್ಕೆ ಬಂದ ಹಾಸನದ ಬಡಾವಣೆ ಠಾಣೆ ಪೊಲೀಸರು ಮಗುವಿನ ಮೃತದೇಹವನ್ನು ವಶಕ್ಕೆ ಪಡೆದು, ಸ್ಥಳ ಪರಿಶೀಲನೆ ನಡೆಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಆಟೋ ಚಾಲಕ ನಾಗರಾಜ್, ಬೆಳಿಗ್ಗೆ ನಾಯಿ ಮಗು ಮೃತದೇಹವನ್ನು ಹೊತ್ತು ತರುತಿತ್ತು. ನಾವು ನೋಡಿ ಅದನ್ನ ಬಿಡಿಸಿದೆವು. ಹೆರಿಗೆ ಆಗಿ ಎರಡು ಅಥವಾ ಮೂರು ದಿನ ಆಗಿರಬಹುದು. ಬಳಿಕ ಪೊಲೀಸರಿಗೆ ಮಾಹಿತಿ ನೀಡಿದೆವು. ಮಗು ಬೇಡವಾಗಿದ್ದರೆ ಅನಾಥಾಶ್ರಮಕ್ಕೆ ಕೊಡಬಹುದಿತ್ತು. ಆದರೆ ಹೀಗೆ ಮಾಡಿರುವುದು ನಿಜಕ್ಕೂ ಅಕ್ಷಮ್ಯ ಎಂದು ಹೇಳಿದರು.

ರೈಲ್ವೆ ಟ್ರ್ಯಾಕ್ ಕಡೆಯಿಂದ ನಾಯಿ ಮಗುವನ್ನ ಹೊತ್ತು ತಂದಿದೆ. ಕೂಡಲೆ ಅಲ್ಲೇ ಇದ್ದ ಪೊಲೀಸರಿಗೆ ಮಾಹಿತಿ ನೀಡಿದೆವು, ಬಹುತೇಕ ದೇಹದ ಭಾಗವನ್ನು ನಾಯಿ ತಿಂದು ಹಾಕಿವೆ. ಮೂರು ದಿನಗಳ ಗಂಡು ಮಗು ಇದಾಗಿದ್ದು, ಇಂತಹ ಕೃತ್ಯ ನೋಡೋಕೆ ನಿಜಕ್ಕೂ ಬೇಜಾರಾಗುತ್ತದೆ. ಮಕ್ಕಳಿಲ್ಲದೆ ಅದೆಷ್ಟೊ ಜನರು ಕೊರಗುತ್ತಿದ್ದಾರೆ. ಆದರೆ ಈ ಮಗುವಿನ ಪೋಷಕರು ಘೋರ ಅಪರಾಧ ಮಾಡಿದ್ದಾರೆ. ಅವರಿಗೆ ಶಿಕ್ಷೆ ಆಗಲೇ ಬೇಕು ಅಂತ ಯೋಗಣ್ಣ ಎಂಬುವವರು ಅಭಿಪ್ರಾಯಪಟ್ಟರು.

ವರದಿ: ಮಂಜುನಾಥ್ ಕೆ.ಬಿ

ಇದನ್ನೂ ಓದಿ

ಉತ್ತರ ಕನ್ನಡದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಮನೆಗೆ ನುಗ್ಗಿದ ಲಾರಿ! ಮನೆ ಮುಂಭಾಗ ಸಂಪೂರ್ಣ ಜಖಂ

36 ಭಾಷೆಗಳಲ್ಲಿ ಗಾಯನದ ಮೋಡಿ ಮಾಡಿದ್ದ ‘ಬಾಲಿವುಡ್ ನೈಟಿಂಗೇಲ್’; ಅನನ್ಯ ಸಾಧಕಿ ಲತಾ ಮಂಗೇಶ್ಕರ್ ಜೀವನಯಾನದ ಮೆಲುಕು ಇಲ್ಲಿದೆ