
ಹಾಸನ, ಸೆಪ್ಟೆಂಬರ್ 20: ‘ಜಿಲ್ಲೆಯಲ್ಲಿ ಉತ್ತಮ ಅಧಿಕಾರಿಗಳ ತಂಡ ಇದೆ. ಆದರೆ ಇಲ್ಲಿನ ಜಿಲ್ಲಾಧಿಕಾರಿಗೆ ಕಿರುಕುಳ ಇದೆ. ಯಾರಿಂದ ಕಿರುಕುಳ ಇದೆ ಎಂಬುದು ಎಲ್ಲರಿಗೂ ಚೆನ್ನಾಗಿ ಗೊತ್ತಿದೆ’ ಎಂದು ಸಿಎಂ ಡಿಕೆ ಶಿವಕುಮಾರ್ ಹೇಳಿದರು. ಆ ಮೂಲಕ ಮಾಜಿ ಸಚಿವ ಹೆಚ್.ಡಿ. ರೇವಣ್ಣ ವಿರುದ್ಧ ಅವರು ಪರೋಕ್ಷವಾಗಿ ಆಕ್ರೋಶ ಹೊರಹಾಕಿದ್ದಾರೆ.
ಸಕಲೇಶಪುರದಲ್ಲಿ ನಡೆದ ಕಸ್ತೂರಿ ರಂಗನ್ ವರದಿ ಕುರಿತ ನೇರ ಸಂವಾದ ಸಭೆಯಲ್ಲಿ ಮಾತನಾಡಿದ ಸಿಎಂ ಡಿಕೆ ಶಿವಕುಮಾರ್, ‘ನಾನೇ ಖುದ್ದು ಜಿಲ್ಲಾಧಿಕಾರಿಗೆ ಫೋನ್ ಮಾಡಿ ಧೈರ್ಯ ತುಂಬಿದ್ದೇನೆ. ಯಾರಿಗೂ ಹೆದರಿಕೊಳ್ಳುವ ಅವಶ್ಯಕತೆ ಇಲ್ಲ. ಬಡವರ ಪರವಾಗಿ ಕೆಲಸ ಮಾಡಮ್ಮ’ ಎಂದು ಹೇಳಿದ್ದೇನೆ ಎಂದರು.
ಇತ್ತೀಚೆಗೆ ಗ್ರಾಮ ಪಂಚಾಯಿತಿ ಚುನಾವಣಾ ಮೀಸಲಾತಿ ಹಂಚಿಕೆಗೆ ಸಂಬಂಧಿಸಿದಂತೆ ಮಾಜಿ ಸಚಿವ ಹೆಚ್.ಡಿ. ರೇವಣ್ಣ ಹಾಗೂ ಹಾಸನ ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ಅವರ ನಡುವೆ ತೀವ್ರ ಮಾತಿನ ಸಮರವೇ ನಡೆದಿತ್ತು. ಈ ವೇಳೆ ರೇವಣ್ಣ ಅವರು ಜಿಲ್ಲಾಧಿಕಾರಿಯವರ ವಿರುದ್ಧ ಸಾರ್ವಜನಿಕವಾಗಿ ಆಕ್ಷೇಪಾರ್ಹ ಹೇಳಿಕೆ ನೀಡಿದ್ದರು. ಡಿಸಿ ಕೂಡ ತಮ್ಮ ಮೇಲಿನ ಆರೋಪಗಳಿಗೆ ಖಡಕ್ ತಿರುಗೇಟು ನೀಡಿದ್ದರು. ಈ ವಿಚಾರ ಸಾಕಷ್ಟು ಚರ್ಚೆಗೂ ಗ್ರಾಸವಾಗಿತ್ತು.
ಇನ್ನು ಇದೇ ಸಂದರ್ಭದಲ್ಲಿ ತಮ್ಮ ಅಧಿಕಾರದ ಅವಧಿಯ ಬಗ್ಗೆ ಮಾರ್ಮಿಕವಾಗಿ ಮಾತನಾಡಿದ ಡಿಕೆ ಶಿವಕುಮಾರ್, ‘ನನಗೆ ಎಷ್ಟು ದಿನ ಸಮಯವಿದೆಯೋ ಗೊತ್ತಿಲ್ಲ. ಎಲ್ಲಿಯವರೆಗೂ ನನ್ನ ಶ್ರಮ ಇರುತ್ತದೆಯೋ, ಅಲ್ಲಿಯವರೆಗೂ ಜನರಿಗೆ ಸ್ಪಂದಿಸುತ್ತೇನೆ. ಅಲ್ಲಿಯವರೆಗೂ ನನಗೆ ಶಕ್ತಿ ಇರುತ್ತದೆ’ ಎಂದು ಹೇಳಿದರು.
ಇದನ್ನೂ ಓದಿ: ಹಾಸನದಲ್ಲಿ ಮತ್ತೆ ಹೆಚ್.ಡಿ.ರೇವಣ್ಣ v/s ಜಿಲ್ಲಾಧಿಕಾರಿ: ಗ್ರಾ.ಪಂ.ಗಳ ಚುನಾವಣೆ ಮೀಸಲು ಸಂಬಂಧ ಜಟಾಪಟಿ
‘ದೇವರು ವರವನ್ನೂ ಕೊಡಲ್ಲ, ಶಾಪವನ್ನೂ ಕೊಡಲ್ಲ, ಕೇವಲ ಅವಕಾಶ ಕೊಡುತ್ತಾನೆ. ನೀವು ನನಗೊಂದು ಅವಕಾಶ ಕೊಟ್ಟಿದ್ದೀರಿ, ನಾನು ನಿಮ್ಮ ಕೆಲಸ ಮಾಡುತ್ತೇನೆ. ಇದೇ ವೇಳೆ, ‘ಬಿಜೆಪಿ ಸ್ನೇಹಿತರು ಅವರ ಸಾಧನೆಗಳನ್ನು ಹೇಳಿಕೊಳ್ಳಲಿ, ಬೇಡ ಎನ್ನಲ್ಲ. ಆದರೆ ಕೆಲಸ ಮಾಡದೆ ಹೋದಾಗ ಪ್ರಶ್ನಿಸಬೇಕಾಗುತ್ತದೆ’ ಎಂದಿದ್ದಾರೆ.
ಸ್ಥಳೀಯ ನಾಯಕರ ಕಾರ್ಯವೈಖರಿ ಕುರಿತು ಪ್ರಸ್ತಾಪಿಸಿದ ಅವರು, ‘ಶಿವಲಿಂಗೇಗೌಡರಿಗೆ ಅಧಿಕಾರದಲ್ಲಿ ಅವಕಾಶ ನೀಡಿದ್ದೇವೆ. ಅವರೇನು ಪದೇ ಪದೇ ಬೆಂಗಳೂರಿಗೆ ಬರುವ ಅವಶ್ಯಕತೆ ಇಲ್ಲ. ಹಳ್ಳಿ ಹಳ್ಳಿಗೆ ತಿರುಗಿ ಜನರ ಸಮಸ್ಯೆಗಳನ್ನು ಆಲಿಸಿ ಬಗೆಹರಿಸುವ ಕೆಲಸ ಮಾಡಲಿ’ ಎಂದು ಕಿವಿಮಾತು ಹೇಳಿದರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.