ಬರಗಾಲದ ಮಧ್ಯೆ ಖಾಸಗಿ ಬ್ಯಾಂಕ್ ಸಿಬ್ಬಂದಿಯಿಂದ ಅಮಾನವೀಯ ಕೃತ್ಯ: ಮುರಿದು ಬಿದ್ದ ಮನೆಯೂ ಸೀಜ್; ಕುಟುಂಬ ಬೀದಿಗೆ

ಬರಗಾಲದಿಂದ ಸಂಕಷ್ಟದಲ್ಲಿರುವ ರೈತ ಕುಟುಂಬದ ಮನೆ ಅಡಮಾನ ಮಾಡಿ ಪಡೆದ 12 ಲಕ್ಷ ಸಾಲ ಮರುಪಾವತಿಸಲಾಗದೆ, ಖಾಸಗಿ ಬ್ಯಾಂಕ್ ಮನೆ ಜಪ್ತಿ ಮಾಡಿದೆ. ನೆಲೆ ಕಳೆದುಕೊಂಡು ಬೀದಿಪಾಲಾಗಿದ್ದ ಕುಟುಂಬಕ್ಕೆ ರೈತ ಸಂಘದ ಸದಸ್ಯರು ಆಸರೆ ಆಗಿದ್ದು, ಬ್ಯಾಂಕ್ ಹಾಕಿದ್ದ ಬೀಗ ಮುರಿದು ಕುಟುಂಬವನ್ನು ಮರಳಿ ಮನೆಯೊಳಗೆ ಸೇರಿಸಿದ್ದಾರೆ. ಇಂತಹ ದೌರ್ಜನ್ಯ ನಿಲ್ಲಿಸಿ ಎಂದು ರೈತ ಸಂಘ ಆಗ್ರಹಿಸಿದೆ.

ಬರಗಾಲದ ಮಧ್ಯೆ ಖಾಸಗಿ ಬ್ಯಾಂಕ್ ಸಿಬ್ಬಂದಿಯಿಂದ ಅಮಾನವೀಯ ಕೃತ್ಯ: ಮುರಿದು ಬಿದ್ದ ಮನೆಯೂ ಸೀಜ್; ಕುಟುಂಬ ಬೀದಿಗೆ
ಖಾಸಗಿ ಬ್ಯಾಂಕ್​​​​ಗಳಿಂದ ದೌರ್ಜನ್ಯ
Image Credit source: tv9 kannada
Edited By:

Updated on: Sep 04, 2026 | 5:22 PM

ಹಾಸನ, ಸೆಪ್ಟೆಂಬರ್​​ 04: ಒಂದೆಡೆ ಬೆಳೆ ಕಳೆದುಕೊಂಡು ಅನ್ನದಾತ ಕಂಗಾಲಾಗಿದ್ದರೆ, ಮತ್ತೊಂದೆಡೆ ಸಾಲ ವಸೂಲಾತಿಯ ಹೆಸರಿನಲ್ಲಿ ಖಾಸಗಿ ಸ್ಮಾಲ್ ಫೈನಾನ್ಸ್ ಬ್ಯಾಂಕ್‌ಗಳ ಅಮಾನವೀಯ ದೌರ್ಜನ್ಯ ಮಿತಿಮೀರುತ್ತಿದೆ. ಬದುಕು ಕಟ್ಟಿಕೊಳ್ಳಲು ಇದ್ದ ಪುಟ್ಟ ಮನೆಯನ್ನೇ ಅಡವಿಟ್ಟು ಸಾಲ ಪಡೆದಿದ್ದ ಬಡ ಕುಟುಂಬವೊಂದು ಪ್ರಕೃತಿ ವಿಕೋಪದಿಂದ ಸಂಕಷ್ಟಕ್ಕೆ ಸಿಲುಕಿದರೆ, ಕನಿಷ್ಠ ಮಾನವೀಯತೆಯನ್ನೂ ತೋರದ ಬ್ಯಾಂಕ್ ಸಿಬ್ಬಂದಿ ಮುರಿದು ಬಿದ್ದಿದ್ದ ಮನೆಯನ್ನೇ ಸೀಜ್ ಮಾಡಿ ಕುಟುಂಬವನ್ನು ಬೀದಿಗೆ ತಳ್ಳಿದ್ದಾರೆ. ಹಾಸನ ತಾಲೂಕಿನ ಉಗನೆ ಕೊಪ್ಪಲು ಗ್ರಾಮದಲ್ಲಿ ನಡೆದಿರುವ ಈ ಘಟನೆ ಸಾರ್ವಜನಿಕರ ಕಣ್ಣೀರು ತರಿಸುವಂತಿದೆ.

ಇದ್ದ ಮನೆಯನ್ನೇ ಅಡವಿಟ್ಟು 12 ಲಕ್ಷ ರೂ ಸಾಲ

ಹಾಸನ ತಾಲೂಕಿನ ಉಗನೆ ಕೊಪ್ಪಲು ಗ್ರಾಮದಲ್ಲಿ ರೈತ ಮಹಿಳೆ ಸುಮಾ ತಮ್ಮ ಮನೆಯನ್ನ ಅಡವಿಟ್ಟು 12 ಲಕ್ಷ ರೂ ಸಾಲ ಪಡೆದುಕೊಂಡಿದ್ದರು. 2023ರಲ್ಲಿ ಲೋನ್ ಪಡೆದು ಎರಡು ವರ್ಷ ಲೋನ್ ಕಟ್ಟಿ 3 ಲಕ್ಷ ಸಾಲವನ್ನು ತೀರಿಸಿದ್ದಾರೆ. ಆದರೆ ಆರಂಭದಲ್ಲಿ 9 ಪರ್ಸೆಂಟ್ ಎಂದು ಹೇಳಿ ನಂತರ ದುಬಾರಿ ಬಡ್ಡಿ ಹಾಕಿದ್ದಾರೆ. ಜೊತೆಗೆ ಅಡವಿಟ್ಟ ಮನೆಯೇ ಮಳೆಗೆ ಬಿದ್ದು ಹೋಗಿದ್ದರಿಂದ ಸಂಕಷ್ಟಕ್ಕೆ ಸಿಲುಕಿದ್ದ ಕುಟುಂಬ ಮುರುಕಲು ಮನೆಯಲ್ಲೇ ವಾಸವಾಗಿದ್ದರು. ಆದರೆ ಸಾಲ ಕಟ್ಟಿಲ್ಲ ಎಂದು ಕ್ವೆಟಾಸ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಕೇಸ್ ದಾಖಲು ಮಾಡಿದೆ. ಕೋರ್ಟ್​ನಲ್ಲಿ ವಿಚಾರಣೆ ಬಳಿಕ ಮನೆ ಸೀಜ್​ಗೆ ಆದೇಶ ಬಂದಿದೆ ಎಂದು 12 ದಿನಗಳ ಹಿಂದೆ ಮನೆ ಬಳಿ ಬಂದ ಸಿಬ್ಬಂದಿ ಮನೆಮಂದಿಯನ್ನ ಆಚೆ ಹಾಕಿ ಮನೆಗೆ ಬೀಗ ಜಡಿದಿದ್ದಾರೆ.

ಇದನ್ನೂ ಓದಿ: ಹಾಸನ: ಸಬ್ಸಿಡಿ ಆಸೆ ತೋರಿಸಿ ರೈತರಿಗೆ ಲಕ್ಷಾಂತರ ರೂ. ವಂಚನೆ!

ನೆಲೆ ಕಳೆದುಕೊಂಡ ಕುಟುಂಬ ಬೀದಿಪಾಲಾಗಿತ್ತು. ಈ ವಿಚಾರ ತಿಳಿದು ಇಂದು ಸ್ಥಳಕ್ಕೆ ಬಂದ ರಾಜ್ಯ ರೈತ ಸಂಘದ ಪ್ರಮುಖರು ಮನೆಗೆ ಹಾಕಿದ್ದ ಬೀಗವನ್ನ ಮುರಿದು ಬಡ ಕುಟುಂಬವನ್ನ ಮನೆಗೆ ಸೇರಿಸಿದ್ದಾರೆ. ವಾಸಕ್ಕೆ ಪರ್ಯಾಯ ಮನೆ ಇಲ್ಲದಿದ್ದರೆ ಮನೆ ಸೀಜ್​​ ಮಾಡುವಂತಿಲ್ಲ ಎನ್ನುವ ನಿಯಮವಿದೆ. ಮನೆ ಸೀಜ್​ ಮಾಡಿದರೆ ಮನೆಯಲ್ಲಿದ್ದ ಆಸ್ತಿಪಾಸ್ತಿಗಳ ಪಟ್ಟಿ ಮಾಡಿ ಕೊಡಬೇಕು. ಲೋನ್ ಕೊಡುವಾಗ ಅವರಿಗೆ ಇಷ್ಟು ದೊಡ್ಡ ಮೊತ್ತದ ಸಾಲ ತೀರಿಸಲು ಮೂಲ ಇದೆಯಾ ಎಂದು ಖಚಿತ ಮಾಡಿಕೊಳ್ಳಬೇಕಿತ್ತು. ಆದರೆ ಯಾವುದನ್ನು ಮಾಡದೆ ಏಕಾಏಕಿ ದೊಡ್ಡ ಮೊತ್ತದ ಸಾಲ ನೀಡಿ ಈಗ ಕಿರುಕುಳ ನೀಡಲಾಗುತ್ತಿದೆ ಎಂದು ರೈತ ನಾಯಕರು ಆಕ್ರಶೋ ಹೊರಹಾಕಿದ್ದಾರೆ.

ಇನ್ನು ಅದೇ ಗ್ರಾಮದ ರತ್ನಮ್ಮ ಮತ್ತು ರುಗುವಯ್ಯ ದಂಪತಿ ಕೂಡ ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ದಂಪತಿಗೆ ಓರ್ವ ಮಗನಿದ್ದು, ಏನಾದರೂ ವ್ಯವಹಾರ ಮಾಡಲಿ ಎಂಬ ಆಸೆಯಿಂದ ಇರುವ ತುಂಡು ಭೂಮಿಯಲ್ಲಿ ತೋಟ ಮಾಡಲೆಂದು ಮನೆಯನ್ನ ಅಡವಿಟ್ಟು ಸಾಲ ಪಡೆದುಕೊಂಡಿದ್ದಾರೆ. ತಿಂಗಳಿಗೆ 18 ಸಾವಿರದಂತೆ ಮೂರು ವರ್ಷ ಲೋನ್ ಕೂಡ ಕಟ್ಟಿದ್ದಾರೆ. ಆದರೆ ಯಾವಾಗ ಮಳೆಯಿಂದ ಮನೆ ಬಿತ್ತೋ ಆಗ ಮನೆ ನಿರ್ಮಾಣ ಮಾಡಿಕೊಳ್ಳಲು ಆಗದೆ ಜಮೀನು ಅಭಿವೃದ್ದಿಯನ್ನೂ ಮಾಡಲಾಗದೆ ಕುಟುಂಬ ಸಂಕಷ್ಟಕ್ಕೆ ಸಿಲುಕಿದೆ. ಆದರೆ ಫೈನಾನ್ಸ್ ಕಂಪನಿಯವರು ಕಾನೂನು ಹೋರಾಟ ಶುರು ಮಾಡಿ ಮನೆಯನ್ನು ಸೀಜ್​​ ಮಾಡಿದ್ದಾರೆ.

ಬಡ ಕುಟುಂಬವನ್ನು ಬೀದಿಗೆ ತಳ್ಳಿದ ಬ್ಯಾಂಕ್ ಸಿಬ್ಬಂದಿ

ಎರಡು ವರ್ಷಗಳ ಹಿಂದೆ ಮೈಕ್ರೋ ಫೈನಾನ್ಸ್​ಗಳ ಕಿರುಕುಳ ಹೆಚ್ಚಾಗಿದ್ದಾಗ ಇಂತಹ ದೌರ್ಜನ್ಯ ಎಸಗದಂತೆ ಕಾನೂನು ಜಾರಿ ಮಾಡಲಾಗಿತ್ತು. ಆದರೆ ಈಕ್ವೆಟಾಸ್ ಕಂಪನಿ ಮೈಕ್ರೋ ಫೈನಾನ್ಸ್ ಅಲ್ಲದಿದ್ದರೂ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಎಂದು ಹೆಸರಿಟ್ಟುಕೊಂಡು ಅರ್ಹತೆಯೇ ಇಲ್ಲದವರಿಗೆ ಸಾಲದ ಆಸೆ ತೋರಿಸಿ ಸಾಲ ನೀಡುವುದು. ಅವರು ಹಣ ಕಟ್ಟದಿದ್ದಾಗ ಮನೆ ಆಸ್ತಿ ಸೀಜ್​​ ಮಾಡಲಾಗುತ್ತಿದೆ ಎನ್ನುವುದು ರೈತರ ಆಕ್ರೊಶ. ಕಳೆದ ಮೂರು ತಿಂಗಳಲ್ಲಿ ಇದು ಐದನೇ ಪ್ರಕರಣ. ಬಳಿಕ ರೈತ ನಾಯಕರು ಮನೆ ಬಾಗಿಲಿಗೆ ಹಾಕಿದ್ದ ಬೀಗ ಒಡೆದು ನೊಂದ ಕುಟುಂಬಗಳನ್ನ ಮತ್ತೆ ಮನೆ ಸೇರಿಸಿದ್ದಾರೆ. ಜಿಲ್ಲಾಡಳಿತಕ್ಕೆ ದೂರು ನೀಡಿದರೆ ಯಾರೂ ದೌರ್ಜನ್ಯ ಮಾಡುವಂತಿಲ್ಲ ಅಂತಾರೆ ಆದರೆ ಖಾಸಗಿ ಫೈನಾನ್ಸ್ ಬ್ಯಾಂಕ್ ಸಿಬ್ಬಂದಿ ಮಾತ್ರ ಈ ರೀತಿ ದೌರ್ಜನ್ಯ ಮಾಡುತ್ತಿದ್ದಾರೆ. ಇತ್ತ ನೊಂದ ಕುಟುಂಬಗಳು ಕಣ್ನೀರಿಡುತ್ತಿದ್ದು, ಕಾನೂನು ಹೋರಾಟವನ್ನು ಮಾಡಲಾಗದೆ, ಸಾಲವನ್ನು ಕಟ್ಟಲಾಗದೆ ಸಂಕಷ್ಟಕ್ಕೆ ಸಿಲುಕಿ ಪರದಾಡುತ್ತಿದ್ದಾರೆ.

ಇದನ್ನೂ ಓದಿ: Toll Price Hike: ನೆಲಮಂಗಲ-ಹಾಸನ ಹೆದ್ದಾರಿ ಟೋಲ್ ದರ ಹೆಚ್ಚಳ: ವಾಹನ ಸವಾರರ ಆಕ್ರೋಶ

ಸಾಲ ಕೊಟ್ಟವರು ಅದನ್ನು ನಿಯಮಾನುಸಾರ ವಸೂಲಿ ಮಾಡುವುದಕ್ಕೆ ಯಾರದ್ದೂ ತಕರಾರಿಲ್ಲ, ಆದರೆ ಸಾಲದ ನೆಪದಲ್ಲಿ ಬಡ ಕುಟುಂಬಗಳ ಅನ್ನ, ಆಶ್ರಯ ಕಸಿದು ಬೀದಿಗೆ ತಳ್ಳುವ ಈ ಅಮಾನವೀಯ ಪ್ರವೃತ್ತಿ ನಿಲ್ಲಬೇಕು. ಇಂತಹ ಖಾಸಗಿ ಬ್ಯಾಂಕ್‌ಗಳ ದಬ್ಬಾಳಿಕೆ ವಿರುದ್ಧ ಜಿಲ್ಲಾಡಳಿತ ಮತ್ತು ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕೆಂಬುದು ಸಂತ್ರಸ್ತರು ಹಾಗೂ ರೈತ ಸಂಘಟನೆಯ ಒಕ್ಕೊರಲ ಆಗ್ರಹವಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Loading...
Unable to load recommendations.
Follow Us