ಮೀಟರ್ ಬಡ್ಡಿದಾರರ ಕಿರುಕುಳಕ್ಕೆ ಸರ್ಕಾರಿ ನೌಕರ ಬಲಿ; ಆರೋಪಿಗಳ ವಿರುದ್ಧ ಕ್ರಮಕ್ಕೆ ಕುಟುಂಬಸ್ಥರ ಒತ್ತಾಯ
ಆರೋಪಿಗಳು 2021ರಲ್ಲಿ ವಾರದ ಲೆಕ್ಕದಲ್ಲಿ ಹತ್ತು ಪರ್ಸೆಂಟ್ ಬಡ್ಡಿಗಾಗಿ ಹಣ ನೀಡಿದ್ದರು. ಐವತ್ತು ಸಾವಿರ ಸಾಲಕ್ಕೆ ಈಗಾಗಲೆ ತಲಾ ಎರಡು ಲಕ್ಷ ಹಣ ನೀಡಿದ್ದರೂ ಮತ್ತೆ ಅಸಲು ಹಾಗು ಬಡ್ಡಿಗಾಗಿ ಕಿರುಕುಳ ನೀಡಿ ಹಲ್ಲೆ ಮಾಡಿದ್ದು ಕೋಮಾಗೆ ಜಾರಿದ್ದ ದೇವರಾಜ್ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.
ಹಾಸನ, ಜ.28: ಮೀಟರ್ ಬಡ್ಡಿದಾರರ ಕಿರುಕುಳಕ್ಕೆ ಸರ್ಕಾರಿ ನೌಕರ ಬಲಿ (Death) ಆದ ಆರೋಪ ಕೇಳಿ ಬಂದಿದೆ. ಹಾಸನ ಜಿಲ್ಲೆ ಬೇಲೂರು ತಾಲೂಕಿನ ಗಿರಿಗದ್ದೆ ಗ್ರಾಮದಲ್ಲಿ ತಾ.ಲಕ್ಕುಂದ ಗ್ರಾಮ ಪಂಚಾಯತ್ ಕಾರ್ಯದರ್ಶಿ ದೇವರಾಜ್(52) ಎಂಬುವವರು ಮೀಟರ್ ಬಡ್ಡಿದಾರರ ಕಿರುಕುಳಕ್ಕೆ ಬಲಿಯಾಗಿದ್ದಾರೆ ಎನ್ನಲಾಗುತ್ತಿದೆ. ಐವತ್ತು ಸಾವಿರ ಸಾಲ ಕೊಟ್ಟು ಲಕ್ಷ ಲಕ್ಷ ವಸೂಲಿ ಮಾಡಿ ಕಿರುಕುಳ ನೀಡಲಾಗಿದೆ ಎನ್ನಲಾಗುತ್ತಿದೆ. ಕಿರುಕುಳ ನೀಡಿದ ಆರೋಪದಲ್ಲಿ ಇಬ್ಬರ ವಿರುದ್ದ ಕೊಲೆ ಕೇಸ್ ದಾಖಲಾಗಿದೆ.
ಪರಿಚಿತರಾದ ಭಾಸ್ಕರ್ ಹಾಗೂ ಖುಷಿ ಎಂಬುವವರಿಂದ ದೇವರಾಜ್ ತಲಾ ಐವತ್ತು ಸಾವಿರ ಹಣ ಸಾಲ ಪಡೆದಿದ್ದರು. ಆರೋಪಿಗಳು 2021ರಲ್ಲಿ ವಾರದ ಲೆಕ್ಕದಲ್ಲಿ ಹತ್ತು ಪರ್ಸೆಂಟ್ ಬಡ್ಡಿಗಾಗಿ ಹಣ ನೀಡಿದ್ದರು. ಐವತ್ತು ಸಾವಿರ ಸಾಲಕ್ಕೆ ಈಗಾಗಲೆ ತಲಾ ಎರಡು ಲಕ್ಷ ಹಣ ನೀಡಿದ್ದರೂ ಮತ್ತೆ ಅಸಲು ಹಾಗು ಬಡ್ಡಿಗಾಗಿ ಕಿರುಕುಳ ನೀಡುತ್ತಿದ್ದರು. ಹಣ ನೀಡುವಂತೆ ಒತ್ತಾಯಿಸಿ ಜನವರಿ 7 ರಂದು ಇಬ್ಬರು ಆರೋಪಿಗಳೂ ದೇವರಾಜ್ ಅವರ ಮೇಲೆ ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಹಲ್ಲೆಯಿಂದ ತಲೆಗೆ ಪೆಟ್ಟಾಗಿ ಕೋಮಾ ಸ್ಥಿತಿಗೆ ತಲುಪಿದ್ದ ದೇವರಾಜ್ ಸತತ 20 ದಿನಗಳ ಚಿಕಿತ್ಸೆ ನಂತರ ಚಿಕಿತ್ಸೆ ಫಲಿಸದೆ ನಿನ್ನೆ ರಾತ್ರಿ ಪ್ರಾಣ ಬಿಟ್ಟಿದ್ದಾರೆ. ಆರೋಪಿಗಳ ವಿರುದ್ದ ಅರೆಹಳ್ಳಿ ಪೊಲೀಸ್ ಠಾಣೆಯಲ್ಲಿ ಕೊಲೆ ಕೇಸ್ ದಾಖಲಾಗಿದೆ. ಆರೋಪಿಗಳ ಬಂಧನಕ್ಕೆ ಕುಟುಂಬ ಸದಸ್ಯರು ಒತ್ತಾಯಿಸಿದ್ದಾರೆ. ಅರೆಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇದನ್ನೂ ಓದಿ: ಮಂಡ್ಯದ ಕೆರಗೋಡಿನಲ್ಲಿ ಹನುಮ ಧ್ವಜ ತೆರುವು: ಗ್ರಾಮಸ್ಥರು-ಸರ್ಕಾರದ ನಡುವೆ ಜಟಾಪಟಿ ಏಕೆ? ಇಲ್ಲಿದೆ ಕಾರಣ
ಮೀಟರ್ ಬಡ್ಡಿ ದಂಧೆಕೋರರಿಗೆ ಎಸ್ಪಿ ಖಡಕ್ ವಾರ್ನಿಂಗ್
ತುಮಕೂರಿನಲ್ಲಿ ಮೀಟರ್ ಬಡ್ಡಿ ದಂಧೆ ಹೆಚ್ಚಳ ಹಿನ್ನೆಲೆ ಮೀಟರ್ ಬಡ್ಡಿ ದಂಧೆಕೋರರಿಗೆ ತುಮಕೂರು ಎಸ್ಪಿ ಅಶೋಕ್ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ. The Karnataka prohibition of charging exorbitant interest act ಪ್ರಕಾರ ವರ್ಷಕ್ಕೆ 18% ಗಿಂತ ಹೆಚ್ಚು ಬಡ್ಡಿ ವಿಧಿಸಿ ವ್ಯವಹಾರ ಮಾಡುತ್ತಿದ್ದರೆ ಕೂಡಲೇ ಸ್ಥಳೀಯ ಪೊಲೀಸ್ ಪಿಎಸ್ಐ, ಸಿಪಿಐ ಅಥವಾ ಡಿವೈಎಸ್ಪಿಗಳಿಗೆ ಸಂಪರ್ಕ ಮಾಡಿ ದೂರು ನೀಡಲು ಮನವಿ ಮಾಡಿದ್ದಾರೆ. ಇದರ ಜೊತೆಗೆ ಜಿಲ್ಲಾ ಪೊಲೀಸ್ ಕಚೇರಿಯ ಸಹಾಯವಾಣಿ ನಂಬರ್ 9480802900 ಗೆ ಕರೆ ಮಾಡಿ ದೂರು ನೀಡಬಹುದು ಎಂದು ತಿಳಿಸಿದ್ದಾರೆ. ತುಮಕೂರು ಜಿಲ್ಲೆಯಲ್ಲಿ ಬಡ್ಡಿ ದಂಧೆಗೆ ಕಡಿವಾಣ ಹಾಕಲು ಎಸ್ಪಿ ಮುಂದಾಗಿದ್ದಾರೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ