AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಾಸನದಲ್ಲಿ ಜೆಸಿಬಿ ಗರ್ಜನೆ, 15ಕೋಟಿ ರೂ. ಮೌಲ್ಯದ ಅರಣ್ಯ ಭೂಮಿ ಒತ್ತುವರಿ ತೆರವು

ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನಲ್ಲಿ 27 ಎಕರೆ ಅರಣ್ಯ ಭೂಮಿಯ ಒತ್ತುವರಿಯನ್ನು ಅರಣ್ಯ ಇಲಾಖೆ ತೆರವುಗೊಳಿಸಿದೆ. ಅರಣ್ಯ ಸಚಿವ ಈಶ್ವರ ಖಂಡ್ರೆ ಅವರ ಆದೇಶದ ಹಿನ್ನೆಲೆಯಲ್ಲಿ ಈ ಕ್ರಮ ಜರುಗಿದೆ. ಸುಮಾರು 10-15 ಕೋಟಿ ರೂಪಾಯಿ ಮೌಲ್ಯದ ಅರಣ್ಯ ಭೂಮಿಯನ್ನು ಕೆಲವರು ಅಕ್ರಮವಾಗಿ ಒತ್ತುವರಿ ಮಾಡಿದ್ದರು. ಈ ಘಟನೆಯಿಂದ ಅರಣ್ಯ ಭೂಮಿ ಒತ್ತುವರಿಗೆ ಕಡಿವಾಣ ಬೀಳಲಿದೆ ಎಂಬ ನಿರೀಕ್ಷೆಯಿದೆ.

ಮಂಜುನಾಥ ಕೆಬಿ
| Updated By: ವಿವೇಕ ಬಿರಾದಾರ|

Updated on: May 18, 2025 | 5:08 PM

Share

ಹಾಸನ, ಮೇ 18: ಅರಣ್ಯ ಇಲಾಖೆ ಸಚಿವ ಈಶ್ವರ ಖಂಡ್ರೆ (Eshwar Khandre) ಅವರ ಸೂಚನೆ ಹಿನ್ನೆಲೆಯಲ್ಲಿ, ರವಿವಾರ (ಮೇ.18) ಬೆಳಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳು ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಬಾಗೂರು ಹೋಬಳಿಯ ಮಡಬ ಗ್ರಾಮದಲ್ಲಿನ 27 ಎಕರೆ ಅರಣ್ಯ ಭೂಮಿ ಒತ್ತುವರಿ ತೆರವು (Forest Land Encroachment Clear) ಮಾಡಿದ್ದಾರೆ. ಮಡಬ ಗ್ರಾಮದ ಸರ್ವೆ ನಂ. 27ರಲ್ಲಿ ಸುಮಾರು 10-15 ಕೋಟಿ ರೂ. ಬೆಲೆ ಬಾಳುವ 26 ಎಕರೆ 33 ಗುಂಟೆ ಅರಣ್ಯ ಜಮೀನನ್ನು ಕೆಲವರು ಒತ್ತುವರಿ ಮಾಡಿದ್ದರು. ಇಲ್ಲಿದ್ದ ಮರಗಳನ್ನು ಕಡಿದು ತೋಟ ಮಾಡುವ ದುಸ್ಸಾಹಸ ಮಾಡಿದ್ದರು.

ಈ ಬಗ್ಗೆ ಅರಣ್ಯ ಇಲಾಖೆ ಕಚೇರಿಗೆ ಬಂದ ದೂರು ಆಧರಿಸಿ ಸಚಿವ ಈಶ್ವರ ಖಂಡ್ರೆ, ಕಾನೂನು ರೀತಿ ಕ್ರಮ ಜರುಗಿಸುವಂತೆ ಕಳೆದ ವರ್ಷ ಅಕ್ಟೋಬರ್ 23ರಂದು ಸೂಚನೆ ನೀಡಿದ್ದರು. ಈ ಜಮೀನು ಮೀಸಲು ಅರಣ್ಯವಾಗಿದ್ದು, ಅರಣ್ಯ ಒತ್ತುವರಿ ಮಾಡಿ ಮರ, ಗಿಡ ನಾಶ ಮಾಡಿ, ತೋಟ ಮಾಡಿದವರ ವಿರುದ್ಧ ಅರಣ್ಯ ಇಲಾಖೆ ಪ್ರಕರಣ ದಾಖಲಿಸಿಕೊಂಡಿತ್ತು. ಇದೀಗ, ಜೆಸಿಬಿಯೊಂದಿಗೆ ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ಅರಣ್ಯ ಭೂಮಿ ತೆರವು ಮಾಡಿದ್ದಾರೆ. ಸ್ಥಳೀಯ ಪ್ರಬೇಧದ ಸಸಿಗಳನ್ನು ನೆಟ್ಟು, ಫಲಕ ಹಾಕಿದ್ದಾರೆ.

ಖಂಡ್ರೆ ಕ್ರಮಕ್ಕೆ ಗ್ರಾಮಸ್ಥರ ಮೆಚ್ಚುಗೆ:

ಕೆಲವು ವರ್ಷಗಳಿಂದ ಜಿಲ್ಲೆಯಲ್ಲಿ ಶುಂಠಿ ಬೆಳೆಯುವ ಹೆಸರಲ್ಲಿ ಕೆಲವರು ನಕಲಿ ದಾಖಲೆ ಸೃಷ್ಟಿಸಿಕೊಂಡು, ಅರಣ್ಯ ಭೂಮಿ ಕಬಳಿಸಿ, ಬೆಲೆ ಬಾಳುವ ಮರ ಕಡಿದು ನಂತರ ತೋಟ ಮಾಡುತ್ತಿದ್ದಾರೆ. ಕಂದಾಯ ಇಲಾಖೆಯ ಕೆಲವು ಅಧಿಕಾರಿಗಳು ಅರಣ್ಯ ಭೂಮಿಯನ್ನು ಅಕ್ರಮ ಮಂಜೂರಾತಿ ಮಾಡುತ್ತಿದ್ದಾರೆ. ಈಶ್ವರ ಖಂಡ್ರೆ ಅವರು ಅರಣ್ಯ ಸಚಿವರಾದ ಮೇಲೆ ಇಂತಹ ಅಕ್ರಮಗಳಿಗೆ ಕಡಿವಾಣ ಬಿದ್ದಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ
Image
ಹಾಸನದ ಕಲ್ಲಹಳ್ಳಿ ಬಳಿಯ ಪ್ರಪಾತದಲ್ಲಿ ವ್ಯಕ್ತಿಯ ಮೃತದೇಹ ಪತ್ತೆ
Image
ತಂದೆ ಮುಂದೆಯೇ ಮಗಳ ಕಿಡ್ನಾಪ್, ಕಾರಿನಲ್ಲಿ ಜೋತಾಡಿದ ಅಪ್ಪ
Image
ಆಪರೇಷನ್ ಸಿಂಧೂರ್​​ ಬೆನ್ನಲ್ಲೇ ಕರ್ನಾಟದ ಡ್ಯಾಂಗಳಲ್ಲಿ ಹೈ ಅಲರ್ಟ್
Image
ಎತ್ತಿನಹೊಳೆಗೆ ಅರಣ್ಯ ಇಲಾಖೆಯ ತೊಡಕು ನಿವಾರಣೆ: ಕಾಲುವೆಗೆ ಮುಹೂರ್ತ ಫಿಕ್ಸ್

ಇದನ್ನೂ ಓದಿ: ಕಾಡಾನೆ ದಾಳಿಯಿಂದ 5 ಸಾವು, ಗಜರಾಜನ ಸೆರೆಗೆ ಕಾರ್ಯಾಚರಣೆ ಆರಂಭ

ಎಚ್ಚರಿಕೆಯ ಗಂಟೆ:

ಅರಣ್ಯ ಭೂಮಿಯನ್ನು ಮನಸೋಇಚ್ಛೆ ಒತ್ತುವರಿ ಮಾಡಿ ತೆಂಗು, ಕಾಫಿ ಮತ್ತು ಅಡಿಕೆ ತೋಟ ಮಾಡುತ್ತಿದ್ದವರಿಗೆ ಮಡಬ ಅರಣ್ಯ ತೆರವು ಎಚ್ಚರಿಕೆಯ ಗಂಟೆಯಾಗಿದೆ. ಒತ್ತುವರಿ ತೆರವು ಕಾರ್ಯಾಚರಣೆಯಲ್ಲಿ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಏಳುಕೊಂಡಲ, ಉಪ ಅರಣ್ಯ ಸಂರಕ್ಷಣಾಧಿಕಾರಿ ಸೌರಭ್ ಮತ್ತಿತರರು ಭಾಗಿಯಾಗಿದ್ದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ