ಇಲ್ಲಿಯವರೆಗೆ ಹಾಸನಾಂಬೆ ದರ್ಶನಕ್ಕೆ ಬಂದ ಭಕ್ತರ ಸಂಖ್ಯೆ ಎಷ್ಟು ಗೊತ್ತಾ?: ಅಬ್ಬಾಬ್ಬಾ… ಆದಾಯದ ಲೆಕ್ಕ ಕೇಳಿದ್ರೆ ಶಾಕ್ ಆಗುವುದು ಗ್ಯಾರಂಟಿ

ಹಾಸನಾಂಬೆ ದರ್ಶನೋತ್ಸವದಲ್ಲಿ 20 ಲಕ್ಷಕ್ಕೂ ಹೆಚ್ಚು ಭಕ್ತರು ಭಾಗವಹಿಸಿದ್ದು, 18.5 ಕೋಟಿಗೂ ಅಧಿಕ ಆದಾಯ ಸಂಗ್ರಹವಾಗಿ ದಾಖಲೆ ಬರೆದಿದೆ. ವರ್ಷಕ್ಕೊಮ್ಮೆ ತೆರೆಯುವ ದೇವಾಲಯಕ್ಕೆ ಚಲನಚಿತ್ರ ತಾರೆಯರು, ರಾಜಕೀಯ ಗಣ್ಯರು ಭೇಟಿ ನೀಡಿದ್ದಾರೆ. ಸಿಎಂ ಡಿ.ಕೆ. ಶಿವಕುಮಾರ್, ಹೆಚ್.ಡಿ. ಕುಮಾರಸ್ವಾಮಿ ಭೇಟಿ ನಿರೀಕ್ಷಿಸಲಾಗಿದೆ. ಭಕ್ತರು ತಾಯಿಯ ಕೃಪೆಗೆ ಪಾತ್ರರಾಗಲು ಅಂತಿಮ ದಿನಗಳಲ್ಲಿ ಹರಿದುಬರುತ್ತಿದ್ದಾರೆ.

ಇಲ್ಲಿಯವರೆಗೆ ಹಾಸನಾಂಬೆ ದರ್ಶನಕ್ಕೆ ಬಂದ ಭಕ್ತರ ಸಂಖ್ಯೆ ಎಷ್ಟು ಗೊತ್ತಾ?: ಅಬ್ಬಾಬ್ಬಾ... ಆದಾಯದ ಲೆಕ್ಕ ಕೇಳಿದ್ರೆ ಶಾಕ್ ಆಗುವುದು ಗ್ಯಾರಂಟಿ
ಹಾಸನಾಂಬ
Image Credit source: Tv9 kannada
Edited By:

Updated on: Nov 07, 2026 | 7:22 PM

ಹಾಸನ, ನ.7: “ನಂಬಿದವರ ಕೈ ಹಿಡಿಯುವ ಕರುಣಾಮಯಿ, ಕಷ್ಟವೆಂದು ಬಂದವರಿಗೆ ಆಸರೆಯಾಗುವ ಸಪ್ತಮಾತೃಕೆಯರಲ್ಲೊಬ್ಬಳಾದ ತಾಯಿ ಹಾಸನಾಂಬೆಯ ವರ್ಷಕ್ಕೊಮ್ಮೆ ಲಭಿಸುವ ದರ್ಶನ ಭಾಗ್ಯಕ್ಕಾಗಿ ಭಕ್ತಸಾಗರವೇ ಹರಿದುಬರುತ್ತಿದೆ.” ವರ್ಷ ಪೂರ್ತಿ ನಂದಾದೀಪದ ಬೆಳಕಿನಲ್ಲಿ ನೆರಳಾಗಿ ಕಾಯುವ ತಾಯಿಯ ಸನ್ನಿಧಾನದಲ್ಲಿ ಇಂದು (ನವೆಂಬರ್ 7) 9ನೇ ದಿನದ ದರ್ಶನೋತ್ಸವ ಅತ್ಯಂತ ವಿಜೃಂಭಣೆಯಿಂದ ನೆರವೇರಿದೆ. ಅಕ್ಟೋಬರ್ 29 ರಂದು ದೇವಾಲಯದ ಗರ್ಭಗುಡಿಯ ಬಾಗಿಲು ತೆರೆದಿದ್ದು, ಅಕ್ಟೋಬರ್ 30 ರಿಂದ ನಿರಂತರವಾಗಿ ಭಕ್ತರಿಗೆ ಶ್ರೀದೇವಿಯ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಇದುವರೆಗೆ 20 ಲಕ್ಷಕ್ಕೂ ಹೆಚ್ಚು ಭಕ್ತರು ತಾಯಿಯ ಕೃಪೆಗೆ ಪಾತ್ರರಾಗಿದ್ದಾರೆ.

ದಾಖಲೆ ಬರೆದ ಆದಾಯ: ಬರೋಬ್ಬರಿ 18.50 ಕೋಟಿ ರೂ. ಸಂಗ್ರಹ

ದೇವಿಯ ದರ್ಶನಕ್ಕೆ ದೇಶಾದ್ಯಂತ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದು, ಜಿಲ್ಲಾಡಳಿತಕ್ಕೆ ದಾಖಲೆ ಪ್ರಮಾಣದ ಆದಾಯ ಹರಿದುಬಂದಿದೆ. ಬರೀ ಪ್ರವೇಶ ಟಿಕೆಟ್‌ ಹಾಗೂ ಲಡ್ಡು ಪ್ರಸಾದ ಮಾರಾಟದಿಂದಲೇ ಇದುವರೆಗೆ 18.50 ಕೋಟಿಗೂ ಹೆಚ್ಚು ಆದಾಯ ಸಂಗ್ರಹವಾಗಿದ್ದು, ಕಳೆದ ಎಲ್ಲಾ ವರ್ಷಗಳ ದಾಖಲೆಯನ್ನು ಅಳಿಸಿಹಾಕಿದೆ. ಸಾಮಾನ್ಯ ಧರ್ಮದರ್ಶನದ ಸಾಲಿನಲ್ಲಿ ಭಕ್ತರು 6 ರಿಂದ 8 ಗಂಟೆಗಳ ಕಾಲ ಕಾಯ್ದು ದೇವಿಯ ಆಶೀರ್ವಾದ ಪಡೆಯುತ್ತಿದ್ದಾರೆ. ಇನ್ನು 1000 ರೂ. ವಿಶೇಷ ದರ್ಶನದ ಸಾಲಿನಲ್ಲೂ 3 ರಿಂದ 4 ಗಂಟೆಗಳ ಕಾಲ ಸರತಿಯಲ್ಲಿ ನಿಂತು ತಾಯಿಯನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ.

Loading...

9ನೇ ದಿನದ ದರ್ಶನೋತ್ಸವದಲ್ಲಿ ಚಿತ್ರರಂಗದ ಪ್ರಮುಖರು ಹಾಗೂ ರಾಜಕೀಯ ಧುರೀಣರು ಸಾಗರೋಪಾದಿಯಲ್ಲಿ ಆಗಮಿಸಿ ಶ್ರೀದೇವಿಯ ದರ್ಶನ ಪಡೆದರು. ಹಿರಿಯ ನಟಿ ಸುಧಾರಾಣಿ, ನಟ ಶ್ರೀನಗರ ಕಿಟ್ಟಿ, ‘ಬಿಗ್ ಬಾಸ್’ ಖ್ಯಾತಿಯ ನಟಿ ಭವ್ಯಗೌಡ, ಚಲನಚಿತ್ರ ನಿರ್ಮಾಪಕ ಸುರೇಶ್ ಹಾಗೂ ಸಾರಾ ಗೋವಿಂದು ಸೇರಿದಂತೆ ಹಲವು ಕಲಾವಿದರು ತಾಯಿಯ ಆಶೀರ್ವಾದ ಪಡೆದರು. ಪ್ರತಿ ವರ್ಷ ನೋಡಿದರೂ ಮತ್ತೆ ಮತ್ತೆ ಆಶೀರ್ವಾದ ಪಡೆಯುವ ಹಂಬಲ ನಮ್ಮದು. ನಾನೂ ಒಂದು ಕೋರಿಕೆಯನ್ನು ತಾಯಿಯ ಮುಂದಿಟ್ಟು ಈಡೇರಿಸುವಂತೆ ಬೇಡಿಕೊಂಡಿದ್ದೇನೆ” ಎಂದು ನಟಿ ಭವ್ಯಗೌಡ ದೇವಿಯ ಮಹಿಮೆಯನ್ನು ಕೊಂಡಾಡಿದರು.

ಜೆಡಿಎಸ್ ಶಾಸಕಿ ಕರೆಮ್ಮ ನಾಯಕ್, ಶಾಸಕರಾದ ಹೆಚ್.ಕೆ. ಸುರೇಶ್, ಸಿ.ಎನ್. ಬಾಲಕೃಷ್ಣ, ರಾಜೇಂದ್ರ ರಾಜಣ್ಣ ಹಾಗೂ ಹೆಚ್.ಡಿ. ದೇವೇಗೌಡರ ಪುತ್ರಿ ಶೈಲಜಾ ಸೇರಿದಂತೆ ಹಲವು ನಾಯಕರು ದೇವಿಯ ದರ್ಶನ ಪಡೆದರು. ಹಾಸನ ಸಂಸದ ಶ್ರೇಯಸ್ ಪಟೇಲ್ ಮಾತನಾಡಿ, ದಿನದಿಂದ ದಿನಕ್ಕೆ ಭಕ್ತರ ಸಂಖ್ಯೆ ಹೆಚ್ಚುತ್ತಿದ್ದು, ಜಿಲ್ಲಾಡಳಿತವು ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ಸಕಲ ಸಿದ್ಧತೆ ಮಾಡಿಕೊಂಡಿದೆ ಎಂದು ತಿಳಿಸಿದರು.

ಇದನ್ನೂ ಓದಿ: 7 ದಿನಗಳಲ್ಲಿ 16 ಲಕ್ಷ ಭಕ್ತರಿಂದ ಹಾಸನಾಂಬೆ ದರ್ಶನ; 13 ಕೋಟಿ ಆದಾಯ; ಪ್ರೋಟೋಕಾಲ್ ಗಲಾಟೆಗೆ ಕ್ಷಮೆ ಕೇಳಿದ ಡಿಸಿ ಲತಾ

ಹುತ್ತದ ರೂಪದಲ್ಲಿ ನೆಲೆಸಿರುವ ಸಪ್ತಮಾತೃಕೆಯರಾದ ಬ್ರಾಹ್ಮಿ, ಕೌಮಾರಿ ಮತ್ತು ಮಹೇಶ್ವರಿಯರು ವರ್ಷಕ್ಕೆ ಒಮ್ಮೆ ಮಾತ್ರ ಭಕ್ತರಿಗೆ ದರ್ಶನ ಕರುಣಿಸುತ್ತಾರೆ. ಅಶ್ವಯುಜ ಮಾಸದ ಹುಣ್ಣಿಮೆಯ ನಂತರ ಬರುವ ಮೊದಲ ಗುರುವಾರ ಗರ್ಭಗುಡಿಯ ಬಾಗಿಲು ತೆರೆದರೆ, ಬಲಿಪಾಡ್ಯಮಿಯ ಮರುದಿನ ಶಾಸ್ತ್ರೋಕ್ತವಾಗಿ ಬಾಗಿಲು ಮುಚ್ಚಲಾಗುತ್ತದೆ. ದೇವಾಲಯದ ಗರ್ಭಗುಡಿಯ ಬಾಗಿಲು ಮುಚ್ಚುವ ಮುನ್ನ ಇನ್ನು ಕೇವಲ 3 ರಿಂದ 4 ದಿನಗಳು ಮಾತ್ರ ದರ್ಶನಕ್ಕೆ ಬಾಕಿ ಉಳಿದಿದ್ದು, ಭಕ್ತರ ದಂಡು ಹಾಸನದತ್ತ ಹರಿದುಬರುತ್ತಿದೆ. ನಾಳೆ (ನವೆಂಬರ್ 8) ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ದೇವಿಯ ದರ್ಶನಕ್ಕೆ ಆಗಮಿಸಲಿದ್ದು, ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಭದ್ರತಾ ತಯಾರಿ ನಡೆಸಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಮಂಜುನಾಥ ಕೆಬಿ

ಮಂಜುನಾಥ ಕೆಬಿ ಪತ್ರಿಕೋದ್ಯಮದಲ್ಲಿ ಕಳೆದ 17 ವರ್ಷಗಳಿಂದ ಸೇವೆ ಮಾಡುತ್ತಿದ್ದೇನೆ. ಕರುನಾಡಿನ ಹೆಮ್ಮೆಯ ಸುದ್ದಿ ವಾಹಿನಿ ಟಿವಿ9 ಕನ್ನಡ ಜೊತೆಗೆ 15ನೇ ವರ್ಷದ ಪಯಣ ನನ್ನದು. ಓದಿದ್ದು, ಮೈಸೂರು ವಿವಿಯಲ್ಲಿ ಕಾನೂನು ಪದವಿ, ಎರಡು ವರ್ಷ ವಕೀಲ ವೃತ್ತಿ ಬಳಿಕ ಮಾಧ್ಯಮ ಕ್ಷೇತ್ರಕ್ಕೆ ಆಗಮಿಸಿ ಟಿವಿ9 ವಾಹಿನಿ ಮೂಲಕ ಸಮಸ್ಯೆಗೆ ಧ್ವನಿಯಾಗಿ ಕಾಯಕ. ಕೊಡಗಿನಲ್ಲಿ ಐದುವರೆ ವರ್ಷ ವರದಿಗಾರನಾಗಿ ಕರ್ತವ್ಯ ನಿರ್ವಹಿಸಿದ್ದು, ಇದೀಗ ಹಾಸನದ ಹಿರಿಯ ವರದಿಗಾರನಾಗಿ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದೇನೆ.

Read More
Loading...
Unable to load recommendations.
Follow Us