
ಹಾಸನ, ನವೆಂಬರ್ 10: ವರ್ಷಕ್ಕೊಮ್ಮೆ ಮಾತ್ರ ಬಾಗಿಲು ತೆರೆಯುವ ಹಾಸನಾಂಬೆ ದರ್ಶನಕ್ಕೆ ರಾಜ್ಯದ ಮೂಲೆ ಮೂಲೆಯಿಂದ ಲಕ್ಷಾಂತರ ಭಕ್ತರು ಆಗಮಿಸುತ್ತಿದ್ದಾರೆ. ಈಗಾಗಲೇ ಕೇವಲ 12 ದಿನದಲ್ಲಿ 30 ಲಕ್ಷ ಭಕ್ತರು ಹಾಸನಾಂಬೆ ದರ್ಶನ ಪಡೆದಿದ್ದು, ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಭಕ್ತರು ಆಗಮಿಸುತ್ತಿದ್ದಾರೆ. ಹೀಗಾಗಿ ನಾಳೆ ಮುಂಜಾನೆ 4 ಗಂಟೆವರೆಗೂ ಹಾಸನಾಂಬೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವಲಿಂಗೇಗೌಡ ಮಾಹಿತಿ ನೀಡಿದ್ದಾರೆ.
ನಗರದಲ್ಲಿ ಟಿವಿ9 ಜೊತೆಗೆ ಮಾತನಾಡಿದ ಸಚಿವ ಶಿವಲಿಂಗೇಗೌಡ, ‘ಇಂದು ರಾತ್ರಿ 8 ಗಂಟೆಯಿಂದ 10 ಗಂಟೆವರೆಗೂ ನೈವೇದ್ಯ ಸಮಯ ಇರಲಿದೆ. ಆನಂತರ ನಾಳೆ (ಬುಧವಾರ) ಮುಂಜಾನೆ 4 ಗಂಟೆವರೆಗೂ ದರ್ಶನ ಪಡೆಯಬಹುದು. ಹಾಸನ ಸುತ್ತಮುತ್ತಲಿನ ಹಳ್ಳಿಗಳ ಜನರ ಮನವಿ ಮೇರೆಗೆ ಅವಧಿ ವಿಸ್ತರಣೆ ಮಾಡಲಾಗಿದೆ’ ಎಂದು ಅವರು ಹೇಳಿದರು.
ಇದನ್ನೂ ಓದಿ: ಹಾಸನಾಂಬೆ ದರ್ಶನಕ್ಕೆ ಇಂದೇ ಕೊನೆಯ ದಿನ: ನಾಳೆ ಮಧ್ಯಾಹ್ನ 12 ಗಂಟೆಗೆ ಗರ್ಭಗುಡಿಯ ಬಾಗಿಲು ಕ್ಲೋಸ್
‘ಇಂದು ಹಬ್ಬ ಮುಗಿಸಿ ದರ್ಶನ ಪಡೆಯುವ ಇಚ್ಛೆ ಭಕ್ತರಿಗೆ ಇದೆ. ದರ್ಶನ ಮುಕ್ತಾಯವಾದರೆ ಮತ್ತೆ ಒಂದು ವರ್ಷ ಅವಕಾಶ ಸಿಗಲ್ಲ. ಹೀಗಾಗಿ ಚರ್ಚಿಸಿ ಹಾಸನಾಂಬೆ ದರ್ಶನದ ಅವಧಿ ವಿಸ್ತರಣೆ ಮಾಡಿದ್ದೇವೆ’ ಎಂದು ಸಚಿವ ಶಿವಲಿಂಗೇಗೌಡ ತಿಳಿಸಿದ್ದಾರೆ.
‘2026ರ ಹಾಸನಾಂಬೆ ದರ್ಶನೋತ್ಸವ ಯಶಸ್ವಿಯಾಗಿ ನಡೆದಿದೆ. ಸುಮಾರು 30 ಲಕ್ಷ ಭಕ್ತರು ದರ್ಶನ ಮಾಡಿದ್ದಾರೆ. ಮುಂದಿನ ವರ್ಷ ಮತ್ತಷ್ಟು ಉತ್ತಮವಾಗಿ ದರ್ಶನೋತ್ಸವ ಮಾಡುತ್ತೇವೆ. ಇಲ್ಲಿ ಜಾಗ ಚಿಕ್ಕದಾಗಿದೆ, ವಿಸ್ತರಣೆ ಮಾಡಬೇಕಿದೆ. ದಿನದ 24 ಗಂಟೆಯೂ ದರ್ಶನಕ್ಕೆ ಅರ್ಚಕರು ಸಹಕಾರ ನೀಡಿದ್ದಾರೆ. ನಾನು ಉತ್ತಮವಾಗಿ ಕೆಲಸ ಮಾಡುವುದನ್ನು ಸಹಿಸದೆ ಏನೂ ಬಿಡುಗಡೆ ಮಾಡಿದ್ದಾರೆ. ಅದನ್ನು ಹಾಸನಾಂಬೆ ಪಾದಕ್ಕೆ ಹಾಕಿದ್ದೇನೆ, ತಾಯಿಯೇ ನೋಡಿಕೊಳ್ಳಲಿ’ ಎಂದರು.
ಇನ್ನು ದಾಖಲೆ ಪ್ರಮಾಣದಲ್ಲಿ ಕೇವಲ 12 ದಿನದಲ್ಲಿ 30 ಲಕ್ಷ ಭಕ್ತರಿಂದ ಹಾಸನಾಂಬೆ ದರ್ಶನ ಪಡೆದಿದ್ದಾರೆ. ಕಳೆದ ವರ್ಷಕ್ಕಿಂತ 5 ಲಕ್ಷಕ್ಕೂ ಹೆಚ್ಚು ಭಕ್ತರು ದೇವಿಯ ದರ್ಶನ ಮಾಡಿದ್ದಾರೆ. ಅಕ್ಟೋಬರ್ 29ರಂದು ಹಾಸನಾಂಬೆ ಗರ್ಭಗುಡಿ ಬಾಗಿಲು ತೆರೆದಿತ್ತು. ಇನ್ನು ಟಿಕೆಟ್, ಲಡ್ಡು ಪ್ರಸಾದ ಮಾರಾಟದಿಂದ 24.71 ಕೋಟಿ ರೂ ಆದಾಯ ಸಂಗ್ರಹವಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 4:56 pm, Tue, 10 November 26