ತಡ ರಾತ್ರಿ ಅದ್ಧೂರಿಯಾಗಿ ನಡೆದ ಹಾಸನಾಂಬೆ, ಸಿದ್ದೇಶ್ವರ ಜಾತ್ರಾ ಮಹೋತ್ಸವ: ಮಧ್ಯಾಹ್ನ 12ಗೆ ಶಾಸ್ತ್ರೋಕ್ತವಾಗಿ ಗರ್ಭಗುಡಿಯ ಬಾಗಿಲು ಬಂದ್
ಮಧ್ಯಾಹ್ನ 12 ಗಂಟೆ ಸುಮಾರಿಗೆ ಈ ವರ್ಷದ ಹಾಸನಾಂಬೆ ಉತ್ಸವಕ್ಕೆ ತೆರೆ ಬೀಳಲಿದೆ. ಶಾಸ್ತ್ರೋಕ್ತವಾಗಿ ಗರ್ಭಗುಡಿಯ ಬಾಗಿಲು ಮುಚ್ಚಲಾಗುತ್ತೆ.
ಹಾಸನ: ಹಾಸನದ ಅಧಿ ದೇವತೆ ಹಾಸನಾಂಬೆಯ ದರ್ಶನೋತ್ಸವದ ಜೊತೆಗೇ ನಡೆಯುವ ಸಿದ್ದೇಶ್ವರ ಜಾತ್ರೋ ಮಹೋತ್ಸವ ಹಾಗೂ ಕೆಂಡೋತ್ಸವ ಅ.26ರ ತಡರಾತ್ರಿ ಅದ್ದೂರಿಯಾಗಿ ಜರಗಿದೆ. ಮಧ್ಯ ರಾತ್ರಿ ಸಹಸ್ರಾರು ಭಕ್ತರು, ಮಂಗಳವಾದ್ಯ, ನಂದಿಕೋಲು ಕುಣಿತದ ಜೊತೆಗೆ ಹಾಸನಾಂಬೆ ದೇಗುಲದ ಆವರಣದಲ್ಲಿ ನಡೆದ ರಥೋತ್ಸವ ಕಣ್ತುಂಬಿಕೊಳ್ಳಲು ಅಪಾರ ಸಂಖ್ಯೆಯ ಭಕ್ತರು ಆಗಮಿಸಿ ಕುಣಿದು ಕುಪ್ಪಳಿಸಿ ಸಂಭ್ರಮಿಸಿದ್ರು. ಇಂದು ಮಧ್ಯಾಹ್ನ 12 ಗಂಟೆ ಸುಮಾರಿಗೆ ಹಾಸನಾಂಬೆ ದೇಗುಲದ ಗರ್ಭಗುಡಿ ಬಂದ್ ಆಗಲಿದೆ.
ನಿನ್ನೆ ನಡು ರಾತ್ರಿಯಲ್ಲೂ ಸರತಿ ಸಾಲಿನಲ್ಲಿ ನಿಂತು ಭಕ್ತರು ಹಾಸನಾಂಬೆ ದರ್ಶನ ಪಡೆದ್ರು. ಕಳೆದ ಹದಿನೈದು ದಿನಗಳಿಂದ ಹಾಸನದ ಅಧಿ ದೇವತೆ ಹಾಸನಾಂಬೆ ದರ್ಶಣೋತ್ಸವ ಹಾಗು ಶ್ರೀ ಸಿದ್ದೇಶ್ವರ ಜಾತ್ರಾ ಮಹೋತ್ಸವ ನಡೆಯುತ್ತಿದ್ದು ಅ.26ರ ಮಧ್ಯ ರಾತ್ರಿ 12 ಗಂಟೆಗೆ ಸಿದ್ದೇಶ್ವರ ತೇರನ್ನೆಳೆದು ಭಕ್ತರು ಸಂಭ್ರಮಿಸಿದ್ರು. ಬಳಿಕ ಕೆಂಡೋತ್ಸವ ನಡೆಯಿತು. ಕಳೆದ 15 ದಿನಗಳಿಂದ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಹಾಸನಾಂಬೆಯನ್ನ ದರ್ಶನ ಮಾಡಿ ಆಶೀರ್ವಾದಪಡೆದುಕೊಂಡಿದ್ದಾರೆ. ಇಂದೇ ಮಧ್ಯಹ್ನ 12 ಗಂಟೆಗೆ ಈ ವರ್ಷದ ಹಾಸನಾಂಬೆ ದರ್ಶನೋತ್ಸವಕ್ಕೆ ಅಧಿಕೃತ ತೆರೆಬೀಳಲಿದೆ.
ಅದಕ್ಕೂ ಮುನ್ನ ರಾತ್ರಿ ನಡೆದ ಸಿದ್ದೇಶ್ವರ ಜಾತ್ರಾ ಮಹೋತ್ಸವ ಕೂಡ ಗಮನ ಸೆಳೆಯಿತು. ಮಂಗಳ ವಾದ್ಯಗಳೊಂದಿಗೆ ನಂದಿಕೋಲು ಕುಣಿತದ ಜೊತೆಗೆ ಸಿದ್ದೇಶ್ವರ ಉತ್ಸವ ಮೂರ್ತಿಯನ್ನು ತೇರಿನ ಮೇಲಿರಿಸಿ ದೇಗುಲದ ಸುತ್ತಲೂ ತೇರನ್ನೆಳೆದ ಭಕ್ತರು ಸಂಭ್ರಮಿಸಿದ್ರು. ವರ್ಷಕ್ಕೊಮ್ಮೆ ಬರೋಸಂಭ್ರಮದ ಕ್ಷಣಗಳನ್ನ ಕುಣಿದು ಕುಪ್ಪಳಿಸಿ ಖುಷಿಪಟ್ಟರು. ಮಧ್ಯ ರಾತ್ರಿಯಾದ್ರು ಕೂಡ ಸಹಸ್ರಾರು ಸಂಖ್ಯೆಯಲ್ಲಿದ್ದ ಭಕ್ತರು, ಸಿದ್ದೇಶ್ವರ ತೆರಿಗೆ ನಮಿಸಿ ಹಾಸನಾಂಬೆ ದರ್ಶಶವನ್ನೂ ಪಡೆದು ಪುನೀತರಾದ್ರು. ದೂರು ದೂರುಗಳಿಂದ ಬಂದಿದ್ದ ಅಪಾರ ಸಂಖ್ಯೆ ಭಕ್ತರಿಗೆ ಹಾಸನಾಂಬೆ ದರ್ಶನದ ಜೊತೆಗೆ ಸಿದ್ದೇಶ್ವರನ ತೇರನ್ನೆಳೆಯೋ ಭಾಗ್ಯ ಸಿಕ್ಕಿದ್ದು ಖುಷಿಯನ್ನ ಇಮ್ಮಡಿಗೊಳಿಸಿತ್ತು.
ಮಧ್ಯಾಹ್ನ 12 ಗಂಟೆ ಸುಮಾರಿಗೆ ಈ ವರ್ಷದ ಹಾಸನಾಂಬೆ ಉತ್ಸವಕ್ಕೆ ತೆರೆ ಬೀಳಲಿದೆ. ಶಾಸ್ತ್ರೋಕ್ತವಾಗಿ ಗರ್ಭಗುಡಿಯ ಬಾಗಿಲು ಮುಚ್ಚಲಾಗುತ್ತೆ. ಈ ವೇಳೆ ಜಿಲ್ಲಾ ಉಸ್ತುವಾರಿ ಸಚಿವ ಗೋಪಾಲಯ್ಯ, ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿ ಸೇರಿದಂತೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಉಪಸ್ಥಿತರಿರಲಿದ್ದಾರೆ.
ವರದಿ: ಮಂಜುನಾಥ್-ಕೆ.ಬಿ, ಟಿವಿ9 ಹಾಸನ
Published On - 10:42 am, Thu, 27 October 22