
ಹಾಸನ, ಜನವರಿ 01: ಜಿಲ್ಲೆ ಅರಸೀಕೆರೆ ತಾಲೂಕಿನ ಚಿಕ್ಕಾರಹಳ್ಳಿ ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿ 69ರಲ್ಲಿ ಭೀಕರ ಅಪಘಾತವೊಂದು (Accident) ಸಂಭವಿಸಿದೆ. ಅಡಕೆ ಕಟಾವು ಮಾಡಿ ಸಾಗಿಸುತ್ತಿದ್ದ ಪಿಕಪ್ ವಾಹನ ಪಲ್ಟಿಯಾಗಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿರುವಂತಹ (death) ಘಟನೆ ನಡೆದಿದೆ. ಕಡೂರು ತಾಲೂಕಿನ ತಂಗ್ಲಿ ಗ್ರಾಮದ ನಿವಾಸಿಗಳಾದ ಶಬ್ಬೀರ್(55), ತಿಮ್ಮಣ್ಣ(53) ಮತ್ತು ಸಂಜಯ್(45) ಮೃತರು. ಇಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಬಾಣಾವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಅಡಿಕೆ ಕಟಾವು ಮಾಡಿ ಸಾಗಿಸುತ್ತಿದ್ದ ಪಿಕಪ್ ವಾಹನದ ಟೈರ್ ಬ್ಲಾಸ್ಟ್ ಆಗಿ ಪಲ್ಟಿ ಹೊಡೆದಿದೆ ಎನ್ನಲಾಗುತ್ತಿದೆ. ಘಟನೆ ವೇಳೆ ವಾಹನದಲ್ಲಿದ್ದ ಮೂವರು ಸ್ಥಳದಲ್ಲೇ ಕೊನೆಯುಸಿರೆಳೆದರೆ, ಹಾಸನ ಮೂಲದ ನೌಶದ್ ಎಂಬುವವರು ಗಂಭೀರ ಗಾಯಗೊಂಡಿದ್ದು, ತಕ್ಷಣ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ರವಾನಿಸಲಾಗಿದೆ. ಉಳಿದ ಇಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಸದ್ಯ ಕಡೂರು ಆಸ್ಪತ್ರೆಗೆ ಗಾಯಾಳುಗಳನ್ನು ರವಾನೆ ಮಾಡಲಾಗಿದೆ.
ಇದನ್ನೂ ಓದಿ: ಪ್ರತ್ಯೇಕ ರಸ್ತೆ ಅಪಘಾತ: ತಮ್ಮದಲ್ಲದ ತಪ್ಪಿಗೆ ಮಗು ಸೇರಿ ನಾಲ್ವರು ದಾರುಣವಾಗಿ ಸಾವು
ಇನ್ನು ತಿಮ್ಮಣ್ಣ ಮತ್ತು ಸಂಜಯ್ ಮೃತದೇಹವನ್ನು ಕಡೂರು ಸರ್ಕಾರಿ ಆಸ್ಪತ್ರೆ, ಶಬ್ಬೀರ್ ಮೃತದೇಹವನ್ನು ಅರಸೀಕೆರೆ ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ.
ನ್ಯೂಯರ್ ಫೋಟೋ ಶೂಟ್ಗೆ ಹೋಗಿದ್ದ ಯುವಕ ಬೈಕ್ ಸ್ಕಿಡ್ ಆಗಿ ಬಿದ್ದು ಸಾವನ್ನಪ್ಪಿರುವಂತಹ ಘಟನೆ ಧಾರವಾಡದ ಕಲಕೇರಿ ಗ್ರಾಮದಲ್ಲಿ ನಡೆದಿದೆ. ಜನ್ನತ್ ನಗರದ ಮನೀಶ್ ಗುಡಿಸಲಮನಿ ಮೃತ ಯುವಕ. ಮತ್ತೊಬ್ಬ ಯುವಕನ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಧಾರವಾಡ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಕುಡಿದ ಮತ್ತಲ್ಲಿ ಅಡ್ಡಾದಿಡ್ಡಿ ಕಾರು ಚಾಲನೆ ಮಾಡಿದ ವಿದ್ಯಾರ್ಥಿ: ಪಾದಚಾರಿ ಸಾವು
ಧಾರವಾಡದ ಕಲಕೇರಿ ಗ್ರಾಮದಲ್ಲಿರುವ ವೀವ್ ಪಾಯಿಂಟ್ಗೆ ಯುವಕರು ಹೋಗಿದ್ದರು. ಸ್ನೇಹಿತರೊಂದಿಗೆ ಬೈಕ್ನಲ್ಲಿ ತೆರಳಿದ್ದ ಮನೀಶ್, ವಾಪಸ್ ಮನೆಗೆ ಬರುವಾಗ ಬೈಕ್ ಸ್ಕಿಡ್ ಆಗಿ ದುರಂತ ಸಂಭವಿಸಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:45 pm, Thu, 1 January 26