AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಾಸನ: ಅಪರಿಚಿತ ಮಹಿಳೆಯ ಅತ್ಯಾಚಾರ ಎಸಗಿ ಬರ್ಬರ ಕೊಲೆ, ರೈಲು ನಿಲ್ದಾಣ ಸಮೀಪವೇ ಕೃತ್ಯ

ಅಪರಿಚಿತ ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ಎಸಗಿ, ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಹಾಸನದಲ್ಲಿ ಫೆಬ್ರವರಿ 13ರಂದು ನಡೆದಿರುವುದು ಈಗ ಬೆಳಕಿಗೆ ಬಂದಿದೆ. ರೈಲು ನಿಲ್ದಾಣದಲ್ಲಿ ಓಡಾಡಿಕೊಂಡಿದ್ದ ಮಹಿಳೆಯನ್ನು ರಾತ್ರಿ ಅಪರಿಚಿತ ಯುವಕನೋರ್ವ ಕರೆದೊಯ್ದು ಅತ್ಯಾಚಾರ ಎಸಗಿ, ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಆರೋಪಿಯ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

ಹಾಸನ: ಅಪರಿಚಿತ ಮಹಿಳೆಯ ಅತ್ಯಾಚಾರ ಎಸಗಿ ಬರ್ಬರ ಕೊಲೆ, ರೈಲು ನಿಲ್ದಾಣ ಸಮೀಪವೇ ಕೃತ್ಯ
ಸಾಂದರ್ಭಿಕ ಚಿತ್ರ
ಮಂಜುನಾಥ ಕೆಬಿ
| Updated By: Ganapathi Sharma|

Updated on: Feb 16, 2025 | 6:00 PM

Share

ಹಾಸನ, ಫೆಬ್ರವರಿ 16: ಫೆಬ್ರವರಿ 13 ರಂದು ಹಾಸನ ನಗರದ ರೈಲು ನಿಲ್ದಾಣ ಸಮೀಪ ಇರುವ ರೈಲ್ವೆ ಇಲಾಖೆಯ ನಿರ್ಮಾಣ ಹಂತದ ಕಟ್ಟಡದಲ್ಲಿ ಅಪರಿಚಿತ ಮಹಿಳೆಯೊಬ್ಬರ ಮೃತದೇಹ ಪತ್ತೆಯಾಗಿದ್ದು, ಅತ್ಯಾಚಾರ ಎಸಗಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಫೆಬ್ರವರಿ 12ರ ರಾತ್ರಿ ಅಪರಿಚಿತ ಯುವಕ ಮಹಿಳೆಯನ್ನು ಕರೆದೊಯ್ದು ಅತ್ಯಾಚಾರ ಎಸಗಿ ಬಳಿಕ ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.

ಸಿಸಿ ಕ್ಯಾಮರಾದಲ್ಲಿ ಸೆರೆಯಾದ ದೃಶ್ಯವೇನು?

ಫೆಬ್ರವರಿ 12ರ ರಾತ್ರಿ ರೈಲ್ವೆ ನಿಲ್ದಾಣದಲ್ಲಿದ್ದ ಮಹಿಳೆಯನ್ನು ಅಲ್ಲಿನ ಭದ್ರತಾ ಸಿಬ್ಬಂದಿ ಮಾತನಾಡಿಸಿ ಅಲ್ಲಿಂದ ಕಳುಹಿಸಿದ್ದರು. ಆಕೆಯೊಟ್ಟಿಗೆ ಭದ್ರತಾ ಸಿಬ್ಬಂದಿ ಮಾತನಾಡಿರುವ ದೃಶ್ಯ ಅಲ್ಲಿನ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ನಂತರ ಫೆಬ್ರವರಿ 13ರ ಮದ್ಯರಾತ್ರಿ 12.43 ರಲ್ಲಿ ಮಹಿಳೆ ರೈಲ್ವೆ ಟ್ರ್ಯಾಕ್ ಮೇಲೆ ನಡೆದು ಹೋಗಿರುವುದು ಕೂಡ ಸಿಸಿಟಿವಿ ದೃಶ್ಯದಿಂದ ತಿಳಿದುಬಂದಿದೆ. ನಂತರ ಮೂರು ನಿಮಿಷ ಬಿಟ್ಟು ಶಂಕಿತ ಆರೋಪಿ ಕೂಡ ಅದೇ ಮಾರ್ಗದಲ್ಲಿ ಆಕೆಯನ್ನು ಹಿಂಬಾಲಿಸಿದ್ದಾನೆ. ಈ ಎಲ್ಲಾ ದೃಶ್ಯಗಳು ರೈಲ್ವೆ ನಿಲ್ದಾಣದಲ್ಲಿ ಅಳವಿಡಿಸಿರುವ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಬಳಿಕ ಮರುದಿನ ಬೆಳಗ್ಗೆ ಮಹಿಳೆಯ ಶವ ನಿರ್ಮಾಣ ಹಂತದ ಕಟ್ಟದಲ್ಲಿ ಪತ್ತೆಯಾಗಿದೆ. ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸಿದ ರೈಲ್ವೆ ಎಸ್ಪಿ ಸೌಮ್ಯಲತಾ ಅವರು, ಅಂದಾಜು 40 ವರ್ಷ ಪ್ರಾಯದ ಮಹಿಳೆಯ ಹತ್ಯೆ ನಡೆದಿದ್ದು ಆರೊಪಿ ಪತ್ತೆಗೆ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

ಕೊಲೆ ನಡೆದಿರುವುದು ಗೊತ್ತಾಗಿದ್ದು ಹೇಗೆ?

ಹಾಸನ ನಗರದ ಬಿಎಂ ರಸ್ತೆಯ ರಾಜಘಟ್ಟಕ್ಕೆ ಹೋಗುವ ಮಾರ್ಗದಲ್ಲಿ ರೈಲ್ವೆ ಇಂಜಿನ್ ಸರ್ವೀಸ್​ಗಾಗಿ ಹೊಸದಾಗಿ ಕಟ್ಟಡ ನಿರ್ಮಾಣ ಕಾರ್ಯ ನಡೆಯುತ್ತಿದೆ. ಫೆಬ್ರವರಿ 12ರಂದು ಸಂಜೆ 6 ಗಂಟೆವರೆಗೂ ಕೂಡ ಕಾರ್ಮಿಕರು ಅಲ್ಲಿ ಕೆಲಸ ಮಾಡಿದ್ದಾರೆ. ನಂತರ ಮರುದಿನ ಬೆಳಿಗ್ಗೆ 7 ಗಂಟೆಗೆ ಕೆಲಸ ಮಾಡಲು ಕಾರ್ಮಿಕರು ಬಂದಾಗ ಹತ್ಯೆ ಪ್ರಕರಣ ಬೆಳಕಿಗೆ ಬಂದಿದೆ.

ಕೂಡಲೆ ಸ್ಥಳೀಯರು ಹಾಸನ ನಗರ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಘಟನೆ ರೈಲ್ವೆ ಇಲಾಖೆಯ ವ್ಯಾಪ್ತಿಯಲ್ಲಿರುವ ಪ್ರದೇಶದಲ್ಲಿ ನಡೆದಿರುವುದರಿಂದ ಅರಸೀಕೆರೆ ರೈಲ್ವೆ ಠಾಣೆಯ ಪೊಲೀಸರು ಕೇಸ್ ದಾಖಲಿಸಿಕೊಂಡಿದ್ದಾರೆ. ಮಹಿಳೆ ಶವ ಪತ್ತೆಯಾಗಿರುವ ಸ್ಥೀತಿಯನ್ನ ನೋಡಿದರೆ, ಮಹಿಳೆ ಮೇಲೆ ಅತ್ಯಾಚಾರ ಎಸಗಿ ಹತ್ಯೆ ಮಾಡಿರುವ ಶಂಕೆ ಇದೆ.

ಕೃತ್ಯ ಎಸಗುವುದಕ್ಕೂ ಮುನ್ನ ಮದ್ಯ ಖರೀದಿಸಿದ್ದ ಶಂಕಿತ ಆರೋಪಿ

ರೈಲ್ವೆ ಟ್ರ್ಯಾಕ್ ಮೇಲೆ ಮಹಿಳೆಯನ್ನು ಹಿಂಬಾಲಿಸಿರುವ ಶಂಕಿತ ವ್ಯಕ್ತಿ, ಮೃತದೇಹ ಪತ್ತೆಯಾದ ಹಿಂದಿನ ದಿನ ರೈಲ್ವೆ ನಿಲ್ದಾಣದ ಸಮೀಪವೇ ಇರುವ ಬಾರ್ ಒಂದರಲ್ಲಿ ಮದ್ಯ ಖರೀಸಿದ್ದಾನೆ. ಆತ ಮದ್ಯ ಖರೀದಿ ಮಾಡಿರುವ ದೃಶ್ಯ ಕೂಡ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಮದ್ಯ ಸೇವನೆ ಮಾಡಿ ಕೃತ್ಯ ಎಸಗಿರುವ ಅನುಮಾನ ವ್ಯಕ್ತವಾಗಿದೆ.

ಕೊಲೆಯಾದ ಮಹಿಳೆ ಯಾರು ಎಂಬುದರ ಪತ್ತೆಗಾಗಿ ಕೂಡ ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಈ ಘಟನೆ ಜಿಲ್ಲೆಯ ಜನರನ್ನು ಬೆಚ್ಚಿಬೀಳಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ