ಹಾಸನ: ತನ್ನ ಪ್ರೀತಿ ಸಾಬೀತು ಮಾಡಲು ಪ್ರೇಯಸಿಗೆ ವೀಡಿಯೋ ಕಾಲ್ ಮಾಡಿ ಹಳೆ ಲವರ್ ಮೇಲೆ ಮಾರಣಾಂತಿಕ ಹಲ್ಲೆ
ಓಬ್ಬ ಯುವತಿಯನ್ನ ಪ್ರೀತಿಸುವುದಾಗಿ ನಂಬಿಸಿ ಮತ್ತೊಬ್ಬಳಿಗೆ ಅಮಾನುಷವಾಗಿ ಹಲ್ಲೆಮಾಡಿದ ಯುವಕನನ್ನು ಸಕಲೇಶಪುರ ಗ್ರಾಮಾಂತರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಯುವಕನ ವಿರುದ್ಧ ಇಬ್ಬರು ಯುವರಿಯರು ಪ್ರತ್ಯೇಕ ದೂರು ನೀಡಿದ್ದು, ಸಕಲೇಶಪುರ ಗ್ರಾಮಾಂತರ ಹಾಗು ನಗರ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿವೆ.
ಹಾಸನ, ಡಿ.1: ಯುವಕನೊಬ್ಬ ತನ್ನ ಪ್ರೀತಿಯನ್ನು ಸಾಬೀತು ಮಾಡಲು ಪ್ರೇಯಸಿಗೆ ವಿಡಿಯೋ ಕಾಲ್ ಮಾಡಿ ಹಳೆ ಪ್ರೇಯಸಿ ಮೇಲೆ ಮಾರಣಾಂತಿಕವಾಗಿ ಹಲ್ಲೆ (Assault) ನಡೆಸಿದ ಘಟನೆ ಹಾಸನ (Hassan) ಜಿಲ್ಲೆಯ ಬೇಲೂರು ತಾಲೂಕಿನ ಗರ್ಜೆ ಗ್ರಾಮದಲ್ಲಿ ನಡೆದಿದೆ. ಪ್ರೀತಿಯ ನಾಟಕವಾಡಿ ತನ್ನ ಮನೆಗೆ ಕರೆದೊಯ್ದು ಚಿತ್ರಹಿಂಸೆ ನೀಡಿದ್ದ ಶರತ್ ಸಾಲಿಯಾನ್ ಬಂಧಿತ ಆರೋಪಿ.
ಘಟನೆ ಸಂಬಂಧ ಸಕಲೇಶಪುರ ತಾಲೂಕಿನ ನೊಂದ ಯುವತಿಯರಿಬ್ಬರು ದೂರು ನೀಡಿದ್ದು, ಸಕಲೇಶಪುರ ಗ್ರಾಮಾಂತರ ಹಾಗೂ ನಗರ ಠಾಣೆಯಲ್ಲಿ ಪ್ರತ್ಯೇಕ ದೂರು ದಾಖಲಾಗಿದೆ. ಸಕಲೇಶಪುರ ಪಟ್ಟಣದ ಕುಶಾಲನಗರ ಬಡಾವಣೆಯ ಶರತ್, ಮೂರು ವರ್ಷಗಳಿಂದ ಪ್ರೀತಿಸುವ ನಾಟಕವಾಡಿ ಲೈಂಗಿಕ ದೌರ್ಜನ್ಯ ಎಸಗಿದ್ದನು.
ತನ್ನ ಪ್ರೀತಿಯ ಬಲೆಗೆ ಬಿದ್ದ ಬಳಿಕ ಹಣ, ಒಡವೆ ಪಡೆದು ವಂಚಿಸುತ್ತಿದ್ದನು. ಒಬ್ಬ ಯುವತಿಯನ್ನ ಪ್ರೀತಿಸುವಾಗಲೇ ಮತ್ತೊಬ್ಬಳಿಗೆ ಗಾಳ ಹಾಕುತ್ತಿದ್ದನು. ವಂಚಕನ ಮೋಸದ ಬಗ್ಗೆ ಅನುಮಾನಗೊಂಡ ಯುವತಿ ಪ್ರಶ್ನೆ ಮಾಡಿದಾಗ ಅವಳನ್ನು ನಂಬಿಸಲು ಮತ್ತೊಬ್ಬಳ ಮೇಲೆ ಹಲ್ಲೆ ನಡೆಸಿದ್ದಾನೆ.
ಇದನ್ನೂ ಓದಿ: ಹಾಸನ: ಆಗಿಲೆ ಗ್ರಾಮದ ಕುಂತಿ ಬೆಟ್ಟದಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿನಿ ಬರ್ಬರ ಹತ್ಯೆ ಮಾಡಿದ ಪಾಗಲ್ ಪ್ರೇಮಿ
ಅಷ್ಟು ಮಾತ್ರವಲ್ಲದೆ, ಹಲ್ಲೆ ನಡೆಸುವಾಗ ಪ್ರೇಯಸಿಗೆ ವಿಡಿಯೋ ಕಾಲ್ ಮಾಡಿ ಹಲ್ಲೆ ನಡೆಸಿದ್ದಾನೆ. ತನ್ನದೇ ಮನೆಯಲ್ಲಿ ಯುವತಿಯನ್ನ ನೇಣು ಬಿಗಿಯೊ ಯತ್ನ ಮಾಡಿದ್ದನು. ಇದನ್ನು ಆಕೆ ರೆಕಾರ್ಡ್ ಮಾಡಿಕೊಂಡಿದ್ದಾಳೆ. ಹಲ್ಲೆ ಮಾಡಿದ ವೀಡಿಯೋ ಆದರಿಸಿ ಇಬ್ಬರು ಯುವತಿಯರು ಠಾಣೆಗೆ ದೂರು ನೀಡುವ ಮೂಲಕ ಯುವಕನ ಮುಖವಾಡವನ್ನು ಬಿಚ್ಚಿಟ್ಟಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಕಾಣುವ ಸುಂದರ ಯುವತಿಯರಿಗೆ ಗಾಳ ಹಾಕುತ್ತಿದ್ದ ಆರೋಪಿ ಶರತ್, ಬಳಿಕ ಫೋನ್ ನಂಬರ್ ಪಡೆದು ನಯವಾಗಿ ಮಾತನಾಡಿ ತನ್ನ ಬಲೆಗೆ ಬೀಳಿಸಿಕೊಂಡು ವಂಚನೆ ಎಸಗುತ್ತಿದ್ದನು. ಹೀಗೆ ಹಲವು ಯುವತಿಯರನ್ನು ಪ್ರೀತಿ ಬಲೆಯಲ್ಲಿ ಬೀಳಿಸಿಕೊಂಡು ವಂಚಿಸಿದ್ದಾಗಿ ತಿಳಿದುಬಂದಿದೆ. ಸದ್ಯ ನವಂಬರ್ 29 ರಂದು ಶರತ್ನನ್ನು ಸಕಲೇಶಪುರ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:29 am, Fri, 1 December 23