ಹಾಸನದಿಂದಲೇ ಅಖಾಡಕ್ಕಿಳಿಯುತ್ತಾರಾ ದೇವೇಗೌಡ್ರು? ಪ್ರಜ್ವಲ್ ರೇವಣ್ಣ ಗತಿ ಏನು?
ಲೋಕಸಭಾ ಚುನಾವಣೆಗೆ ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿಯಲ್ಲಿ ಕ್ಷೇತ್ರ ಹಂಚಿಕೆ ಮಾತುಕತೆ ಹಂತದಲ್ಲಿದ್ದು, ಜೆಡಿಎಸ್, ಹಾಲಿ ಬಿಜೆಪಿ ಸಂಸದರು ಇರುವ ಕ್ಷೇತ್ರಗಳಿಗೆ ಬೇಡಿಕೆ ಇಟ್ಟಿದೆ. ಇನ್ನೊಂದೆಡೆ ಕೆಲ ಕ್ಷೇತ್ರಗಳಲ್ಲಿ ಜೆಡಿಎಸ್ ನಡೆಗೆ ಬಿಜೆಪಿ ನಾಯಕರುಗಳೇ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಅಂತಹ ಕ್ಷೇತ್ರದಲ್ಲಿ ಹಾಸನ ಒಂದು. ಹೀಗಾಗಿ ಜೆಡಿಎಸ್ ಮೆಗಾ ಪ್ಲ್ಯಾನ್ ಮಾಡಿದೆ.
ಹಾನಸ, (ಡಿಸೆಂಬರ್ 01): ಈ ಬಾರಿ ಹಾಸನ ಲೋಕಸಭಾ ಕ್ಷೇತ್ರದಿಂದ (Hassan Loksabha constituency)ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ (H.D.Devegowda) ಸ್ಪರ್ಧಿಸುತ್ತಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಪ್ರಜ್ವಲ್ ರೇವಣ್ಣ ಬದಲು ದೇವೇಗೌಡರೇ ಸ್ಪರ್ಧಿಸುವಂತೆ ಒತ್ತಡ ಹೇರಲಾಗುತ್ತಿದೆಯಂತೆ. ಹಾಗಾಗಿ ಹಾಸನ(Hassan) ಜಿಲ್ಲೆಯ ಜನಪ್ರತಿನಿಧಿಗಳ ಜೊತೆ ಸಭೆ ನಡೆಸಲು ದೇವೇಗೌಡರು ಮುಂದಾಗಿದ್ದು, ಚುನಾಯಿತ ಜನಪ್ರತಿನಿಧಿಗಳ ಅಭಿಪ್ರಾಯ ಸಂಗ್ರಹಿಸಿ ಮುಂದಿನ ಹೆಜ್ಜೆ ಇಡುವ ಪ್ಲ್ಯಾನ್ ಮಾಡಿದ್ದಾರೆ.
ಇಂದು(ಡಿಸೆಂಬರ್ 1ರಂದು ಹೊಳೆನರಸೀಪುರ ತಾಲೂಕು ಶ್ರೀರಾಮದೇವರ ಕಟ್ಟೆಯಲ್ಲಿ ಮಹತ್ವದ ಸಭೆ ನಡೆಯಲಿದೆ. ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಜಿಟಿ ದೇವೇಗೌಡ ಅವರ ನೇತೃತ್ವದಲ್ಲಿ ಈ ಸಭೆ ನಡೆಯಲಿದ್ದು, ಸಂಸದರು, ಶಾಸಕರು, ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಮಾಜಿ ಸದಸ್ಯರು ಭಾಗಿಯಾಗಲಿದ್ದಾರೆ. ಇನ್ನು ನಗರಸಭೆ, ಪುರಸಭೆ, ಪಟ್ಟಣ ಪಂಚಾಯ್ತಿ, ಗ್ರಾಪಂ ಪ್ರತಿನಿಧಿಗಳಿಗೂ ಆಹ್ವಾನ ನೀಡಲಾಗಿದ್ದು, ಸಭೆಗೆ ಹಾಜರಾಗಿ ಪೂರಕ ಸಲಹೆ ಸೂಚನೆ ನೀಡುವಂತೆ ಸೂಚನೆ ನೀಡಲಾಗಿದೆ.
ಬಿಜೆಪಿ-ಜೆಡಿಎಸ್ ಚುನಾವಣಾ ಮೈತ್ರಿ ಆಗಿರುವ ಹಿನ್ನೆಲೆ ದೇವೇಗೌಡರು ಸ್ಪರ್ಧೆ ಮಾಡಿದರೆ ಪಕ್ಷಾತೀತವಾಗಿ ಬೆಂಬಲ ಎಂಬ ಲೆಕ್ಕಾಚಾರವಿದೆ. ಒಂದು ವೇಳೆ ಮತ್ತೆ ಹಾಸನದಿಂದ ಪ್ರಜ್ವಲ್ ರೇವಣ್ಣ ಮೈತ್ರಿ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದರೆ ಬಿಜೆಪಿ ಮಾಜಿ ಶಾಸಕ ಪ್ರೀತಂಗೌಡ, ಸಿಮೆಂಟ್ ಮಂಜು ವಿರೋಧ ವ್ಯಕ್ತಪಡಿಸುವ ಸಾಧ್ಯತೆಗಳಿವೆ. ಹೀಗಾಗಿ ದೇವೇಗೌಡರೇ ಸ್ಪರ್ಧೆ ಮಾಡಿದರೆ ಇಬ್ಬರೂ ವಿರೋಧ ಮಾಡುವುದಿಲ್ಲ. ಬದಲಿಗೆ ಎಲ್ಲಾ ಬಿಜೆಪಿ ನಾಯಕರು ಬೆಂಬಲ ನೀಡುತ್ತಾರೆ ಎನ್ನುವುದು ಜೆಡಿಎಸ್ ನಾಯಕರ ಲೆಕ್ಕಾಚಾರವಾಗಿದೆ. ಹೀಗಾಗಿ ತವರು ಜಿಲ್ಲೆಯಿಂದಲೇ ಅಖಾಡಕ್ಕಿಳಿಯುತ್ತಾರಾ ಮಾಜಿ ಪ್ರಧಾನಿ ದೇವೇಗೌಡರು? ಎಂಬ ಪ್ರಶ್ನೆ ಕಾಡತೊಡಗಿದೆ.
ಒಂದು ವೇಳೆ ಜಿಲ್ಲೆಯ ಜೆಡಿಎಸ್ ನಾಯಕರ ಅಭಿಪ್ರಾಯದಂತೆ ದೇವೇಗೌಡ ಅವರು ಹಾಸನ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಯಲು ಒಪ್ಪಿದರೆ ಪ್ರಜ್ವಲ್ ರೇವಣ್ಣ ಗತಿ ಏನು ಎನ್ನುವ ಪ್ರಶ್ನೆ ಉದ್ಭವಿಸುತ್ತದೆ. ಒಂದು ವೇಳೆ ಮೈಸೂರು ಲೋಕಸಭಾ ಕ್ಷೇತ್ರವನ್ನು ಜೆಡಿಎಸ್ಗೆ ಬಿಟ್ಟುಕೊಟ್ಟರೆ ದೇವೇಗೌಡ್ರು ಇಲ್ಲ ಪ್ರಜ್ಲಲ್ ರೇವಣ್ಣ ಸ್ಪರ್ಧಿಸಹುದು. ಮೂಲಗಳ ಪ್ರಕಾರ ದೇವೇಗೌಡ ಅವರು ಮೊಮ್ಮಗನ ರಾಜಕೀಯಕ್ಕೆ ಅಡ್ಡಗಾಲು ಹಾಕದಿರುವ ಬಗ್ಗೆ ಚಿಂತನೆ ನಡೆಸಿದ್ದಾರೆ. ಹೀಗಾಗಿ ದೇವೇಗೌಡ ಹಾಸನದಿಂದ ಸ್ಪರ್ಧೆ ಮಾಡುವ ಸಾಧ್ಯತೆಗಳು ಕಡಿಮೆ ಎನ್ನಲಾಗಿದೆ.
ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ