ಹಾಸನ, ಜುಲೈ 16: ಹಾಸನ ಜಿಲ್ಲೆಯಲ್ಲಿ ಮಳೆಯ ಅಬ್ಬರ ಮುಂದುವರಿದಿದ್ದು, ಭಾನುವಾರದಿಂದ ಸುರಿಯುತ್ತಿರುವ ವರ್ಷಧಾರೆಯಿಂದಾಗಿ ಮಲೆನಾಡಿನಲ್ಲಿ ಆತಂಕ ಹೆಚ್ಚಾಗಿದೆ. ನಿರ್ಮಾಣ ಹಂತದ ಬೆಂಗಳೂರು ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಮತ್ತೆ ಮಣ್ಣು ಕುಸಿತ ಸಂಭವಿಸಿದೆ. ಹಾಸನದಿಂದ ಸಕಲೇಶಪುರ ತಾಲ್ಲೂಕಿನ ಮಾರನಹಳ್ಳಿವರೆಗೆ ನಡೆಯುತ್ತಿರುವ ಚತುಷ್ಪಥ ರಸ್ತೆ ನಿರ್ಮಾಣ ಕಾಮಗಾರಿಯ ಹಲವುಕಡೆ ದೊಡ್ಡ ಪ್ರಮಾಣದಲ್ಲಿ ಮಣ್ಣು ಕುಸಿಯುತ್ತಿದ್ದು ಆತಂಕ ಎದುರಾಗಿದೆ. ಸಕಲೇಶಪುರ ಪಟ್ಟಣದ ಮಳಲಿ ಬಳಿಯ ನಿರ್ಮಾಣ ಹಂತದ ರಾಷ್ಟ್ರೀಯ ಹೆದ್ದಾರಿಯ ಇಕ್ಕೆಲಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಮಣ್ಣು ಕುಸಿದು ಬೀಳುತ್ತಿದೆ. ತಡೆ ಗೋಡೆ ನಿರ್ಮಿಸದೆ ಕಾಂಕ್ರಿಟ್ ರಸ್ತೆ ನಿರ್ಮಾಣ ಮಾಡಿರುವ ಕಾರಣ ಸಕಲೇಶಪುರದಿಂದ ಆಲೆಬೇಲೂರಿಗೆ ತೆರಳೋ ಮಾರ್ಗದ ಮೇಲ್ಸೇತುವೆಯೇ ಕುಸಿದು ಬೀಳುವ ಭೀತಿ ಎದುರಾಗಿದೆ. ನಿರಂತರ ಮಳೆಯಿಂದ ಸೇತುವೆಯ ಸುತ್ತಲೂ ಇದೇ ರೀತಿ ಮಣ್ಣು ಕುಸಿಯುತ್ತಾ ಸಾಗಿದರೆ ಸಂಚಾರವೇ ಬಂದ್ ಆಗುವ ಸಾಧ್ಯತೆ ಇದೆ.
ಜೂನ್ ಎರಡನೇ ವಾರದಿಂದ ಜಿಲ್ಲೆಯ ವಿವಿದೆಡೆ ಮಳೆ ಆರಂಭಗೊಂಡಿದೆ. ಸಕಲೇಶಪುರ, ಆಲೂರು ಬೇಲೂರು ಸೇರಿ ವಿವಿದ ತಾಲ್ಲೂಕಿನಲ್ಲಿ ಅಬ್ಬರದ ಮಳೆಯಾಗುತ್ತಿದೆ. ಈ ನಡುವೆ ಕೆಲ ದಿನಗಳಿಂದ ಬಿಡುವು ನೀಡಿದ್ದ ಮಳೆ ಮತ್ತೆ ಸುರಿಯುತ್ತಿದೆ. ಅತ್ತ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನಾಸದ್ಯಂತ ಭಾರೀ ಪ್ರಮಾಣದ ಮಳೆ ಸುರಿಯುತ್ತಿರುವುದರಿಂದ ಹಾಸನದ ಜೀವನದಿ ಹೇಮಾವತಿ ಉಕ್ಕಿ ಹರಿಯುತ್ತಿದೆ. ಕೇವಲ ಒಂದು ತಿಂಗಳ ಹಿಂದೆ ಬೀಕರ ಬರಗಾಲದಿಂದ ಹರಿವನ್ನೇ ನಿಲ್ಲಿಸಿದ್ದ ನದಿ ಈಗ ತುಂಬಿ ಹರಿಯುತ್ತಿದೆ. ಜಿಲ್ಲೆಯಲ್ಲಿ ಇನ್ನೂ ಎರಡು ದಿನ ಹೆಚ್ಚಿನ ಮಳೆಯಾಗುವ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ಆರೆಂಜ್ ಅಲರ್ಟ್ ಘೋಷಣೆ ಮಾಡಿದೆ.
ಇದನ್ನೂ ಓದಿ: ಹಾಸನ: ಪಟ್ಲ ಬೆಟ್ಟಕ್ಕೆ ಪ್ರವಾಸಿಗರ ಪ್ರವೇಶ ನಿಷೇಧಿಸಿ ಅರಣ್ಯ ಇಲಾಖೆ ಆದೇಶ
ಮುಂಜಾಗೃತಾ ಕ್ರಮವಾಗಿ ಜಿಲ್ಲಾಡಳಿತ ಜಿಲ್ಲೆಯ ಹಾಸನ, ಆಲೂರು, ಬೇಲೂರು, ಸಕಲೇಶಪುರ ಹಾಗೂ ಅರಕಲಗೂರು ತಾಲ್ಲೂಕಿ ಅಂಗನವಾಡಿ, ಪ್ರಾಥಮಿಕ ಮತ್ತು ಪ್ರೌಡ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಸಕಲೇಶಪುರ, ಆಲೂರು, ಬೇಲೂರು ಹಾಗು ಅರಕಲಗೂಡಿನ ಪದವಿಪೂರ್ವ ಕಾಲೇಜುಗಳಿಗೆ ರಜೆ ನೀಡಿ, ಹೆಚ್ಚಿನ ಮಳೆಯಾದರೆ ಉಳಿದ ತಾಲ್ಲೂಕಿನ ಆಯಾ ಕಾಲೇಜುಗಳ ಪ್ರಾಂಶುಪಾಲರು ರಜೆ ಬಗ್ಗೆ ತೀರ್ಮಾನ ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ